Hostel Hudugaru Bekagiddare: ಅಪ್ಪು, ದುನಿಯಾ, ರಂಗಿತರಂಗ ಹಾದಿಯಲ್ಲಿ ಹಾಸ್ಟೆಲ್ ಹುಡುಗ್ರು; ಬೃಹತ್ ದಾಖಲೆ ಫಿಕ್ಸ್?
ಸದ್ಯ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಅತಿಹೆಚ್ಚು ಸದ್ದು ಮಾಡುತ್ತಿರುವ ಸಿನಿಮಾ ಎಂದರೆ ಅದು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ. ನಿತಿನ್ ಕೃಷ್ಣಮೂರ್ತಿ ಎಂಬ ಹೊಸ ನಿರ್ದೇಶಕ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿರುವ ಕಲಾವಿದರೆಲ್ಲಾ ಹೊಸಬರು ಹಾಗೂ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಬೇಕು ಎಂಬ ಹಂಬಲ ಇರುವ ಪುಟ್ಟ ಪ್ರತಿಭಾವಂತ ಕಲಾವಿದರೇ.
ಹೀಗೆ ಹೊಸಬರೇ ತಯಾರಿಸಿರುವ ಈ ಚಿತ್ರ ಎಲ್ಲಿಯೂ ಸಹ ಹೊಸಬರ ಚಿತ್ರ ಎನಿಸದೇ ನುರಿತ ಅನುಭವ ಇರುವ ಕಲಾವಿದರು ಮಾಡಿರುವ ಸಿನಿಮಾ ಎಂಬಂತಿದೆ. ಹೀಗಾಗಿಯೇ ಚಿತ್ರ ಸದ್ಯ ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸಿದ್ದು, ಭರ್ಜರಿ ಪ್ರದರ್ಶನವನ್ನು ಕಾಣುತ್ತಿದೆ. ಇಷ್ಟರ ಮಟ್ಟಿಗೆ ಸದ್ದು ಮಾಡುತ್ತಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಕೇವಲ ವಿಮರ್ಶೆಯ ವಿಷಯದಲ್ಲಿ ಮಾತ್ರವಲ್ಲದೇ ಗಳಿಕೆಯ ವಿಷಯದಲ್ಲಿ ಸಹ ಅಬ್ಬರಿಸುತ್ತಿದ್ದು, ಬಾಕ್ಸ್ ಆಫೀಸ್ ರೂಲ್ ಮಾಡ್ತಿದೆ.

ಹೌದು, ಬಿಡುಗಡೆಯ ದಿನ 89 ಲಕ್ಷ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಎರಡನೇ ದಿನ 1.92 ಕೋಟಿ ಗಳಿಸಿದ್ದು, ಮೂರನೇ ದಿನ 2.15 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ 3 ದಿನಗಳಲ್ಲಿ 4.96 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದ್ದು, ದಿನದಿಂದ ದಿನಕ್ಕೆ ಹೆಚ್ಚು ಕಲೆಕ್ಷನ್ ಮಾಡ್ತಿದೆ.
ಇನ್ನು ಬಿಡುಗಡೆಯ ದಿನ ಪಡೆದುಕೊಂಡಿದ್ದ ಪ್ರದರ್ಶನಗಳ ಸಂಖ್ಯೆಗಿಂತ ಮೂರು ಪಟ್ಟು ಹೆಚ್ಚಿನ ಪ್ರದರ್ಶನಗಳನ್ನು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಐದನೇ ದಿನ ಪಡೆದುಕೊಂಡಿದ್ದು, ಇನ್ನೂ ಹೆಚ್ಚಿನ ಕಲೆಕ್ಷನ್ ಮಾಡುವುದು ಫಿಕ್ಸ್ ಆಗಿದೆ. ಹೀಗೆಯೇ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ಕಲೆಕ್ಷನ್ ಓಟ ಮುಂದುವರೆದರೆ ಕನ್ನಡ ಚಿತ್ರರಂಗದಲ್ಲಿ ಹೊಸಬರ ಮೊದಲ ಚಿತ್ರಗಳು ಮಾಡಿದ ಬೃಹತ್ ದಾಖಲೆಯ ಪಟ್ಟಿಯನ್ನು ಸೇರಲಿದೆ. ಹಾಗಿದ್ದರೆ ಹೊಸಬರ ಯಾವ ಚಿತ್ರಗಳು ಹೆಚ್ಚಿನ ಕಲೆಕ್ಷನ್ ಅನ್ನು ಮಾಡಿದ್ದವು ಎಂಬ ಮಾಹಿತಿ ಈ ಕೆಳಕಂಡಂತಿದೆ..
* ರಂಗಿತರಂಗ: 2015ರಲ್ಲಿ ತೆರೆಗೆ ಬಂದಿದ್ದ ರಂಗಿತರಂಗ ಚಿತ್ರ ಚಂದನವನದ ಸಾರ್ವಕಾಲಿಕ ಅತ್ಯುತ್ತಮ ಚಿತ್ರಗಳ ಪಟ್ಟಿ ಸೇರುತ್ತೆ ಎಂದು ಯಾರೊಬ್ಬರೂ ಸಹ ಊಹಿಸಿರಲಿಲ್ಲ. ಭಂಡಾರಿ ಬ್ರದರ್ಸ್‌ಗಳ ಈ ಮೊದಲ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 30 ಕೋಟಿ ರೂಪಾಯಿ ಗಳಿಕೆಯನ್ನು ಮಾಡಿದೆ ಎಂಬ ಮಾಹಿತಿ ವಿವಿಧ ವೆಬ್ ತಾಣಗಳಲ್ಲಿ ಇದ್ದು, ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಹೊಸಬರ ಚಿತ್ರ ಎನಿಸಿಕೊಂಡಿದೆ.
* ದುನಿಯಾ: ದುನಿಯಾ ಚಂದನವನಕ್ಕೆ ಪ್ರತಿಭಾವಂತ ನಾಯಕ ಹಾಗೂ ನಿರ್ದೇಶಕನನ್ನು ಕೊಟ್ಟಂತಹ ಚಿತ್ರ. 2007ರಲ್ಲಿ ತೆರೆಕಂಡಿದ್ದ ಈ ಚಿತ್ರ ಭರ್ಜರಿ ಯಶಸ್ಸನ್ನು ಕಂಡು ಬಾಕ್ಸ್ ಅಫೀಸ್‌ನಲ್ಲಿ ಸುನಾಮಿ ಎಬ್ಬಿಸಿತ್ತು. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 25 ಕೋಟಿ ಗಳಿಕೆಯನ್ನು ಮಾಡಿ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಎರಡನೇ ಹೊಸಬರ ಚಿತ್ರ ಎನಿಸಿಕೊಂಡಿದೆ.
* ಎ: 1998ರಲ್ಲಿ ತೆರೆಗೆ ಬಂದ ಎ ಚಿತ್ರ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಚೊಚ್ಚಲ ಸಿನಿಮಾವಾಗಿದೆ. ಇದಕ್ಕೂ ಮುನ್ನ ತರ್ಲೆ ನನ್ಮಗ, ಶ್, ಓಂ, ಆಪರೇಶನ್ ಅಂತ ಹಾಗೂ ಸ್ವಸ್ತಿಕ್ ಚಿತ್ರಗಳನ್ನು ನಿರ್ದೇಶಿಸಿದ್ದ ಉಪೇಂದ್ರ ಅದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿ ತಮಗೆ ತಾವೇ ಆಕ್ಷನ್ ಕಟ್ ಹೇಳಿಕೊಂಡಿದ್ದರು. ಹೀಗೆ ಉಪೇಂದ್ರ ನಾಯಕನಾಗಿ ನಟಿಸಿದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 20 ಕೋಟಿ ಗಳಿಸಿತ್ತು ಹಾಗೂ ಇಂದಿಗೂ ಸಹ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಅತಿಹೆಚ್ಚು ಗಳಿಸಿದ ಹೊಸ ನಾಯಕನ ಸಿನಿಮಾಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
* ಅಪ್ಪು: ಬಾಲ ನಟನಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡು ಕನ್ನಡ ಸಿನಿರಸಿಕರ ಮನ ಗೆದ್ದಿದ್ದ ಮಾಸ್ಟರ್ ಲೋಹಿತ್ ಪುನೀತ್ ರಾಜ್‌ಕುಮಾರ್ ಆಗಿ 2002ರಲ್ಲಿ ತೆರೆಗೆ ಬಂದ ಅಪ್ಪು ಚಿತ್ರದ ಮೂಲಕ ತಮ್ಮ ಸಿನಿ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಿದರು. ಪುನೀತ್ ನಟನೆಯ ಈ ಚೊಚ್ಚಲ ಚಿತ್ರ ಸಹ ದೊಡ್ಡ ಹಿಟ್ ಆಗಿ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡಿತ್ತು. ಈ ಚಿತ್ರ ಬರೋಬ್ಬರಿ 15 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಈ ಮೂಲಕ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಅತಿಹೆಚ್ಚು ಗಳಿಸಿದ ಹೊಸ ನಾಯಕನ ಸಿನಿಮಾಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.


Click it and Unblock the Notifications










