ಪುನೀತ ಮಾಲೆ: ಇರುಮುಡಿ ಹೊರಬೇಕು, ಕೆಟ್ಟ ಚಟದವರು ಈ ಮಾಲೆ ಹಾಕುವಂತಿಲ್ಲ; ಇಲ್ಲಿವೆ ರೂಲ್ಸ್!
ಸಾಮಾನ್ಯವಾಗಿ ದೇವರಿಗೆ ಮಾಲೆ ಹಾಕುವ ಭಕ್ತಾದಿಗಳನ್ನು ನೀವೆಲ್ಲಾ ನೋಡಿಯೇ ಇರುತ್ತೀರ. ಅದರದ್ದೇ ಆದ ನಿಯಮಗಳನ್ನು ಅನುಸರಿಸಿ, ಮಡಿಯಾಗಿ ಮಾಲೆಗಳನ್ನು ಧರಿಸಿ ಹಿರಿಯ ಸ್ವಾಮಿಗಳು ಹೇಳಿದ್ದನ್ನು ಪಾಲಿಸುತ್ತಾ, ಬೆಳ್ಳಂಬೆಳಗ್ಗೆ ತಣ್ಣೀರಿನ ಸ್ನಾನ ಮಾಡಿ ಇಂತಿಷ್ಟು ದಿನಗಳ ಕಾಲ ದೇವರ ಜಪದಲ್ಲಿ ನಿರತರಾಗಿರಬೇಕಾಗುತ್ತದೆ.
ಈ ಮಾಲೆ ಧಾರಣೆ ಎಂದ ಕೂಡಲೇ ಎಲ್ಲರ ತಲೆಗೆ ಬರುವುದು ಶ್ರೀ ಅಯ್ಯಪ್ಪ ಸ್ವಾಮಿಯ ಭಕ್ತಾದಿಗಳು ಧರಿಸುವ ಶಬರಿಮಲೆ ಮಾಲೆ. ಬಹುತೇಕರಿಗೆ ಈ ಮಾಲೆ ಧರಿಸಲು ಅನುಸರಿಸಬೇಕಾದ ನಿಯಮಗಳು ತಿಳಿದೇ ಇದೆ. ಸದ್ಯ ಇದೇ ಮಾದರಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಪುನೀತ ಮಾಲೆ ಧರಿಸಲು ತೀರ್ಮಾನಿಸಿದ್ದಾರೆ.

ಹೌದು, ಕೇಸರಿ ಬಟ್ಟೆ, ಕೇಸರಿ ಟವೆಲ್, ಇರುಮುಡಿ, ಹನ್ನೊಂದು ದಿನಗಳ ಕಾಲ ಯಾವುದೇ ಕೆಟ್ಟ ಚಟಗಳಿಲ್ಲದೇ ಪುನೀತ ಮಾಲೆ ಧರಿಸಿ ಎಂದು ಹೊಸಪೇಟೆಯ ಅಪ್ಪು ಅಭಿಮಾನಿ ಹಾಗೂ ಸಮಾಜಸೇವಕಾರದ ಆನಂದ್ ಸಿಂಗ್ ಹಾಗೂ ಅಪ್ಪು ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷರಾದ ಜೋಗಿ ತಾಯಪ್ಪ ಪ್ರಕಟಿಸಿದ್ದಾರೆ. ಪುನೀತ ಮಾಲೆ ಹಾಕಲು ಯಾವ ನಿಯಮಗಳನ್ನು ಅನುಸರಿಸಬೇಕು ಎಂಬುದನ್ನು ಸಹ ಇವರು ತಿಳಿಸಿದ್ದಾರೆ. ಈ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ..
ಮಾರ್ಚ್ 1ರಿಂದ ಮಾರ್ಚ್ 17ರವರೆಗೆ ರಾಜ್ಯದ ಯಾವುದೇ ಅಪ್ಪು ಅಭಿಮಾನಿಯಾದರೂ ಸಹ ಪುನೀತ ಮಾಲೆಯನ್ನು ಒಂದು ದಿನ, ಐದು ದಿನಗಳು ಅಥವಾ ಹನ್ನೊಂದು ದಿನಗಳವರೆಗೆ ಧರಿಸಬಹುದಾಗಿದೆ. ಮಾರ್ಚ್ 17ಕ್ಕೆ ಅಂತಿಮ ದಿನ ಮುಕ್ತಾಯವಾದ ಬಳಿಕ ಮಾರ್ಚ್ 18ರಂದು ಪುನೀತ್ ರಾಜ್‌ಕುಮಾರ್ ಪುಣ್ಯಭೂಮಿಗೆ ತೆರಳಿ ದರ್ಶನ ಪಡೆಯಬೇಕೆಂದು ಪ್ರಕಟಿಸಲಾಗಿದೆ.
ಇನ್ನು ಮಾಲೆ ಧರಿಸುವವರು ಅಪ್ಪು ಡಾಲರ್ ಇರುವ ಮಾಲೆ ಧರಿಸಬೇಕು, ಕೇಸರಿ ಪಂಚೆ, ಕೇಸರಿ ಟವೆಲ್, ಕೇಸರಿ ಶರ್ಟ್ ಧರಿಸಿ ಪುನೀತ್ ರಾಜ್‌ಕುಮಾರ್ ಫೋಟೊವನ್ನು ಇಟ್ಟು ಪೂಜೆ ಮಾಡಬೇಕು. ಬೆಳಗ್ಗೆ ಸೂರ್ಯ ಹುಟ್ಟುವ ಮುನ್ನ ಹಾಗೂ ಸೂರ್ಯಾಸ್ತದ ನಂತರ ಸ್ನಾನ ಮಾಡಬೇಕು. ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಮೂರು ಹೊತ್ತು ಊಟ ಮಾಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಮಾಲೆಯನ್ನು ಹಾಕಲು ಇಚ್ಛಿಸುವವರು ಯಾವುದೇ ಕೆಟ್ಟ ಚಟಗಳಿಗೆ ಹೋಗಬಾರದು ಹಾಗೂ ಪುನೀತ್ ರಾಜ್‌ಕುಮಾರ್ ಪುಣ್ಯಭೂಮಿಗೆ ತೆರಳುವಾಗ ತಮ್ಮ ಕೈಲಾದಷ್ಟು ದಿನಸಿಯನ್ನು ಇರುಮುಡಿ ಕಟ್ಟಿಕೊಂಡು ಹೋಗಿ ಇತರರಿಗೆ ಸಹಾಯ ಮಾಡಬೇಕು ಎಂದು ತಿಳಿಸಲಾಗಿದೆ ಹಾಗೂ ಇದೇ ಪುನೀತ ಮಾಲೆಯ ವಿದಾಯ ಎಂದು ತಿಳಿಸಲಾಗಿದೆ.
ಸದ್ಯ ಹೊಸಪೇಟೆಯ ಅಪ್ಪು ಅಭಿಮಾನಿಗಳು ಇಂತಹ ವಿಭಿನ್ನ ಆಚರಣೆಯನ್ನು ಶುರು ಮಾಡಿದ್ದು, ರಾಜ್ಯದ ಇತರೆ ಅಪ್ಪು ಅಭಿಮಾನಿಗಳು ಮಾಲೆ ಧರಿಸಲು ಇಚ್ಛಿಸಿದರೆ ಧರಿಸಿ ಮಾರ್ಚ್ 18ಕ್ಕೆ ಪುನೀತ್ ರಾಜ್‌ಕುಮಾರ್ ಪುಣ್ಯಭೂಮಿಗೆ ಬನ್ನಿ ಎಂದು ಮನವಿ ಮಾಡಿದ್ದಾರೆ. ಹೊಸಪೇಟೆ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಈ ವಿನೂತನ ಆಚರಣೆ ಯಾವ ರೀತಿಯ ಪ್ರತಿಕ್ರಿಯೆ ಪಡೆದುಕೊಳ್ಳಲಿದೆಯೋ ಕಾದು ನೋಡಬೇಕಿದೆ.


Click it and Unblock the Notifications











