ಹೊಂಬಾಳೆ ತೆಕ್ಕೆಗೆ RCB ಫ್ರಾಂಚೈಸಿ? ನಿರ್ದೇಶಕ ಸಂತೋಷ್ ಆನಂದ್ ರಾಮ್ ಪೋಸ್ಟ್ ವೈರಲ್
ಆರ್‌ಸಿಬಿ(RCB) ಫ್ರಾಂಚೈಸಿ ಮಾರಾಟದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಿದೆ. ಕೆಲ ಉದ್ಯಮಿಗಳು ಫ್ರಾಂಚೈಸಿ ಖರೀದಿಗೆ ಮುಂದಾಗಿದ್ದು ಈ ಬಗ್ಗೆ ಡಿಯಾಜಿಯೋ ಕಂಪೆನಿ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಕನ್ನಡ ಚಿತ್ರನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಕೂಡ ಈ ರೇಸ್‌ನಲ್ಲಿದೆ ಎನ್ನುವ ಊಹಾಪೋಹ ಶುರುವಾಗಿದೆ.
ಈಗಾಗಲೇ ಆರ್‌ಸಿಬಿ ಜೊತೆ ಡಿಜಿಟಲ್ ಪಾರ್ಟ್ನರ್ ಆಗಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಗುರ್ತಿಸಿಕೊಂಡಿದೆ. ಕಳೆದ 3 ವರ್ಷಗಳಿಂದ ಆರ್‌ಸಿಬಿ ತಂಡದ ವಿವಿಧ ವೀಡಿಯೋಗಳನ್ನು ಹೊಂಬಾಳೆ ಚಿತ್ರೀಕರಿಸಿ ಪ್ರಚಾರ ಮಾಡುತ್ತಿದೆ. ತಂಡದ ಆಟಗಾರರಿಗೆ 'ಕೆಜಿಎಫ್- 2' ಚಿತ್ರವನ್ನು ತೋರಿಸಿತ್ತು. ಆರ್‌ಸಿಬಿ(RCB) ಫ್ರಾಂಚೈಸಿ ಕೊಂಡುಕೊಳ್ಳಲು ಹೊಂಬಾಳೆ ಗ್ರೂಪ್ ಮುಂದಾಗಿದೆ ಎನ್ನುವ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ. ಈ ಬಗ್ಗೆ ಚಿತ್ರ ನಿರ್ದೇಶಕ ಸಂತೋಷ್ ಆನಂದ್ ರಾಮ್ ಪೋಸ್ಟ್ ಮಾಡಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಣದ 'ರಾಜಕುಮಾರ', 'ಯುವರತ್ನ', 'ರಾಘವೇಂದ್ರ ಸ್ಟೋರ್ಸ್' ಹಾಗೂ 'ಯುವ' ಚಿತ್ರಗಳನ್ನು ಸಂತೋಷ್ ಆನಂದ್ ರಾಮ್ ಕಟ್ಟಿಕೊಟ್ಟಿದ್ದರು. ಎಲ್ಲಾ ಸಿನಿಮಾಗಳು ಸದ್ದು ಮಾಡಿದ್ದವು. ಮುಂದೆ ಅದೇ ಸಂಸ್ಥೆ ಜೊತೆ ಮತ್ತಷ್ಟು ಸಿನಿಮಾಗಳನ್ನು ಸಂತೋಷ್ ಮಾಡಲಿದ್ದಾರೆ. ಆರ್‌ಸಿಬಿ ಫ್ರಾಂಚೈಸಿಯನ್ನು ಹೊಂಬಾಳೆ ಸಂಸ್ಥೆ ಕೊಂಡುಕೊಳ್ಳುತ್ತದೆ ಎನ್ನುವ ಸೋಶಿಯಲ್ ಮೀಡಿಯಾ ಚರ್ಚೆ ನಿಜವಾಗಲಿ ಎಂದು ಸಂತು ಬರೆದುಕೊಂಡಿದ್ದಾರೆ.
"ಹೊಂಬಾಳೆ ಗ್ರೂಪ್ ಆರ್‌ಸಿಬಿ ಫ್ರಾಂಚೈಸಿಯನ್ನು ಕೊಂಡುಕೊಳ್ಳಬಹುದು ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡ್ತಿದೆ. ಇದು ನಿಜವಾದರೆ, ಎಲ್ಲಾ ಆರ್‌ಸಿಬಿ ಅಭಿಮಾನಿಗಳಿಗೆ ಇದು ರೋಮಾಂಚಕಾರಿ ಸುದ್ದಿಯಾಗಲಿದೆ. ಹೊಂಬಾಳೆ ಫಿಲ್ಮ್ಸ್ ಕನ್ನಡ ಸಿನಿಮಾ ಮತ್ತು ಸಂಸ್ಕೃತಿಯನ್ನು ಜಾಗತಿಕ ಪ್ರೇಕ್ಷಕರಿಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ, ಕನ್ನಡ ಹೊಂಬಾಳೆ ಆರ್‌ಸಿಬಿಯನ್ನು (ಕರ್ನಾಟಕದ ಹೆಮ್ಮೆ) ಸ್ವಂತ ಮಾಡಿಕೊಂಡರೆ ಪ್ರತಿಯೊಬ್ಬ ಅಭಿಮಾನಿಗೂ ನಿಜವಾಗಿಯೂ ವಿಶೇಷವಾಗಿರುತ್ತದೆ.ಕನ್ನಡಿಗರಿಂದ ಕನ್ನಡಿಗಾಗಿ ಕನ್ನಡಿಗರಿಗೋಸ್ಕರ.. ಇದು ನಿಜವಾಗುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಸಂತೋಷ್ ಆನಂದ್ ರಾಮ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಸಾಕಷ್ಟು ಜನ ಆರ್‌ಸಿಬಿ ಅಭಿಮಾನಿಗಳು ಕೂಡ ಈ ಸುದ್ದಿ ನಿಜವಾಗಲಿ ಎಂದು ಬಯಸುತ್ತಿದ್ದಾರೆ. ಮತ್ತೆ ಕನ್ನಡಿಗರೇ ಆರ್‌ಸಿಬಿ ಫ್ರಾಂಚೈಸಿ ಒಡೆತನ ಪಡೆಯಲಿ ಎಂದು ಬಯಸುತ್ತಿದ್ದಾರೆ. 17,000 ಕೋಟಿ ರೂ.ಗೆ ಫ್ರಾಂಚೈಸಿ ಮಾರಾಟ ಮಾಡಲು ಡಿಯಾಜಿಯೋ ಕಂಪೆನಿ ಮುಂದಾಗಿದೆ ಎನ್ನಲಾಗ್ತಿದೆ. ಇಷ್ಟು ದೊಡ್ಡ ಮೊತ್ತದ ಹಣ ತೆತ್ತು ಹೊಂಬಾಳೆ ಸಂಸ್ಥೆ ಫ್ರಾಂಚೈಸಿ ಖರೀದಿಸಲು ಸಾಧ್ಯವೇ ಎನ್ನುವ ಚರ್ಚೆ ಕೂಡ ನಡೀತಿದೆ.
ಜೆಎಸ್ಡಬ್ಲ್ಯೂ ಗ್ರೂಪ್, ಅದಾನಿ ಗ್ರೂಪ್, ಪೂನವಾಲ ಗ್ರೂಪ್, ದೇವಯಾನಿ ಇಂಟರ್ನ್ಯಾಷನಲ್ ಗ್ರೂಪ್, ಪಾರ್ಥ್ ಜಿಂದಾಲ್ ಮಾಲೀಕತ್ವದ JSW ಗ್ರೂಪ್ ಹೀಗೆ ದೈತ್ಯ ಸಂಸ್ಥೆಗಳು ಆರ್‌ಸಿಬಿ ಫ್ರಾಂಚೈಸಿ ಸ್ವಂತ ಮಾಡಿಕೊಳ್ಳಲು ಪ್ರಯತ್ನಿಸುತ್ತಿವೆ ಎನ್ನಲಾಗ್ತಿದೆ. ಜೆರೋದಾ ಸಂಸ್ಥೆಯ ಸಹ ಸ್ಥಾಪಕ ನಿಖಿಲ್ ಕಾಮತ್ ಕೂಡ ಈ ಬಗ್ಗೆ ಮನಸ್ಸು ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಇದೆಲ್ಲದರ ನಡುವೆ ಹೊಂಬಾಳೆ ಗ್ರೂಪ್ ಹೆಸರು ಕೇಳಿಬರ್ತಿದೆ. ಐಪಿಎಲ್ ಸೀಸನ್ 19 ಆರಂಭಕ್ಕೂ ಮುನ್ನ ಆರ್‌ಸಿಬಿ ತಂಡದ ಫ್ರಾಂಚೈಸಿ ಮಾಲೀಕರು ಬದಲಾಗುವ ನಿರೀಕ್ಷೆಯಿದೆ.
ನಿರ್ದೇಶಕ ಸಂತೋಷ್ ಆನಂದ್‌ರಾಮ್ ಪೋಸ್ಟ್ ಬಗ್ಗೆ ಇದೇ ಕೆಲವರು ಇದೇ ರೀತಿ ಕಾಮೆಂಟ್ ಮಾಡಿದ್ದಾರೆ. 'ಯುವ' ಸಿನಿಮಾ ಬಳಿಕ ಸಂತೋಷ್ ಆನಂದ್‌ರಾಮ್ ಯಾವುದೇ ಸಿನಿಮಾ ಕೈಗೆತ್ತಿಕೊಂಡಿಲ್ಲ. ಮತ್ತೊಂದು ಸಿನಿಮಾ ಸ್ಕ್ರಿಪ್ಟ್ ಕೆಲಸಗಳಲ್ಲಿ ಸಂತು ಬ್ಯುಸಿಯಾಗಿದ್ದಾರೆ. ಕಿಚ್ಚ ಸುದೀಪ್ ಜೊತೆಗೂ ಸಿನಿಮಾ ಮಾಡುತ್ತಾರೆ ಎನ್ನುವ ಚರ್ಚೆ ನಡೀತಿದೆ. ಆ ಬಗ್ಗೆ ಶೀಘ್ರದಲ್ಲೇ ಮಾಹಿತಿ ಸಿಗಲಿದೆ.


Click it and Unblock the Notifications











