Hostel Hudugaru Collection: ಸೆನ್ಸೇಷನಲ್ ಹಾಸ್ಟೆಲ್ ಹುಡುಗ್ರು 10 ದಿನಗಳಲ್ಲಿ ಮಾಡಿದ ಕಲೆಕ್ಷನ್ ಎಷ್ಟು?
ಚಂದನವನದಲ್ಲಿ ಸದ್ಯ ಎಲ್ಲೇ ಕೇಳಿದರೂ ಹೆಚ್ಚಾಗಿ ಕೇಳಿ ಬರುತ್ತಿರುವುದು ಹಾಸ್ಟೆಲ್ ಹುಡುಗರು ಚಿತ್ರದ ಕುರಿತಾದ ಸುದ್ದಿಗಳೇ. ಹೌದು, ಯುವ ಕಲಾವಿದರ ತಂಡ ತಯಾರಿಸಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಯಶಸ್ವಿ ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಭರ್ಜರಿ ಪ್ರದರ್ಶನವನ್ನು ಕಾಣುತ್ತಿದೆ. ಸದ್ಯ ಹತ್ತು ದಿನಗಳ ಯಶಸ್ವಿ ಓಟವನ್ನು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಪೂರೈಸಿದ್ದು ಎರಡನೇ ವಾರದಲ್ಲಿಯೂ ಸಹ ಹಲವು ಪ್ರಮುಖ ಚಿತ್ರಮಂದಿರಗಳಲ್ಲಿ ಸತತವಾಗಿ ಹೌಸ್‌ಫುಲ್ ಪ್ರದರ್ಶನಗಳನ್ನು ಕಾಣುತ್ತಿದೆ.
ಹೌದು, ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಹಾಲಿವುಡ್‌ನ ಬೃಹತ್ ಚಿತ್ರಗಳಾದ ಬಾರ್ಬಿ ಹಾಗೂ ಆಪನ್‌ಹೈಮರ್ ಚಿತ್ರಗಳ ಜತೆ ತೆರೆಗೆ ಬಂದಿತ್ತು. ಈ ಎರಡು ದೈತ್ಯ ಸಿನಿಮಾಗಳನ್ನು ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಓವರ್ ಟೇಕ್ ಮಾಡಿದ ಸಿನಿಮಾ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಎನಿಸಿಕೊಂಡಿದೆ. ಹೌದು, ಹೊಸಬರ ತಂಡ ಸೇರಿ ಮಾಡಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ರಾಜ್ಯ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದ್ದು, ಮೊದಲ ದಿನಕ್ಕಿಂತ ಎರಡು ಹಾಗೂ ಮೂರನೇ ದಿನದ ಪ್ರದರ್ಶನಗಳಲ್ಲಿ ದುಪ್ಪಟ್ಟು, ಮೂರು ಪಟ್ಟು ಕಲೆಕ್ಷನ್ ಅನ್ನು ಮಾಡಿ ಕನ್ನಡ ಸಿನಿ ರಸಿಕರಿಂದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ರೀತಿ ಗೆದ್ದು ಬೀಗುವವರು ಬೇಕಾಗಿದ್ದಾರೆ ಎಂದು ಕನ್ನಡ ಸಿನಿ ರಸಿಕರು ಹಾಡಿ ಹೊಗಳುತ್ತಿದ್ದಾರೆ.

ಸದ್ಯ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ನಿನ್ನೆಗೆ ( ಜುಲೈ 30 ) ಹತ್ತು ದಿನಗಳನ್ನು ಪೂರೈಸಿದ್ದು, ಒಟ್ಟಾರೆಯಾಗಿ 12 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ. 6.4 ಲಕ್ಷ ಟಿಕೆಟ್‌ಗಳು ಮಾರಾಟವಾಗಿವೆ ಎಂದು ಬಾಕ್ಸ್ ಆಫೀಸ್ ಪರಿಣಿತರು ತಿಳಿಸಿದ್ದಾರೆ. ಇನ್ನು ಚಿತ್ರದ ಎರಡನೇ ವಾರಂತ್ಯದ ಬುಕಿಂಗ್ ಸಹ ಭರ್ಜರಿಯಾಗಿದ್ದು, ಈ ವಾರವೂ ಸಹ ಚಿತ್ರ ಮತ್ತಷ್ಟು ಒಳ್ಳೆಯ ಗಳಿಕೆ ಮಾಡುವುದಂತೂ ಖಚಿತ.
ಬಿಡುಗಡೆಯ ದಿನ ಪಡೆದುಕೊಂಡಿದ್ದ ಪ್ರದರ್ಶನಗಳ ಸಂಖ್ಯೆಗಿಂತ ಮೂರು ಪಟ್ಟು ಹೆಚ್ಚಿನ ಪ್ರದರ್ಶನಗಳನ್ನು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಹತ್ತನೇ ದಿನ ಪಡೆದುಕೊಂಡಿದ್ದು, ಇನ್ನೂ ಹೆಚ್ಚಿನ ಕಲೆಕ್ಷನ್ ಮಾಡುವುದು ಫಿಕ್ಸ್ ಆಗಿದೆ. ಹೀಗೆಯೇ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ಕಲೆಕ್ಷನ್ ಓಟ ಮುಂದುವರೆದರೆ ಉಪೇಂದ್ರ ನಟನೆಯ ಎ, ಪುನೀತ್ ರಾಜ್‌ಕುಮಾರ್ ನಟನೆಯ ಅಪ್ಪು ಹಾಗೂ ಭಂಡಾರಿ ಬ್ರದರ್ಸ್‌ಗಳ ರಂಗಿತರಂಗ ಚಿತ್ರಗಳ ಬಳಿಕ ಕನ್ನಡ ಚಿತ್ರರಂಗದಲ್ಲಿ ಹೊಸಬರ ಮೊದಲ ಚಿತ್ರಗಳು ಮಾಡಿದ ಬೃಹತ್ ದಾಖಲೆಯ ಪಟ್ಟಿಯನ್ನು ಸೇರಲಿದೆ.


Click it and Unblock the Notifications











