ಶ್ರೀಮುರಳಿ ಜೊತೆ ಹೊಂಬಾಳೆ ಫಿಲ್ಮ್ಸ್ ಹೊಸ ಸಿನಿಮಾ; 'ಬಘೀರ'ನಾಗಿ ಎಂಟ್ರಿ ಕೊಟ್ಟ ರೋರಿಂಗ್ ಸ್ಟಾರ್
ಹೊಂಬಾಳೆ ಫಿಲ್ಮ್ಸ್ ಘೋಷಣೆ ಮಾಡಲಿರುವ ಮುಂದಿನ ಸಿನಿಮಾ ಯಾವುದು ಎಂದು ಅಭಿಮಾನಿಗಳು ಉಸಿರು ಬಿಡಿ ಹಿಡಿದು ಕಾಯುತ್ತಿದ್ದರು. ಇದೀಗ ಕುತೂಹಲಕ್ಕೆ ತೆರೆ ಎಳೆದಿದ್ದು, ಶ್ರೀಮುರಳಿ ಜೊತೆ ಸಿನಿಮಾ ಮಾಡುವುದಾಗಿ ಅನೌನ್ಸ್ ಮಾಡಿದ್ದಾರೆ.
Recommended Video
ಇತ್ತೀಚಿಗಷ್ಟೆ ಪ್ರಭಾಸ್ ಜೊತೆ ಸಲಾರ್ ಸಿನಿಮಾ ಅನೌನ್ಸ್ ಮಾಡಿದ್ದ ಬೆನ್ನಲ್ಲೇ ಹೊಂಬಾಳೆ ಫಿಲ್ಮ್ಸ ಮತ್ತೊಂದು ಸಿನಿಮಾ ಬಹಿರಂಗ ಪಡಿಸುವುದಾಗಿ ಟ್ವೀಟ್ ಮಾಡಿ ಅಭಿಮಾನಿಗಳ ನಿದ್ದೆಗೆಡಿಸಿದ್ದರು. ಶ್ರೀಮುರಳಿ ಹುಟ್ಟುಹಬ್ಬದ ದಿನ ಹೊಸ ಸಿನಿಮಾ ಅನೌನ್ಸ್ ಮಾಡುವುದಾಗಿ ಹೇಳಿದ್ದ ಕಾರಣ, ಹೊಂಬಾಳೆ ಫಿಲ್ಮ್ಸ್ ಮುಂದಿನ ಸಿನಿಮಾ ಶ್ರೀಮುರಳಿ ಜೊತೆ ಎನ್ನುವ ಅನುಮಾನ ಎಲ್ಲರಲ್ಲೂ ಇತ್ತು. ಅದರಂತೆ ಈಗ ಹೊಸ ಸಿನಿಮಾ ಘೋಷಣೆ ಆಗಿದ್ದು, ಮುರಳಿ ಅಭಿಮಾನಿಗಳಿಗೆ ಬಿಗ್ ಗಿಫ್ಟ್ ಸಿಕ್ಕಿದೆ.

'ಬಘೀರ' ಟೈಟಲ್, ಪ್ರಶಾಂತ್ ನೀಲ್ ಕಥೆ
ಹೊಂಬಾಳೆ ಫಿಲ್ಮ್ಸ್ ಮುಂದಿನ ಸಿನಿಮಾ ಟೈಟಲ್ ಬಘೀರ. ಈ ಹೆಸರು ಜಂಗಲ್ ಬುಕ್ ಸಿನಿಮಾದ ವಿಶೇಷ ಪಾತ್ರದ ಹೆಸರು. ಅದೇ ಹೆಸರನ್ನು ಶ್ರೀಮುರಳಿ ಮುಂದಿನ ಸಿನಿಮಾಗೆ ಇಟ್ಟಿರುವುದು ಕುತೂಹಲ ಮೂಡಿಸಿದೆ. ವಿಶೇಷ ಎಂದರೆ ಬಘೀರ ಸಿನಿಮಾದ ಕಥೆಯನ್ನು ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಬರೆದಿದ್ದಾರೆ. ಕೆಜಿಎಫ್-2, ಸಲಾರ್ ಸಿನಿಮಾಗಳ ನಡುವೆಯೂ ಪ್ರಶಾಂತ್ ನೀಲ್ ಬಘೀರ ಸಿನಿಮಾದ ಕಥೆಯನ್ನು ಬರೆದಿರುವುದು ಚಿತ್ರದ ಮೇಲಿನ ಕುತೂಹಲ ಮತ್ತಷ್ಟು ಹೆಚ್ಚಿಸಿದೆ.

ಡಾ.ಸೂರಿ ನಿರ್ದೇಶನ
'ಸಮಾಜವು ಕಾಡಾಗಿ ಬದಲಾದಾಗ ಮತ್ತು ನ್ಯಾಯಕ್ಕಾಗಿ ಕೇವಲ ಒಂದು ಪ್ರಿಡೇಟರ್ ಘರ್ಜಿಸುತ್ತದೆ' ಎಂದು ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿ, ಸಿನಿಮಾ ಹೆಸರನ್ನು ಅನೌನ್ಸ್ ಮಾಡಿದೆ. ಅಂದಹಾಗೆ ಸದ್ಯ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ಶ್ರೀಮುರಳಿ ಗಂಭೀರ ಲುಕ್ ಬೀರುವ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ. ಚಿತ್ರಕ್ಕೆ ಡಾ.ಸೂರಿ ನಿರ್ದೇಶನ ಮಾಡುತ್ತಿದ್ದಾರೆ.

ಪ್ರಶಾಂತ್ ನೀಲ್ ಹೇಳಿದ್ದೇನು?
ಉಗ್ರಂ ಸಿನಿಮಾದ ಬಳಿಕ ಪ್ರಶಾಂತ್ ಮತ್ತೆ ಮುರಳಿಗಾಗಿ ಕಥೆ ಬರೆದಿದ್ದಾರೆ. ಈ ಬಗ್ಗೆ ಪ್ರಶಾಂತ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, 'ನನ್ನ ಮೊದಲ ನಿಜವಾದ ಮಾಸ್ ಹೀರೋ ಶ್ರೀಮುರಳಿಗಾಗಿ ಶೌರ್ಯದ ಕಥೆಯನ್ನು ಬರೆದಿದ್ದೀನಿ. ಹುಟ್ಟುಹಬ್ಬದ ಶುಭಾಶಯಗಳು' ಶ್ರೀಮುರಳಿ ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ.

ಹೊಂಬಾಳೆ ಫಿಲ್ಮ್ಸ 8ನೇ ಸಿನಿಮಾವಿದು
ಕೆಜಿಎಫ್ ಸಿನಿಮಾ ನಿರ್ಮಾಣ ಮಾಡುವ ಮೂಲಕ ಇಡೀ ದೇಶದಾದ್ಯಂತ ಗಮನ ಸೆಳೆದಿರುವ ಹೊಂಬಾಳೆ ಫಿಲ್ಮ್ಸ್ ನ 7ನೇ ಸಿನಿಮಾದಲ್ಲಿ ಪ್ರಭಾಸ್ ನಾಯಕನಾಗಿ ನಟಿಸುತ್ತಿದ್ದಾರೆ. ಸಲಾರ್ ಎಂದು ಶೀರ್ಷಿಕೆ ಇಡಲಾಗಿದೆ. ಇದೀಗ ಶ್ರೀಮುರಳಿ ಜೊತೆ 8ನೇ ಸಿನಿಮಾ ಘೋಷಣೆ ಆಗಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಅನೌನ್ಸ್ ಮಾಡುತ್ತ ಸದ್ದು ಮಾಡುತ್ತಿರುವ ಹೊಂಬಾಳೆ ಫಿಲ್ಮ್ಸ್ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಶ್ರೀಮುರಳಿ ಮದಗಜ ಸಿನಿಮಾ ಮುಗಿಯುತ್ತಿದ್ದಂತೆ ಬಘೀರ ಚಿತ್ರೀಕರಣ ಪ್ರಾರಂಭವಾಗಲಿದೆ.


Click it and Unblock the Notifications











