ಹೊಸ ಪರ್ವ ಆರಂಭ, ಯುವರಾಜ್ ಕುಮಾರ್‌ಗಾಗಿ ಹೊಂಬಾಳೆ ಸಿನಿಮಾ: ಇರಲಿ 'ಅಪ್ಪು'ಗೆ
ಪುನೀತ್ ರಾಜ್‌ಕುಮಾರ್ ಸಿನಿಮಾ ನಿರ್ಮಿಸುವ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ಹೊಂಬಾಳೆ ಫಿಲಮ್ಸ್. ಅಪ್ಪು ಜೊತೆ ಹಲವು ಸಿನಿಮಾಗಳನ್ನು ಮಾಡಿ ಯಶಸ್ಸು ಗಳಿಸಿತ್ತು. ಇದೀಗ ಅಪ್ಪು ಬಳಿಕ ಅವರ ಕುಟುಂಬದ ಕುಡಿಯ ಜೊತೆ ಸಿನಿಮಾ ಮಾಡಲು ಮುಂದಾಗಿದೆ.
ಪುನೀತ್ ರಾಜ್‌ಕುಮಾರ್ ಅಗಲಿಕೆಯಿಂದ ಉಂಟಾಗಿರುವ ನಿರ್ವಾತವನ್ನು ತುಸು ಮಟ್ಟಿಗೆ ತುಂಬಲು ರಾಘವೇಂದ್ರ ರಾಜ್‌ಕುಮಾರ್ ಪುತ್ರ ಯುವರಾಜ್ ಕುಮಾರ್ ಸೂಕ್ತ ವ್ಯಕ್ತಿ ಎಂಬ ಮಾತುಗಳು ಅಪ್ಪು ಅಭಿಮಾನಿಗಳಿಂದ ಕೇಳಿ ಬರುತ್ತಿತ್ತು, ಅಭಿಮಾನಿಗಳ ಮನವಿ ಕೇಳಿಸಿಕೊಂಡಿರುವ ಹೊಂಬಾಳೆ, ಯುವರಾಜ್ ಕುಮಾರ್ ಅನ್ನು ಲಾಂಚ್ ಮಾಡಲು ಮುಂದಾಗಿದೆ.
ಯುವರಾಜ್ ಕುಮಾರ್ ಅವರೊಟ್ಟಿಗೆ ಸಿನಿಮಾವನ್ನು ಹೊಂಬಾಳೆ ಫಿಲಮ್ಸ್ ಘೋಷಣೆ ಮಾಡಿದ್ದು, ಸಿನಿಮಾವನ್ನು ಪುನೀತ್‌ರ ಮೆಚ್ಚಿನ ನಿರ್ದೇಶಕರಲ್ಲಿ ಒಬ್ಬರಾದ ಸಂತೋಶ್ ಆನಂದ್‌ರಾಮ್ ನಿರ್ದೇಶನ ಮಾಡಲಿದ್ದಾರೆ.

ಯುವರಾಜ್ ಕುಮಾರ್ ಅವರ ಮೊದಲ ಲುಕ್ ಪೋಸ್ಟರ್ ಅನ್ನು ಇಂದು ಬಿಡುಗಡೆ ಮಾಡಲಾಗಿದೆ. ಕಪ್ಪು ಬಣ್ಣದ ಧಿರಿಸು ಧರಿಸಿ ಸಖತ್ ಸ್ಟೈಲಿಷ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಯುವರಾಜ್ ಕುಮಾರ್. ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ. ಆದರೆ ಇದೊಂದು ಕಾಲೇಜು ಪ್ರೇಮ ಮತ್ತು ಆಕ್ಷನ್ ಕತೆ ಆಗಿರಲಿದೆ ಎಂದು ಹೇಳಲಾಗುತ್ತಿದೆ.
ಯುವರಾಜ್ ಕುಮಾರ್ ಅನ್ನು ಲಾಂಚ್ ಮಾಡಲು ಈ ಹಿಂದಿನಿಂದಲೂ ಪ್ರಯತ್ನಗಳು ನಡೆದಿದ್ದವು. ರಣಧೀರ ಕಂಠೀರವ ಸಿನಿಮಾ ಸೆಟ್ಟೇರಿತ್ತಾದರೂ ಕಾರಣಾಂತರಗಳಿಂದ ಸಿನಿಮಾ ನಿಂತು ಹೋಯಿತು. ಇದೀಗ ದೊಡ್ಡ ಬ್ಯಾನರ್ ಮೂಲಕವೇ ಯುವರಾಜ್ ಕುಮಾರ್ ಲಾಂಚ್ ಆಗುತ್ತಿದ್ದಾರೆ.

ಯುವರಾಜ್ ಕುಮಾರ್ ಅವರಿಗಾಗಿ ಹೊಂಬಾಳೆ ಹಾಗೂ ಸಂತೋಶ್ ಆನಂದ್ ರಾಮ್ ಸಿನಿಮಾ ಮಾಡುತ್ತಿರುವುದನ್ನು ಅಪ್ಪು ಅಭಿಮಾನಿಗಳು ಸ್ವಾಗತಿಸಿದ್ದಾರೆ. ಸಿನಿಮಾದ ಚಿತ್ರೀಕರಣ ಕೆಲವೇ ದಿನಗಳಲ್ಲಿ ಪ್ರಾರಂಭಗೊಳ್ಳಲಿದೆ. ಸಿನಿಮಾದ ನಾಯಕಿ ಇನ್ನಿತರೆ ಪಾತ್ರಗಳ ಘೋಷಣೆ ಇನ್ನಷ್ಟೆ ಆಗಬೇಕಿದೆ.
ಹೊಂಬಾಳೆ ಫಿಲಮ್ಸ್ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದೇ ಪುನೀತ್ ರಾಜ್‌ಕುಮಾರ್ ನಟನೆಯ 'ನಿನ್ನಿಂದಲೆ' ಸಿನಿಮಾ ನಿರ್ಮಾಣದ ಮೂಲಕ. ಆ ಬಳಿಕ ಹೊಂಬಾಳೆಗೆ ದೊಡ್ಡ ಹಿಟ್ ಕೊಟ್ಟಿದ್ದು ಸಹ ಪುನೀತ್ ಅವರ 'ರಾಜಕುಮಾರ' ಸಿನಿಮಾ. ಬಳಿಕ ಪುನೀತ್‌ರ 'ಯುವರತ್ನ' ಸಿನಿಮಾವನ್ನು ಸಹ ಹೊಂಬಾಳೆಯೇ ನಿರ್ಮಾಣ ಮಾಡಿತು. ಪುನೀತ್ ಗಾಗಿ 'ದ್ವಿತ್ವ' ಸಿನಿಮಾವನ್ನು ಸಹ ಹೊಂಬಾಳೆ ಘೋಷಿಸಿತ್ತು. ಆದರೆ ಸಿನಿಮಾ ಸೆಟ್ಟೇರುವ ಮುನ್ನವೇ ಅಪ್ಪು ಅಗಲಿದರು.
ಹೊಂಬಾಳೆ ಕನ್ನಡದ ಪ್ರತಿಷ್ಟಿತ ನಿರ್ಮಾಣ ಸಂಸ್ಥೆಯಾಗಿದ್ದು, ಪ್ರಸ್ತುತ 'ಕೆಜಿಎಫ್ 2' ಸಿನಿಮಾದ ಯಶಸ್ಸನ್ನು ನಿರ್ಮಾಪಕ ವಿಜಯ್ ಕಿರಗಂದೂರು ಸಂಭ್ರಮಿಸುತ್ತಿದ್ದಾರೆ. ಹೊಂಬಾಳೆ ಫಿಲಮ್ಸ್‌ನ 'ರಾಘವೇಂದ್ರ ಸ್ಟೋರ್ಸ್', 'ಕಾಂತಾರ' ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ. ಇದರ ಜೊತೆಗೆ ರಕ್ಷಿತ್ ಶೆಟ್ಟಿ ನಿರ್ದೇಶನದ 'ರಿಚರ್ಡ್ ಆಂಟನಿ' ಸಿನಿಮಾ ಚಿತ್ರೀಕರಣದ ಹಂತದಲ್ಲಿದೆ. ಪ್ರಭಾಸ್ ನಟಿಸುತ್ತಿರುವ 'ಸಲಾರ್' ಸಹ ಚಿತ್ರೀಕರಣ ನಡೆಯುತ್ತಿದೆ. ಕೆಲವು ದಿನಗಳ ಹಿಂದಷ್ಟೆ ತಮಿಳಿನ ನಿರ್ದೇಶಕಿ ಸುಧಾ ಕೊಂಗರ ಜೊತೆಗೆ ಹೊಸ ಸಿನಿಮಾವನ್ನು ಕಿರಗಂದೂರು ಘೋಷಿಸಿದ್ದಾರೆ.


Click it and Unblock the Notifications











