Hostel Hudugaru Bekagiddare: ಹಾಸ್ಟೆಲ್ ಹುಡುಗರ ಪ್ರೀಮಿಯರ್ ಶೋ ಕ್ಯಾನ್ಸಲ್; ರಮ್ಯಾ ಅವರದ್ದು ಅತಿಯಾಯ್ತು ಎಂದ ಸಿನಿ ರಸಿಕರು!
ನಾಳೆ ಜುಲೈ 21ರ ಶುಕ್ರವಾರದಂದು ಕನ್ನಡದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಬಿಡುಗಡೆಯಾಗಲು ಸಿದ್ಧವಾಗಿದೆ. ಸೆಟ್ಟೇರಿದಾಗಿನಿಂದಲೂ ವಿಭಿನ್ನವಾದ ಪ್ರಚಾರದ ವೈಖರಿಗಳಿಂದ ಸದ್ದು ಮಾಡುತ್ತಾ ಬಂದಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡ ತಮ್ಮ ಚಿತ್ರದ ಮೇಲೆ ತುಂಬಾ ವಿಶ್ವಾಸವನ್ನು ವ್ಯಕ್ತಪಡಿಸಿದ್ದು, ಚಿತ್ರದ ಟ್ರೈಲರ್ ಸಹ ಈ ವಿಶ್ವಾಸವನ್ನು ಹೆಚ್ಚಿಸಿ ಚಿತ್ರದ ಮೇಲೆ ದೊಡ್ಡ ನಿರೀಕ್ಷೆ ಹುಟ್ಟುಕೊಂಡಿದೆ.
ಹೀಗೆ ಕನ್ನಡ ಸಿನಿ ರಸಿಕರ ಪಾಲಿಗೆ ಬಹು ನಿರೀಕ್ಷಿತ ಚಿತ್ರವಾಗಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಈ ವರ್ಷ ಕನ್ನಡ ಚಿತ್ರರಂಗದ ದೊಡ್ಡ ಹಿಟ್ ಆಗಲಿದೆಯಾ ಎಂಬ ಕುತೂಹಲ ಹಾಗೂ ವಿಶ್ವಾಸವೂ ಸಹ ಸಿನಿ ಪಂಡಿತರಲ್ಲಿ ಮೂಡಿತ್ತು. ಈ ರೀತಿಯ ಒಳ್ಳೆಯ ಪ್ರತಿಕ್ರಿಯೆಗಳನ್ನು ಬಿಡುಗಡೆಗೂ ಮುನ್ನವೇ ಪಡೆದುಕೊಂಡಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡಕ್ಕೆ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದ ನಟಿ ರಮ್ಯಾ ಲೀಗಲ್ ನೋಟಿಸ್ ಕಳುಹಿಸುವ ಮೂಲಕ ಬಿಡುಗಡೆಯ ಸನಿಹದಲ್ಲಿ ಶಾಕ್ ನೀಡಿದ್ದಾರೆ.

ಹೌದು, ರಮ್ಯಾ ತನ್ನ ದೃಶ್ಯಗಳ ವಿಡಿಯೊ ಹಾಗೂ ಫೋಟೊಗಳನ್ನು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡ ತನ್ನ ಅನುಮತಿ ಇಲ್ಲದೇ ಬಳಸಿಕೊಂಡಿದೆ ಎಂದು ಆರೋಪಿಸಿ ಒಂದು ಕೋಟಿ ಪರಿಹಾರ ನೀಡುವಂತೆ ಒತ್ತಾಯಿಸಿ ನೋಟಿಸ್ ಕಳುಹಿಸಿದ್ದಾರೆ ಎನ್ನಲಾಗಿದೆ. ಹೀಗೆ ರಮ್ಯಾ ಯುವ ತಂಡದ ಚಿತ್ರವೊಂದಕ್ಕೆ ತಾವೇ ನಟಿಸಿ, ಪ್ರೋಮೊಗಳಲ್ಲಿ ಕಾಣಿಸಿಕೊಂಡಿದ್ದು ಬೆಂಬಲಿಸಿ ಈಗ ಬಿಡುಗಡೆಗೆ ಅಡ್ಡಿ ಮಾಡುತ್ತಿರುವುದು ಕನ್ನಡ ಸಿನಿ ರಸಿಕರನ್ನು ಕೆರಳಿಸಿತ್ತು.
ಹೀಗೆ ನಿನ್ನೆ ಈ ವಿವಾದ ದೊಡ್ಡ ಮಟ್ಟದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೀಡಾಗಿ ಇಂದಿಗೂ ಸಹ ಟ್ರೆಂಡಿಂಗ್‌ನಲ್ಲಿದೆ. ಹೀಗಿರುವಾಗಲೇ ಚಿತ್ರದ ಕುರಿತಾಗಿ ಮತ್ತೊಂದು ಸುದ್ದಿ ಹೊರಬಿದ್ದಿದ್ದು, ಈ ಸುದ್ದಿ ಕೇಳಿದ ಕನ್ನಡ ಸಿನಿ ರಸಿಕರ ಕೋಪ ಮತ್ತಷ್ಟು ಹೆಚ್ಚಾಗಿದೆ.
ಹೌದು, ನಾಳೆ ಬಿಡುಗಡೆಯಾಗಲಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ಸೆಲೆಬ್ರಿಟಿ ಪ್ರೀಮಿಯರ್ ಶೋಗಳನ್ನು ಇಂದು ನಡೆಸಲು ಚಿತ್ರತಂಡ ತೀರ್ಮಾನಿಸಿತ್ತು. ಆದರೆ ಇದೀಗ ಚಿತ್ರದ ಸೆಲೆಬ್ರಿಟಿ ಪ್ರೀಮಿಯರ್ ಶೋ ಕ್ಯಾನ್ಸಲ್ ಆಗಿವೆ. ಸೆಲೆಬ್ರಿಟಿ ಪ್ರೀಮಿಯರ್ ಶೋ ವಿಮರ್ಶೆ ಯಾವ ರೀತಿ ಬರಬಹುದು ಎಂದು ಕಾಯುತ್ತಿದ್ದವರು ಬೇಸರಕ್ಕೊಳಗಾಗಿದ್ದಾರೆ ಹಾಗೂ ನಾಳೆ ಚಿತ್ರ ಬಿಡುಗಡೆಯಾಗಲಿದೆಯಾ ಎಂಬ ಅನುಮಾನವನ್ನೂ ಸಹ ವ್ಯಕ್ತಪಡಿಸಿದ್ದಾರೆ.
ಹೀಗೆ ಚಿತ್ರದ ಸೆಲೆಬ್ರಿಟಿ ಪ್ರೀಮಿಯರ್ ಶೋ ಕ್ಯಾನ್ಸಲ್ ಆಗಲು ಕಾರಣ ರಮ್ಯಾ ಲೀಗಲ್ ನೋಟಿಸ್ ಕಳುಹಿಸಿರುವುದೇ ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಹೌದು, ರಮ್ಯಾ ತನ್ನ ವಿಡಿಯೊಗಳನ್ನು ತನ್ನ ಅನುಮತಿ ಇಲ್ಲದೇ ಬಳಸಿಕೊಳ್ಳುವಂತಿಲ್ಲ ಎಂದು ನೋಟಿಸ್ ಕಳುಹಿಸಿರುವುದರಿಂದ ಈ ಪ್ರದರ್ಶನವನ್ನು ಮಾಡಲಾಗುತ್ತಿಲ್ಲ ಎನ್ನಲಾಗುತ್ತಿದೆ. ಅಲ್ಲದೇ ರಮ್ಯಾ ವಿರುದ್ಧ ಕಿಡಿಕಾರಿ ಆಕ್ರೋಶ ಹೊರಹಾಕುತ್ತಿದ್ದಾರೆ. ಇನ್ನು ನಾಳೆಯ ಪ್ರದರ್ಶನಗಳೂ ಸಹ ಕಡಿಮೆ ಸಂಖ್ಯೆಯಲ್ಲಿದ್ದು, ಇನ್ನೂ ಸಹ ದೊಡ್ಡ ದೊಡ್ಡ ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರದ ಮುಂಗಡ ಬುಕಿಂಗ್ ಸಹ ಓಪನ್ ಆಗಿಲ್ಲ. ಹೀಗೆ ಈ ಬಿಕ್ಕಟ್ಟು ಮುಂದುವರೆಯಲಿದೆಯಾ ಅಥವಾ ಇಂದೇ ಚಿತ್ರತಂಡ ಹಾಗೂ ರಮ್ಯಾ ಒಂದಾಗಿ ಚಿತ್ರವನ್ನು ರಿಲೀಸ್ ಮಾಡಿ ಸಿನಿ ರಸಿಕರಿಗೆ ಸಿಹಿ ಸುದ್ದಿ ನೀಡ್ತಾರಾ ಕಾದು ನೋಡಬೇಕಿದೆ..


Click it and Unblock the Notifications











