"ನನ್ನ ಪ್ರೀತಿಯ ಸೆಲೆಬ್ರಿಟೀಸ್'' ಟ್ಯಾಟೂ ಬೆಲೆ ಎಷ್ಟು? ಕೇಳಿದ್ದಕ್ಕಿಂತ 3 ಪಟ್ಟು ಹಣ ಕೊಟ್ರಾ ದರ್ಶನ್?
ಮೂರ್ನಾಲ್ಕು ದಿನಗಳಿಂದ ನಟ ದರ್ಶನ್ ಎದೆ ಮೇಲಿರುವ ಟ್ಯಾಟೂ ಬಗ್ಗೆ ಭಾರೀ ಚರ್ಚೆ ಆಗ್ತಿದೆ. ಅದಕ್ಕೆ ಕಾರಣ ಇತ್ತೀಚೆಗೆ ರಿಲೀಸ್ ಆಗಿದ್ದ ಚಾಲೆಂಜಿಂಗ್ ಸ್ಟಾರ್ ವರ್ಕೌಟ್ ವಿಡಿಯೋ. ಟ್ಯಾಟೂ ಹಾಕಿಸಿಕೊಳ್ಳುವುದಕ್ಕೂ ಮುನ್ನ ಶೂಟ್ ಮಾಡಿದ್ದ ಕಾರಣ ಅದರಲ್ಲಿ ದರ್ಶನ್ ಎದೆ ಮೇಲೆ ಟ್ಯಾಟೂ ಕಾಣಿಸುತ್ತಿಲ್ಲ. ಅದಕ್ಕೆ ಕೆಲವರು ಟ್ಯಾಟೂ ನಕಲಿ ಎಂದು ಹೇಳಿದ್ದರು.
ಸಾಕ್ಷಿ ಸಮೇತ ದರ್ಶನ್ ಅಭಿಮಾನಿಗಳು ಅನುಮಾನ ಪಟ್ಟವರಿಗೆ ಸ್ಪಷ್ಟನೆ ನೀಡಿದ್ದರು. ವಿಡಿಯೋ ಶೂಟ್ ಮಾಡಿದ್ದ ದಿನ ಕೋಚ್ ಜೊತೆ ಹಿಡಿಸಿಕೊಂಡಿದ್ದ ಫೋಟೊ ಬಹಳ ಹಿಂದೆ ಪೋಸ್ಟ್ ಆಗಿದ್ದು ಅದು ಟೆಂಪರರಿ ಟ್ಯಾಟೂ ಅಲ್ಲ ಪರ್ಮನೆಂಟ್ ಟ್ಯಾಟೂ ಅಂತ ಟ್ಯಾಟೂ ಹಾಕಿದ್ದವರೇ ಹೇಳಿದ್ದ ವಿಡಿಯೋ ತೋರಿಸಿ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದರು. ದರ್ಶನ್ ಬಹಳ ಪ್ರೀತಿಯಿಂದ ತಮ್ಮ ಸೆಲೆಬ್ರಿಟಿಗಳು ಸದಾ ನನ್ನ ಎದೆಯಲ್ಲಿ ಇದ್ದಾರೆ, ಇರ್ತಾರೆ. ಜೀವನ ಪರ್ಯಂತ ಈ ಟ್ಯಾಟೂ ನನ್ನೊಟ್ಟಿಗೆ ಇರಬೇಕು ಎಂದು ಹೇಳಿ ಅದನ್ನು ಹಾಕಿಸಿಕೊಂಡಿದ್ದರಂತೆ.

ಲಂಡನ್‌ನಿಂದ ತರಿಸಿರುವ ಇಂಕ್ ಬಳಸಿ "ನನ್ನ ಪ್ರೀತಿಯ ಸೆಲೆಬ್ರೀಟಿಸ್" ಎನ್ನುವ ಟ್ಯಾಟೂವನ್ನು ಬ್ರಹ್ಮ ಟ್ಯಾಟೂ ಸ್ಟುಡಿಯೋ ಆರ್ಟಿಸ್ಟ್ ಗಿರೀಶ್ ಹಾಕಿದ್ದಾರೆ. ಸಾಮಾನ್ಯವಾಗಿ ಇಂತಹ ಟ್ಯಾಟೂ ಹಾಕಲು 10ರಿಂದ 15 ನಿಮಿಷ ಸಮಯ ತೆಗೆದುಕೊಳ್ಳುತ್ತಾರಂತೆ. ಆದರೆ ದರ್ಶನ್ ಅವರಿಗೆ ಹಾಕಲು ಮುಕ್ಕಾಲು ಗಂಟೆ ವ್ಯಯಿಸಿದರಂತೆ. ಬಹಳ ಮುತುವರ್ಜಿ ವಹಿಸಿ, ಈ ಟ್ಯಾಟು ಹಾಕಿದ್ದಾಗಿ ಈ ಹಿಂದೆ ಯೂಟ್ಯೂಬ್ ಸಂದರ್ಶನದಲ್ಲಿ ಗಿರೀಶ್ ಹೇಳಿದ್ದರು. 3 ತಿಂಗಳಿನಿಂದ ಇಂತಾದೊಂದು ಟ್ಯಾಟೂ ಹಾಕಿಸಿಕೊಳ್ಳಬೇಕು ಎಂದು ನಟ ದರ್ಶನ್ ನಿರ್ಧರಿಸಿದ್ದರಂತೆ.
ಟ್ಯಾಟೂ ಹೇಗಿರಬೇಕು, ಡಿಸೈನ್, ಕಾನ್ಸೆಪ್ಟ್ ಎಲ್ಲವೂ ದರ್ಶನ್ ಅವರದ್ದೇ ಆಗಿದ್ದಂತೆ. ವಿಭಿನ್ನ ಫಾಂಟ್‌ಗಳ ಡಿಸೈನ್ ಹುಡುಕಾಡಿದ್ದರಂತೆ. ಕೊನೆಗೆ ಟ್ಯಾಟೂ ಆರ್ಟಿಸ್ಟ್ ಗಿರೀಶ್ ಮಾಡಿದ್ದ ಫಾಂಟ್ ಒಪ್ಪಿ ಅದನ್ನೇ ಎದೆ ಮೇಲೆ ಹಾಕಿಸಿಕೊಂಡಿದ್ದಾರೆ. ದರ್ಶನ್ ಅವರು ಟ್ಯಾಟೂ ಹಾಕಿಸಿಕೊಂಡ ಮೇಲೆ ಅಭಿಮಾನಿಗಳು ಫೋನ್ ಮಾಡಿ ನಮಗೋಸ್ಕರ ಟ್ಯಾಟೂ ಹಾಕಿಸಿಕೊಂಡ್ರಾ? ಅವರಿಗೆ ಎಷ್ಟು ನೋವಾಯ್ತೋ ಎಂದು ಫೋನ್ ಅಳುತ್ತಿದ್ದರು ಎಂದು ಗಿರೀಶ್ ಹೇಳಿದ್ದಾರೆ. ದರ್ಶನ್ ಬ್ರಹ್ಮ ಟ್ಯಾಟೂ ಸ್ಟುಡಿಯೋದಲ್ಲಿ ಟ್ಯಾಟೂ ಹಾಕಿಸಿಕೊಂಡ ಮೇಲೆ ಸಾಕಷ್ಟು ಜನ ಅಭಿಮಾನಿಗಳು ಅಲ್ಲೇ ಬಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ಇನ್ನು ದರ್ಶನ್ ಅವರು ಹಾಕಿಸಿಕೊಂಡಿರುವ "ನನ್ನ ಪ್ರೀತಿಯ ಸೆಲೆಬ್ರೀಟಿಸ್" ಟ್ಯಾಟೂ ಬೆಲೆ ಎಷ್ಟು? ದರ್ಶನ್ ಎಷ್ಟು ಕೊಟ್ಟರು ಎನ್ನುವ ಪ್ರಶ್ನೆಗೆ ಗಿರೀಶ್ ನಿಖರವಾದ ಉತ್ತರ ಕೊಟ್ಟಿಲ್ಲ. ಮೊದಲಿಗೆ ನಾನು ಯಾವುದೇ ಹಣ ಬೇಡ ಎಂದು ಹೇಳಿದ್ವಿ. ಆದರೆ ಅವ್ರು ಕೇಳಲಿಲ್ಲ. ಕೊನೆಗೆ ನಾವು ಒಂದು ಮೊತ್ತ ಹೇಳಿದ್ವಿ ಅದಕ್ಕಿಂತ 3 ಪಟ್ಟು ಹೆಚ್ಚು ಹಣ ಕೊಟ್ಟು ಹೋದರು ಎಂದಿದ್ದಾರೆ. ಆದರೆ ದರ್ಶನ್ ಅವರ ರೀತಿ, ಅಥವಾ ಅಷ್ಟು ದೊಡ್ಡ ಟ್ಯಾಟೂ ಹಾಕಿಸಿಕೊಳ್ಳಲು ನಾವು 1500 ರೂನಿಂದ 2000 ರೂ. ಚಾರ್ಜ್ ಮಾಡುತ್ತೇವೆ ಎಂದಿದ್ದಾರೆ. ಅದರ ಅರ್ಥ ದರ್ಶನ್ ಅವರು ಆ ಟ್ಯಾಟೂಗಾಗಿ 6ರಿಂದ 7 ಸಾವಿರ ರೂ. ಹಣ ಕೊಟ್ಟಿದ್ದಾರೆ ಎಂದು ಕೆಲವರು ಅಂದಾಜಿಸಿದ್ದಾರೆ.
'ಕ್ರಾಂತಿ' ನಂತರ ದರ್ಶನ್ 'ಕಾಟೇರ' ಚಿತ್ರದಲ್ಲಿ ನಟಿಸ್ತಿದ್ದಾರೆ. ತರುಣ್ ಸುಧೀರ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ಬಹಳ ವಿಭಿನ್ನವಾದ ಲುಕ್‌ನಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. 70 ದಶಕದ ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ಕಟ್ಟಿಕೊಡಲಾಗ್ತಿದೆ. ರಾಧನಾ ರಾಮ್ ನಾಯಕಿಯಾಗಿ ನಟಿಸ್ತಿದ್ದು ಜಗಪತಿ ಬಾಬು ಮುಖ್ಯಭೂಮಿಕೆಯಲ್ಲಿದ್ದಾರೆ. ರಾಕ್‌ಲೈನ್ ವೆಂಕಟೇಶ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಶೂಟಿಂಗ್‌ನಿಂದ ಕೊಂಚ ಬಿಡುವು ಮಾಡಿಕೊಂಡು ತಮ್ಮ ಆಪ್ತರ ಪರ ದರ್ಶನ್ ಚುನಾವಣೆ ಪ್ರಚಾರದಲ್ಲಿ ಭಾಗಿ ಆಗಿದ್ದಾರೆ.


Click it and Unblock the Notifications











