»   » ಹೃತಿಕ್‌ ವಿರುದ್ಧ ಜಾಗತಿಕ ಪಿತೂರಿ?

ಹೃತಿಕ್‌ ವಿರುದ್ಧ ಜಾಗತಿಕ ಪಿತೂರಿ?

Posted By: Staff
Subscribe to Filmibeat Kannada

ಕಣ್ಣು ಮಿಟುಕಿಸುವಷ್ಟರಲ್ಲಿ ಯಶಸ್ಸಿನ ಉತ್ತುಂಗಕ್ಕೇರಿ, ಗಾಸಿಪ್‌ಗಳ ಅಲೆಯಲ್ಲಿ ತೇಲಿ ಲೇಟಾಗಿ ಮದುವೆಯಾಗೋ ಸಿನಿಮಾ ಸಂಪ್ರದಾಯವನ್ನೂ ಮುರಿದ ನೀಲಿ ಕಂಗಳ ಬಾಲಿವುಡ್‌ ಚೆಲುವ ಹೃತಿಕ್‌ ರೋಷನ್‌ ಮತ್ತೀಗ ವಿವಾದದ ಸುಳಿಯಲ್ಲಿ...

ಹೃತಿಕ್‌ ತಮ್ಮ ದೇಶದ ಬಗೆಗೆ ವಿರೋಧಿ ಹೇಳಿಕೆ ಕೊಟ್ಟರೆಂಬ ಕಾರಣ ಒಡ್ಡಿ ನೇಪಾಳದಲ್ಲಿ ಧ್ವಂಸ ನಡೆದ ಘಟನೆ ಇನ್ನೂ ಬೂದಿಯಾಗುವ ಮುನ್ನವೇ ದಕ್ಷಿಣ ಆಫ್ರಿಕದಲ್ಲಿ ಹೃತಿಕ್‌ ಕಾಂಟ್ರಾವರ್ಸಿ ತಲೆ ಎತ್ತಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಸ್ಥಳೀಯ ವಾರ ಪತ್ರಿಕೆಯಾಂದರ ಮೂಲಕ ತಮ್ಮ ಪಕ್ಷಕ್ಕೇ ಮತ ಕೊಡಿ ಅಂತ ಹೃತಿಕ್‌ ಪೋಸ್ಟರೊಂದನ್ನು ಅಚ್ಚು ಹಾಕಿಸಿ ಡೆಮಾಕ್ರಟಿಕ್‌ ಒಕ್ಕೂಟ (ಡಿಎ) ಪ್ರಚಾರ ಮಾಡಿತ್ತು. ದಕ್ಷಿಣ ಆಫ್ರಿಕದಲ್ಲಿನ ಭಾರತೀಯ ಸಮುದಾಯದ ಮತ ಗಿಟ್ಟಿಸುವ ಹೊಸ ತಂತ್ರ ಇದಾಗಿತ್ತು.

ಆದರೆ ಹೃತಿಕ್‌ ಅನುಮತಿಯೇ ಇಲ್ಲದೆ ಆತನ ಚಿತ್ರವನ್ನು ಪುಕ್ಕಟೆ ಪ್ರಚಾರದ ಸರಕಾಗಿಸಿಕೊಂಡ ಡಿಎ ಹಾಗೂ ಪತ್ರಿಕೆಗೆ ರಾಕೇಶ್‌ ರೋಷನ್‌ ಕೆಂಡಾಮಂಡಲಾಗಿ ಪತ್ರ ಬರೆದರು. ಈ ಬಗೆಗೆ ಪತ್ರಿಕೆ ಕ್ಷಮೆ ಕೇಳಬೇಕೆಂದರು. ಪತ್ರಿಕೆ ಎರಡು ಸಾಲು ಬರೆದು ಕ್ಷಮೆ ಕೇಳಿ, ಕೈತೊಳೆದುಕೊಂಡು ಬಿಟ್ಟಿತು.

ಆಡಳಿತ ಪಕ್ಷ ಆಫ್ರಿಕನ್‌ ನ್ಯಾಷನಲ್‌ ಕಾಂಗ್ರೆಸ್‌, ವಿರೋಧ ಪಕ್ಷ ಡಿಎದ ಕೀಳು ಮಟ್ಟದ ಪ್ರಚಾರ ತಂತ್ರಕ್ಕೆ ಕ್ರುದ್ಧವಾಗಿದೆ. ಇಷ್ಟಕ್ಕೆಲ್ಲಾ ಕಾರಣವಾಗಿರುವ ಹೃತಿಕ್‌ (ಪೋಸ್ಟರ್‌) ಮೇಲೆ ಪಕ್ಷ ಕಿಡಿ ಕಾರುತ್ತಿದ್ದು, ದೇಶದಲ್ಲೇ ಆತನ ಚಿತ್ರಗಳ ಪ್ರದರ್ಶನ ರದ್ದು ಪಡಿಸುವ ಕುರಿತು ಗಂಭೀರವಾಗಿ ಯೋಚಿಸುತ್ತಿದೆ. ಈ ಬಗ್ಗೆ ರಾಕೇಶ್‌ ರೋಷನ್‌ಗೂ ಪತ್ರ ಬರೆದಿದೆ. ರಾಕೇಶ್‌ ರೋಷನ್‌ ಉತ್ತರ ಕೊಟ್ಟಿದ್ದು, ಪಕ್ಷದ ಪ್ರತಿನಿಧಿಗಳನ್ನು ಮುಂಬಯಿಗೆ ಕರೆದಿದ್ದಾರೆ.

ಯಶಸ್ಸು - ಕೀರ್ತಿಯನ್ನು ಎರಡೂ ಕೈಲಿ ಬಾಚಿಕೊಂಡಿರುವ ಹಾರ್ಟ್‌ಥ್ರೋಬ್‌ ಹೃತಿಕ್‌ಗೆ ಅದೇ ಮಾರಕವಾಗಿದೆ. ಮೊನ್ನೆ ನೆಮ್ಮದಿಯಾಗಿ ಹನಿಮೂನ್‌ ಆಚರಿಸಲು ಬಿಡದ ನೇಪಾಳ ಮಂದಿ, ಈಗ ಕೆರಿಯರ್ರಿಗೇ ಕತ್ತಿ ಬೀಸಲು ಹೊರಟಿರುವ ದಕ್ಷಿಣ ಆಫ್ರಿಕ ರಾಜಕಾರಣಿಗಳು. ಬಾಲಿವುಡ್‌ ನಿರ್ಮಾಪಕ ಮಹೇಶ್‌ ಭಟ್‌, ಇದೊಂದು ಬೃಹತ್‌ ಪ್ರಮಾಣದ ವ್ಯವಸ್ಥಿತ ಪಿತೂರಿ ಎಂದಿದ್ದಾರೆ.

ಹೃತಿಕ್‌ ಹೀಗಂತಾರೆ... : ನಾನೊಬ್ಬ ನಟ, ಸಾಮಾನ್ಯ ಮನುಷ್ಯ. ಇಲ್ಲ ಸಲ್ಲದ ಕೆಲಸಗಳಿಗೆ ನನ್ನ ಹೆಸರನ್ನೂ ಉಪಯೋಗಿಸಿಕೊಳ್ಳುತ್ತಾರೆ ಅನ್ನೋದು ನೇಪಾಳ ಹಾಗೂ ದಕ್ಷಿಣ ಆಫ್ರಿಕ ಘಟನೆಗಳಿಂದ ಗೊತ್ತಾಗಿದೆ. ಅದಕ್ಕೆ ಮುಂಚೆ ಯಾರದೋ ತೀಟೆಗೆ ನನ್ನ ಹೆಸರನ್ನು ಬಳಸಿಕೊಳ್ಳಬಹುದು ಎಂದು ಊಹಿಸಿರಲೂ ಇಲ್ಲ. ಇನ್ನು ಮುಂದೆ ನನ್ನ ಮೈಯೆಲ್ಲಾ ಕಣ್ಣಾಗಿರುತ್ತದೆ.

ನಟ ಏನೇ ಉತ್ತಮ ಅಭಿನಯ ನೀಡಲಿ, ಜನ ಅವನನ್ನು ತೀರಾ ಉಪ್ಪರಿಗೆಗೆ ಏರಿಸಕೂಡದು. ನಾನು ಹಣದ ಬಗೆಗೆ ತಲೆಕೆಡಿಸಿಕೊಂಡವನೇ ಅಲ್ಲ. ಸುಭಾಷ್‌ ಘಾಯ್‌, ಯಶ್‌ ಚೋಪ್ರ ಅಂಥಾ ದಿಗ್ಗಜ ದಿಗ್ದರ್ಶಕರಿಗೆ ಸೈನ್‌ ಮಾಡಿದ್ದೇನೆ. ಈ ನಿರ್ದೇಶಕರ ಪಾಳಯದಲ್ಲಿ ಪಳಗೋದೇ ಒಳ್ಳೆ ಅವಕಾಶ. ಜತೆಗೆ ಇಂಥಾ ನಿರ್ದೇಶಕರ ಸಿನಿಮಾಗಳಿಗೆ ನನಗೇನೂ ಸಿಕ್ಕಾಪಟ್ಟೆ ಸಂಭಾವನೆ ಕೊಡೋದಿಲ್ಲ. 2002ರ ಇಸವಿವರೆಗೂ ನನ್ನ ಕೆಲಸ ಈ ನಿರ್ದೇಶಕರ ಜತೆಯಲ್ಲಿ . ಟಿವಿ ಚಾನೆಲ್ಲೊಂದರ ಗೇಮ್‌ ಶೋ ನಡೆಸಿಕೊಡೋಕೆ 50 ಕೋಟಿ ರುಪಾಯಿಗಳ ಆಫರ್‌ ಬಂದಿತ್ತು. ನಾನು ಊಹ್ಞೂಂ ಅಂದುಬಿಟ್ಟೆ. ಸಿನಿಮಾ ಕೆರಿಯರ್ರೇ ನನಗೆ ಮುಖ್ಯ.

ಹಾಗಂತ ಜನರ ಗೊಡವೆಯೇ ಬೇಡ ಎಂದೇನಲ್ಲ. ನನ್ನ ಹೆಸರನ್ನು ದೇಶ ಹಾಳು ಮಾಡೋಕೆ ಬಳಸಿಕೊಳ್ಳುವರಲ್ಲ ಅನ್ನೋದಕ್ಕೆ ಬೇಸರ ಅಷ್ಟೆ. ಬರುವ ಫೆಬ್ರವರಿ 3ರಂದು ದೆಹಲಿಯಲ್ಲೊಂದು ಲೈವ್‌ ಶೋ ಕೊಡಲಿದ್ದೇನೆ. ಜನ ನನ್ನ ಕಲೆ ಮೆಚ್ಚಿದರೆ ಸಂತೋಷ. ಹೆಸರು ಕೆಡಿಸಿದರೆ ನನ್ನ ಬಗೆಗೆ ನನಗೇ ಬೇಸರ.

English summary
Larger conspiracy agaist hrithik roshan?
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada