Exclusive: 'ಸಲಾರ್' ಕಲೆಕ್ಷನ್ ಸುಳ್ಳಾ? ಹೊಂಬಾಳೆ ಕಲೆಕ್ಷನ್ ರಿಪೋರ್ಟ್ ಡಿಲೀಟ್ ಮಾಡ್ತಾ? ಕಿಡಿಗೇಡಿಗಳಿಗೆ ಚಿತ್ರತಂಡ ಎಚ್ಚರಿಕೆ
ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಈಗಾಗಲೇ ಸಿನಿಮಾ ಕಲೆಕ್ಷನ್ 400 ಕೋಟಿ ರೂ. ದಾಟಿದೆ. ಪ್ರಶಾಂತ್ ನೀಲ್- ಪ್ರಭಾಸ್ ಕಾಂಬೋ ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆ ಹರಿಸುತ್ತಿದೆ. ಆದರೆ ಸಿನಿಮಾ ಕಲೆಕ್ಷನ್ ಬಗ್ಗೆ ಸುದ್ದಿಯನ್ನು ಕೆಲವರು ತೇಲಿಬಿಡುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರಿಗೆ ಲೆಕ್ಕವಿಲ್ಲ. ದೊಡ್ಡ ಸಿನಿಮಾಗಳು, ನಟರ ವಿರುದ್ಧ ಸುಖಾಸುಮ್ಮನೆ ಕೆಲವರು ಗಾಳಿ ಸುದ್ದಿ ಹಬ್ಬಿಸುತ್ತಾರೆ. ಸ್ಟಾರ್ ನಟರ ಸಿನಿಮಾಗಳಿಗೆ ಮತ್ತೊಬ್ಬ ನಟನ ಅಭಿಮಾನಿಗಳು ಹೀಗೆ ವದಂತಿ ಹಬ್ಬಿಸುವ ಸಾಕಷ್ಟು ಉದಾಹರಣೆಗಳಿವೆ. 'ಸಲಾರ್' ಸಿನಿಮಾ ವಿಚಾರದಲ್ಲಿ ಹೊಂಬಾಳೆ ಸಂಸ್ಥೆ ಬಗ್ಗೆ ಈಗ ಇಂತದ್ದೇ ನೆಗೆಟಿವ್ ಪೋಸ್ಟ್‌ಗಳು ವೈರಲ್ ಆಗುತ್ತಿದೆ.

ತಮ್ಮ ಸಂಸ್ಥೆ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಈಗ ಕಠಿಣ ಕ್ರಮದ ಎಚ್ಚರಿಕೆ ನೀಡಿದೆ. ಅಷ್ಟಕ್ಕೂ ಆಗಿದ್ದೇನು ಎನ್ನುವುದನ್ನು ನೋಡುವುದಾದರೆ 'ಸಲಾರ್' ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈ ಬಗ್ಗೆ 'ಸಲಾರ್ ಸಾಗ' ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಆಗಿಂದಾಗ್ಗೆ ಮಾಹಿತಿ ನೀಡಲಾಗುತ್ತಿದೆ. 4 ದಿನಗಳ ಬಳಿಕ ಹೊಂಬಾಳೆ ಸಂಸ್ಥೆ ಬಗ್ಗೆ ಸುಳ್ಳು ಸುದ್ದಿ ವೈರಲ್ ಆಗುತ್ತಿದೆ.
ಹೊಂಬಾಳೆ ಸಂಸ್ಥೆಯ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಸಿನಿಮಾ ಕಲೆಕ್ಷನ್ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. 'ಸಲಾರ್ ಸಾಗ' ಪೇಜ್‌ಗಳಲ್ಲಿ ಮಾತ್ರ ಕಲೆಕ್ಷನ್ ರಿಪೋರ್ಟ್ ಪೋಸ್ಟರ್ ಹಾಕಲಾಗುತ್ತಿದೆ. ಸಲಾರ್ ಸಿನಿಮಾ ಕಲೆಕ್ಷನ್ ರಿಪೋರ್ಟ್ ಎಲ್ಲಾ ಸುಳ್ಳು. ಈ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಕ್ಕೆ ಹೊಂಬಾಳೆ ಸಂಸ್ಥೆ ಕಲೆಕ್ಷನ್ ಪೋಸ್ಟರ್‌ಗಳನ್ನು ಡಿಲೀಟ್ ಮಾಡಿದೆ ಎಂದು ಕೆಲ ಕಿಡಿಗೇಡಿಗಳು ವದಂತಿ ಹಬ್ಬಿಸುತ್ತಿದ್ದಾರೆ. ಈ ಬಗ್ಗೆ ಹೊಂಬಾಳೆ ಸಂಸ್ಥೆ ಫಿಲ್ಮಿಬೀಟ್‌ಗೆ ಪ್ರತಿಕ್ರಿಯಿಸಿದೆ.

"ನಾವು ನಮ್ಮ ಹೊಂಬಾಳೆ ಫಿಲ್ಮ್ಸ್ ಪೇಜ್‌ನಲ್ಲಿ ಯಾವುದೇ ಕಲೆಕ್ಷನ್ ರಿಪೋರ್ಟ್ ಈವರೆಗೆ ಕೊಟ್ಟಿಲ್ಲ. ಈ ಹಿಂದಿನ ಸಿನಿಮಾಗಳ ವಿಚಾರದಲ್ಲೂ ಆ ರೀತಿ ಮಾಡಿಲ್ಲ. ನಾವು 'ಸಲಾರ್ ಸಾಗ' ಪೇಜ್‌ನಲ್ಲಿ ಮಾತ್ರ ಮಾಹಿತಿ ನೀಡುತ್ತಿದ್ದೇವೆ. ಆ ಪೇಜ್‌ನಲ್ಲಿ ಇನ್ನು ಆ ಪೋಸ್ಟರ್‌ಗಳು ಹಾಗೆಯೇ ಇದೆ. ನಾವು ಯಾಕೆ ಡಿಲೀಟ್ ಮಾಡಬೇಕು. ನಮ್ಮ ಸಂಸ್ಥೆಗೆ ಕೆಟ್ಟ ಹೆಸರು ತರಲು ಈ ರೀತಿ ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಹಾಕದೇ ಇರುವ ಪೋಸ್ಟ್ ಹೇಗೆ ಡಿಲೀಟ್ ಮಾಡುತ್ತೇವೆ. ಇಂತಹ ಸುಳ್ಳುಸುದ್ದಿ ಹಬ್ಬಿಸುವುದು ಮುಂದುವರೆದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇನೆ" ಎಂದು ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಬಿಡುಗಡೆಯಾಗಿದ್ದ 'ಸಲಾರ್' ಸಿನಿಮಾ ಮೊದಲು 3 ದಿನಕ್ಕೆ ವಿಶ್ವದಾದ್ಯಂತ 402 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ಕ್ರಿಸ್‌ಮಸ್ ಹಬ್ಬದ ರಜೆ ದಿನ ಕೂಡ ಸಿನಿಮಾ ದೊಡ್ಡಮಟ್ಟದಲ್ಲಿ ಬಾಕ್ಸಾಫೀಸ್ ದೋಚಿರುವ ಸಾಧ್ಯತೆಯಿದೆ. ಸಿನಿಮಾ ಮೊದಲ 5 ದಿನಕ್ಕೆ 500 ಕೋಟಿ ರೂ. ಗಳಿಕೆ ಕಂಡಿರುವ ಲೆಕ್ಕಾಚಾರ ನಡೀತಿದೆ.
ಕನ್ನಡದ 'ಉಗ್ರಂ' ಕಥೆಯನ್ನೇ ಕೊಂಚ ಬದಲಿಸಿ ಪ್ರಶಾಂತ್ ನೀಲ್ 'ಸಲಾರ್' ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಚಿತ್ರದಲ್ಲಿ ಪ್ರಭಾಸ್ ಜೊತೆ ಪೃಥ್ವಿರಾಜ್ ಸುಕುಮಾರನ್ ಸ್ನೇಹಿತನಾಗಿ ನಟಿಸಿದ್ದಾರೆ. ಅಂದಾಜು 200 ಕೋಟಿ ರೂ. ಬಜೆಟ್‌ನಲ್ಲಿ ಹೊಂಬಾಳೆ ಸಂಸ್ಥೆ ಸಿನಿಮಾ ನಿರ್ಮಿಸಿದೆ. ರವಿ ಬಸ್ರೂರು ಸಂಗೀತ, ಭುವನ್ ಗೌಡ ಛಾಯಾಗ್ರಹಣ ಚಿತ್ರಕ್ಕಿದೆ.
ಎರಡು ಭಾಗಗಳಾಗಿ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. 'ಸಲಾರ್' ಪಾರ್ಟ್- ಸೀಜ್‌ಫೈರ್ ಬಳಿಕ 'ಸಲಾರ್' ಶೌರ್ಯಾಂಗ ಪರ್ವ ಕಟ್ಟಿಕೊಡಲಿದ್ದಾರೆ. 2025ರಲ್ಲಿ ಸೀಕ್ವೆಲ್ ತೆರೆಗೆ ಬರುವ ಸಾಧ್ಯತೆಯಿದೆ.


Click it and Unblock the Notifications











