ದರ್ಶನ್-ವಿಜಯಲಕ್ಷ್ಮೀ ಸಂಸಾರ ಸಂಘರ್ಷ ; ಜಗ್ಗುದಾದಾಗೆ ಪರಿಚಯವಾಗಿದ್ಹೇಗೆ ಪವಿತ್ರಾ ಗೌಡ..?
ದರ್ಶನ್ ಹಾಗೂ ವಿಜಯ ಲಕ್ಷ್ಮೀ ನಡುವೆ ಅರಳಿದ, ಮಾಗಿದ ಹಾಗೂ ಬಾಡಿದ ಪ್ರೇಮ ಕಥೆ ಎಲ್ಲರಿಗೂ ಗೊತ್ತಿರುವಂಥಹದ್ದೇ. ಆದರೆ ದರ್ಶನ್ ಹಾಗೂ ಪವಿತ್ರಾ ಗೌಡ ನಡುವೆ ಪ್ರೇಮಾಂಕುರವಾಗಿದ್ದು ಹೇಗೆ ಮತ್ತು ಯಾವಾಗ ಅನ್ನುವುದು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಹೀಗಾಗಿಯೇ ತಿಳಿದುಕೊಳ್ಳುವ ಜಿಜ್ಞಾಸೆಯಿಂದ ಅನೇಕರು ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದಾರೆ. ಉತ್ತರ ಹುಡುಕುವ ಪ್ರಯತ್ನ ಮಾಡ್ತಿದ್ದಾರೆ.
ಇನ್ನೂ ಪವಿತ್ರಾ ಗೌಡ ಖುದ್ದು ನಮ್ಮ ಅಮರ-ಮಧುರ ಸಂಬಂಧಕ್ಕೆ ಹತ್ತು ವರ್ಷ ಆಗಿದೆ ಎಂದು ಘಂಟಾಘೋಷವಾಗಿ ಹೇಳಿರುವ ಕಾರಣಕ್ಕೆ ಈ ಕುತೂಹಲ ಇನ್ನಷ್ಟು ಹೆಚ್ಚಾಗಿದೆ. ಇದಕ್ಕೆ ಪೂರಕವಾಗಿ ಒಂದಷ್ಟು ಮಾತು ಸದ್ಯಕ್ಕೆ ಗಾಂಧಿನಗರದಲ್ಲಿ ಕೇಳಿ ಬರ್ತಿವೆ. ಆ ಪ್ರಕಾರ ನಟಿಯಾಗುವ ಉತ್ಸಾಹದಲ್ಲಿದ್ದ ಪವಿತ್ರಾ ಗೌಡ ದರ್ಶನ್ ಅವರನ್ನ ಮೊಟ್ಟ ಮೊದಲು ಭೇಟಿಯಾಗಿದ್ದು ಜಗ್ಗು ದಾದಾ ಚಿತ್ರದ ಸಮಯದಲ್ಲಿ.

ಆಗಷ್ಟೇ ನಟಿಯಾಗಿ ನೆಲೆ ನಿಲ್ಲುವ ಪ್ರಯತ್ನವನ್ನ ಮಾಡ್ತಿದ್ದ ಪವಿತ್ರಾ ಗೌಡ ಛತ್ರಿಗಳು ಸಾರ್ ಛತ್ರಿಗಳು ಸೇರಿ ಒಂದಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಅದೃಷ್ಟ ಕೈ ಹಿಡಿದಿರಲಿಲ್ಲ. ಹೆಸರು ಸಿಗಲಿಲ್ಲ. ಆ ಸಮಯದಲ್ಲಿಯೇ ಜಗ್ಗು ದಾದಾ ಚಿತ್ರದ ಚಿತ್ರೀಕರಣಕ್ಕೆ ಕ್ಷಣಗಣನೆ ಶುರುವಾಗಿತ್ತು. ಇದೇ ಸಮಯದಲ್ಲಿ ಆಡಿಷನ್ ಕೊಡಲು ಪವಿತ್ರಾ ಗೌಡ ಹೋಗಿದ್ದರು. ಅಲ್ಲಿಯೇ ದರ್ಶನ್ ಅವರನ್ನ ಮೊಟ್ಟ ಮೊದಲ ಬಾರಿಗೆ ಪವಿತ್ರಾ ಗೌಡ ನೇರ ನೇರವಾಗಿ ಭೇಟಿಯಾಗಿದ್ದರು ಅನ್ನುವುದು ಸದ್ಯಕ್ಕೆ ಕೇಳಿ ಬರ್ತಿರುವ ಮಾತು
ಜಗ್ಗುದಾದ ಚಿತ್ರದ ನೆಪದಲ್ಲಿ ಆದ ಪರಿಚಯ, ಆ ನಂತರ ಸ್ನೇಹದ ಸ್ವರೂಪ ಪಡೆಯಲು ಹೆಚ್ಚಿನ ಸಮಯ ಬೇಕಾಗಲಿಲ್ಲ ಅನ್ನುವ ಗಾಂಧಿನಗರದ ಮಂದಿಗೆ ಆ ನಂತರ ಪವಿತ್ರಾ ಗೌಡ ಮೇಲಿಂದ ಮೇಲೆ ಕಾಣಿಸತೊಡಗಿದರು. ಮುಂದೆ ನಡೆದಿದ್ದು ಎಲ್ಲವೂ ಕಣ್ಮುಂದೆಯೇ ಇದೆ.
ಜಗ್ಗುದಾದಾ ಚಿತ್ರಕ್ಕೂ ಮೊದಲೇ ಇತ್ತು ಪರಿಚಯ..?
ಇನ್ನೊಂದು ಮೂಲಗಳ ಪ್ರಕಾರ ದರ್ಶನ್ ಹಾಗೂ ಪವಿತ್ರಾ ಗೌಡ ಇಬ್ಬರ ಪರಿಚಯ ಛತ್ರಿಗಳು ಸಾರ್ ಛತ್ರಿಗಳ ಚಿತ್ರದ ಸಮಯದಲ್ಲಿಯೇ ಆಗಿತ್ತು. ಆಗ್ಲೇ ಇಬ್ಬರ ನಡುವೆ ಸ್ನೇಹದ ಕೊಂಡಿ ಬೆಸೆದಿತ್ತು. ಇನ್ನೂ ಪವಿತ್ರಾ ಗೌಡ ನಮ್ಮ ಸಂಬಂಧಕ್ಕೆ ಹತ್ತು ವರುಷ ಎಂದು ಹೇಳಿರುವ ಕಾರಣಕ್ಕೆ ಈ ಸಾಧ್ಯತೆಯನ್ನೂ ತಳ್ಳಿ ಹಾಕುವಂತೆ ಇಲ್ಲ. ಯಾಕೆಂದರೆ ಛತ್ರಿಗಳು ಸಾರ್ ಛತ್ರಿಗಳು ತೆರೆಗೆ ಬಂದಿದ್ದು 2013ರಲ್ಲಿ.

2017ರಲ್ಲಿ ಮೊದಲ ಬಾರಿ ಫೋಟೋ ಹಂಚಿಕೊಂಡಿದ್ದ ಪವಿತ್ರಾ..!
2016ರಲ್ಲಿ ಜಗ್ಗುದಾದಾ ತೆರೆಗೆ ಬಂದ ನಂತರ, 2017ರಲ್ಲಿ ಪವಿತ್ರಾ ಗೌಡ ಮೊದಲ ಬಾರಿ ದರ್ಶನ್ ಅವರ ಜೊತೆ ಇದ್ದ ಫೋಟೋ ಹಂಚಿಕೊಂಡಿದ್ದರು. ಆ ಫೋಟೋ ನೋಡ..ನೋಡ್ತಿದ್ದಂತೆ ವೈರಲ್ ಆಯಿತು ಕೂಡ. ಆದರೆ ಆ ನಂತರ ಪವಿತ್ರಾ ಗೌಡ ಆ ಫೋಟೋವನ್ನ ತೆಗೆದು ಹಾಕಿದ್ದರು. ಅಲ್ಲಿಂದಾಚೆ ಅಲ್ಲೊಮ್ಮೆ.. ಇಲ್ಲೊಮ್ಮೆ.. ದರ್ಶನ್ ಅವರ ಕುಟುಂಬಸ್ಥರ ಜೊತೆ ಫೋಟೋ ಹಂಚಿಕೊಳ್ತಿದ್ದ ಪವಿತ್ರಾ ಗೌಡ, ಇದೀಗ ವಿಜಯಲಕ್ಷ್ಮೀ ಹಾಗೂ ದರ್ಶನ್ ಬದುಕಿನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದಾರೆ. ತಮ್ಮ ಸಂಬಂಧದ ಬಗ್ಗೆ ಮುಚ್ಚು ಮರೆಯಿಲ್ಲದೇ ಹೇಳಿಕೊಂಡಿದ್ದಾರೆ.
ಒಟ್ಟಿನಲ್ಲಿ ದರ್ಶನ್-ವಿಜಯಲಕ್ಷ್ಮೀ ಸಂಸಾರದ ಗುಟ್ಟು ಮತ್ತೊಮ್ಮೆ ವ್ಯಾಧಿ ರಟ್ಟಾಗಿದೆ. ಈ ಸಂಸಾರದ ಸಂಘರ್ಷದ ಕಥೆ ಇನ್ಯಾವ ತಿರುವನ್ನ ಪಡೆಯುತ್ತೆ ಅನ್ನುವುದನ್ನ ಕಾದು ನೋಡಬೇಕಿದೆ.


Click it and Unblock the Notifications











