ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾಗೆ ಕೊರೊನಾ ವೈರಸ್ ಸೋಂಕು ಬಂದಿದ್ದು ಎಲ್ಲಿಂದ?
ಧ್ರುವ ಸರ್ಜಾ ಮತ್ತು ಅವರ ಪತ್ನಿ ಪ್ರೇರಣಾ ಅವರಲ್ಲಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿರುವುದು ತೀವ್ರ ಆತಂಕ ಸೃಷ್ಟಿಸಿದೆ. ಚಿರಂಜೀವಿ ಸರ್ಜಾ ನಿಧನರಾದ ಬಳಿಕ ಅವರ ಕಾರ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳ ಹೊರತಾಗಿ ಧ್ರುವ ಸರ್ಜಾ ಮನೆಯಿಂದ ಅಷ್ಟಾಗಿ ಹೊರಗೆ ಬಂದಿರಲಿಲ್ಲ. ಇದರಿಂದ ಅವರಿಗೆ ಸೋಂಕು ತಗುಲಿರುವುದರ ಮೂಲ ಯಾವುದು ಎನ್ನುವ ಪ್ರಶ್ನೆ ಉಂಟಾಗಿದೆ.
Recommended Video
ಚಿರಂಜೀವಿ ಸರ್ಜಾ ಅವರು ನಿಧನರಾಗಿ ಒಂದು ತಿಂಗಳು ಕಳೆದ ಸಂದರ್ಭದಲ್ಲಿ ಮಾಸಿಕ ಪೂಜಾ ಕಾರ್ಯಗಳನ್ನು ನಡೆಸಲಾಗಿತ್ತು. ಮನೆಯಲ್ಲಿ ಹೋಮ ಕೂಡ ನಡೆಸಲಾಗಿತ್ತು. ಮನೆಯ ಅನೇಕ ಜವಾಬ್ದಾರಿಗಳನ್ನು ನಿಭಾಯಿಸುವ ಹೊಣೆ ಧ್ರುವ ಮೇಲೆ ಬಿದ್ದಿರುವುದರಿಂದ, ಅತ್ತ ಸಿನಿಮಾಗಳ ಕೆಲಸ ಬಾಕಿ ಇರುವುದರಿಂದ ಧ್ರುವ ಹೆಚ್ಚು ಓಡಾಡುವಂತಾಗಿದೆ. ಈ ಸಂದರ್ಭದಲ್ಲಿ ಅವರಿಗೆ ಸೋಂಕು ತಗುಲಿದೆಯೇ ಎನ್ನುವ ಅನುಮಾನ ಮೂಡಿದೆ. ಮುಂದೆ ಓದಿ...

ತಪಾಸಣೆಗೆ ಒಳಪಟ್ಟಿದ್ದರು
ಚಿರಂಜೀವಿ ಸರ್ಜಾ ಅವರ ಮೃತಪಟ್ಟ ಸಂದರ್ಭದಲ್ಲಿ ಅವರಿಗೆ ಕೊರೊನಾ ವೈರಸ್ ಸೋಂಕು ಇದೆಯೇ ಎಂಬ ತಪಾಸಣೆ ಮಾಡಿಸಲಾಗಿತ್ತು. ಆಗ ಅವರಲ್ಲಿ ನೆಗೆಟಿವ್ ಬಂದಿತ್ತು. ನಂತರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ನೂರಾರು ಮಂದಿ ಸೇರಿದ್ದರಿಂದ ಕೊರೊನಾ ವೈರಸ್ ಹರಡುವ ಭೀತಿ ಮೂಡಿತ್ತು. ಆಗ ನಿಯಮಾವಳಿ ಉಲ್ಲಂಘನೆ ಮಾಡಿದ್ದಕ್ಕಾಗಿ ಸುಮಾರು 58 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಚಿರು ಸಾವಿನ ನೋವು
ಅಣ್ಣನ ಸಾವಿನ ನೋವಿನಿಂದ ಹೊರಬರಲಾಗದೆ ಧ್ರುವ ಸರ್ಜಾ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಇತ್ತೀಚೆಗೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಕುಟುಂಬದ ಇತರೆ ಸದಸ್ಯರೂ ಆಸ್ಪತ್ರೆಗೆ ಹೋಗಿದ್ದರು ಎಂದು ಹೇಳಲಾಗಿತ್ತು. ಚಿರು ಅಗಲಿಕೆಗೆ ಆಘಾತದಿಂದ ಚೇತರಿಸಿಕೊಳ್ಳಲು ಮನೆಯವರಿಗೆ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಈ ಸಂದರ್ಭದಲ್ಲಿ ಕೂಡ ಮನೆಯವರಲ್ಲಿ ಬೇರೆರೀತಿಯ ಅನಾರೋಗ್ಯ ಸಮಸ್ಯೆ ಕಂಡುಬಂದಿರಲಿಲ್ಲ.

ಮತ್ತೆ ಮೂಡಿದ ಆತಂಕ
ಚಿರಂಜೀವಿ ಸರ್ಜಾ ಅವರ ಪುಣ್ಯತಿಥಿಯಲ್ಲಿ ಭಾಗವಹಿಸಿದ್ದ ನಂತರ ಕುಟುಂಬದವರು ಸೇರಿದಂತೆ 30ಕ್ಕೂ ಹೆಚ್ಚು ಮಂದಿ ಕೊರೊನಾ ವೈರಸ್ ತಪಾಸಣೆಗೆ ಒಳಗಾಗಿದ್ದರು. ಆದರೆ ಎಲ್ಲರ ವರದಿಯಲ್ಲಿಯೂ ನೆಗೆಟಿವ್ ಬಂದಿದ್ದರಿಂದ ಅವರು ನಿರಾಳರಾಗಿದ್ದರು. ಆದರೆ ಧ್ರುವ ಮತ್ತು ಪತ್ನಿಯರಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿರುವುದು ಮತ್ತೆ ಆತಂಕ ಮೂಡಿಸಿದೆ.

ಎರಡು ದಿನಗಳಿಂದ ಜ್ವರ
ಎರಡು ದಿನದ ಹಿಂದೆ ಜ್ವರ ಮತ್ತು ಕೆಮ್ಮು ಶುರುವಾಗಿತ್ತು. ಅದಕ್ಕಾಗಿ ತಪಾಸಣೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಹೋಗಿದ್ದೆ. ಅಲ್ಲಿ ಪಾಸಿಟಿವ್ ಇರುವುದು ಕಂಡುಬಂದಿದೆ. ಗುಣಪಡಿಸಿಕೊಂಡು ವಾಪಸ್ ಬರುತ್ತೇನೆ ಎಂದು ಧ್ರುವ ತಿಳಿಸಿದ್ದಾನೆ. ಆತ ಅಪೋಲೊ ಆಸ್ಪತ್ರೆಯಲ್ಲಿ ಇದ್ದಾನೆ. ಮನೆಯಲ್ಲಿ ಜವಾಬ್ದಾರಿ ಹೆಚ್ಚಿರುವುದರಿಂದ ಆತ ಹೆಚ್ಚು ಓಡಾಡುವಂತಾಗಿತ್ತು ಎಂದು ನಟಿ ತಾರಾ, ಖಾಸಗಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.

ಆಸ್ಪತ್ರೆಗೆ ದಾಖಲಾಗಿರಲಿಲ್ಲ
ಧ್ರುವ ಸರ್ಜಾ ಮತ್ತು ಅವರ ಕುಟುಂಬ ಅತೀವ ದುಃಖದಲ್ಲಿರುವುದು ನಿಜ. ಮನೆಯವರನ್ನು ಕಳೆದುಕೊಂಡಾಗ ಆ ನೋವು ತೀವ್ರ ಕಾಡುತ್ತದೆ. ಹಾಗೆಂದು ಧ್ರುವ ಸರ್ಜಾ ಖಿನ್ನತೆಗೆ ಒಳಗಾಗಿದ್ದು ಮತ್ತು ಆಸ್ಪತ್ರೆಗೆ ದಾಖಲಾಗಿದ್ದರು ಎನ್ನುವ ಸುದ್ದಿಗಳು ಸತ್ಯಕ್ಕೆ ದೂರವಾಗಿವೆ ಎಂದು ತಾರಾ ಹೇಳಿದ್ದಾರೆ.

ತಂದೆ ಮನೆಯಲ್ಲಿ ಮೇಘನಾ ರಾಜ್
ಇತ್ತೀಚಿನ ದಿನಗಳಲ್ಲಿ ತಮ್ಮೊಂದಿಗೆ ಸಂಪರ್ಕಕ್ಕೆ ಬಂದವರು ಕೊರೊನಾ ವೈರಸ್ ತಪಾಸಣೆ ಮಾಡಿಸಿಕೊಳ್ಳಿ ಎಂದು ಧ್ರುವ ಸರ್ಜಾ ಮನವಿ ಮಾಡಿದ್ದಾರೆ. ಧ್ರುವ ಮನೆಯಲ್ಲಿ ಅವರ ತಂದೆ ತಾಯಿ ಇದ್ದು ಅವರು ತಪಾಸಣೆಗೆ ಒಳಪಡಲಿದ್ದಾರೆ. ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ತಂದೆಯ ಮನೆಯಲ್ಲಿ ಇದ್ದಾರೆ. ಈ ಕೆಲವು ದಿನಗಳಿಂದ ಧ್ರುವ ಮತ್ತು ಅವರ ಪತ್ನಿಯ ಸಂಪರ್ಕಕ್ಕೆ ಯಾರು ಯಾರು ಬಂದಿದ್ದಾರೆ ಎನ್ನುವುದು ಗೊತ್ತಾಗಬೇಕಿದೆ. ಚಿರಂಜೀವಿ ಸರ್ಜಾ ಮೃತಪಟ್ಟು ಒಂದು ತಿಂಗಳು ತುಂಬಿದ ಸಂದರ್ಭದಲ್ಲಿ ಮೇಘನಾ ರಾಜ್ ಸೇರಿದಂತೆ ಅವರ ಆಪ್ತರು ಪನ್ನಗಾಭರಣ ಮನೆಯಲ್ಲಿ ಸೇರಿದ್ದರು.


Click it and Unblock the Notifications











