ನಾಲ್ಕು ತಿಂಗಳಲ್ಲಿ ನಾಲ್ಕೇ ಸಲ ಊಟ ಮಾಡಿದ್ರಂತೆ ಅನಿಶ್
ಸ್ಯಾಂಡಲ್ ವುಡ್ ನಾಯಕ ನಟರುಗಳು ತಮ್ಮ ಸಿನಿಮಾದ ವಿಭಿನ್ನ ಸ್ಟೈಲ್ ಗಾಗಿ ದೇಹವನ್ನು ದಂಡಿಸುವ ವಿಚಾರ ನಿಮಗೆ ಗೊತ್ತೇ ಇದೆ. ಇದಕ್ಕೆ ಉತ್ತಮ ನಿದರ್ಶನ ಅಂದರೆ ಯಶ್ ಅವರು 'ಗಜಕೇಸರಿ' ಚಿತ್ರಕ್ಕೆ ದೇಹ ದಂಡಿಸಿದರೆ, ದುನಿಯಾ ವಿಜಿ ಅವರು 'ಕರಿಚಿರತೆ', 'ಜಂಗ್ಲಿ' ಮುಂತಾದ ಚಿತ್ರಗಳಿಗೆ ಸಿಕ್ಸ್ ಪ್ಯಾಕ್ ಮಾಡಿಕೊಂಡರು. ಇನ್ನು ಹಲವಾರು ಕಲಾವಿದರು ಇವರ ಸಾಲಿಗೆ ಸೇರುತ್ತಾರೆ.
ಅಂದಹಾಗೆ ಸಿಕ್ಸ್ ಪ್ಯಾಕ್ ಮಾಡಿಕೊಳ್ಳಲು ಏನೆಲ್ಲಾ ವನವಾಸ ಮಾಡಬೇಕು ಅನ್ನೋದು, ಅದನ್ನು ಮಾಡಿದವರಿಗೆ ಗೊತ್ತು ಬಿಡಿ. ಇನ್ನು ದೇಹ ದಂಡನೆ ಮಾಡಿಕೊಳ್ಳುವವರ ಸಾಲಿಗೆ ಹೊಸ ಸೇರ್ಪಡೆ ನಮ್ಮ ಸ್ಟೈಲಿಷ್ ಹೀರೋ ಅನೀಶ್ ತೇಜೇಶ್ವರ್.[ಅನೀಶ್ ತೇಜಸ್ವರ್ 'ಅಕಿರಾ' ಕುರುಸೋವಾನಾ?]
ಹೌದು 'ಅಕಿರ' ಚಿತ್ರದ ನಾಯಕ ಅನೀಶ್ ತೇಜೇಶ್ವರ್ ಅವರು ಚಿತ್ರದ ಸ್ಟೈಲಿಷ್ ಲುಕ್ ಮತ್ತು ಸ್ಪೆಷಲ್ ಆಗಿ ಕಾಣಿಸಿಕೊಳ್ಳಲು ಬರೋಬ್ಬರಿ 4 ತಿಂಗಳು ಕಠಿಣ ಶ್ರಮಪಟ್ಟು ಸಿಕ್ಸ್ ಪ್ಯಾಕ್ ಮಾಡಿಕೊಂಡಿದ್ದಾರೆ.
ನವೀನ್ ರೆಡ್ಡಿ ಅವರ ಚೊಚ್ಚಲ ನಿರ್ದೇಶನದ 'ಅಕಿರ' ಚಿತ್ರದಲ್ಲಿ ವಿಭಿನ್ನ ಪ್ರೇಮಕಥೆಯಿದ್ದು, 'ಪೊಲೀಸ್ ಕ್ವಾರ್ಟಸ್' ಖ್ಯಾತಿಯ ನಟ ಅನೀಶ್ ತೇಜೇಶ್ವರ್ ಅವರು ಇಬ್ಬರು ನಾಯಕಿಯರೊಂದಿಗೆ ರೋಮ್ಯಾನ್ಸ್ ಮಾಡಿದ್ದಾರೆ. ನಟ ಅನೀಶ್ ಅವರು ಸಿಕ್ಸ್ ಪ್ಯಾಕ್ ಗಾಗಿ ಏನೆಲ್ಲಾ ಕಸರತ್ತು ಮಾಡಿದ್ರು ಅನ್ನೋದನ್ನು ನೋಡಲು ಸ್ಲೈಡ್ಸ್ ಕ್ಲಿಕ್ ಮಾಡಿ..

ನಿಯಮಿತ ಆಹಾರಕ್ಕೆ ಕತ್ತರಿ
'ಅಕಿರ' ಚಿತ್ರದಲ್ಲಿರುವ ರೋಮ್ಯಾನ್ಸ್, ಆಕ್ಷನ್, ಕಾಲೇಜು ಲೈಫ್, ಡ್ಯಾನ್ಸ್ ಇರುವ ಪಾತ್ರಕ್ಕಾಗಿ ಅನೀಶ್ ಅವರು ಭರ್ತಿ 4 ತಿಂಗಳು ನಿಯಮಿತವಾಗಿ ಊಟ ಮಾಡುವುದನ್ನು ಬಿಟ್ಟು ಬರೀ ಹಸಿ ತರಕಾರಿ ಮತ್ತು ಮೀನು ತಿಂದು ಕಠಿಣವಾಗಿ ಡಯಟ್ ಮಾಡಿದ್ದಾರೆ.

ಅನ್ನ ಬಿಟ್ಟ ಅನೀಶ್
'ಅನ್ನ ಮಸಾಲೆ ಅಡುಗೆಯನ್ನು ಬಿಟ್ಟುಬಿಟ್ಟಿದ್ದೆ, ಬರೀ ಸಪ್ಪೆ ಊಟ, ಪುಲ್ಕ, ತರಕಾರಿ ಮೀನು..ಇಷ್ಟು ನನ್ನ ಫುಡ್. ತಿಂಗಳ ಕೊನೆಯ ದಿನ ಮಧ್ಯಾಹ್ನ ಒಂದು ಹೊತ್ತು ಮಾತ್ರ ತಿನ್ನಬೇಕೆನ್ನಿಸಿದ್ದನ್ನೆಲ್ಲಾ ತಿನ್ನುತ್ತಿದೆ. ಆದರೆ ತಿಂದಿದ್ದನ್ನು ಸರಿದೂಗಿಸಲು ಸಂಜೆ ಸುಮಾರು 10 ಕಿ.ಮೀ. ಓಡಬೇಕಾಗುತ್ತಿತ್ತು. ಹೆಚ್ಚು ನಿದ್ರೆ ಮಾಡುತ್ತಿದ್ದೆ. ಅಂತೂ 'ಅಕಿರ' ಶೂಟಿಂಗ್ ಹೊತ್ತಿಗೆ ಸುಮಾರು 13 ಕೆ.ಜಿ ತೂಕ ಇಳಿಸಿಕೊಂಡಿದ್ದೇನೆ ಎನ್ನುತ್ತಾರೆ ಅನೀಶ್.

ಫುಡ್ ಎಂಜಾಯ್ ಮಾಡುತ್ತಿದ್ದಾರೆ ಅನೀಶ್
ಸದ್ಯಕ್ಕೆ ತಿನ್ನೋದು ಬಿಟ್ಟರೆ ಬೇರೆನನ್ನೂ ಯೋಚನೆ ಮಾಡದೆ ಅನೀಶ್ ಅವರು 'ಡಯಟ್ ಮಾಡುವಾಗ ಗೆಳೆಯರು ಬಿರಿಯಾನಿ ತಿನ್ನುತ್ತಿದ್ದರೆ, ನನಗೆ ಆಸೆ ಆಗುತ್ತಿರಲಿಲ್ಲ. ನಾನು ಸೌತೆಕಾಯಿ, ಕ್ಯಾರೆಟ್ ತಿನ್ನುತ್ತಿದ್ದೆ. ಈಗ ಬೆಳಗ್ಗೆ ತಿಂಡಿ ತಿನ್ನುತ್ತಿದ್ದಂತೆ, ಮಧ್ಯಾಹ್ನ ಏನು ಊಟ ಮಾಡೋಣ ಅಂತ ಯೋಚನೆ ಮಾಡ್ತೀನಿ. ಒಟ್ನಲ್ಲಿ ಸಿಕ್ಕಾಪಟ್ಟೆ ಫುಡ್ ಎಂಜಾಯ್ ಮಾಡ್ತೀದ್ದೀನಿ ಅಂತ ನಗುತ್ತಾರೆ ಅನೀಶ್.

25ಕಿ.ಮೀ ಕಾಲ್ನಡಿಗೆ
ವೈಟ್ ಫೀಲ್ಡ್ ನಿಂದ ಬೆಳ್ಳಂ-ಬೆಳಗ್ಗೆ 4 ಘಂಟೆಗೆ ಎದ್ದು ಸುಮಾರು 25 ಕಿ.ಮೀ ದೂರದ ಜಿಮ್ ಸೆಂಟರ್ ಗೆ ಪ್ರತಿದಿನ ಹೋಗುತ್ತಿದ್ದ ಅನೀಶ್ ಅವರು ಬೆಳಗ್ಗೆ ಸಂಜೆ ದಿನಕ್ಕೆ 6 ಘಂಟೆ ವ್ಯಾಯಾಮ ಮಾಡುತ್ತಿದ್ದರು. ಮಿಲಿಟರಿಯಲ್ಲಿ ಮಾಡುವ ವ್ಯಾಯಾಮಗಳನ್ನೂ ಅನೀಶ್ ಮಾಡಿದ್ದಾರೆ.

ಶೂಟಿಂಗ್ ನಲ್ಲಿ ಸಹಾಯಕ್ಕೆ ಬಂದ ಫಿಟ್ನೆಸ್ ಬಾಡಿ
ಇವರ ಫಿಟ್ ಆಗಿರೋ ಬಾಡಿ ಚಿತ್ರದ ಡ್ಯಾನ್ಸ್, ಫೈಟ್ ಶೂಟಿಂಗ್ ಸಂದರ್ಭದಲ್ಲಿ ಬಹಳ ಸಹಾಯಕ್ಕೆ ಬಂತಂತೆ. 'ಫೈಟ್ ದೃಶ್ಯಗಳಲ್ಲಿ ನನ್ನ ದೇಹ ಹಗುರವಾಗಿ ತೇಲಿದಂತೆ ಅನ್ನಿಸುತ್ತಿತ್ತು. ವಿಶ್ವಾಸ ಹೆಚ್ಚಿಸಿತು, ಮೊದಲು ನನ್ನ ಸ್ನೇಹಿತರ ಜೊತೆ ಸುಮ್ಮನೆ ಸುತ್ತುತ್ತಿದ್ದೆ. ಆದರೆ ಇದು ಶಿಸ್ತನ್ನು ಕಲಿಸಿತು. ಸೋಮಾರಿತನ ಹೊರಟು ಹೋಗುತ್ತೆ' ಎಂದು ಅನೀಶ್ ಅಭಿಪ್ರಾಯ ಪಡುತ್ತಾರೆ.

ಛಲದಿಂದ ಇದು ಖಂಡಿತ ಸಾಧ್ಯ
'ಮೊದಲಿನಿಂದಲೂ ಬಾಡಿ ಫಿಟ್ನೆಸ್ ಗಾಗಿ ಜಿಮ್ ಗೆ ಹೋಗುವ ಅಭ್ಯಾಸ ಇತ್ತು. ಆದರೆ ಇಷ್ಟು ಹಾರ್ಡ್ ವರ್ಕ್ ಎಂದೂ ಮಾಡಿರಲಿಲ್ಲ. ಹೊಸ ಗೆಟಪ್ ನಲ್ಲಿ ಕಾಣಿಸಿಕೊಳ್ಳಬೇಕೆಂದು ಸಿಕ್ಸ್ ಪ್ಯಾಕ್ ಬಿಲ್ಡ್ ಮಾಡಿದೆ. ನನ್ನಲ್ಲಿದ್ದ ಛಲದಿಂದ ಇಷ್ಟು ಕಷ್ಟಪಡಲು ಸಾಧ್ಯವಾಯಿತು, ನಾವು ಅಂದುಕೊಂಡರೆ, ಖಂಡಿತ ಇದೆಲ್ಲವೂ ಸಾಧ್ಯ ಎಂದಿದ್ದಾರೆ 'ಅಕಿರ' ಚಿತ್ರದ ನಟ ಅನೀಶ್ ತೇಜೇಶ್ವರ್. ಅಂದಹಾಗೆ ಇವರ ಫಿಟ್ನೆಸ್ ಸೀಕ್ರೆಟ್ ಎಲ್ಲ ಬಹಿರಂಗ ಆಗಿರೋದು ವಿಜಯ ಕರ್ನಾಟಕದಲ್ಲಿ.

ಸದ್ಯದಲ್ಲೇ 'ಅಕಿರ' ಬಿಡುಗಡೆ
ನಟ ಅನೀಶ್ ತೇಜೇಶ್ವರ್ ಹಾಗೂ ನಾಯಕಿಯರಾದ ಅದಿತಿ ರಾವ್ ಮತ್ತು ಕೃಷಿ ತಾಪಂಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ಅಕಿರ' ಚಿತ್ರದ ಹಾಡುಗಳು ಇತ್ತೀಚೆಗೆ ಬಿಡುಗಡೆ ಆಗಿದ್ದು, ಯಶ್ ಅವರು ರಿಲೀಸ್ ಮಾಡಿದ್ದಾರೆ. ಇನ್ನೇನು ಸದ್ಯದಲ್ಲೇ ಸಿನಿಮಾ ಕೂಡ ಬಿಡುಗಡೆ ಆಗಲಿದೆ.


Click it and Unblock the Notifications











