ಯುವ ಮುಹೂರ್ತದಲ್ಲಿ ರಿಷಬ್, ಪ್ರಶಾಂತ್ ನೀಲ್ ಭಾಗಿ; ಟೀಸರ್ ನೋಡಿದ ವಿನಯ್ ರಿಯಾಕ್ಷನ್ ಹೇಗಿತ್ತು?
ಚಂದನವನದಲ್ಲಿ ಹೊಸದೊಂದು ಪರ್ವ ಶುರುವಾಗಿದೆ. ಹಲವು ವರ್ಷಗಳಿಂದ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ರಾಜ್‌ಕುಮಾರ್ ವಂಶದ ಮೂರನೇ ತಲೆಮಾರಿನ ಮತ್ತೋರ್ವ ನಟ ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸುತ್ತಿದ್ದಾರೆ. ಹೌದು, ಸ್ಯಾಂಡಲ್‌ವುಡ್‌ನಲ್ಲಿ ಯುವ ಪರ್ವ ಶುರುವಾಗಿದೆ. ಪುನೀತ್ ರಾಜ್‌ಕುಮಾರ್ ಸ್ಥಾನವನ್ನು ತುಂಬುವ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರುವ ಯುವ ರಾಜ್‌ಕುಮಾರ್‌ಗೆ ಪಟ್ಟಾಭಿಷೇಕ ಮಾಡಲಾಗಿದೆ.
ಮಾರ್ಚ್ 3ರಂದು ಯುವ ರಾಜ್‌ಕುಮಾರ್ ಲಾಂಚ್ ಆಗಲಿರುವ ಚಿತ್ರದ ಟೈಟಲ್ ರಿವೀಲ್ ಮಾಡಲಾಯಿತು. ಈ ಚಿತ್ರಕ್ಕೆ ಯುವ ಎಂದು ಶೀರ್ಷಿಕೆಯನ್ನು ಇಡಲಾಗಿದೆ. ಪುನೀತ್ ರಾಜ್‌ಕುಮಾರ್‌ಗೆ ಎರಡು ಸೂಪರ್ ಚಿತ್ರಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡುತ್ತಿದೆ.

ಯುವ ಎಂಬ ಶೀರ್ಷಿಕೆಯನ್ನು ವಿಶೇಷ ಪೋಸ್ಟರ್ ಮೂಲಕ ರಿವೀಲ್ ಮಾಡಿದ ಚಿತ್ರತಂಡ ಅದೇ ದಿನ ಫಸ್ಟ್ ಲುಕ್ ಟೀಸರ್ ಅನ್ನೂ ಸಹ ಬಿಡುಗಡೆ ಮಾಡಿತು. ಯುವರಾಜನ ಆಗಮನಕ್ಕಾಗಿ ಕಾದು ಕುಳಿತಿದ್ದ ಅಭಿಮಾನಿ ಬಳಗ ಟೀಸರ್ ನೋಡಿ ಹುಚ್ಚೆದ್ದು ಕುಣಿದಿದ್ದರು. ತಮ್ಮ ನಿರೀಕ್ಷೆಯನ್ನೂ ಸಹ ಮೀರಿಸಿದ್ದ ಯುವ ತಂಡಕ್ಕೆ ಅಭಿಮಾನಿಗಳು ಧನ್ಯವಾದ ತಿಳಿಸಿದರು ಹಾಗೂ ಚಿತ್ರದ ಮೇಲೆ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡರು.
ಈ ದಿನದಂದು ಚಿತ್ರದ ಮುಹೂರ್ತ ಸಮಾರಂಭ ಕೂಡ ನಡೆದು ಚಿತ್ರದ ಒಂದು ಸಣ್ಣ ದೃಶ್ಯದ ಚಿತ್ರೀಕಣ ಸಹ ನಡೆದಿತ್ತು ಎಂಬ ಮಾಹಿತಿ ಹೊರಬಿದ್ದಿತ್ತು. ಯುವ ರಾಜ್‌ಕುಮಾರ್ ಚಿಕ್ಕಮ್ಮ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕ್ಯಾಮೆರಾ ಆನ್ ಮಾಡಿದರೆ, ನಿರ್ಮಾಪಕ ವಿಜಯ್ ಕಿರಗಂದೂರು ಪತ್ನಿ ಕ್ಲಾಪ್ ಮಾಡಿದ್ದರು ಹಾಗೂ ಯುವ ರಾಜ್‌ಕುಮಾರ್ ದೊಡ್ಡಪ್ಪ ಶಿವ ರಾಜ್‌ಕುಮಾರ್ ಆಕ್ಷನ್ ಕಟ್ ಹೇಳಿದ್ದರು. ಖಡಕ್ ಲುಕ್ ಕೊಡುತ್ತಾ ನಡೆದುಕೊಂಡು ಬಂದ ಯುವ ಮೊದಲ ದೃಶ್ಯದಲ್ಲಿ ನಟಿಸಿದರು.
ಇನ್ನು ಈ ಕಾರ್ಯಕ್ರಮದ ವಿಡಿಯೊವನ್ನು ಇದೀಗ ಹೊಂಬಾಳೆ ಫಿಲ್ಮ್ಸ್ ಸಾಮಾಜಿಕ ಜಾಲತಾಣದಲ್ಲಿನ ತನ್ನ ಅಧಿಕೃತ ಖಾತೆಗಳಲ್ಲಿ ಹಂಚಿಕೊಂಡಿದ್ದು, ಯಾರೆಲ್ಲಾ ಈ ಸಮಾರಂಭಕ್ಕೆ ಆಗಮಿಸಿದ್ದರು ಎಂಬುದು ರಿವೀಲ್ ಆಗಿದೆ. ಈ ಹಿಂದೆ ಫೋಟೊಗಳಲ್ಲಿ ಜಗ್ಗೇಶ್ ಹಾಗೂ ರಿಷಬ್ ಶೆಟ್ಟಿ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದು ತಿಳಿದುಬಂದಿತ್ತು. ಆದರೆ ಈ ವಿಡಿಯೊ ಮೂಲಕ ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕರದ ಜಯಣ್ಣ ಹಾಗೂ ಭೋಗೇಂದ್ರ, ರಾಜ್ ಕುಟುಂಬದ ಎಲ್ಲಾ ಕಲಾವಿದರು, ಯುವ ರಾಜ್‌ಕುಮಾರ್ ಸ್ನೇಹಿತರು ಕಾರ್ಯಕ್ರಮಕ್ಕೆ ಆಗಮಿಸಿದ್ದರು ಎಂಬುದು ತಿಳಿದು ಬಂದಿದೆ.

ಇನ್ನು ಈ ಮುಹೂರ್ತ ನಡೆದ ಸ್ಥಳದಲ್ಲಿಯೇ ಎಲ್ಇಡಿ ಪರದೆ ಮೇಲೆ ಯುವ ಚಿತ್ರದ ಟೀಸರ್ ಅನ್ನು ಪ್ರಸಾರ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಷ್ಟೂ ಜನರೂ ಟೀಸರ್ ಮುಗಿಯುತ್ತಿದ್ದಂತೆ ಸಂತಸದಿಂದ ಚಪ್ಪಾಳೆ ಹಾಕಿ ಸೂಪರ್ ಎಂದು ನಿರ್ದೇಶಕ ಸಂತೋಷ್ ಆನಂದ್‌ರಾಮ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. ವಿನಯ್ ರಾಜ್‌ಕುಮಾರ್ ತನ್ನ ಬಳಿಕ ಇದೀಗ ತನ್ನ ತಮ್ಮ ದೊಡ್ಡ ಮಟ್ಟದಲ್ಲಿ ಲಾಂಚ್ ಆಗುತ್ತಿರುವ ಖುಷಿಯಲ್ಲಿದ್ದು, ತಮ್ಮನ ಚೊಚ್ಚಲ ಟೀಸರ್ ನೋಡಿ ಎದ್ದು ನಿಂತು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ. ಚಿತ್ರ ಇದೇ ವರ್ಷದ ಡಿಸೆಂಬರ್ 22ಕ್ಕೆ ಬಿಡುಗಡೆಯಾಗಲಿದೆ.


Click it and Unblock the Notifications











