'ಹೊಂದಿಸಿ ಬರೆಯಿರಿ' ಎಂದವರು ಫುಲ್ ಖುಷ್: ಕಾರಣ ಇದೇನೆ
ಪ್ರವೀಣ್ ತೇಜ್, ಭಾವನಾ ರಾವ್, ಐಶಾನಿ ಶೆಟ್ಟಿ, ನವೀನ್ ಶಂಕರ್ ಅಂತಹ ಕನ್ನಡದ ಪ್ರತಿಭೆಗಳು ನಟಿಸಿರುವ ಸಿನಿಮಾ 'ಹೊಂದಿಸಿ ಬರೆಯಿರಿ' ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿತ್ತು.ರಾಮೇನಹಳ್ಳಿ ಜಗನ್ನಾಥ್ ನಿರ್ದೇಶಿಸಿದ ಈ ಬಹು ತಾರಾಗಣದ ಸಿನಿಮಾ ರಿಲೀಸ್ ಆಗಿ 25 ದಿನಗಳನ್ನು ಪೂರೈಸಿದೆ. ಫೆಬ್ರವರಿ 10ರಂದು ಬಿಡುಗಡೆಯಾಗಿದ್ದ ಈ ಸಿನಿಮಾಗೆ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಸಿಕ್ಕಿದೆ. ಸಿನಿಮಾ ಥಿಯೇಟರ್‌ಗೆ ಎಂಟ್ರಿ ಕೊಟ್ಟಲ್ಲಿಂದ ಜನರಿಗೆ ಇಷ್ಟ ಆಗುತ್ತಿದ್ದು, 25 ದಿನಗಳನ್ನು ಯಶಸ್ವಿಯಾಗಿ ಪೂರೈಸುತ್ತಿದೆ.
"ಹೊಂದಿಸಿ ಬರೆಯಿರಿ ಸಿನಿಮಾ ತಂಡದ ಬಾಂದವ್ಯ ಮೂರು ವರ್ಷದ್ದು, ಇದೀಗ ಸಿನಿಮಾ ಬಿಡುಗಡೆಯಾಗಿ 25 ದಿನ ಪೂರೈಸುತ್ತಿದೆ. ಫೆಬ್ರವರಿ 10ರಂದು ಸಿನಿಮಾ ಬಿಡುಗಡೆಯಾಗಿತ್ತು. ಆರಂಭದಲ್ಲಿ 70 ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆಯಾಗಿತ್ತು. ನಾಲ್ಕು ವಾರದಲ್ಲಿ 40 ಸಿನಿಮಾಗಳು ಬಿಡುಗಡೆಯಾಗಿವೆ. ಇಷ್ಟು ಸಿನಿಮಾಗಳಲ್ಲಿ ನಮ್ಮ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಎಲ್ಲಾ ಚಿತ್ರಮಂದಿರಕ್ಕೂ ಭೇಟಿ ಕೊಟ್ಟಿದ್ದೇವೆ. ಸಿನಿಮಾ ನೋಡಿ ಜನರು ಹೇಳುತ್ತಿದ್ದ ಪಾಸಿಟಿವ್ ಮಾತುಗಳು ಮತ್ತಷ್ಟು ಪ್ರಮೋಟ್ ಮಾಡುವಂತೆ ಮಾಡಿತು." ಎಂದು ನಿರ್ದೇಶಕರು ಹರ್ಷ ವ್ಯಕ್ತಪಡಿಸಿದ್ದಾರೆ.
'ಹೊಂದಿಸಿ ಬರೆಯಿರಿ' ಸಿನಿಮಾ 25 ದಿನಗಳನ್ನು ಪೂರೈಸುತ್ತಿರುವ ಈ ಸಂದರ್ಭದಲ್ಲಿ ಕುಶಾಲ ನಗರ,ಕೆ.ಆರ್.ಪೇಟೆ, ಶಿವಮೊಗ್ಗ ಸೇರಿದಂತೆ ತಾಲೂಕು ಸೆಂಟರ್‌ಗಳಿಗೂ ಸಿನಿಮಾವನ್ನು ತಲುಪಿಸಲು ಮುಂದಾಗಿದ್ದಾರೆ. ವಿಶೇಷ ಅಂದ್ರೆ ನಾಲ್ಕನೇ ವಾರದಲ್ಲಿ ಥಿಯೇಟರ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ಚಿತ್ರತಂಡ ನಿರ್ಧರಿಸಿದೆ.

"ಗೃಹ ಮಂತ್ರಿಗಳಾದ ಆರಗ ಜ್ಞಾನೇಂದ್ರ ಅವರು ಕೂಡ ಸಿನಿಮಾ ನೋಡಿ ಇಷ್ಟಪಟ್ರು. ಅವರ ಬಿಡುವಿಲ್ಲದ ಕೆಲಸದ ನಡುವೆಯೂ ನಮ್ಮ ಸಿನಿಮಾವನ್ನು ವೀಕ್ಷಣೆ ಮಾಡಿದ್ರು. ಸಿನಿಮಾ ನೋಡಿ ಮೆಚ್ಚಿಕೊಂಡ್ರು. ಸಿನಿಮಾದಲ್ಲಿ ತೋರಿಸಲಾದ ಮಂತ್ರಮಾಂಗಲ್ಯದ ಬಗ್ಗೆ ಕೂಡ ಮಾತನಾಡಿದ್ರು" ಎಂದು 25 ದಿನಗಳನ್ನು ಪೂರೈಸುತ್ತಿರುವ ಈ ಸಂದರ್ಭದಲ್ಲಿ ಪ್ರವೀಣ್ ತೇಜ್ ನೆನಪಿಸಿಕೊಂಡಿದ್ದಾರೆ.
ನಟಿ ಭಾವನ ರಾವ್ ಮಾತನಾಡಿ ಈ ಸಿನಿಮಾ "ತುಂಬಾ ಪ್ರೀತಿಯಿಂದ ಮಾಡಿರುವ ಸಿನಿಮಾ. ಅಷ್ಟೇ ಪ್ರೀತಿಯನ್ನು ಜನರು ತೋರಿಸಿದ್ದಾರೆ. ನಾವೆಲ್ಲರು ಮೂರು ವರ್ಷದಿಂದ ಈ ಸಿನಿಮಾದ ಜೊತೆಯಾಗಿದ್ದೇವೆ." ಎಂದು ಯಶಸ್ಸಿನ ಹಾದಿಯನ್ನು ಭಾವನಾ ರಾವ್ ನೆನೆದಿದ್ದಾರೆ.

ಹಾಗೇ ಐಶಾನಿ ಶೆಟ್ಟಿ ಕೂಡ "ನಿರ್ದೇಶಕ ಜಗನ್ನಾಥ್ ತುಂಬಾ ಶ್ರಮ ಹಾಕಿದ್ದಾರೆ. ಸಿನಿಮಾ ಬಿಡುಗಡೆಯಾದ ಮೇಲೂ ಅದನ್ನು ಜನರಿಗೆ ತಲುಪಿಸಲು ಅವರು ಸಖತ್ ಎಫರ್ಟ್ ಹಾಕಿದ್ದಾರೆ. ಸಿನಿಮಾ ಬಗ್ಗೆ ಎಲ್ಲರಿಂದ ಉತ್ತಮ ಪ್ರತಿಕ್ರಿಯೆ ಕೇಳಿ ಬರ್ತಿದೆ. ಸಿನಿಮಾದ ಹಾಡು, ಸಂಭಾಷಣೆ, ಸಾಹಿತ್ಯ ಪ್ರತಿಯೊಂದರ ಬಗ್ಗೆ ಜನ ಮಾತನಾಡುತ್ತಿದ್ದಾರೆ. ಇದೀಗ 25ದಿನಗಳನ್ನು ಸಿನಿಮಾ ಪೂರೈಸುತ್ತಿದೆ ತುಂಬಾ ಖುಷಿಯಾಗುತ್ತಿದೆ" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.


Click it and Unblock the Notifications











