ವಾರೆವ್ಹಾ ಇದು ಹೊಸ ಅಧ್ಯಾಯ; RCB ಫ್ರಾಂಚೈಸಿ ಖರೀದಿಗೆ ಮುಂದಾದ ಹೊಂಬಾಳೆ?
ಐಪಿಎಲ್ ಮಟ್ಟಿಗೆ ಚಿನ್ನದ ಮೊಟ್ಟೆ ಇಡುವ ಕೋಳಿ ಆರ್‌ಸಿಬಿ(RCB) ಫ್ರಾಂಚೈಸಿ. ಇದೀಗ ಈ ತಂಡದ ಫ್ರಾಂಚೈಸಿ ಮಾರಾಟದ ಬಗ್ಗೆ ಚರ್ಚೆ ನಡೀತಿದೆ. ಐಪಿಎಲ್ ಸೀಸನ್ 19 ಆರಂಭಕ್ಕೂ ಮುನ್ನ ತಂಡದ ಮಾಲೀಕರು ಬದಲಾಗಲಿದ್ದಾರೆ. ಈಗಾಗಲೇ ಸಾಕಷ್ಟು ಉದ್ಯಮಿಗಳು ತಂಡ ಖರೀದಿಗೆ ಮುಗಿಬಿದ್ದಿದ್ದು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಕೂಡ ರೇಸ್‌ನಲ್ಲಿದೆ ಎನ್ನಲಾಗ್ತಿದೆ.
'KGF' ಸರಣಿ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಸಂಚಲನ ಸೃಷ್ಟಿಸಿದೆ. ಬಳಿಕ 'ಕಾಂತಾರ' ಹಾಗೂ 'ಸಲಾರ್' ಸರಣಿ ಚಿತ್ರಗಳಿಂದ ದೊಡ್ಡದಾಗಿ ಸದ್ದು ಮಾಡ್ತಿದೆ. ಪರಭಾಷೆಗಳಲ್ಲಿ ಕೂಡ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದೆ. ಈಗಾಗಲೇ ತಮಿಳು, ಮಲಯಾಳಂ ಸಿನಿಮಾಗಳನ್ನು ನಿರ್ಮಿಸಿ ಹೃತಿಕ್ ರೋಷನ್ ಸಿನಿಮಾ ಮೂಲಕ ಬಾಲಿವುಡ್ ಅಂಗಳಕ್ಕೆ ಜಿಗಿಯುತ್ತಿದೆ. ಇದೆಲ್ಲದರ ನಡುವೆ ತಂಡ ಆರ್‌ಸಿಬಿ ಫ್ರಾಂಚೈಸಿ ಖರೀದಿಗೆ ಮುಂದಾಗಿರುವ ಬಗ್ಗೆ ಊಹಾಪೋಹ ಶುರುವಾಗಿದೆ.

ಪಾರ್ಥ್ ಜಿಂದಾಲ್ ಮಾಲೀಕತ್ವದ JSW ಗ್ರೂಪ್, ಜೆಎಸ್ಡಬ್ಲ್ಯೂ ಗ್ರೂಪ್, ಅದಾನಿ ಗ್ರೂಪ್, ಪೂನವಾಲ ಗ್ರೂಪ್, ದೇವಯಾನಿ ಇಂಟರ್ನ್ಯಾಷನಲ್ ಗ್ರೂಪ್ ಹೀಗೆ ಹಲವು ಸಂಸ್ಥೆಗಳು ಆರ್‌ಸಿಬಿ ತಂಡದ ಫ್ರಾಂಚೈಸಿ ಸ್ವಂತ ಮಾಡಿಕೊಳ್ಳಲು ಕಸರತ್ತು ನಡೆಸುತ್ತಿವೆ. ಜೆರೋದಾ ಸಂಸ್ಥೆಯ ಸಹ ಸ್ಥಾಪಕ ನಿಖಿಲ್ ಕಾಮತ್ ಕೂಡ ಆರ್‌ಸಿಬಿ ತಂಡದ ಫ್ರಾಂಚೈಸಿ ಖರೀದಿಗೆ ಮುಂದಾಗಿದ್ದಾರೆ ಎನ್ನಲಾಗ್ತಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಕೂಡ ಡಿಯಾಜಿಯೋ ಕಂಪೆನಿ ಜೊತೆ ಈ ಬಗ್ಗೆ ಒಂದು ಹಂತದ ಚರ್ಚೆ ನಡೆಸಿದೆ ಎನ್ನುವ ಗುಸುಗುಸು ಶುರುವಾಗಿದೆ.
2026ರ ಮಾರ್ಚ್ 31ರ ವೇಳೆಗೆ ಆರ್‌ಸಿಬಿ ತಂಡಕ್ಕೆ ಹೊಸ ಮಾಲೀಕರು ಯಾರು ಎನ್ನುವುದು ಗೊತ್ತಾಗಬೇಕಿದೆ. ಹೊಂಬಾಳೆ ಗ್ರೂಪ್ ಅಡಿಯಲ್ಲೇ ಹೊಂಬಾಳೆ ಫಿಲ್ಮ್ಸ್ ಚಿತ್ರ ನಿರ್ಮಾಣ ಸಂಸ್ಥೆ ಇದೆ. ಸಿನಿಮಾ ನಿರ್ಮಾಣ ಮಾತ್ರವಲ್ಲ, ಕನ್‌ಸ್ಟ್ರಕ್ಷನ್ ಫೀಲ್ಡ್‌ನಲ್ಲಿ ಕೂಡ ಈ ಸಂಸ್ಥೆ ಮುಂಚೂಣಿಯಲ್ಲಿದೆ. ಎರಡು ವರ್ಷಗಳಿಂದ ಆರ್‌ಸಿಬಿ ಜೊತೆ ಹೊಂಬಾಳೆ ಫಿಲ್ಮ್ಸ್ ನಂಟು ಶುರುವಾಗಿರುವುದು ಗೊತ್ತೇಯಿದೆ.

ಆರ್‌ಸಿಬಿಯ ಡಿಜಿಟಲ್ ಪಾರ್ಟ್‌ನರ್ ಆಗಿ ಹೊಂಬಾಳೆ ಫಿಲ್ಮ್ಸ್ ಗುರ್ತಿಸಿಕೊಂಡಿದೆ. ಆರ್‌ಸಿಬಿಯ ಎಲ್ಲ ಅಧಿಕೃತ ವಿಡಿಯೋ ನಿರ್ಮಾಣ ಹಾಗೂ ಪ್ರಸಾರದ ಜವಾಬ್ದಾರಿಯನ್ನು ಹೊಂಬಾಳೆ ಸಂಸ್ಥೆ ವಹಿಸಿಕೊಂಡಿದೆ. ಇನ್ನು ಈ ಹಿಂದೆ 'ಕೆಜಿಎಫ್- 2' ಹಾಗೂ 'ಕಾಂತಾರ' ಚಿತ್ರಗಳನ್ನು ಆರ್‌ಸಿಬಿ ತಂಡದ ಆಟಗಾರರಿಗೆ ಹೊಂಬಾಳೆ ಸಂಸ್ಥೆ ತೋರಿಸಿತ್ತು. ಸಿನಿಮಾ ನೋಡಿ ವಿದೇಶಿ ಆಟಗಾರರು ಥ್ರಿಲ್ ಆಗಿದ್ದರು. ಹೊಂಬಾಳೆ ಸಂಸ್ಥೆ ಇದೀಗ ಆರ್‌ಸಿಬಿ ಫ್ರಾಂಚೈಸಿ ಖರೀದಿಗೆ ಮುಂದಾಗಿದೆ ಎನ್ನುವ ಸುದ್ದಿ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ.
ಕ್ರಿಕೆಟ್ ಲೋಕದಲ್ಲಿ ಆರ್‌ಸಿಬಿ ತಂಡಕ್ಕಿರುವ ಕ್ರೇಜ್ ಎಂಥದ್ದು ಎನ್ನುವುದು ಗೊತ್ತೇಯಿದೆ. 17 ವರ್ಷ ಟ್ರೋಫಿ ಗೆಲ್ಲದೇ ಇದ್ದರೂ ಅಭಿಮಾನಿಗಳ ಪ್ರೀತಿ ಕಮ್ಮಿ ಆಗಿರಲಿಲ್ಲ. ಈ ವರ್ಷ ತಂಡ ಚಾಂಪಿಯನ್ ಆಗಿ ದಾಖಲೆ ಬರೆದಿತ್ತು. ತಂಡಕ್ಕೆ ಸರ್ಕಾರ ಸನ್ಮಾನ ಮಾಡಲು ನಿರ್ಧರಿಸಿದಾಗ ಹರಿದು ಬಂದ ಜನಸಾಗರವೇ ತಂಡದ ಮೇಲಿನ ಅಭಿಮಾನ ಎಂಥದ್ದು ಎಂದು ಸಾರಿ ಹೇಳುತ್ತಿತ್ತು. ಇನ್ನು ಕನ್ನಡಿಗರೇ ತಂಡದ ಮಾಲೀಕರಾದರೆ ಅದರಲ್ಲೂ ಹೊಂಬಾಳೆ ಗ್ರೂಪ್ ಫ್ರಾಂಚೈಸಿ ಕೊಂಡುಕೊಂಡರೆ ಕ್ರೇಜ್ ದುಪ್ಪಟ್ಟಾಗುವುದರಲ್ಲಿ ಅನುಮಾನ ಇಲ್ಲ.
ಮೊದಲಿನಿಂದಲೂ ತನ್ನ ವಿಭಿನ್ನ ರೀತಿಯ ಪ್ರಚಾರದಿಂದ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಸದ್ದು ಮಾಡ್ತಿದೆ. ಆರ್‌ಸಿಬಿ ತಂಡದ ಸಾಕಷ್ಟು ಪ್ರೋಮೊ ವೀಡಿಯೋಗಳನ್ನು ನಿರ್ಮಿಸಿದೆ. ಇನ್ನು ತಮ್ಮ ಬ್ರ್ಯಾಂಡ್ ಪ್ರಮೋಟ್ ಮಾಡುವುದಕ್ಕೆ ವಿಜಯ್ ಮಲ್ಯ ಆರ್‌ಸಿಬಿ ಫ್ರಾಂಚೈಸಿ ಖರೀದಿಸಿದ್ದರು. 476 ಕೋಟಿ ರೂ. ಕೊಟ್ಟು ಹಣ ಕೊಟ್ಟಿದ್ದರು. ಸದ್ಯ ಬ್ರಿಟನ್‌ನ ಮದ್ಯ ತಯಾರಿಕಾ ಕಂಪನಿ ಡಿಯಾಜಿಯೊ ಆರ್‌ಸಿಬಿ ತಂಡ ಫ್ರಾಂಚೈಸಿ ಹೊಂದಿದೆ. 'ಕಾಂತಾರ- 1' ಬಳಿಕ ಹೊಂಬಾಳೆ ಫಿಲ್ಮ್ಸ್ ಸದ್ಯಕ್ಕೆ ಯಾವುದೇ ಸಿನಿಮಾ ಕೈಗೆತ್ತಿಕೊಂಡಿಲ್ಲ. ಪ್ರಭಾಸ್ ಜೊತೆ 'ಸಲಾರ್- 2' ಚಿತ್ರ ನಿರ್ಮಾಣ ಮಾಡಬೇಕಿದೆ. ಡಾರ್ಲಿಂಗ್ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಇರುವುದರಿಂದ ತಡವಾಗ್ತಿದೆ.
ರಕ್ಷಿತ್ ಶೆಟ್ಟಿ ಜೊತೆ 'ರಿಚರ್ಡ್ ಆಂಟನಿ' ಸಿನಿಮಾ ಘೋಷಿಸಿ 3 ವರ್ಷವಾಯಿತು. ಈವರೆಗೆ ಸಿನಿಮಾ ಶುರುವಾಗಿಲ್ಲ. ಹೃತಿಕ್ ರೋಷನ್ ಕಾಂಬಿನೇಷನ್ ಸಿನಿಮಾ ಯಾವಾಗ ಸೆಟ್ಟೇರುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ಇದೆಲ್ಲದರ ನಡುವೆ ಆರ್‌ಸಿಬಿ ತಂಡ ಖರೀದಿಸಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಕೂಡ ಹೊಂಬಾಳೆ ದರ್ಬಾರ್ ಶುರು ಮಾಡುವ ಸಾಧ್ಯತೆಯಿದೆ. ಶೀಘ್ರದಲ್ಲೇ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ.
ಟ್ರೋಫಿ ಗೆದ್ದ ಬಳಿಕ ಆರ್‌ಸಿಬಿ ತಂಡದ ಮೇಲೆ ಅಭಿಮಾನಿಗಳು ಪ್ರೀತಿ ದುಪ್ಪಟ್ಟಾಗಿದೆ. 19ನೇ ಸೀಸನ್ ಯಾವಾಗ ಶುರುವಾಗುತ್ತದೆ ಎಂದು ಚಾತಕ ಪಕ್ಷಿಗಳ ರೀತಿ ಕಾಯುತ್ತಿದ್ದಾರೆ. ಮುಂದಿನ ವರ್ಷ ನಿರ್ಮಾಪಕ ವಿಜಯ್ ಕಿರಗಂದೂರ್ ನೇತೃತ್ವದ ಹೊಂಬಾಳೆ ಸಂಸ್ಥೆ ಹೊಸ ಅಧ್ಯಾಯ ಶುರು ಮಾಡುತ್ತಾ ಕಾದು ನೋಡಬೇಕಿದೆ.


Click it and Unblock the Notifications











