Hostel Hudugaru Bekagiddare: 'ನ್ಯಾಯ ಅಂದ್ರೆ ನ್ಯಾಯ..' ಹಾಸ್ಟೆಲ್ ಹುಡುಗರನ್ನು ಕೆಣಕಿದ ರಮ್ಯಾಗೆ ರಿಷಬ್ ಟಾಂಗ್!
ನಾಳೆ ( ಜುಲೈ 21 ) ಕನ್ನಡದ ಬಹು ನಿರೀಕ್ಷಿತ ಚಿತ್ರ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಬಿಡುಗಡೆಯಾಗಲಿದೆ. ಹೌದು, ಚಿತ್ರ ಸೆಟ್ಟೇರಿದಾಗಿನಿಂದಲೂ ಭಿನ್ನ ವಿಭಿನ್ನವಾದ ಪ್ರಚಾರದಿಂದ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಈ ಚಿತ್ರತಂಡ ಪುನೀತ್ ರಾಜ್‌ಕುಮಾರ್ ಸೇರಿದಂತೆ ಹಲವಾರು ಸ್ಟಾರ್ ನಟರನ್ನು ತಮ್ಮ ಚಿತ್ರದ ಪ್ರೋಮೊಗೆ ಬಳಸಿಕೊಂಡು ಅದ್ಭುತವಾದ ವಿಡಿಯೊಗಳನ್ನು ಬಿಡುಗಡೆ ಮಾಡಿ ಸಿನಿ ರಸಿಕರ ಗಮನವನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿತ್ತು.
ಹೀಗೆ ಸಿಕ್ಕಾಪಟ್ಟೆ ಸುದ್ದಿಗೀಡಾಗಿದ್ದ ಈ ಚಿತ್ರತಂಡದ ಜತೆ ಮೋಹಕತಾರೆ ರಮ್ಯಾ ಸಹ ಕೈ ಜೋಡಿಸಿ ಪ್ರಚಾರದ ಪ್ರೋಮೊವೊದಂದರಲ್ಲಿ ನಟಿಸಿದ್ದರು. ಅಲ್ಲದೇ ಈ ಚಿತ್ರದಲ್ಲಿಯೂ ಸಹ ನಟಿ ರಮ್ಯಾ ಅಭಿನಯಿಸಿ ಪ್ರಾಧ್ಯಾಪಕಿಯ ಪಾತ್ರವನ್ನು ನಿರ್ವಹಿಸಿದ್ದರು.

ಹೀಗೆ ಆರಂಭದಿಂದಲೂ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡದ ಜತೆ ಇದ್ದ ನಟಿ ರಮ್ಯಾ ಚಿತ್ರ ಬಿಡುಗಡೆಗೆ ಇನ್ನು ಕೇವಲ ಎರಡೇ ದಿನಗಳು ಬಾಕಿ ಇದೆ ಎನ್ನುವಾಗ ಲೀಗಲ್ ನೋಟಿಸ್ ಕಳುಹಿಸಿ ಶಾಕ್ ಕೊಟ್ಟಿದ್ರು. ಹೌದು, ತನ್ನ ವಿಡಿಯೊ ಹಾಗೂ ಫೋಟೊಗಳನ್ನು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡ ತನ್ನ ಅನುಮತಿ ಇಲ್ಲದೇ ಬಳಕೆ ಮಾಡಿದೆ ಎಂಬ ಕಾರಣವನ್ನು ನೀಡಿ ಲೀಗಲ್ ನೋಟಿಸ್ ಕಳುಹಿಸಿದ್ದ ರಮ್ಯಾ ಒಂದು ಕೋಟಿ ಪರಿಹಾರಕ್ಕೂ ಸಹ ನೋಟಿಸ್ ಮೂಲಕ ಒತ್ತಾಯಿಸಿದ್ರು.
ಈ ರೀತಿ ರಮ್ಯಾ ವರ್ತಿಸುತ್ತಿದ್ದಂತೆಯೇ ಇಡೀ ಸಿನಿ ರಸಿಕರು ನಟಿ ವಿರುದ್ಧ ತಿರುಗಿಬಿದ್ದಿದ್ರು. ಯುವ ತಂಡದ ಒಳ್ಳೆಯ ಪ್ರಯತ್ನಕ್ಕೆ ಈ ರೀತಿ ಮಾಡಿ ಹಿನ್ನಡೆ ಉಂಟು ಮಾಡುವುದು ಸರಿಯಲ್ಲ ಎಂದಿದ್ರು. ಹೀಗೆ ರಮ್ಯಾ ನೀಡಿದ್ದ ದೂರಿನ ಕುರಿತು ಇಂದು ತೀರ್ಪು ನೀಡಿರುವ ಕೋರ್ಟ್ ರಮ್ಯಾ ಮಾಡಿದ್ದ ಆರೋಪವನ್ನು ತಳ್ಳಿಹಾಕಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರವನ್ನು ಸೆನ್ಸಾರ್ ಮಂಡಳಿ ನೀಡಿರುವ ಮಾರ್ಗದರ್ಶನದಂತೆ, ರಮ್ಯಾ ದೃಶ್ಯಗಳಿಗೆ ಕತ್ತರಿ ಹಾಕದೆಯೇ ಬಿಡುಗಡೆ ಮಾಡಬಹುದು ಎಂಬ ತೀರ್ಪನ್ನು ನೀಡಿತು.
ಹೀಗೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಹಾಗೂ ರಮ್ಯಾ ವಿವಾದ ಕೋರ್ಟ್‌ನಲ್ಲಿ ಅಂತ್ಯ ಕಂಡಿದ್ದು, ಹಾಸ್ಟೆಲ್ ಹುಡುಗರಿಗೆ ಜಯ ಸಿಕ್ಕಿದೆ ಹಾಗೂ ರಮ್ಯಾಗೆ ಹಿನ್ನಡೆಯಾಗಿದೆ. ಹೀಗೆ ತೀರ್ಪು ಹೊರಬೀಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಸಿನಿ ರಸಿಕರು ಸಂಭ್ರಮಿಸುತ್ತಿದ್ದು, ಕೆಲವರು ರಮ್ಯಾ ವಿರುದ್ಧ ಟ್ರೋಲ್ ಮಾಡುತ್ತಿದ್ದಾರೆ.
ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಸಹ ತಮ್ಮ ಶಿಷ್ಯರ ಪರ ಬ್ಯಾಟ್ ಬೀಸಿದ್ದು, ನ್ಯಾಯ ಸಿಕ್ಕಿದ್ದರ ಕುರಿತು ವಿಶೇಷ ಪೋಸ್ಟ್ ಹಂಚಿಕೊಂಡು ನಟಿ ರಮ್ಯಾಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ಬುಕಿಂಗ್ ತೆರೆದಿದೆ ಎಂಬ ಪೋಸ್ಟ್ ಹಂಚಿಕೊಂಡಿರುವ ರಿಷಬ್ ಶೆಟ್ಟಿ "ನ್ಯಾಯ ಅಂದ್ರೆ ನ್ಯಾಯ.. ಜೈ ಆಂಜನೇಯ! ನಾಳೆ ಹಾಸ್ಟೆಲ್ ಹುಡುಗರು ರಿಲೀಸ್ ಆಗ್ತಿದೆ. ಥಿಯೇಟರ್‌ನಲ್ಲಿ ಸಿಗೋಣ" ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











