»   » ಝಗಝಗ ವೇದಿಕೆ ಮೇಲೆ ಶನಿವಾರ ಹೃತಿಕ್‌ ಲೈವ್‌ ಶೋ

ಝಗಝಗ ವೇದಿಕೆ ಮೇಲೆ ಶನಿವಾರ ಹೃತಿಕ್‌ ಲೈವ್‌ ಶೋ

Posted By: Staff
Subscribe to Filmibeat Kannada

ನವದೆಹಲಿ : ಬಾಲಿವುಡ್‌ ಹಾರ್ಟ್‌ಥ್ರೋಬ್‌ ಹೃತಿಕ್‌ ರೋಷನ್‌ ಎರಡು ಫಿಲ್ಮ್‌ಫೇರ್‌ ಪ್ರಶಸ್ತಿಗಳನ್ನು ಬುಟ್ಟಿಗೆ ಹಾಕಿಕೊಂಡ ಗಳಿಗೆ ಹಸುರಾಗಿರುವಾಗಲೇ ಭಾರತದ ರಾಜಧಾನಿ ಇನ್ನೊಂದು ದೊಡ್ಡ ಮನರಂಜನೆಗೆ ಸಜ್ಜಾಗುತ್ತಿದೆ. ಫೆಬ್ರವರಿ 3ರಂದೇ ನಡೆಯಬೇಕಿದ್ದ 'ಹೃತಿಕ್‌ ಲೈವ್‌- ದಿ ರೋಷನ್‌ ಶೋ" ಈ ಶನಿವಾರ (ಫೆ.24) ರಾತ್ರಿ ನಡೆಯಲಿದೆ.

ಈ ಸಮಾರಂಭಕ್ಕೆ ಸುರಿದಿರುವ ಹಣ ಎಷ್ಟು ಗೊತ್ತೆ ? ಬರೋಬ್ಬರಿ 2 ಕೋಟಿ ರುಪಾಯಿ. ಇದರಲ್ಲಿ ಪ್ರತಿಶತ 80ರಷ್ಟು ಹಣ ಕೋಕಾ ಕೋಲ, ಪಾಸ್‌ ಪಾಸ್‌ ಮೌತ್‌ ಫ್ರೆಷನರ್‌, ಮಾರುತಿ ಕಾರು ಕಂಪನಿ, ಓಸಿಯಾ ಇಟಾಲಿಯಾ ಹಾಗೂ ಮಾಸ್ಟರ್‌ ಕಾರ್ಡ್‌ ಹರಿಸಿವೆ. ಐಟಿ ಕಂಪನಿಗಳಾದ ಮೈಕ್ರೋಸಾಫ್ಟ್‌, ಕಾಂಪ್ಯಾಕ್‌ ಇನ್ನುಳಿದ ಶೇ. 20ರಷ್ಟು ಹಣ ಸುರಿದಿವೆ.

ನಲವತ್ತು ಅಡಿ ಎತ್ತರದ ಸುಮಾರು 10 ಸಾವಿರ ಚದರ ಅಡಿ ಅಳತೆಯ ವೇದಿಕೆ. ರಂಗಿಗೆ 800 ಕಿಲೋವ್ಯಾಟ್‌ನ ಅಸಂಖ್ಯ ತೂಗುದೀಪಗಳು. 70 ಸಾವಿರ ವ್ಯಾಟ್‌ ಸುತ್ತುವರಿ ಶಕ್ತಿಯ ಧ್ವನಿವರ್ಧಕಗಳು. ವೇದಿಕೆಯಿಂದ ದೂರ ಕೂರುವ ಪ್ರೇಕ್ಷಕರಿಗೆ ತ್ರಾಸಾಗದಿರಲೆಂದು ಕಾರ್ಯಕ್ರಮ ತೋರಲು ಮೂರು ದೊಡ್ಡ ಪರದೆಗಳು. ವೇದಿಕೆ ಮೇಲೆ ಹೃತಿಕ್‌ ನಡೆಸಲಿರುವ ಪ್ರದರ್ಶನಕ್ಕೆ ಒಂದು ಕ್ರೇನು. ಇನ್ನೂ ಏನೇನೋ. ಗುರುವಾರವಂತೂ ಕಾರ್ಯಕ್ರಮದ ಸಂಯೋಜನಾ ನಿರ್ವಾಹಕ ಸಮಿತ್‌ ಗಾರ್ಗ್‌ ಬೆವರಿನಿಂದ ತೊಯ್ದು ಹೋಗಿದ್ದರು.

ಎರಡೂವರೆ ಗಂಟೆಯ ಈ ಕಾರ್ಯಕ್ರಮದಲ್ಲಿ ಹೃತಿಕ್‌ 45 ನಿಮಿಷಗಳ ಕಾಲ ವೇದಿಕೆ ಮೇಲಿರುತ್ತಾರೆ. ಸ್ಪೋರ್ಟ್ಸ್‌ ಕಾರೊಂದರ ಮೇಲೆ ಬ್ಯಾಟ್‌ಮನ್‌ ವೇಷದಲ್ಲಿ ಎಂಟ್ರಿ ಕೊಡಲಿರುವ ಅವರು ಆ ಕಾರಿನಲ್ಲೇ ಒಂದು ಸಾಹಸ ಕೂಡ ತೋರಲಿದ್ದಾರೆ. ಅದೇನೆಂದು ಕೇಳಿದರೆ, ಗಾರ್ಗ್‌ ಇಟ್ಸ್‌ ಎ ಸೀಕ್ರೇಟ್‌ ಅನ್ನುತ್ತಾರೆ.

ಇಂಥ ಒಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಹೃತಿಕ್‌ ಭಾಗವಹಿಸುತ್ತಿರುವುದು ಇದು ಎರಡನೇ ಬಾರಿ. ಕಳೆದ ವರ್ಷ ಕೋಲ್ಕತಾದ ಸಾಲ್ಟ್‌ ಲೇಕ್‌ ಕ್ರೀಡಾಂಗಣದಲ್ಲಿ ಈತ ಕೇವಲ 15 ನಿಮಿಷ ವೇದಿಕೆ ಹತ್ತಿದ್ದರು. ಆದರೆ ಈತನ ಪ್ರದರ್ಶನ ನೋಡಲೆಂದು ನೆರೆದಿದ್ದ ಅಭಿಮಾನಿಗಳ ಸಂಖ್ಯೆ ಹತ್ತಿ ಹತ್ತಿರ ಒಂದೂವರೆ ಲಕ್ಷ. ಅಭಿಮಾನಿಗಳನ್ನು ನಿಯಂತ್ರಿಸಲು ಹೋದ ಪೊಲೀಸರ ದೊಣ್ಣೆಗಳೇ ಮುರಿದಿದ್ದವು.

ಬಿಗಿ ಪೊಲೀಸ್‌ ಪಹರೆ : ಈಗ ಗಾರ್ಗ್‌ ಅವರಿಗೆ ಎಲ್ಲವೂ ಸವಾಲು. ಪ್ರಸ್ತುತ ಹೃತಿಕ್‌ ಆತಂಕದ, ತೊಂದರೆಗಳ ಸುಳಿಗೆ ಸಿಕ್ಕಿರುವ ಸ್ಟಾರ್‌. ಈತನ ವಿರುದ್ಧ ಜಾಗತಿಕ ಪಿತೂರಿ ಇರಬಹುದೆಂಬ ಗುಮಾನಿ ಬಗ್ಗೆ ನೀವೆಲ್ಲಾ ಓದಿಕೊಂಡಿರುವಿರಿ. ಈ ಕಾರಣ ಜವಾಹರಲಾಲ್‌ ಕ್ರೀಡಾಂಗಣದಲ್ಲಿ ಈಗಿನಿಂದಲೇ ಪೊಲೀಸರು ಗಸ್ತು ಹೊಡೆಯಲು ಶುರುವಿಟ್ಟಿದ್ದಾರೆ. ಪಾರ್ಕಿಂಗ್‌ ವ್ಯವಸ್ಥೆ ಹಾಗೂ ಪೊಲೀಸರ ಕೊರತೆಯ ಕಾರಣಕ್ಕೇ ಫೆಬ್ರವರಿ 3ರಂದು ನಡೆಯಬೇಕಿದ್ದ ಕಾರ್ಯಕ್ರಮವನ್ನು ಮುಂದೂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಹೃತಿಕ್‌ ಜೊತೆ ಯಾರ್ಯಾರು? : ಶನಿವಾರ ಜವಾಹರಲಾಲ್‌ ನೆಹರು ಕ್ರೀಡಾಂಗಣದಲ್ಲಿ ನೆರೆಯಲಿರುವ ಸುಮಾರು 60 ಸಾವಿರ ಸಿನಿ ಅಭಿಮಾನಿಗಳಿಗೆ ಹೃತಿಕ್‌ ರಸದೌತಣ. ಹೃತಿಕ್‌ ಜೊತೆ ಆತನ ತಂದೆ, ನಿರ್ದೇಶಕ ರಾಕೇಶ್‌ ರೋಷನ್‌, ದೊಡ್ಡಪ್ಪ ಕಂ ಸಂಗೀತ ನಿರ್ದೇಶಕ ರಾಜೇಶ್‌ ರೋಷನ್‌, ಗಾಯಕ ಉದಿತ್‌ ನಾರಾಯಣ್‌, ಗಾಯಕಿ ಅಲ್ಕಾ ಯಾಜ್ಞಿಕ್‌, ನಟಿಯರಾದ ಶಿಲ್ಪ ಶಿರೋಡ್ಕರ್‌ ಹಾಗೂ ಅಮಿಷಾ ಪಟೇಲ್‌ ವೇದಿಕೆ ಹತ್ತಲಿದ್ದಾರೆ. ಗಾಯಕರಾದ ಬಾಬುಲ್‌ ಸುಪ್ರಿಯಾ ಹಾಗೂ ಮೊಹಮ್ಮದ್‌ ಸಲಾಮತ್‌ ಕೂಡ ಗಾನಸುಧೆ ಹರಿಸಲಿದ್ದಾರೆ.

ಕಳೆದ ವಾರ ವೈರಲ್‌ ಜ್ವರದಿಂದ ಬಳಲಿದ್ದ ರೋಷನ್‌ ಈಗ ಸುಧಾರಿಸಿದ್ದಾರೆ. ಕಾರ್ಯಕ್ರಮಕ್ಕೆ ತಾಲೀಮು ನಡೆಸುತ್ತಿದ್ದಾರೆ. ಇಷ್ಟೆಲ್ಲಾ ಖರ್ಚು ಮಾಡಿ ಸಮಾರಂಭ ನಡೆಸುತ್ತಿರುವುದರ ಒಳ್ಳೆ ಅಂಶವೆಂದರೆ, ಅದರಿಂದ ಸಂಪಾದನೆಯಾಗುವ ಹಣದ ಕೆಲಪಾಲನ್ನು ಗುಜರಾತ್‌ ಸಂತ್ರಸ್ತರ ಪರಿಹಾರಕ್ಕೆ ಕೊಡುವುದು. ಈ ಕಾರಣಕ್ಕೇ ಹೃತಿಕ್‌ ತಮ್ಮ ಜ್ವರದ ಸಬೂಬು ಕೊಟ್ಟು ಕಾರ್ಯಕ್ರಮ ಮುಂದೂಡಿಲ್ಲ. ಇದು ಆಯೋಜಕರಿಗೂ ಖುಷಿ ತಂದಿದೆ. ರಿkುೕ ಟೀವಿ ಈ ಕಾರ್ಯಕ್ರಮದ ನೇರ ಪ್ರಸಾರ ಮಾಡಲಿದೆ. ಮನೆಯಲ್ಲೇ ಕೂತು ನೋಡಬಹುದು.

English summary
Hrithik roshan live show at new delhi on feb. 23, 2001

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada