KGF ಚಾಪ್ಟರ್- 3 ಬಗ್ಗೆ ವಿಜಯ್ ಕಿರಗಂದೂರ್ ಮಾತು; 'ಟಾಕ್ಸಿಕ್' ಫ್ಯಾನ್ಸ್ ಬೇಸರ
2022ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಕನ್ನಡ ಚಿತ್ರರಂಗ ಸಿಂಹಪಾಲು ಪಡೆದಿದೆ. ಅತ್ಯುತ್ತಮ ನಟ, ಅತ್ಯುತ್ತಮ ಮನರಂಜನಾ ಸಿನಿಮಾ, ಅತ್ಯುತ್ತಮ ಸಾಹಸ ಸಂಯೋಜನೆ ಹಾಗೂ ನಾನ್ ಫೀಚರ್ ವಿಭಾಗದಲ್ಲಿ 3 ಪ್ರಶಸ್ತಿಗಳು ಕನ್ನಡಕ್ಕೆ ಸಿಕ್ಕಿದೆ. ಇನ್ನು 'KGF- 2' ಸಿನಿಮಾ ಅತ್ಯುತ್ತಮ ಪ್ರಾದೇಶಿಕ ಕನ್ನಡ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ.
ದೆಹಲಿಯಲ್ಲಿ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು. KGF-2 ಚಿತ್ರಕ್ಕೆ ಎರಡು ಪ್ರಶಸ್ತಿ ಸಿಕ್ಕಿದ್ದು ಹೊಂಬಾಳೆ ಫಿಲಂಸ್‌ನ ಶೈಲಜಾ ವಿಜಯ್ ಕುಮಾರ್ ಹಾಗೂ ಸಾಹಸ ನಿರ್ದೇಶಕ ಅನ್ಬರಿವು ಪ್ರಶಸ್ತಿ ಸ್ವೀಕರಿಸಿದ್ದಾರೆ. ಇನ್ನು ಈ ಬಗ್ಗೆ ನಿರ್ಮಾಪಕ ವಿಜಯ್ ಕಿರಗಂದೂರ್ ಸಂತಸ ವ್ಯಕ್ತ ಪಡಿಸಿದರು. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು 'KGF-3' ಹಾಗೂ 'ಕಾಂತಾರ-1' ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

'KGF' ಸರಣಿಯಲ್ಲಿ ಈಗಾಗಲೇ 2 ಸಿನಿಮಾಗಳು ಬಂದು ಪ್ರೇಕ್ಷಕರನ್ನು ರಂಜಿಸಿದೆ. ಸರಣಿಯ 3ನೇ ಸಿನಿಮಾ ಯಾವಾಗ ಎಂದು ಎಲ್ಲರೂ ಕಾಯುವಂತಾಗಿದೆ. ಆದರೆ ಸದ್ಯಕ್ಕೆ ಸಿನಿಮಾ ಶುರುವಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಯಶ್, ಪ್ರಶಾಂತ್ ಇಬ್ಬರೂ ಬೇರೆ ಬೇರೆ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಕಮೀಟ್‌ಮೆಂಟ್ಸ್ ಎಲ್ಲಾ ಮುಗಿಸಿಕೊಂಡ ಮೇಲೆಯೇ 'KGF'-3 ಕಡೆ ಮುಖ ಮಾಡುತ್ತಾರೆ. ಅದಕ್ಕೆ ಇನ್ನು ಎರಡ್ಮೂರು ವರ್ಷ ಬೇಕಾಗಬಹುದು.
ಸದ್ಯ 'ಟಾಕ್ಸಿಕ್' ಚಿತ್ರವನ್ನು ಯಶ್ ನಿರ್ಮಿಸಿ ನಟಿಸುತ್ತಿದ್ದಾರೆ. ಗೀತು ಮೋಹನ್ ದಾಸ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಯಶ್ ಜೊತೆ ಕೈ ಜೋಡಿಸಿದೆ. ನಯನತಾರಾ, ಕಿಯರಾ ಅದ್ವಾನಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ದೇಶ ವಿದೇಶದ ಕಲಾವಿದರು, ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. 'KGF' ಸರಣಿಯನ್ನು ಮೀರಿಸುವಂತೆ 'ಟಾಕ್ಸಿಕ್' ಚಿತ್ರ ಕಟ್ಟಿಕೊಡುವ ಪ್ರಯತ್ನ ನಡೀತಿದೆ.

'KGF-3' ಸಿನಿಮಾ ಯಾವಾಗ ಎನ್ನುವ ಪ್ರಶ್ನೆ ನಿರ್ಮಾಪಕ ವಿಜಯ್ ಕಿರಗಂದೂರ್ ಅವರಿಗೆ ಎದುರಾಯಿತು. ಈ ವೇಳೆ ಮಾತನಾಡಿದ ಅವರು ಇನ್ನು 4 ತಿಂಗಳಲ್ಲಿ 'KGF-3' ಅಪ್‌ಡೇಟ್ ಸಿಗುತ್ತದೆ ಎಂದಿದ್ದಾರೆ. 'ಕಾಂತಾರ'-1 ರಿಲೀಸ್ ಬಗ್ಗೆಯೂ ಪ್ರತಿಕ್ರಿಯಿಸಿದ್ದು ಮುಂದಿನ ವರ್ಷ ಆಗಸ್ಟ್‌ನಲ್ಲಿ ಸಿನಿಮಾ ತೆರೆಗೆ ಬರಬಹುದು ಎನ್ನುವ ಆಶಾ ಭಾವನೆ ವ್ಯಕ್ತಪಡಿಸಿದ್ದಾರೆ. ಸದ್ಯ ನಿರ್ಮಾಪಕರ ಮಾತು ವೈರಲ್ ಆಗುತ್ತಿದೆ.
ಮೊದಲಿಗೆ 'KGF' ಸರಣಿ ಎರಡು ಭಾಗಗಳಾಗಿ ಮಾತ್ರ ಬರುತ್ತದೆ ಎಂದು ಎಲ್ಲರೂ ಅಂದುಕೊಂಡಿದ್ದರು. ಎರಡು ಭಾಗದ ಕಥೆಯನ್ನು ಸಂಪೂರ್ಣವಾಗಿ ಹೇಳಿದ್ದಾರೆ. ಆದರೆ ಚಾಪ್ಟರ್-2 ಕ್ಲೈಮ್ಯಾಕ್ಸ್ ಬಳಿಕ ಸಣ್ಣ ಟ್ವಿಸ್ಟ್ ಕೊಟ್ಟು ಚಾಪ್ಟರ್-3 ಬಗ್ಗೆ ಕುತೂಹಲ ಮೂಡಿಸಲಾಗಿತ್ತು. ಬಳಿಕ ಮುಂದಿನ ಚಾಪ್ಟರ್ ಬಗ್ಗೆ ಪ್ರೇಕ್ಷಕರನ್ನು ಕುತೂಹಲ, ನಿರೀಕ್ಷೆ ಗರಿಗೆದರಿತು. ಅಲ್ಲಿಂದ ಮುಂದೆ ಚಾಪ್ಟರ್-3 ಯಾವಾಗ? ಕಥೆ ಏನು? ಎನ್ನುವ ಚರ್ಚೆ ಆರಂಭವಾಯಿತು.
'KGF'-2 ಬಳಿಕ 'ಟಾಕ್ಸಿಕ್' ಸಿನಿಮಾ ಘೋಷಿಸಲು ಯಶ್ ಬಹಳ ಸಮಯ ತೆಗೆದುಕೊಂಡಿದ್ದರು. ಈ ಅಂತರದಲ್ಲಿ ಮತ್ತೆ 'KGF' ಸರಣಿಯನ್ನೇ ಮುಂದುವರೆಸುತ್ತಾರಾ? ಎನ್ನುವ ಗೊಂದಲ ಮೂಡಿತ್ತು. ಆದರೆ ಕೊನೆಗೆ ಬೇರೆ ಸಿನಿಮಾ ಘೋಷಿಸಿ ಯಶ್ ಗಮನ ಸೆಳೆದರು. ಸದ್ದಿಲ್ಲದೇ 'ಟಾಕ್ಸಿಕ್' ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಈಗಾಗಲೇ ಬೆಂಗಳೂರಿನಲ್ಲಿ ಒಂದು ಶೆಡ್ಯೂಲ್ ಮುಕ್ತಾಯವಾಗಿದ್ದು ಶೀಘ್ರದಲ್ಲೇ ಮುಂಬೈನಲ್ಲಿ ಸೆಕೆಂಡ್ ಶೆಡ್ಯೂಲ್ ಆರಂಭವಾಗಲಿದೆ.
ಡಿಸೆಂಬರ್‌ನಲ್ಲಿ 'ಟಾಕ್ಸಿಕ್' ಸಿನಿಮಾ ಘೋಷಣೆ ಆಗಿತ್ತು. ಬಳಿಕ ಆಗಸ್ಟ್ 8ಕ್ಕೆ ಬೆಂಗಳೂರಿನಲ್ಲಿ ಸಿನಿಮಾ ಸೆಟ್ಟೇರಿತ್ತು. ಈ ಎರಡು ಅಪ್‌ಡೇಟ್ ಮಾತ್ರ ಚಿತ್ರತಂಡದಿಂದ ಅಧಿಕೃತವಾಗಿ ಸಿಕ್ಕಿತ್ತು. ಇನ್ನುಳಿದಂತೆ ಯಾವುದೇ ಅಪ್‌ಡೇಟ್ ಬಂದಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದೀಗ 'KGF'-3 ಬಗ್ಗೆ ಕೂಡ ವಿಜಯ್ ಕಿರಗಂದೂರ್ ಮಾತನಾಡಿದ್ದಾರೆ. ಆದರೂ 'ಟಾಕ್ಸಿಕ್' ಬಗ್ಗೆ ಚಿತ್ರತಂಡ ತುಟಿಕ್ ಪಿಟಿಕ್ ಎನ್ನುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











