2nd ವೀಕೆಂಡ್‌ನಲ್ಲೂ ಹಾಸ್ಟೆಲ್ಟ್ ಹುಡುಗ್ರ ಕರಾಮತ್ತು.. 'ಆಚಾರ್ & ಕೋ', 'ಕೌಸಲ್ಯ ಸುಪ್ರಜಾ' ಸರ್‌ಪ್ರೈಸ್
ಥಿಯೇಟರ್‌ಗಳಲ್ಲಿ ಮತ್ತೆ ಕನ್ನಡ ಸಿನಿಮಾ ಮೆರೆವಣಿಗೆ ಶುರುವಾಗಿದೆ. ಕನ್ನಡ ಚಿತ್ರರಂಗ ನಿಧಾನವಾಗಿ ಚೇತರಿಸಿಕೊಳ್ತಿದೆ. 'ಹಾಸ್ಟೆಲ್ ಹುಡುಗ್ರು ಬೇಕಾಗಿದ್ದಾರೆ', 'ಆಚಾರ್ ಅಂಡ್ ಕೋ' ಮತ್ತು 'ಕೌಸಲ್ಯ ಸುಪ್ರಜಾ ರಾಮ' ಸಿನಿಮಾಗಳು ಭರ್ಜರಿ ಪ್ರದರ್ಶನ ಕಾಣುತ್ತಿವೆ. ಮತ್ತೆ ಕನ್ನಡ ಪ್ರೇಕ್ಷಕರು ಸಿನಿಮಾ ನೋಡಲು ಚಿತ್ರಮಂದಿರಗಳತ್ತ ಮುಖ ಮಾಡಿದ್ದಾರೆ. ಇದು ನಮ್ಮ ಚಿತ್ರರಂಗಕ್ಕೆ ಹೊಸ ಹುರುಪು ತಂದಿವೆ.
ವರ್ಷದ 6 ತಿಂಗಳು ಯಾವುದೇ ದೊಡ್ಡ ಹಿಟ್ ಇಲ್ಲದೇ ಚಿತ್ರರಂಗ ಸೈಲೆಂಟ್ ಆಗಿತ್ತು. 'ಗುರುದೇವ್ ಹೊಯ್ಸಳ', 'ಹೊಂದಿಸಿ ಬರೆಯಿರಿ', 'ಡೇರ್ ಡೆವಿಲ್ ಮುಸ್ತಾಫಾ' ಸಿನಿಮಾಗಳಿಗೆ ಒಳ್ಳೆ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯಲಿಲ್ಲ. ಅಚ್ಚರಿ ಎನ್ನುವಂತೆ ತುಂಗಾ ಬಾಯ್ಸ್ ಹಾಸ್ಟೆಲ್ ಹುಡುಗರು ಮ್ಯಾಜಿಕ್ ಮಾಡಿದ್ದಾರೆ. ಅದರ ಬೆನ್ನಲ್ಲೇ ಈ ವಾರ ಬಂದಿರುವ 'ಆಚಾರ್ ಅಂಡ್ ಕೋ' ಮತ್ತು ಶಶಾಂಕ್ ನಿರ್ದೇಶನದ 'ಕೌಸಲ್ಯ ಸುಪ್ರಜಾ ರಾಮ' ಕೂಡ ತೆರೆಮೇಲೆ ಮ್ಯಾಜಿಕ್ ಮಾಡಿವೆ. ಪ್ರೇಕ್ಷಕರ ಬರ ಎದುರಿಸುತ್ತಿದ್ದ ಚಿತ್ರಮಂದಿರಗಳನ್ನು ತುಂಬಿಸುತ್ತಿವೆ.

ಇತ್ತೀಚೆಗೆ ಪ್ರೇಕ್ಷಕರು ಕನ್ನಡ ಸಿನಿಮಾ ನೋಡುತ್ತಿಲ್ಲ ಎನ್ನುವ ವಾದ ಶುರುವಾಗಿತ್ತು. ಆದರೆ ಒಳ್ಳೆ ಸಿನಿಮಾಗಳು ಬಂದರೆ ಪ್ರೇಕ್ಷಕರು ಕೈ ಬಿಡಲ್ಲ ಅನ್ನೋದು ಈಗ ಮತ್ತೊಮ್ಮೆ ಸಾಬೀತಾಗಿದೆ. ಪ್ರೇಕ್ಷಕರ ನಾಡಿ ಮಿಡಿತ ಅರಿತು ಒಳ್ಳೆ ಸಿನಿಮಾ ಮಾಡಿ ಉತ್ತಮ ರೀತಿಯಲ್ಲಿ ತಲುಪಿಸಿದರೆ ಸಕ್ಸಸ್ ಗ್ಯಾರೆಂಟಿ.
2ನೇ ವಾರಾಂತ್ಯ ಹಾಸ್ಟೆಲ್ ಹುಡುಗ್ರ ಹವಾ
ನಿತಿನ್ ಕೃಷ್ಣಮೂರ್ತಿ ನಿರ್ದೇಶನದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಓಟ ಇನ್ನು ನಿಂತಿಲ್ಲ. 2ನೇ ವಾರವೂ ಸಿನಿಮಾ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಒಂದು ಸಿಂಪಲ್ ಕಥೆಯನ್ನು ರಸವತ್ತಾಗಿ ಕಟ್ಟಿಕೊಂಡು ಹೊಸಬರ ತಂಡ ಗೆದ್ದಿದೆ. ಸ್ಯಾಂಡಲ್‌ವುಡ್ ತಾರೆಯರು ಸಿನಿಮಾ ನೋಡಿ ಮೆಚ್ಚಿ ಕೊಂಡಾಡಿದ್ದಾರೆ. ಫಸ್ಟ್ ವೀಕ್ ಸಿನಿಮಾ ಏಳೆಂಟು ಕೋಟಿ ರೂ. ಕಲೆಕ್ಷನ್ ಮಾಡಿದೆ. 2ನೇ ವಾರಾಂತ್ಯದಲ್ಲೂ ಟಿಕೆಟ್ ಬುಕ್ಕಿಂಗ್ ಜೋರಾಗಿದೆ. ಶನಿವಾರ, ಭಾನುವಾರ ಹಲವು ಶೋಗಳು ಹೌಸ್‌ಫುಲ್ ಆಗ್ತಿದೆ.

'ಆಚಾರ್ & ಕೋ' ಜಾದೂ
ಪಿಆರ್‌ಕೆ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಫ್ಯಾಮಿಲಿ ಎಂಟರ್‌ಟೈನರ್ 'ಆಚಾರ್ & ಕೋ' ಸಿನಿಮಾ ಕೂಡ ಕನ್ನಡ ಸಿನಿರಸಿಕರ ಮನಗೆದ್ದಿದೆ. ಸಿಂಧು ಶ್ರೀನಿವಾಸ್ ಮೂರ್ತಿ ನಿರ್ದೇಶಿಸಿ ನಟಿಸಿರುವ ಈ ಚಿತ್ರದಲ್ಲಿ 60ರ ದಶಕದ ಕಥೆ ಇದೆ. ಅಶೋಕ್, ಸುಧಾ ಬೆಳವಾಡಿ ಚಿತ್ರ ಮುಖ್ಯ ತಾರಾಗಣದಲ್ಲಿದ್ದಾರೆ. ಈ ಚಿತ್ರದ ಹಲವು ವಿಭಾಗಗಳಲ್ಲಿ ಹೆಣ್ಣುಮಕ್ಕಳು ಕೆಲಸ ಮಾಡಿದ್ದಾರೆ. ಅಪ್ಪು ಕೇಳಿ ಮೆಚ್ಚಿದ ಕಥೆಗಳಲ್ಲಿ ಇದು ಒಂದು. ಒಂದು ಅವಿಭಕ್ತ ಕುಟುಂಬದ ಸರಳ, ಸುಂದರ ಕಥೆ ಪ್ರೇಕ್ಷಕರಿಗೆ ಇಷ್ಟವಾಗಿದೆ. ಬೆಂಗಳೂರಿನಲ್ಲಿ ಶನಿವಾರ 10ಕ್ಕೂ ಹೆಚ್ಚು ಶೋಗಳು ಫಾಸ್ಟ್ ಫಿಲ್ಲಿಂಗ್ ಆಗಿದೆ.
'ಕೌಸಲ್ಯ ಸುಪ್ರಜಾ ರಾಮ' ಸರ್‌ಪ್ರೈಸ್
ಶಶಾಂಕ್ ನಿರ್ದೇಶದಲ್ಲಿ ಮೂಡಿ ಬಂದಿರುವ 'ಕೌಸಲ್ಯ ಸುಪ್ರಜಾ ರಾಮ' ಚಿತ್ರಕ್ಕೂ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಸ್ಯಾಂಡಲ್‌ವುಡ್‌ನಲ್ಲಿ ಇದೇ ಈಗ ಹಾಟ್ ಟಾಪಿಕ್ ಆಗಿದೆ. ಡಾರ್ಲಿಂಗ್ ಕೃಷ್ಣ, ಮಿಲನಾ, ಬೃಂದಾ ಆಚಾರ್ಯ ನಟನೆಯ ಯೂತ್ ಎಂಟರ್‌ಟೈನರ್ ಸಿನಿಮಾ ಗಮನ ಸೆಳೆದಿದೆ. ಮೊಹರಂ ಹಬ್ಬದ ರಜೆ ಸಿನಿಮಾ ಕಲೆಕ್ಷನ್‌ಗೆ ಪ್ಲಸ್ ಆಗುತ್ತಿದೆ. ಶನಿವಾರದ ಬುಕ್ಕಿಂಗ್ ಚೆನ್ನಾಗಿದೆ. ಭಾನುವಾರ ಮತ್ತಷ್ಟು ದೊಡ್ಡಮಟ್ಟದಲ್ಲಿ ಸಿನಿಮಾ ಸದ್ದು ಮಾಡಲಿದೆ.
ದೊಡ್ಡ ಸಿನಿಮಾ ಬರ್ತಿಲ್ಲ
ಹೊಸಬರ ಸಣ್ಣ ಬಜೆಟ್ ಸಿನಿಮಾಗಳೇ ಸದ್ದು ಮಾಡುತ್ತಿರುವಾಗ ಕನ್ನಡದ ದೊಡ್ಡ ಸಿನಿಮಾಗಳು ಬರದೇ ಇರುವುದು ಬೇಸರದ ಸಂಗತಿ. ಪ್ಯಾನ್ ಇಂಡಿಯಾ ಸಿನಿಮಾಗಳ ಹಿಂದೆ ಬಿದ್ದು ಕನ್ನಡದಲ್ಲಿ ಮಾತ್ರ ಸಿನಿಮಾ ಮಾಡಲು ಕೆಲವರು ಹಿಂದೇಟು ಹಾಕುತ್ತಿದ್ದಾರೆ. ಒಳ್ಳೆ ಸಿನಿಮಾ ಮಾಡಿದರೆ ಲಾಭ ಗಳಿಸೋಕೆ ಪ್ಯಾನ್ ಇಂಡಿಯಾ ರಿಲೀಸ್ ಬೇಕಿಲ್ಲ. ಕನ್ನಡದಲ್ಲಿ ಮಾತ್ರ ರಿಲೀಸ್ ಮಾಡಿ ಲಾಭ ಗಳಿಸಬಹುದು. ಕಡಿಮೆ ಬಜೆಟ್‌ನಲ್ಲಿ ಮೊದಲು ಒಳ್ಳೆ ಸಿನಿಮಾಗಳನ್ನು ಮಾಡುವವರು ಬೇಕಾಗಿದ್ದಾರೆ.


Click it and Unblock the Notifications











