ರೊಚ್ಚಿಗೆದ್ದು "ಇನ್ನೆಷ್ಟು ದಿನ ಈ ಲಾಂಗ್" ಎಂದ ಶಿವಣ್ಣ; ಇಲ್ಲಿದೆ ವೀಡಿಯೋ
ಕನ್ನಡ ಚಿತ್ರರಂಗದಲ್ಲಿ ರೌಡಿಸಂ ಸಿನಿಮಾಗಳಿಗೆ 'ಓಂ'ಕಾರ ಹಾಡಿದ್ದು ಉಪ್ಪಿ ಹಾಗೂ ಶಿವಣ್ಣ. 1995ರಲ್ಲಿ ಬಂದ 'ಓಂ' ಸಿನಿಮಾ ಸಂಚಲನ ಸೃಷ್ಟಿಸಿತ್ತು. ಶಿವರಾಜ್‌ಕುಮಾರ್ ಕೈಗೆ ಲಾಂಗ್ ಕೊಟ್ಟು ಉಪೇಂದ್ರ ಗೆದ್ದಿದ್ದರು. ಬಳಿಕ ಹಲವು ಸಿನಿಮಾಗಳಲ್ಲಿ ಸೆಂಚುರಿ ಸ್ಟಾರ್ ಲಾಂಗ್ ಝಳಪಿಸಿದ್ದಾರೆ.
ಶಿವಣ್ಣನ ಬಳಿಕ ದರ್ಶನ್, ಸುದೀಪ್ ಸೇರಿದಂತೆ ಹಲವರು 'ಲಾಂಗ್' ಹಿಡಿದು ತೆರೆಮೇಲೆ ಕಾಣಿಸಿಕೊಂಡರು. ಆದರೂ ಶಿವಣ್ಣನ ಲಾಂಗ್ ಹಿಡಿದರೆ ಆ ಖದರ್ ಬೇರೆ ಎಂದು ಅಭಿಮಾನಿಗಳು ಹೇಳುತ್ತಿರುತ್ತಾರೆ. ಆದರೆ ದಿಢೀರನೆ ಇನ್ನೆಷ್ಟು ದಿನ ಈ ಲಾಂಗ್ ಎಂದು ಶಿವಣ್ಣ ಹೇಳಿರುವುದು ವೈರಲ್ ಆಗುತ್ತಿದೆ. ಕನ್‌ಫ್ಯೂಸ್ ಆಗಬೇಡಿ ಶಿವಣ್ಣ ಹೀಗೆ ಹೇಳುವುದಕ್ಕೆ ಬೇರೆಯದ್ದೇ ಅರ್ಥವಿದೆ.

ಆರ್‌ಸಿಬಿ ಅನ್‌ಬಾಕ್ಸ್ ಇವೆಂಟ್ ಪ್ರೋಮೋಗಳು ಒಂದೊಂದಾಗಿ ಬಿಡುಗಡೆ ಆಗುತ್ತಿದೆ. ಮೊದಲಿಗೆ ರಿಷಬ್ ಶೆಟ್ಟಿ ಅರ್ಥ ಆಯ್ತಾ? ಎಂದು ಕೇಳಿದ್ದರು. ಬಳಿಕ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಇದೇ ಪ್ರಶ್ನೆ ಮುಂದಿಟ್ಟಿದ್ದರು. ಇದೀಗ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸರದಿ. ಅನ್‌ಬಾಕ್ಸ್ ಇವೆಂಟ್ ಪ್ರೋಮೋಗಳಲ್ಲಿ ಆರ್‌ಸಿಬಿ ಅಭಿಮಾನಿಗಳಿಗೆ ಒಂದು ಸುಳಿವು ಕೊಡುತ್ತಾ ಬರ್ತಿದ್ದಾರೆ.
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಇದೀಗ ಭೈರತಿ ರಣಗಲ್ ಅವತಾರದಲ್ಲಿ ಆರ್‌ಸಿಬಿಗೆ ಸಾಥ್ ಕೊಟ್ಟಿದ್ದಾರೆ. 9 ವರ್ಷಗಳ ಹಿಂದೆಯೇ ಇಂಗ್ಲೀಷ್‌ನಲ್ಲಿ ಬೆಂಗಳೂರು ಎಂದು ಬರೆಯುವುದನ್ನು, ಉಚ್ಛರಿಸುವುದನ್ನು ಬದಲಿಸಲಾಗಿತ್ತು. Bangalore ಬದಲು Bengaluru ಎಂದು ಬಳಸಲಾಗುತ್ತಿದೆ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೆಸರಿನಲ್ಲಿ ಲೋಗೊದಲ್ಲಿ ಇನ್ನು Bangalore ಎನ್ನುವುದು ಮುಂದುವರೆದಿದೆ.
ಕ್ರಿಕೆಟ್ ಪ್ರೇಮಿಗಳು Bangalore ಎನ್ನುವುದನ್ನು Bengaluru ಎಂದು ಬದಲಿಸುವಂತೆ ಮನವಿ ಮಾಡುತ್ತಾ ಬಂದಿದ್ದರು. ಈ ಬಾರಿ ಆರ್‌ಸಿಬಿ ಮಾಲೀಕರು ಇದ್ದಕ್ಕೆ ಒಪ್ಪಿದಂತೆ ಕಾಣುತ್ತಿದೆ. ಅಂತೂ ಇಂತೂ ಇದೀಗ Royal Challengers Bangalore ಎಂದು ಬದಲಿಸಲು ಮುಂದಾಗಿದ್ದಾರೆ. ಆರ್‌ಸಿಬಿ ಅನ್‌ಬಾಕ್ಸ್ ಇವೆಂಟ್‌ನಲ್ಲಿ ಇದು ರಿವೀಲ್ ಆಗಲಿದೆ.
ಸದ್ಯ Royal Challengers Bangalore ಹೆಸರು ಬದಲಿಸುವ ವಿಚಾರವಾಗಿ ಮಾಡಿರುವ ಹೊಸ ಪ್ರೋಮದಲ್ಲಿ ನಟ ಶಿವರಾಜ್‌ಕುಮಾರ್ ಕಾಣಿಸಿಕೊಂಡಿದ್ದಾರೆ. ಕಪ್ಪು ಅಂಗಿ, ಕೆಂಪು ಪಂಚೆ ಉಟ್ಟು ಭೈರತಿ ರಣಗಲ್ ಲುಕ್‌ನಲ್ಲಿ ಖಡಕ್ ಲುಕ್‌ನಲ್ಲಿ ಶಿವಣ್ಣ ಎಂಟ್ರಿ ಕೊಟ್ಟಿದ್ದಾರೆ. ಎದುರಿಗೆ ಟೇಬಲ್ ಮೇಲೆ 3 ಲಾಂಗ್‌ಗಳಿವೆ. ಒಂದರ ಮೇಲೆ Royal, ಮತ್ತೊಂದರ ಮೇಲೆ Challengers ಇನ್ನೊಂದರಲ್ಲಿ Bangalore ಎಂದು ಬರೆಯಲಾಗಿದೆ. ಎರಡು ಲಾಂಗ್ ತೆಗೆದು ಟಾರ್ಗೆಟ್ ಪಾಯಿಂಟ್ ಕಡೆ ಎಸೆದಿದ್ದಾರೆ.
ಕೊನೆಗೆ Bangalore ಎಂದು ಬರೆದ ಲಾಂಗ್ ನೋಡಿ ಶಿವಣ್ಣ How long.. This Long ಎಂದಿದ್ದಾರೆ. ಬಳಿಕ ಅರ್ಥ ಆಯ್ತಾ? ಎಂದು ತಮ್ಮ ಖಡಕ್ ವಾಯ್ಸ್ ಹೇಳಿರುವುದನ್ನು ಪ್ರೋಮೊದಲ್ಲಿ ನೋಡಬಹುದು. ಸದ್ಯ ಶಿವಣ್ಣನ ಈ ಆರ್‌ಸಿಬಿ ಅನ್‌ಬಾಕ್ಸ್ ಪ್ರೋಮೊ ಸಖತ್ ವೈರಲ್ ಆಗುತ್ತಿದೆ. ಶಿವಣ್ಣನ ಸ್ವಾಗ್ ನೋಡಿದ ಅಭಿಮಾನಿಗಳಂತೂ ಫಿದಾ ಆಗಿದ್ದಾರೆ. ಇನ್ನು ಪ್ರಚಾರಕ್ಕಾಗಿ ಸ್ಟಾರ್ ನಟರನ್ನು ಬಳಸಿಕೊಳ್ಳುತ್ತಿರುವುದಕ್ಕೆ ಆರ್‌ಸಿಬಿ ತಂಡದ ಬಗ್ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಈ ಹಿಂದೆ ಪುನೀತ್ ರಾಜ್‌ಕುಮಾರ್ ಹಾಗೂ ಶಿವರಾಜ್‌ಕುಮಾರ್ ಆರ್‌ಸಿಬಿ ತಂಡದ ರಾಯಭಾರಿಗಳಾಗಿದ್ದರು. ಈ ಬಾರಿ ಮಾರ್ಚ್ 22ರಿಂದ ಮೇ 26ರ ವರೆಗೆ ಐಪಿಎಲ್ ಟೂರ್ನಿ ನಡೆಯಲಿದೆ. ಮಾರ್ಚ್ 19ಕ್ಕೆ ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್‌ಗೆ ವೇದಿಕೆ ಸಜ್ಜಾಗಿದೆ.


Click it and Unblock the Notifications











