Hostel Hudugaru Bekagiddare: ಹೌಸ್‌ಫುಲ್.. ಹೌಸ್‌ಫುಲ್.. 2ನೇ ದಿನ ಭರ್ಜರಿ ಬುಕ್ಕಿಂಗ್
ಹಾಸ್ಟೆಲ್ ಹುಡುಗರ ಹಾವಳಿ ನೋಡಿದವರೆಲ್ಲಾ ಬಿದ್ದು ಬಿದ್ದು ನಗ್ತಿದ್ದಾರೆ. ಸಖತ್ ಎಂಜಾಯ್ ಮಾಡ್ತಿದ್ದಾರೆ. ನೋಡಿದವರು ಮತ್ತಷ್ಟು ಜನರಿಗೆ ನೋಡೋಕೆ ಹೇಳ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಒಳ್ಳೆ ರಿವ್ಯೂಗಳನ್ನು ಬರೆದು ವೀಕೆಂಡ್‌ನಲ್ಲಿ ಪ್ರೇಕ್ಷಕರು ಥಿಯೇಟರ್ ಕಡೆ ಬರುವಂತಾಗಿದೆ. ನಿಧಾನವಾಗಿ ಹಾಸ್ಟೆಲ್ ಹುಡುಗರ ದರ್ಬಾರ್ ಶುರುವಾಗಿದೆ. ಪ್ರೇಕ್ಷಕರು ಒಳ್ಳೆ ಸಿನಿಮಾ ಕೈ ಹಿಡಿತ್ತಾರೆ ಅನ್ನೋದು ಮತ್ತೆ ಸಾಬೀತಾಗ್ತಿದೆ.
ನಿತಿನ್ ಕೃಷ್ಣಮೂರ್ತಿ ನಿರ್ದೇಶನದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಈ ವಾರ ಪ್ರೇಕ್ಷಕರ ಮುಂದೆ ಬಂದಿದೆ. ಬಹುತೇಕ ಹೊಸಬರೇ ಸೇರಿ ಮಾಡಿರುವ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗ್ತಿದೆ. ಯುವ ಜನತೆ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ವಿಭಿನ್ನ ಪ್ರಚಾರ ತಂತ್ರಗಳಿಂದ ಸಿನಿಮಾ ಗಮನ ಸೆಳೆದಿತ್ತು. ಅದಕ್ಕೆ ತಕ್ಕಂತೆ ಸಿನಿಮಾ ಕೂಡ ಮಾಡಿ ತಂಡ ಗೆದ್ದಿದೆ. ಹೊಸ ಬಗೆಯ ಚಿತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಹಾಗಾಗಿ 2ನೇ ದಿನ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಜೋರಾಗಿದೆ.

ಬಹುತೇಕ ಹೊಸಬರೇ ಸೇರಿ ಮಾಡಿರುವ ಚಿತ್ರಕ್ಕೆ ರಿಷಬ್ ಶೆಟ್ಟಿ, ರಮ್ಯಾ, ದಿಗಂತ್ ಸಾಥ್ ಕೂಡ ಸಿಕ್ಕಿದೆ. ರಕ್ಷಿತ್ ಶೆಟ್ಟಿ ಚಿತ್ರವನ್ನು ತಮ್ಮ ಬ್ಯಾನರ್‌ನಲ್ಲಿ ಪ್ರೇಕ್ಷಕರ ಮುಂದೆ ತಂದಿದ್ದಾರೆ. ಚೇತನ್ ದುರ್ಗಾ, ಪ್ರಜ್ವಲ್, ಶ್ರೀವತ್ಸ, ಮಂಜುನಾಥ್ ನಾಯಕ್, ಅಭಿದಾಸ್, ಅರ್ಚನಾ ಕೊಟ್ಟಿಗೆ, ರಮ್ಯಾ, ದಿಗಂತ್, ರಿಷಬ್ ಶೆಟ್ಟಿ, ಪವನ್ ಕುಮಾರ್ ಚಿತ್ರದ ತಾರಾಗಣದಲ್ಲಿದ್ದಾರೆ.
2ನೇ ದಿನ ಭರ್ಜರಿ ಬುಕ್ಕಿಂಗ್
'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರಕ್ಕೆ ಎಲ್ಲಾ ಕಡೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಸಿನಿಮಾ ನೋಡಿದವರೆಲ್ಲಾ ಮೆಚ್ಚಿಕೊಳ್ತಿದ್ದು 2ನೇ ದಿನ ಬುಕ್ಕಿಂಗ್ ಚೆನ್ನಾಗಿದೆ. ಬುಕ್‌ಮೈ ಶೋ ಬುಕ್ಕಿಂಗ್‌ನಲ್ಲಿ ಬೆಂಗಳೂರಿನಲ್ಲೇ 50ಕ್ಕೂ ಹೆಚ್ಚು ಶೋಗಳು ಸೋಲ್ಡ್‌ಔಟ್ ಆಗಿದೆ. ತೀರ ಹೊಸಬರ ಚಿತ್ರಕ್ಕೆ ಈ ಪಾಟಿ ರೆಸ್ಪಾನ್ಸ್ ಸಿಗುತ್ತಿರುವುದು ಅಚ್ಚರಿ ಮೂಡಿಸಿದೆ. ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರು ಕನ್ನಡ ಸಿನಿಮಾ ನೋಡೋಕೆ ಬರ್ತಿಲ್ಲ ಎನ್ನುವ ವಾದ ಇತ್ತು. ಆದರೆ ಈ ಸಿನಿಮಾ ಬುಕ್ಕಿಂಗ್ ಅದನ್ನು ಸುಳ್ಳಾಗಿಸುತ್ತಿದೆ.

ಗಂಟೆ ಗಂಟೆಗೆ ಬುಕ್ಕಿಂಗ್ ಹೆಚ್ಚಳ
ಕಾಮಿಡಿ ಎಂಟರ್‌ಟೈನರ್ ಚಿತ್ರಕ್ಕೆ ರೆಸ್ಪಾನ್ಸ್ ಹೇಗಿದೆ ಅಂದ್ರೆ ಗಂಟೆ ಗಂಟೆಗೆ 4ರಿಂದ 5 ಸಾವಿರ ಟಿಕೆಟ್ ಬುಕ್ ಆಗ್ತಿದೆ. ಅಷ್ಟರಮಟ್ಟಿಗೆ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಈ ವರ್ಷ ಕನ್ನಡದಲ್ಲಿ ದೊಡ್ಡ ಸಿನಿಮಾಗಳು ರಿಲೀಸ್ ಆಗಿಲ್ಲ. ಬಂದ ಒಂಡೆರಡು ಸಿನಿಮಾ ಕೂಡ ಸದ್ದು ಮಾಡಲಿಲ್ಲ. ಇನ್ನು ಚುನಾವಣೆ, ಐಪಿಎಲ್ ಭರಾಟೆಯಲ್ಲಿ ಪ್ರೇಕ್ಷಕರು ಥಿಯೇಟರ್ ಕಡೆ ಮುಖ ಮಾಡಿರಲಿಲ್ಲ. ಆದರೆ ಈಗ ಹೊಸಬರ ಸಿನಿಮಾ ಸಿನಿಪ್ರೇಮಿಗಳನ್ನು ಥಿಯೇಟರ್‌ಗೆ ಕರೆದುಕೊಂಡು ಬರ್ತಿದೆ.
ಹಾಸ್ಟೆಲ್ ಹುಡುಗರ ದರ್ಬಾರ್
ತುಂಗಾ ಬಾಯ್ಸ್ ಹಾಸ್ಟೆಲ್ ಹುಡುಗರು ವರ್ಸಸ್ ವಾರ್ಡನ್ ಜಟಾಪಟಿ. ಹುಡುಗ್ರ ತರಲೆ, ತಂಟೆ, ನೋವು, ನಲಿವು, ಕ್ವಾಟ್ಲೆ, ಹಾಡುಪಾಡು ಎಲ್ಲವನ್ನು ಸೇರಿಸಿ ಈ ಸಿನಿಮಾ ಮಾಡಿದ್ದಾರೆ. ಮೊದಲ ಪ್ರಯತ್ನದಲ್ಲೇ ನಿರ್ದೇಶಕರು ಗೆದ್ದಿದ್ದಾರೆ. ಅಷ್ಟೇ ಅಲ್ಲ ಒಂದು ಪಾತ್ರದಲ್ಲೂ ಕಾಣಿಸಿಕೊಂಡು ನಿತಿನ್ ಗಮನ ಸೆಳೆದಿದ್ದಾರೆ. ಸಿಂಪಲ್ ಕತೆಯನ್ನು ಬಹಳ ಪರಿಣಾಮಕಾರಿಯಾಗಿ ಹೇಳಿದ್ದಾರೆ. ಹಾಸ್ಟೆಲ್‌ನಲ್ಲಿ ಇದ್ದವರಿಗೆ ಈಗಲೂ ಇರುವವರಿಗೆ ಈ ಸಿನಿಮಾ ಮತ್ತಷ್ಟು ಹತ್ತಿರವಾಗುತ್ತದೆ.
ಮತ್ತೊಂದು 'ಕಿರಿಕ್ ಪಾರ್ಟಿ'
'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರದಲ್ಲಿ ಮ್ಯಾಥ್ಸ್ ಲೆಕ್ಚರರ್ ದಿವ್ಯಾ ಸ್ಪಂದನಾ ಆಗಿ ರಮ್ಯಾ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ. ಮೊದಲಿಗೆ ಒಪ್ಪಿ ನಟಿಸಿದ್ದ ರಮ್ಯಾ ಸಿನಿಮಾ ರಿಲೀಸ್ ಹೊಸ್ತಿಲಲ್ಲಿ ಕ್ಯಾತೆ ತೆಗೆದಿದ್ದರು. ಲೀಗಲ್ ನೋಟಿಸ್ ನೀಡಿದ್ದರು. ಪರಿಣಾಮ ಸಿನಿಮಾ ರಿಲೀಸ್ ಆಗುತ್ತೋ ಇಲ್ಲವೋ ಎನ್ನುವ ಅನುಮಾನ ಮೂಡಿತ್ತು. ಇದೇ ಕಾರಣಕ್ಕೆ ಪ್ರೀಮಿಯರ್ ಶೋಗಳು ಕ್ಯಾನ್ಸಲ್ ಆಗಿತ್ತು. ಆದರೆ ಕೋರ್ಟ್‌ನಿಂದ ಸಿನಿಮಾ ಪ್ರದರ್ಶನಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಎಲ್ಲಾ ಸಮಸ್ಯೆಗಳನ್ನು ಎದುರಿಸಿ ಕೊನೆಗೂ ಸಿನಿಮಾ ಥಿಯೇಟರ್‌ಗೆ ಬಂದು ಪ್ರೇಕ್ಷಕರ ಮನಗೆದ್ದಿದೆ. ಮತ್ತೊಂದು 'ಕಿರಿಕ್ ಪಾರ್ಟಿ' ಆಗುವ ಸುಳಿವು ಸಿಕ್ತಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಆರ್ಭಟ ಹೇಗಿರುತ್ತೋ ಕಾದು ನೋಡಬೇಕು.


Click it and Unblock the Notifications