ಫ್ಲಾಪ್ ಆಯ್ತಾ ಧೂಮಂ? ಚಿತ್ರ ಬಿಡುಗಡೆಯಾದ ಬಳಿಕ ಹೊಂಬಾಳೆ ಫಿಲ್ಮ್ಸ್ ಫುಲ್ ಸೈಲೆಂಟ್ ಆಗಿದ್ದೇಕೆ?
ಮೊನ್ನೆಯಷ್ಟೇ ( ಜೂನ್ 23 ) ಪವನ್ ಕುಮಾರ್ ನಿರ್ದೇಶನದ ಧೂಮಂ ಚಿತ್ರ ತೆರೆಗೆ ಬಂದಿದೆ. ಬಿಡುಗಡೆಗೂ ಮುನ್ನ ಟ್ರೈಲರ್ ಹಾಗೂ ಪವನ್ ಕುಮಾರ್ ಚಿತ್ರದ ಕುರಿತಾಗಿ ನೀಡಿದ್ದ ಹೇಳಿಕೆಗಳಿಂದಾಗಿ ಧೂಮಂ ಚಿತ್ರ ದೊಡ್ಡಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿತ್ತು.
ಆದರೆ ಈ ನಿರೀಕ್ಷೆಯನ್ನು ತಲುಪುವಲ್ಲಿ ಧೂಮಂ ಚಿತ್ರ ವಿಫಲವಾಗಿದೆ ಎಂದೇ ಹೇಳಬಹುದಾಗಿದೆ. ಹೌದು, ಧೂಮಂ ಚಿತ್ರ ಬಿಡುಗಡೆಯಾದ ಬಳಿಕ ಸಿನಿ ರಸಿಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳಲಾರಂಭಿಸಿತ್ತು. ಚಿತ್ರ ಬಿಡುಗಡೆಯಾಗಿ ಮೂರು ದಿನಗಳು ಕಳೆದರೂ ಸಹ ದೊಡ್ಡ ಮಟ್ಟದ ಸದ್ದು ಮಾತ್ರ ಕೇಳಿಬಂದಿಲ್ಲ.

ಇನ್ನು ಈ ಚಿತ್ರಕ್ಕೆ ಪ್ರತಿಷ್ಟಿತ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಬಂಡವಾಳ ಹೂಡಿದ್ದು, ಈ ಹಿಂದಿನ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಚಿತ್ರಗಳು ಮಾಡಿದ್ದಂತಹ ಸದ್ದನ್ನು ಈ ಚಿತ್ರ ಮಾಡುವಲ್ಲಿ ವಿಫಲವಾಗಿದೆ. ಧೂಮಪಾನದಿಂದಾಗುವ ದುಷ್ಪರಿಣಾಮವನ್ನು ಚಿತ್ರದ ಮೂಲಕ ಹೇಳಿ ಧೂಮಪಾನ ಒಳ್ಳೆಯದಲ್ಲ ಎಂಬ ಸಂದೇಶವನ್ನು ಪವನ್ ಕುಮಾರ್ ಚಿತ್ರದಲ್ಲಿ ಸಾರಿದ್ದು, ಇದಕ್ಕೆ ಸಸ್ಪೆನ್ಸ್ ಥ್ರಿಲ್ಲರ್ ಟಚ್ ಕೊಟ್ಟಿದ್ದಾರೆ.
ಕಥೆ ಚೆನ್ನಾಗಿದೆ ಹಾಗೂ ಕೊನೆಯಲ್ಲಿ ನೀಡಿರುವ ಸಂದೇಶವೂ ಸಹ ಚೆನ್ನಾಗಿದೆ. ಆದರೆ ಈ ಸಾಮಾಜಿಕ ಕಳಕಳಿ ಇರುವ ಚಿತ್ರಕಥೆಯನ್ನು ಸಸ್ಪೆನ್ಸ್ ಥ್ರಿಲ್ಲರ್ ಮೂಲಕ ಹೇಳಲು ಹೋಗಿ ಪವನ್ ಎಡವಿದ್ದಾರೆ ಎಂದು ಹಲವು ಸಿನಿ ರಸಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೊಲೆಯೊಂದರ ಬೆನ್ನತ್ತಿ ಹೋಗುವ ನಾಯಕನಿಗೆ ನಡೆಯುತ್ತಿರುವ ಕೃತ್ಯಗಳ ಹಿಂದೆ ಯಾರ ಕೈವಾಡ ಇರಬಹುದು ಎಂದು ಹುಟ್ಟಕೊಳ್ಳುವ ಮಟ್ಟದ ಕುತೂಹಲವನ್ನು ಸಿನಿ ರಸಿಕರಲ್ಲಿ ಹುಟ್ಟಿಸುವಲ್ಲಿ ವಿಫಲವಾಗಿದ್ದಾರೆ ನಿರ್ದೇಶಕ ಪವನ್ ಕುಮಾರ್. ಹೀಗೆ ಬೋರಿಂಗ್ ಎನಿಸುವ ಚಿತ್ರಕಥೆ ಸಿನಿ ರಸಿಕರಲ್ಲಿ ನಿರಾಸೆಯನ್ನು ಮೂಡಿಸಿದ್ದು, ಧೂಮಂ ಎಡವಿದ್ದು ಈ ಅಂಶದಲ್ಲೇ ಎಂದು ಹೇಳಬಹುದು.
ಇನ್ನು ಚಿತ್ರ ನೋಡಿ ಹೊರಬಂದ ಸಿನಿ ರಸಿಕರು ಚಿತ್ರದ ಕುರಿತು ಹೆಚ್ಚಾಗಿ ನೆಗೆಟಿವ್ ವಿಮರ್ಶೆಗಳನ್ನು ಹಾಕುತ್ತಿದ್ದರೆ, ಅತ್ತ ಹೊಂಬಾಳೆ ಫಿಲ್ಮ್ಸ್ ಚಿತ್ರದ ಕುರಿತು ಯಾವುದೇ ಟ್ವೀಟ್ ಮಾಡದೇ ಸೈಲೆಂಟ್ ಆಗಿಬಿಟ್ಟಿದೆ. ಹೌದು, ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಧೂಮಂ ಬಿಡುಗಡೆಯ ದಿನ ಅಂದರೆ ಜೂನ್ 23ರಂದು 'ಧೂಮಂ ಇಂದಿನಿಂದ' ಎಂಬ ಪೋಸ್ಟ್ ಹಂಚಿಕೊಂಡಿದ್ದೇ ಕೊನೆ.
ಅದಾದ ಬಳಿಕ ಧೂಮಂ ಕುರಿತು ಚಿತ್ರತಂಡ ಯಾವುದೇ ಪೋಸ್ಟ್ ಅನ್ನೂ ಸಹ ಹಂಚಿಕೊಂಡಿಲ್ಲ. ಈ ಹಿಂದೆ ತನ್ನ ನಿರ್ಮಾಣದಡಿಯಲ್ಲಿ ಬಿಡುಗಡೆಗೊಂಡ ಚಿತ್ರಗಳು ಬಿಡುಗಡೆಯಾದ ಹೊಸ್ತಿಲಲ್ಲಿ ಸತತವಾಗಿ ಪೋಸ್ಟ್ ಹಂಚಿಕೊಂಡು ಪ್ರಚಾರ ಮಾಡುತ್ತಿದ್ದ ಹೊಂಬಾಳೆ ಫಿಲ್ಮ್ಸ್ ಧೂಮಂ ವಿಚಾರದಲ್ಲಿ ಮಾತ್ರ ಸೈಲೆಂಟ್ ಆಗಿಬಿಟ್ಟಿದೆ.
ಹೊಂಬಾಳೆ ಫಿಲ್ಮ್ಸ್ ಈ ರೀತಿ ಮೌನ ವಹಿಸಲು ಕಾರಣ ಧೂಮಂ ಚಿತ್ರಕ್ಕೆ ವ್ಯಕ್ತವಾಗಿರುವ ಪ್ರತಿಕ್ರಿಯೆ ಹಾಗೂ ಚಿತ್ರ ಮಾಡಿರುವ ಕಳಪೆ ಗಳಿಕೆ ಎಂದು ಹಲವಾರು ಸಿನಿ ರಸಿಕರು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ ಬಿಡುಗಡೆಯಾಗಿದ್ದ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಣದ ರಾಘವೇಂದ್ರ ಸ್ಟೋರ್ಸ್ ಚಿತ್ರ ಸಹ ದೊಡ್ಡ ಮಟ್ಟದಲ್ಲಿ ಹೆಸರು ಮಾಡುವಲ್ಲಿ ಯಶಸ್ವಿಯಾಗಲಿಲ್ಲ. ಹೀಗೆ ಹೊಂಬಾಳೆ ಫಿಲ್ಮ್ಸ್ ಈ ವರ್ಷ ನಿರ್ಮಿಸಿದ ಎರಡೂ ಚಿತ್ರಗಳೂ ಸಹ ನಿರೀಕ್ಷಿಸಿದ ಮಟ್ಟವನ್ನು ತಲುಪುವಲ್ಲಿ ವಿಫಲವಾಗಿದ್ದು, ಹಿನ್ನಡೆ ಅನುಭವಿಸಿದೆ.


Click it and Unblock the Notifications











