»   » ಸುಲಘ್ನಾ ಸಾವಧಾನ ಹೃತಿಕ್‌ ಮದುವೆ ನಿಧಾನ

ಸುಲಘ್ನಾ ಸಾವಧಾನ ಹೃತಿಕ್‌ ಮದುವೆ ನಿಧಾನ

Posted By: Staff
Subscribe to Filmibeat Kannada

ಬೆಂಗಳೂರು : ಎಲ್ಲಾ ಅಂದುಕೊಂಡ ಹಾಗೆ ಜರುಗಿದ್ದರೆ ಡಿಸೆಂಬರ್‌ 20 ರಂದು ಹೃತಿಕ್‌ ಹಾಗೂ ಸೂಸನ್‌ ಹಾರ ಬದಲಿಸಿಕೊಳ್ಳಬೇಕಿತ್ತು . ಆದರೆ, ಮುಹೂರ್ತ ಮುಂದಕ್ಕೆ ಹೋಗಿದೆ. ಹೊಸ ತಾರಾಬಲದ ದಿನಾಂಕ ಜನವರಿ 15 ರಂದು. ದಿನ ಬದಲಾಗಿದ್ದರೂ ಮದುವೆ ನಡೆಯುವ ಊರು ಬದಲಾಗಿಲ್ಲ . ಹಾಗಾಗಿ ಬೆಂಗಳೂರಿನ ಹೃತಿಕ್‌ ಅಭಿಮಾನಿಗಳು ತೀರಾ ಬೇಜಾರು ಪಟ್ಟುಕೊಳ್ಳಬೇಕಾಗಿಲ್ಲ .

ಡಿಸೆಂಬರ್‌ನಿಂದ ಜನವರಿಗೆ ಮದುವೆ ಮುಂದೆ ಹೋಗಲು ಅನೇಕ ಕಾರಣಗಳನ್ನು ನೀಡಲಾಗುತ್ತಿದೆ. ಅವುಗಳಲ್ಲಿ ಗಟ್ಟಿಯಾಗಿ ಕೇಳಬರುತ್ತಿರುವುದು ಮದುವೆ ನಡೆಯಬೇಕಾಗಿರುವ ವಿಧಿ ವಿಧಾನ ಕುರಿತದ್ದು . ವಧುವಿನ ಅಪ್ಪ ಸಂಜಯ್‌ಖಾನ್‌ ಮುಸ್ಲಿಂ, ಅಮ್ಮ ಜರೀನಾ ಪಾರ್ಸಿ. ಹಿಂದೂ ಧರ್ಮಕ್ಕೆ ಸೇರಿರುವ ವರ ಹೃತಿಕ್‌ನ ಕುಟುಂಬ ಮದುವೆ ಹಿಂದೂ ವಿಧಿ ವಿಧಾನ ಅನುಸಾರವೇ ನಡೆಯಬೇಕೆಂದು ಇಷ್ಟಪಟ್ಟಿದೆಯಂತೆ. ಪರಿಣಾಮ ಮದುವೆ ಮುಂದಕ್ಕೆ.

ಮದುವೆ ಮುಂದಕ್ಕೆ ಹೋಗಿರುವುದನ್ನು ಕುಟುಂಬದ ಮೂಲಗಳೂ ದೃಢಪಡಿಸಿವೆ. ಹೃತಿಕ್‌ನ ಅಪ್ಪ ರಾಕೇಶ್‌ ರೋಷನ್‌ ಅವರಿಗೆ ಭೂಗತ ಜಗತ್ತಿನಿಂದ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಪೋಲೀಸ್‌ ರಕ್ಷಣೆ ಕೋರಲಾಗುತ್ತದಂತೆ. ಹೃತಿಕ್‌ನ ಕಹೋ ನಾ ಪ್ಯಾರ್‌ ಹೈ ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ರಾಕೇಶ್‌ ಅವರ ಮೇಲೆ ಕಿಡಿಗೇಡಿಗಳು ವಿಫಲ ದಾಳಿ ನಡೆಸಿದ್ದರ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕೆ. ಕರ್ನಾಟಕ ಪೊಲೀಸರು ಕೂಡ ಮದುವೆ ಸಂದರ್ಭದಲ್ಲಿ ಸೂಕ್ತ ರಕ್ಷಣೆ ಒದಗಿಸುವ ಪ್ರಯತ್ನದಲ್ಲಿದ್ದಾರೆ. ಒಟ್ಟಿನಲ್ಲಿ ಬಂದೋಬಸ್ತ್‌ ವ್ಯವಸ್ಥೆ ಕೂಡ ಮದುವೆ ಮುಂದೆ ಹೋಗಲು ಕಾರಣಗಳಲ್ಲೊಂದಾಗಿ ಚಾಲ್ತಿಯಲ್ಲಿದೆ.

ಇಳಿದು ಬರಲಿದೆ ಇಳೆಗೆ ಇಂದ್ರನಮರಾವತಿ

ಸೂಸನ್‌ ಅವರ ಅಪ್ಪ ಸಂಜಯ್‌ಖಾನ್‌ (ಟೀವಿ ಮೆಗಾ ಸೀರಿಯಲ್‌ ದಿ ಸೋರ್ಡ್‌ ಆಫ್‌ ಟಿಪ್ಪು ಸುಲ್ತಾನ್‌ ನಿರ್ಮಾಪಕ) ಮದುವೆಯ ಸಿದ್ಧತೆಗಾಗಿ ಶನಿವಾರ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಮದುವೆ ನಡೆಯುವುದು ಬೆಂಗಳೂರು- ಪುಣೆ ಹೆದ್ದಾರಿಯಲ್ಲಿರುವ ಅವರ ಎಸ್ಟೇಟ್‌ನಲ್ಲಿ .

ಮದುವೆಯ ಉತ್ಸವ ಮೂರು ದಿನಗಳ ಕಾಲ ನಡೆಯುತ್ತದೆಂದು ನಿರೀಕ್ಷಿಸಲಾಗಿದೆ. ಹಿಂದೂ, ಮುಸ್ಲಿಂ ಹಾಗೂ ಪಾರ್ಸಿ ಮೂರೂ ಧರ್ಮಗಳ ಸಂಪ್ರದಾಯಗಳಿಗೂ ಉತ್ಸವದಲ್ಲಿ ಸ್ಥಾನವಿದೆ. ಮೆಹಂದಿ ಉತ್ಸವವು ಸಂಜಯ್‌ ಸೋದರ ಫಿರೋಜ್‌ಖಾನ್‌ರ ಫಾರ್ಮ್‌ಹೌಸ್‌ನಲ್ಲಿ ನಡೆಯುವುದು. ಮೊದಲಿಗೆ ಅಂದುಕೊಂಡಿದ್ದಂತೆ ಮದುವೆಯ ನಂತರ ಮುಂಬಯಿಯಲ್ಲಿ ದೊಡ್ಡ ಪಾರ್ಟಿ ನೀಡುವ ಯೋಜನೆಗೀಗ ಕೊಕ್‌ ನೀಡಿದ್ದು, ಎಲ್ಲಾ ಆಚರಣೆಗಳೂ ಬೆಂಗಳೂರಲ್ಲೇ ನಡೆಯಲಿವೆ. ಅದರೆ ಮದುವೆಗೆ ಭಾರೀ ವೈಭವದ ಲೇಪವಿರುವುದೀಗ ಖಚಿತ. ಸಂಜಯ್‌ರ ನಿಕಟ ಸಂಬಂಧಿಯಾಬ್ಬರ ಪ್ರಕಾರ, ಅತಿಥಿಗಳನ್ನು ಮುಂಬಯಿಯಿಂದ ಬೆಂಗಳೂರಿಗೆ ಕರೆತರಲು ವಿಮಾನವೊಂದನ್ನು ಗೊತ್ತುಪಡಿಸಲಾಗಿದೆ.

ಹೆಚ್ಚೂ ಕಮ್ಮಿ ಅದ್ದೂರಿ ಸಿನಿಮಾ ಮಾದರಿಯಲ್ಲಿ ಮದುವೆ ನಡೆಯುತ್ತದೆ. ಬಾಲಿವುಡ್‌ ಪ್ರಮುಖರಾದ ರಾಜೇಶ್‌ ಖನ್ನ, ದಿಲೀಪ್‌ ಕುಮಾರ್‌ ಮುಂತಾದವರು ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ. ಸೂಸನ್‌ ಹಾಗೂ ಹೃತಿಕ್‌ ರೋಷನ್‌ರ ಮದುವೆ ಮಂಟಪ ಸ್ವರ್ಗದಿಂದಿಳಿದು ಬಂದಿರುವಷ್ಟು ವೈಭವವಾಗಿರುತ್ತದೆ. ಇಡೀ ಉತ್ಸವವನ್ನು ಸಿನಿಮಾ ಕ್ಯಾಮರಾಗಳು ಸೆರೆ ಹಿಡಿಯಲಿವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

(ಐಎಎನ್‌ಎಸ್‌)

ಶಾಲಾ ದಿನಗಳಿಂದಲೂ ಪ್ರೇಮ ಬಂಧನಕ್ಕೆ ಒಳಗಾಗಿರುವ ಹೃತಿಕ್‌ ಹಾಗೂ ಸೂಸನ್‌ರ ಸಂಬಂಧಕ್ಕೆ ಮದುವೆಯ ಮುದ್ರೆ ಬೀಳುವ ದಿನಾಂಕ ಮುಂದೆ ಹೋಗಿದೆ. ಆದರೆ, ಇದರಿಂದಾಗಿ ಮದುವೆಯ ಗತ್ತು ಮತ್ತಷ್ಟು ಹೆಚ್ಚುತ್ತದೆ ಅನ್ನುವುದು ಗಮನಾರ್ಹ.

ಶಿವ ಕುಮಾರ್‌ಮುಂಬಯಿ ವರದಿ : ಹೃತಿಕ್‌ ಕುಟುಂಬಕ್ಕೆ ಬಿಗಿ ಭದ್ರತೆ
ಭೂಗತ ಜಗತ್ತಿನ ದಾಳಿಯ ಬೆದರಿಕೆಯ ಹಿನ್ನೆಲೆಯಲ್ಲಿ ಹೃತಿಕ್‌ ರೋಷನ್‌ ಹಾಗೂ ಅವರ ಅಪ್ಪ ರಾಖೇಶ್‌ ರೋಷನ್‌ ಅವರಿಗೆ ಮುಂಬಯಿ ಪೊಲೀಸರು ಬಿಗಿ ರಕ್ಷಣೆ ಒದಗಿಸಿದ್ದಾರೆ. ಮತ್ತೊಬ್ಬ ಸಿನಿಮಾ ನಿರ್ದೇಶಕ ನಜೀಂ ರಿಜ್ವಿ ಅವರ ದೂರವಾಣಿ ಆಲಿಕೆಯ ಸಮಯದಲ್ಲಿ , ಆತ ಭೂಗತ ಜಗತ್ತಿನ ಪ್ರಮುಖ ಛೋಟಾ ಶಕೀಲ್‌ ಆದೇಶದಂತೆ ರಾಕೇಶ್‌ ರೋಷನ್‌ ಅವರ ಕೊಲೆಗೆ ಯೋಜನೆ ರೂಪಿಸಿದ್ದು ಪೊಲೀಸರಿಗೆ ಗೊತ್ತಾಗಿತ್ತು .

ಬುಧವಾರ ತಾನೇ ಭೂಗತ ಲೋಕದ ಸಂಪರ್ಕದ ಆರೋಪದ ಮೇಲೆ ಪೊಲೀಸರು ರಿಜ್ವಿ ಅವರನ್ನು ಬಂಧಿಸಿದ್ದಾರೆ. ಅವರ ಇತ್ತೀಚಿನ ಚಿತ್ರ ಚೋರಿ ಚೋರಿ ಚುಪ್ಕೆ ಚುಪ್ಕೆ ಗೆ ಕಪ್ಪು ಹಣ ಒದಗಿಸಿದ ಆರೋಪವೂ ಅವರ ಮೇಲಿದೆ.

ತಾನು ಫೈನಾನ್ಸ್‌ ಮಾಡುವ ಚಿತ್ರದಲ್ಲಿ ಅಭಿನಯಿಸದಿದ್ದರೆ ಪ್ರಾಣಕ್ಕೆ ಅಪಾಯ ಖಂಡಿತ ಎಂದು ಹೃತಿಕ್‌ಗೆ ಬೆದರಿಕೆ ಒಡ್ಡುವಂತೆ ಶಕೀಲ್‌, ರಿಜ್ವಿಗೆ ತಿಳಿಸಿದ್ದು ಅವರಿಬ್ಬರು ಅಕ್ಟೋಬರ್‌ 28 ರಂದು ನಡೆಸಿದ ದೂರವಾಣಿ ಮಾತುಕತೆಯ ಮುದ್ರಿಕೆಯಲ್ಲಿ ಬೆಳಕಿಗೆ ಬಂದಿದೆ. ದೂರವಾಣಿಯಲ್ಲಿ ಹೃತಿಕ್‌ನನ್ನು ಚಿಕ್‌ನ (ಸುಂದರಾಕಾರ) ಎಂದೂ, ರಾಕೇಶ್‌ ರೋಷನ್‌ರನ್ನು ಟಕ್ಲ (ಬೋಳು ತಲೆಯವ) ಎಂದು ಸಂಕೇತ ಭಾಷೆಯಲ್ಲಿ ಶಕೀಲ್‌ ಹೆಸರಿಸಿದ್ದಾನೆ. ಹೃತಿಕ್‌ನನ್ನು ಭೇಟಿಯಾಗುವಂತೆ ರಿಜ್ವಿಗೆ ತಿಳಿಸಿರುವ ಶಕೀಲ್‌, ತನ್ನ ಮಾತನ್ನು ತಿರಸ್ಕರಿಸಿದರೆ, ಪ್ರಾಣಹಾನಿಗೆ ತಾನು ಜವಾಬ್ದಾರನಲ್ಲ ಎಂದು ಎಚ್ಚರಿಸುವಂತೆ ಸೂಚಿಸಿದ್ದಾನೆ.

English summary
Security beefed up for Hrithik Roshan and family

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada