ದಿಢೀರ್ ಅಂತ ಚಾನಲ್ ಗಳಿಗೆ ಬರಲು ಯಶ್ ಒಪ್ಪಿದ್ಹೇಗೆ? 'ಆ ಹತ್ತು' ನಿಮಿಷದಲ್ಲಿ ಏನಾಯ್ತು?
ಕಡೆಗೂ, ರಾಕಿಂಗ್ ಸ್ಟಾರ್ ಯಶ್ ರೈತರ ಪರ ಕಾಳಜಿಯ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲು ಕನ್ನಡ ಸುದ್ದಿ ವಾಹಿನಿಗಳಿಗೆ ಬರಲು ಒಪ್ಪಿಗೆ ಸೂಚಿಸಿದ್ದಾರೆ. 'ನಾನು ಹಾಕಿದ ಸವಾಲು, ನಾನೇ ಬರ್ತಿನಿ' ಅಂತ ಯಶ್ ಚಾನಲ್ ಕಡೆ ಮುಖ ಮಾಡಿದ್ದಾರೆ.
ಟಿವಿ ಚಾನಲ್ ಗಳು ಯಶ್ ಅವರನ್ನ ಆಹ್ವಾನಿಸಿ ಡಿಫ್ರೆಂಟ್ ಡಿಫ್ರೆಂಟ್ ಆಗಿ ಪ್ರೋಮೋಗಳನ್ನ ಮಾಡಿ, ರೆಡ್ ಕಾರ್ಪೆಟ್ ಹಾಸಿ ಕಾಯುತ್ತಿದ್ದರು. ಆದರೂ ರಾಜಾಹುಲಿ ಬರಲೇ ಇಲ್ಲ. ಬದಲಾಗಿ, ಇಷ್ಟು ದಿನ 'ನಾ ಬರಲ್ಲ, ನೀವೇ ಬನ್ನಿ' ಅಂತ ಮಾತು ತಿರುಗಿಸಿದ ಯಶ್, ಇವತ್ತು ದಿಢೀರ್ ಅಂತ ಸುದ್ದಿ ವಾಹಿನಿಗಳಿಗೆ ಬರುವುದಕ್ಕೆ ಒಪ್ಪಿಕೊಂಡಿರುವುದು ಆಶ್ಚರ್ಯವೇ ಸರಿ.[ಯಶ್ ವರ್ಸಸ್ ಕನ್ನಡ ಮಾಧ್ಯಮ: ಕಥೆ ಶುರು ಆಗಿದ್ದು ಎಲ್ಲಿಂದ?]
ಅಷ್ಟಕ್ಕೂ, ಇಂದು ಚಾನಲ್ ಗಳಿಗೆ ಬರಲು ಯಶ್ ಒಪ್ಪಿಕೊಂಡಿದ್ದು ಹೇಗೆ? 'ಸಂತು ಸ್ಟ್ರೈಟ್ ಫಾರ್ವಾರ್ಡ್' ಚಿತ್ರದ ಸಕ್ಸಸ್ ಪ್ರೆಸ್ ಮೀಟ್ ನಲ್ಲಿ ಮೊದಲು ಮಾತು ಆರಂಭಿಸಿದ ಯಶ್, ಸುಮಾರು ಎರಡೂವರೆ ಗಂಟೆ ಮಾತನಾಡಿದರೂ ತಮ್ಮ ಹಳೆಯ ನಿರ್ಧಾರಕ್ಕೆ ಫಿಕ್ಸ್ ಆಗಿದ್ದರು. ಆದ್ರೆ, ಕಡೆಯ 'ಆ' ಹತ್ತು ನಿಮಿಷಗಳಲ್ಲಿ ಅವರ ನಿರ್ಧಾರ ಬದಲಾಗಿದ್ದು. ಹಾಗಾದ್ರೆ, 'ಆ' ಹತ್ತು ನಿಮಿಷಗಳಲ್ಲಿ ನಡೆದಿದ್ದೇನು? ಚಾನಲ್ ಗೆ ಬರಲು ರಾಕಿಂಗ್ ಸ್ಟಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದೇಕೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.....

ಮಾಧ್ಯಮಗಳ ಆಹ್ವಾನಕ್ಕೆ ಯಶ್ ಒಪ್ಪಿಗೆ
'' ರೈತರ ಕಾಳಜಿಯ ಬಗ್ಗೆ ಚರ್ಚೆ ನಡೆಸಲು ಚಾನಲ್ ಗಳಿಗೆ ಬನ್ನಿ ಎಂಬ ಮಾದ್ಯಮಗಳ ಆಹ್ವಾನಕ್ಕೆ ಯಶ್ ಒಪ್ಪಿಕೊಂಡರು. ಇಂದಿನಿಂದಲೇ ಚಾನಲ್ ಗಳ ರೈತ ಕಾಳಜಿಯ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಯಶ್ ಸ್ವಷ್ಟಪಡಿಸಿದರು.[ಖಾಸಗಿ ನ್ಯೂಸ್ ಚಾನೆಲ್ ವಿರುದ್ಧ ತೊಡೆ ತಟ್ಟಿ ನಿಂತ ಯಶ್]

ಮೊದಲು ಒಪ್ಪಿಕೊಳ್ಳಲಿಲ್ಲ
ಸುದ್ದಿಗೋಷ್ಠಿ ಆರಂಭದಲ್ಲಿ ಯಶ್, ಯಾವ ಚಾನಲ್ ಗಳಿಗೂ ಹೋಗಲು ಒಪ್ಪಿಕೊಳ್ಳಲಿಲ್ಲ. 'ನಾನು ಚಾನಲ್ ಗಳಿಗೆ ಬರಲ್ಲ. ಎಲ್ಲ ವಾಹಿನಿಯ ಮುಖ್ಯಸ್ಥರು ಬನ್ನಿ ನಾನೊಂದು ವೇದಿಕೆ ಸಿದ್ದ ಮಾಡ್ತೀನಿ' ಎಂದಷ್ಟೇ ಯಶ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತಿನ ಚಕಮಕಿ
ಈ ಮಧ್ಯೆ ಪಬ್ಲಿಕ್ ಟಿವಿಯ ವರದಿಗಾರ ಮತ್ತು ಯಶ್ ನಡುವೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ 'ನೀವು ಬನ್ನಿ, ನಾವು ಬರಲ್ಲ, ನಾನು ಬರಲ್ಲ, ನಿಮ್ಮ ಮುಖ್ಯಸ್ಥರು ಬರಲಿ' ಎಂಬ ವಾದ ವಾಗ್ವಾದ ತಾರಕಕ್ಕೇರಿತ್ತು.

ಪಬ್ಲಿಕ್ ಟಿವಿ ವರದಿಗಾರ ವರ್ಸಸ್ ಯಶ್
ಪಬ್ಲಿಕ್ ಟಿವಿ ವರದಿಗಾರ: ''ನಿಮ್ಮ ಸವಾಲನ್ನ ಪಬ್ಲಿಕ್ ಟಿವಿ ಮೊದಲು ಸ್ವೀಕರಿಸಿ ಆಹ್ವಾನ ನೀಡಿತ್ತು. ನೀವು ಬರ್ತಿನಿ ಅಂತ ಹೇಳಿದ್ರಿ. ಯಾವಾಗ ಬರ್ತಿರಾ'' ?
ಯಶ್: ''ನಾನು ನಿಮ್ಮ ಚಾನಲ್ ಗೆ ಬರೋದು ಬೇಡ. ನಾನು ಒಂದು ವೇದಿಕೆ ಮಾಡ್ತೀನಿ. ಎಲ್ಲ ಸುದ್ದಿ ವಾಹಿನಿಯ ಮುಖ್ಯಸ್ಥರು ಬರಲಿ. ಅವರ ಜೊತೆ ಕೂತು ಚರ್ಚೆ ಮಾಡೋಣ''.
ಪಬ್ಲಿಕ್ ಟಿವಿ ವರದಿಗಾರ: ''ಪಬ್ಲಿಕ್ ಟಿವಿ ಮುಖ್ಯಸ್ಥರೇ ಯಾಕೆ ಬರಬೇಕು. ಪಬ್ಲಿಕ್ ಟಿವಿಯ ಪ್ರತಿನಿಧಿಯಾಗಿ ವರದಿಗಾರರು ಬರ್ತಾರೆ''.
ಯಶ್: ''ನೋ, ಪಬ್ಲಿಕ್ ಟಿವಿ ಮುಖ್ಯಸ್ಥ ರಂಗನಾಥ್ ಅವರೇ ಬರಬೇಕು. ನನಗೂ ಹಕ್ಕು ಇದೆ. ಅವರನ್ನ ಯಾಕೆ ಕರಿಯುತ್ತಿದ್ದೀನಿ ಅಂದ್ರೆ, ಅವರು ಬುದ್ದಿವಂತರು, ಎಲ್ಲವೂ ಗೊತ್ತಿರುವವರು. ಸೋ ಅವರೇ ಬರಲಿ''.-ಯಶ್
ಪಬ್ಲಿಕ್ ಟಿವಿ ವರದಿಗಾರ: ನಾವು ಬರೋದು ನಮ್ಮ ವೈಯಕ್ತಿಕ ವಿಚಾರ. ಎಲ್ಲ ಮಾಧ್ಯಮದವರು ಒಟ್ಟಿಗೆ ಬರಬೇಕು ಎನ್ನುವುದು ಯಾಕೆ? ಹಾಗಾದ್ರೆ, ನಾವೆಲ್ಲ ಮಾಧ್ಯಮದವರು ಒಟ್ಟಿಗೆ ಬರ್ತೀವಿ. ನೀವು ಅಷ್ಟೇ ದರ್ಶನ್, ಸುದೀಪ್, ಶಿವರಾಜ್ ಕುಮಾರ್ ಎಲ್ಲರೂ ಒಟ್ಟಿಗೆ ಬರೋಕೆ ಆಗುತ್ತಾ''
ಯಶ್: ಚಿತ್ರರಂಗ ಒಟ್ಟಿಗೆ ಬರ್ತಿವಿ. ನಾವೆಲ್ಲ ಎಲ್ಲ ಹೋರಾಟದಲ್ಲೂ ಭಾಗಿಯಾಗುತ್ತಿದ್ದೇವೆ. ಆದ್ರೆ, ಎಲ್ಲರನ್ನೂ ನಾನು ಕರೆದುಕೊಂಡು ಬರೋಕೆ ಆಗಲ್ಲ. ಅದು ಅವರ ವೈಯಕ್ತಿಕ ಆಸಕ್ತಿ''
ಪಬ್ಲಿಕ್ ಟಿವಿ ವರದಿಗಾರ: ''ಹಾಗೇ, ಇದು ಕೂಡ ನಮ್ಮ ವೈಯಕ್ತಿಕ ವಿಚಾರ. ನೀವು ಕಾರ್ಯಕ್ರಮ ಮಾಡಿ, ನಾವೆಲ್ಲ ಬರ್ತೀವಿ''. ಎಂದು ಮಾತಿಗೆ ಮಾತು ಜೋರಾಗಿಯೇ ನಡೆಯಿತು.

ಸುದ್ದಿಗೋಷ್ಠಿ ಅಂತ್ಯ ಮಾಡಿದ ಕೆ.ಮಂಜು
ಈ ಮಧ್ಯೆ ನಿರ್ಮಾಪಕ ಕೆ ಮಂಜು ಮೂಗುತೂರಿಸಿ, 'ಸಂತು ಸ್ಟ್ರೈಟ್ ಫಾರ್ವಾರ್ಡ್' ಚಿತ್ರದ ಸಕ್ಸಸ್ ಮೀಟ್ ಗೆ ಆಗಮಿಸಿದ ಎಲ್ಲ ವರದಿಗಾರರಿಗೂ ಧನ್ಯವಾದಗಳನ್ನ ಹೇಳಿ. ಪ್ರೆಸ್ ಮೀಟ್ ಗೆ ಶುಭಂ ಎಂದುಬಿಟ್ಟರು.

ಅವರು ಬರಲಿಲ್ಲ, ಇವರು ಬಿಡಲಿಲ್ಲ
ಕೊನೆಯವರೆಗೂ, ಯಶ್ ಚಾನಲ್ ಗೆ ಬರ್ತಿನಿ ಅಂತ ಹೇಳ್ಲಿಲ್ಲ. ವರದಿಗಾರರು ಯಶ್ ಅವರನ್ನ ಬಿಡಲಿಲ್ಲ.

ಕ್ಯಾಮೆರಾಗಳು ಎಲ್ಲಾ ಪ್ಯಾಕಪ್
ಸುದ್ದಿಗೋಷ್ಠಿ ಅಂತ್ಯವಾದ ನಂತರ ಸುದ್ದಿವಾಹಿನಿಯ ಛಾಯಗ್ರಾಹಕರು ತಮ್ಮ ಕ್ಯಾಮೆರಾಗಳನ್ನ ಪ್ಯಾಕಪ್ ಮಾಡುತ್ತಿದ್ದರು. ಈ ವೇಳೆ ನಟ ಯಶ್ ಮತ್ತೆ ಕ್ಯಾಮೆರಾಗಳನ್ನ ಆನ್ ಮಾಡಿಸಿ ಮಾತು ಶುರು ಮಾಡಿದರು.

ಎರಡನೇ ಬಾರಿ ಸುದ್ದಿಗೋಷ್ಠಿ
ಪ್ಯಾಕಪ್ ಆದ ಕ್ಯಾಮರಾಗಳನ್ನ ಮತ್ತೆ ಆನ್ ಮಾಡಿಸಿದ ಯಶ್, ಹತ್ತು ನಿಮಿಷಗಳ ನಂತರ ತಮ್ಮ ದೃಢ ನಿರ್ಧಾರವನ್ನೇ ಬದಲಿಸಿದರು. ಅಲ್ಲಿಯವರೆಗೂ ಚಾನಲ್ ಗೆ ಬರಲ್ಲ ಅಂತ ಹೇಳ್ತಿದ್ದ ರಾಮಾಚಾರಿ, ಸಡನ್ ಆಗಿ ''ಓಕೆ ಚಾನಲ್ ಗಳಿಗೆ ಬರ್ತೀನಿ. ನಿಮ್ಮ ಸ್ಟುಡಿಯೋದಲ್ಲಿ ಚರ್ಚೆ ಮಾಡೋಣ ಅಂದುಬಿಟ್ರು''.

ಆ ಹತ್ತು ನಿಮಿಷದಲ್ಲಿ ನಿರ್ಧಾರ ಬದಲಾಗಿದ್ದು ಹೇಗೆ.?
ಕೆ. ಮಂಜು ಸುದ್ದಿಗೋಷ್ಠಿಯನ್ನ ಅಂತ್ಯಗೊಳಿಸಿದ ನಂತರ ಹೊರಗೆ ಹೋದ ಯಶ್, ಹತ್ತು ನಿಮಿಷಗಳ ಬಳಿಕ ಮತ್ತೆ ಮಾಧ್ಯಮದವರ ಬಳಿ ಬಂದು ನಿರ್ಧಾರ ಬದಲಾಯಿಸಿರುವುದಾಗಿ ಹೇಳುತ್ತಾರೆ. ಹಾಗಾದ್ರೆ, ಆ ಹತ್ತು ನಿಮಿಷದಲ್ಲಿ ಯಶ್ ನಿರ್ಧಾರ ಹೇಗೆ ಬದಲಾಯಿತು. ಯಾರು ಬದಲಾಯಿಸಿದರು ಎಂಬುದು ಗುಟ್ಟಾಗಿಯೇ ಉಳಿಯಿತು.

ಪಬ್ಲಿಕ್ ಟಿವಿಗೆ ಮೊದಲ ಆಧ್ಯತೆ
''ಪಬ್ಲಿಕ್ ಟಿವಿ ನನ್ ಸವಾಲನ್ನ ಮೊದಲು ಸ್ವೀಕರಿಸಿತ್ತು. ಹೀಗಾಗಿ, ನಾನು ಮೊದಲು ಪಬ್ಲಿಕ್ ಟಿವಿಗೆ ಹೋಗುತ್ತೇನೆ. ಈಗ ಊಟ ಮಾಡಿ ಅಲ್ಲಿಗೆ ಹೋಗುತ್ತೇನೆ. ಉಳಿದ ಚಾನಲ್ ಗಳಿಗೆ ಸಮಯ ನಿಗದಿ ಮಾಡೋಣ'' ಅಂತ ಹೇಳಿ ಇಷ್ಟು ದಿನ ಇದ್ದ ಪ್ರಶ್ನೆಗೆ ತೆರೆ ಎಳೆದರು.

ಆದ್ರೆ ಆಗಿದ್ದೇ ಬೇರೆ
'ಪಬ್ಲಿಕ್ ಟಿವಿಗೆ ಹೋಗುತ್ತೀನಿ' ಅಂತ ಕ್ಯಾಮೆರಾಗಳ ಮುಂದೆ ಹೇಳಿ ಹೋಗಿದ್ದ ಯಶ್, ಸಂಜೆ 6 ಗಂಟೆ ಆಗುತ್ತಿದ್ದ ಹಾಗೆ, ಈ ಟಿವಿ ಕನ್ನಡ ಸುದ್ದಿ ವಾಹಿನಿಯಲ್ಲಿ ಸಂಪಾದಕ ರಂಗನಾಥ್ ಭಾರದ್ವಾಜ್ ಅವರ ಜೊತೆ 'ಯಶೋಮಾರ್ಗ- ಸಂತು ಸ್ಟ್ರೈಟ್ ಮಾತು' ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದರು.[ಆ ರಂಗನಾಥ್ ಬಿಟ್ಟು 'ಈ' ರಂಗನಾಥ್ ಜೊತೆ ಕುಳಿತ ನಟ ಯಶ್.! ]


Click it and Unblock the Notifications











