»   » ಬೆಂಗಳೂರಿನಲ್ಲಿ ಹೃತಿಕ್‌ ರೋಷನ್‌ ಮದುವೆ...

ಬೆಂಗಳೂರಿನಲ್ಲಿ ಹೃತಿಕ್‌ ರೋಷನ್‌ ಮದುವೆ...

Posted By: Super
Subscribe to Filmibeat Kannada

ಬೆಂಗಳೂರು : ಬಾಲಿವುಡ್‌ನ ಧ್ರುವತಾರೆ ಹೃತಿಕ್‌ ರೋಷನ್‌ ಈ ಹೊತ್ತು ಬೆಂಗಳೂರಿನಲ್ಲಿದ್ದಾರೆ. ಚಿತ್ರದ ಷೂಟಿಂಗ್‌ ಒಂದರಲ್ಲಿ ಪಾಲ್ಗೊಳ್ಳಲು ಹೃತಿಕ್‌ ಬೆಂಗಳೂರಿಗೆ ಬಂದಿರುವ ಸುದ್ದಿಯ ಬೆನ್ನಲ್ಲೇ ಅವರ ಮದುವೆಯ ದಿನಾಂಕದ ಸುದ್ದಿಯೂ ಹೊರಬಿದ್ದಿದೆ.

ಹದಿಹರೆಯದ ಹುಡುಗಿಯರ ನಿದ್ದೆಗೆಡಿಸಿರುವ ನೀಳಕಾಯದ ಈ ಹೃತಿಕ್‌ ಮದುವೆ ಎಂದು ಎಂಬ ಪ್ರಶ್ನೆಗೆ ಬಹುತೇಕ ಉತ್ತರ ಸಿಕ್ಕಂತಾಗಿದೆ. ಇಂದು ಡಿಸೆಂಬರ್‌ 5. ಇನ್ನು 15 ದಿನ ಅಂದರೆ, ಡಿಸೆಂಬರ್‌ 20ರೊಳಗೆ ಹೃತಿಕ್‌ ತಮ್ಮ ದೀರ್ಘಕಾಲದ ಗೆಳತಿ ಸೂಜನ್‌ ಖಾನ್‌ರೊಂದಿಗೆ ವಿವಾಹ ಬಂಧನ ಬೆಸೆಯಲಿದ್ದಾರೆ.

ಹೃತಿಕ್‌ ಮದುವೆಗೆ ಉಳಿದಿರುವುದು ಇನ್ನು ಹದಿನೈದೇ ದಿನ ಎಂಬ ಸುದ್ದಿ ಕೇಳಿ, ಹೃತಿಕ್‌ ಅಭಿಮಾನಿ ಹೆಂಗೆಳೆಯರು ನಿದ್ದೆಗೆಟ್ಟು, ಊಟ ಬಿಟ್ಟಿದ್ದಾರೆ. ಅಂದಹಾಗೆ ಮತ್ತೊಂದು ಆಶ್ಚರ್ಯಕರ ಸುದ್ದಿ ಇದೆ. ಈ ಹಿಂದೆ ಇಂಗ್ಲೆಂಡ್‌ನಲ್ಲಿ, ಆನಂತರ ಮುಂಬೈನಲ್ಲಿ, ಇಲ್ಲ ಇಲ್ಲ ಕಲ್ಕತ್ತಾದಲ್ಲಿ ಎಂಬಿತ್ಯಾದಿ ಸುದ್ದಿಗಳೆಲ್ಲಾ ಈಗ ವೈಡ್‌ ಆಗಿದ್ದು, ಮಿಡ್ಲ್‌ ಸಂಪ್‌ ಮೇಲೆ ಬರುತ್ತಿರುವ ಬಾಲಿನಂತೆ ಎರಗಿರುವ ಸುದ್ದಿಯ ರೀತ್ಯ ಹೃತಿಕ್‌ ಬೆಂಗಳೂರಿನಲ್ಲೇ ಮದುವೆಯಾಗುತ್ತಿದ್ದಾರೆ.

ಬಾಲ್‌ ಏನೋ ವಿಕೆಟ್‌ಗೆ ಬಡಿದಿದೆ ಆದರೆ, ಬೌಲ್ಡ್‌ ಆಗಿರುವುದು (ಸೂಜನ್‌ಗೆ) ಹೃತಿಕ್ಕೋ ಅಥವಾ ಹೃತಿಕ್‌ ಕನಸು ಕಾಣುತ್ತಿದ್ದ ಅಸಂಖ್ಯಾತ ಹದಿಹರೆಯದವರೋ ಎಂಬುದು ಮಾತ್ರ ಒಗಟಾಗೆ ಉಳಿದಿದೆ. ಈ ಮಧ್ಯೆ ಬೆಂಗಳೂರಿನಲ್ಲಿ ಮದುವೆ ಮಾಡಿಕೊಳ್ಳುವ ಮುನ್ನ ಹೃತಿಕ್‌ ಆರತಕ್ಷತೆ ಅರ್ಥಾತ್‌ ರಿಸೆಪ್ಷನ್‌ ಕಮ್‌ ಗ್ರ್ಯಾಂಡ್‌ ಪಾರ್ಟಿ ಹೃತಿಕ್‌ನ ವರಿಸಲಿರುವ ಭಾಗ್ಯಶಾಲಿ ಸೂಜನ್‌ಳ ದೊಡ್ಡಪ್ಪ ಫಿರೋಜ್‌ ಖಾನ್‌ ತೋಟದ ಮನೆಯಲ್ಲಿ ನಡೆಯಲಿದೆ ಎನ್ನುತ್ತಿವೆ ವಿಶ್ವಸನೀಯ ವರದಿಗಳು.

ಮದುವೆ ಎಲ್ಲಿ ?: ಆರತಕ್ಷತೆ ಮಾತು ಹಾಗಿರಲಿ ಈಗ ಮೂಲಭೂತವಾದ ಪ್ರಶ್ನೆ ಮದುವೆ ಎಲ್ಲಿ ಎಂಬುದು. ಅದಕ್ಕೂ ಹೆಚ್ಚು ಕಮ್ಮಿ ಉತ್ತರ ಸಿಕ್ಕಿದೆ. ಸೂಜನ್‌ ತಂದೆ ಸಂಜಯ್‌ ಖಾನ್‌ ಅವರು ಕಟ್ಟಿಸಿರುವ ಇನ್ನೂ ಸಾರ್ವಜನಿಕ ಪ್ರವೇಶಕ್ಕೆ ಬಾಗಿಲು ತೆರೆಯದ ಹೊಚ್ಚ ಹೊಸ ರಿಸಾರ್ಟ್‌ನಲ್ಲಿ ಮದುವೆ ಜರುಗಲಿದೆ.

ಮದುವೆ ಆರತಕ್ಷತೆ ಮುಗಿದ ಮೇಲೆ ಮುಂದಿನದು..... ಹನಿಮೂನ್‌ ತಾನೆ. ಇನ್ನು ಈ ಭಾವಿ ದಂಪತಿಗಳ ಹನಿಮೂನ್‌ ಬಗ್ಗೆಯೂ ಕುತೂಹಲ ಕೆರಳಿದೆ. ಕೆಲವರು ಅದಕ್ಕೆ ಉತ್ತರವನ್ನೂ ಹುಡುಕಿದ್ದಾರೆ. ಬಹುತೇಕ ಡಿಸೆಂಬರ್‌ 20ರ ನಂತರ ಹೃತಿಕ್‌ ಷೂಟಿಂಗ್‌ ಸಲುವಾಗಿ ಆಸ್ಟ್ರೇಲಿಯಾಕ್ಕೆ ಹಾರುತ್ತಿದ್ದು, ಸೂಜಿ - ಹೃತಿಕ್‌ ಮಧುಚಂದ್ರ ಆಸ್ಟ್ರೇಲಿಯಾದಲ್ಲೇ ನಡೆಯಲಿದೆಯಂತೆ.

ಮೂಲತಃ ವೃತ್ತಿ ನಿರತ ಇಂಟೀರಿಯರ್‌ ಡಿಸೈನರ್‌ ಆಗಿರುವ ಸೂಜನ್‌ ಲಾಸ್‌ ಏಂಜಲೀಸ್‌ನಲ್ಲಿ ಪದವಿ ಪಡೆದ ಪ್ರತಿಭಾವಂತೆ. ಹೃತಿಕ್‌ನ ಬಾಲ್ಯದ ಗೆಳತಿಯೂ ಆದ ಸೂಜಿ ಅಂತೂ ಹೃತಿಕ್‌ನ ಹೃದಯ ಗೆದ್ದು, ಆತನ ಹೃದಯ ಸಿಂಹಾಸನಾಧೀಶ್ವರಿಯಾಗಲಿದ್ದಾಳೆ. ಈ ಸುದ್ದಿ ಕೇಳಿ ಬಾಲಿವುಡ್‌ನ ಚಿತ್ರ ನಿರ್ಮಾಪಕರು ಹೌಹಾರಿದ್ದಾರೆ. ಮದುವೆಯ ನಂತರ ಹೃತಿಕ್‌ ತಾರಾಮೌಲ್ಯಕ್ಕೆ ಪೆಟ್ಟು ಬಿದ್ದರೂ ಬೀಳಬಹುದೆಂಬ ಚಿಂತೆ ಬಾಲಿವುಡ್‌ನ ನಿದ್ದೆ ಕೆಡಿಸಿದೆ.

ಮೇಲು ನೋಟಕ್ಕೆ ಬಾಲಿವುಡ್‌ ಪಂಡಿತರು, ಹೃತಿಕ್‌ ಮದುವೆಯಾದ ಮಾತ್ರಕ್ಕೆ ಅವರ ಇಮೇಜ್‌ ಕಡಿಮೆ ಆಗುವುದಿಲ್ಲ ಎಂದು ಶಾರೂಖ್‌ ಖಾನ್‌ ಉದಾಹರಣೆ ನೀಡಿ ಬಹಿರಂಗ ಹೇಳಿಕೆ ನೀಡುತ್ತಿದ್ದಾರಾದರೂ, ಆಪ್ತರ ಬಳಿ, ತಮ್ಮ ಅಳಲು ತೋಡಿಕೊಳ್ಳುತ್ತಲೇ ಇದ್ದಾರೆ.

English summary
Hrithic the latest heart throb to tie knots with sooji in Bangalore

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada