»   » ಸೂರಜ್‌ ಬಾರ್ಜಾತ್ಯ ಚಿತ್ರದಲ್ಲಿ ಹೃತಿಕ್‌

ಸೂರಜ್‌ ಬಾರ್ಜಾತ್ಯ ಚಿತ್ರದಲ್ಲಿ ಹೃತಿಕ್‌

Posted By: Super
Subscribe to Filmibeat Kannada

ಘಾಯ್‌, ಸೂರಜ್‌ರಂಥ ಗೆಲ್ಲುವ ಕುದುರೆಗಳು ಹೃತಿಕ್‌ಗೆ ಒಲಿದಿದ್ದಾರೆಂದರೆ, ಹಿಂದಿ ಚಿತ್ರರಂಗದ ನಂಬರ್‌ ಒನ್‌ ಪಟ್ಟಕ್ಕೆ ಅವರಿಗಿನ್ನು ಕೆಲವೇ ಮೆಟ್ಟಿಲು* ಸುಭಾಷ್‌ ಕೆ. ಝಾ

ಮುಂಬೈ : ಎಲೈಟ್‌ ಕುಟುಂಬಗಳಲ್ಲಿನ ಪ್ರೀತಿ, ಮದುವೆ, ಪಿಕ್‌ನಿಕ್‌ಗಳನ್ನೇ ವಸ್ತುವಾಗಿಟ್ಟುಕೊಂಡು ನಗಿಸಿ, ಅಳಿಸಿ, ಕುಂತರೆ ನಿಂತರೆ ಹಾಡುಗಳ ಸುಧೆ ಹರಿಸಿ ಹಿಂದಿ ಚಿತ್ರರಂಗದಲ್ಲೇ ಗಳಿಕೆಯಲ್ಲಿ ಇತಿಹಾಸ ನಿರ್ಮಿಸಿದ ನಿರ್ದೇಶಕ ಸೂರಜ್‌ ಬಾರ್ಜಾತ್ಯ ಹೊಸ ತ್ರಿಕೋನ ಪ್ರೇಮ ಚಿತ್ರವನ್ನು ಬರುವ ವರ್ಷ ತೆರೆಗೆ ತರಲಿದ್ದಾರೆ.

ತಮ್ಮ ಮೊದಲ ಚಿತ್ರ 'ಮೈನೆ ಪ್ಯಾರ್‌ ಕಿಯಾ" ಮೂಲಕ ಯುವಕರಿಗೆ ಬೇಕಾದದ್ದೆಲ್ಲವನ್ನೂ ಕೊಟ್ಟ ಬಾರ್ಜಾತ್ಯ 'ಹಮ್‌ ಆಪ್‌ ಕೆ.. " ಚಿತ್ರಿಸಿ ಮನೆಮಂದಿಯನ್ನೆಲ್ಲಾ ಥಿಯೇಟರಿಗೆ ಎಳೆತಂದರು. ಕಳೆದ ವರ್ಷ ಬಿಡುಗಡೆಯಾದ 'ಹಮ್‌ ಸಾಥ್‌ ಸಾಥ್‌ ಹೈ" ಕೂಡ 'ಹಮ್‌ ಆಪ್‌ ಕೆ..." ನೆನಪಿಸುವಂತಿತ್ತು ಅಂತ ಜನ ಮಾತಾಡಿಕೊಂಡರು. ಚಿತ್ರ ಜನರಲ್ಲಿ ಹಮ್‌ ಸಾಥ್‌ನಷ್ಟು ಹುಚ್ಚು ಹಿಡಿಸಲಿಲ್ಲ. ಬಾರ್ಜಾತ್ಯ ಅಂದರೆ ಮದುವೆಗಳ ಚಿತ್ರ ಅಂತ ಜನ ಬ್ರಾಂಡ್‌ ಮಾಡಿಬಿಟ್ಟರು. ಈಗ ಬಾರ್ಜಾತ್ಯ ತಮ್ಮ ಸಂಪ್ರದಾಯ ಮುರಿದು ತ್ರಿಕೋನ ಪ್ರೇಮ ಚಿತ್ರ ನೀಡಲು ಹೊರಟಿದ್ದಾರೆ.

ಬಿಗ್‌ ಬಿ ಮಗ ಅಭಿಷೇಕ್‌ ಬಚ್ಚನ್‌ ಮತ್ತು ಕರೀನಾ ಕಪೂರ್‌ ಕೆಲ ದಿನಗಳ ಹಿಂದೆಯೇ ಈ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಇನ್ನೊಂದು ಪಾತ್ರಕ್ಕೆ ಸೂರಜ್‌ ಈವರೆಗೆ ಬಿಟ್ಟಿರದ ಸಲ್ಮಾನ್‌ ಖಾನ್‌ ಅವರೇ ಖಾಯಂ ಅನ್ನುವ ಎಲ್ಲರ ಲೆಕ್ಕಾಚಾರಗಳನ್ನೂ ಹುಸಿಯಾಗಿಸಿ, ಹೃತಿಕ್‌ ರೋಷನ್‌ ಅವರನ್ನು ಆರಿಸಿದ್ದಾರೆ. ಇದಕ್ಕೆ ಹೃತಿಕ್‌ ಒಪ್ಪಿದ್ದಾರೆ ಕೂಡ.

ಸಲ್ಮಾನ್‌- ಸೂರಜ್‌ ಗಳಸ್ಯ ಕಂಠಸ್ಯ. ತಮ್ಮ ಯಾವುದೇ ಚಿತ್ರಕ್ಕೂ ಸೂರಜ್‌, ಸಲ್ಮಾನ್‌ ಕೈ ಬಿಟ್ಟಿರಲಿಲ್ಲ. ಆದರೆ ಹಮ್‌ ಸಾಥ್‌ ಚಿತ್ರೀಕರಣದ ವೇಳೆ ಇಬ್ಬರ ನಡುವೆ ಯಾವುದೋ ವಿಷಯಕ್ಕೆ ಇರುಸು ಮುರುಸು ಶುರುವಾಯಿತು. ಈ ಕಾರಣದಿಂದಲೇ ಖಾನ್‌ಗೆ ಕೊಕ್‌ ನೀಡಿ, ರೋಷನ್‌ಗೆ ಚೆಕ್‌ ನೀಡಲು ಬಾರ್ಜಾತ್ಯ ಮುಂದಾದರು.

ತನ್ನಪ್ಪನ ಉಪಸ್ಥಿತಿಯಲ್ಲಿ ಚಿತ್ರದ ಕಥೆ ಕೇಳಿದ ಹೃತಿಕ್‌ ಮರು ದಿನವೇ ನಟಿಸಲು ಒಪ್ಪಿಗೆ ಸೂಚಿಸಿ ಬಿಟ್ಟಿದ್ದಾರೆ. ಹೃತಿಕ್‌ ಮೇಲೊಂದು ಒಳಗೊಂದು ಜಾತಿಗೆ ಸೇರಿದವರಲ್ಲ. ಪ್ರಾಮಾಣಿಕ. ಕೆಲಸದಲ್ಲಿ ಶ್ರದ್ಧೆಯಿದೆ, ಶೂಟಿಂಗ್‌ಗೆ ಕೈಕೊಡುವ ಜಾಯಮಾನದವರಲ್ಲ ಎಂದು ಅವರ ಬಗೆಗೆ ಕೇಳಿ ಬರುತ್ತಿರುವ ಮಾತುಗಳು ಅಕ್ಷರಶಃ ಸತ್ಯ. ನನ್ನ ಆಫರ್‌ ವಿಷಯದಲ್ಲಿ ಅವರು ನಡೆದುಕೊಂಡಿರುವ ರೀತಿ ಇದನ್ನು ಸಾಬೀತುಪಡಿಸಿದೆ ಎನ್ನುತ್ತಾರೆ ಸೂರಜ್‌.

'ನಾನು ಆಕೆಯಿಂದ ಅಭಿನಯ ಕಲಿಯುತ್ತಿದ್ದೇನೆ...."

ಪ್ರಸ್ತುತ ಸುಭಾಷ್‌ ಘಾಯ್‌ ನಿರ್ದೇಶನದ ಕರೀನ ಕಪೂರ್‌ ಜೋಡಿಯ 'ಯಾದೇ" ಚಿತ್ರೀಕರಣದಲ್ಲಿ ವ್ಯಸ್ತರಾಗಿರುವ ಹೃತಿಕ್‌ಗೆ ಬಾರ್ಜಾತ್ಯ ಚಿತ್ರದಲ್ಲೂ ಕರೀನಾರೇ ಜೋಡಿಯಾಗಲಿದ್ದಾರೆ. 'ನೀವು ರೆಪ್ಯೂಜಿಯಲ್ಲಿ ಆಕೆಯನ್ನು ಮೆಚ್ಚಿದ್ದರೆ ಅದಷ್ಟೇ ಆಕೆಯ ಸಾಮರ್ಥ್ಯವೇನಲ್ಲ. ಪಟಪಟನೆ ಮಾತಾಡುತ್ತಾ, ಹರಟೆ ಕೊಚ್ಚುತ್ತಾ, ಗುಳುಗುಳು ನಗುವ ಅವರು ಮರು ಕ್ಷಣದಲ್ಲೇ ಕ್ಯಾಮೆರಾಗೆ ಮುಖ ಮಾಡಿ ಗಳಗಳನೆ ಅಳುವ ಸನ್ನಿವೇಶದಲ್ಲೂ ಮಿಂಚುತ್ತಾರೆ. ನಾನು ಆಕೆಯಿಂದ ಅಭಿನಯ ಕಲಿಯುತ್ತಿದ್ದೇನೆ" ಎಂದು ಹೃತಿಕ್‌ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ.

'ಮಿಷನ್‌ ಕಾಶ್ಮೀರ್‌ ಚಿತ್ರದಲ್ಲಿ ಅತ್ಯುತ್ತಮ ಅಭಿನಯ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೆ. ಕೆಲವು ಸನ್ನಿವೇಶಗಳು ನನಗೆ ಸಂಪೂರ್ಣ ತೃಪ್ತಿ ತರಲಿಲ್ಲ. ಕಹೋನ ಪ್ಯಾರ್‌ ಹೈ ಹಾಗೂ ಫಿಜಾ ಚಿತ್ರಗಳ ಅಭಿನಯವನ್ನು ಪ್ರಶಂಸಿರುವ ಜನರಿಂದ ನಾನು ಇನ್ನೂ ಉತ್ತಮ ನಟ ಅನ್ನಿಸಿಕೊಳ್ಳಬೇಕೆಂಬುದು ನನ್ನ ಕನಸು. ನಾನಿನ್ನೂ ಕಲಿಯುವುದು ಸಾಕಷ್ಟಿದೆ" ಎನ್ನುವ ಹೃತಿಕ್‌ ಮಾತುಗಳು, ಅವರು ಅಲ್ಪತೃಪ್ತರಲ್ಲ ಎಂಬುದನ್ನು ದೃಢಪಡಿಸುತ್ತವೆ.

ಘಾಯ್‌, ಸೂರಜ್‌ರಂಥ ಗೆಲ್ಲುವ ಕುದುರೆಗಳು ಹೃತಿಕ್‌ಗೆ ಒಲಿದಿದ್ದಾರೆಂದರೆ, ಹಿಂದಿ ಚಿತ್ರರಂಗದ ನಂಬರ್‌ ಒನ್‌ ಪಟ್ಟಕ್ಕೆ ಅವರೀಗ ಕೆಲವೇ ಮೆಟ್ಟಿಲು. ಆ್ಯಡ್‌ನಿಂದ ಹಿಡಿದು ಫ್ಯಾನ್‌ಗಳವರೆಗೆ ಶಾರುಖ್‌ ಖಾನ್‌ರಿಂದ ಖ್ಯಾತಿಯನ್ನು ಕಿತ್ತುಕೊಳ್ಳುತ್ತಾ ಬಂದಿರುವ ಹೃತಿಕ್‌ ಜೊತೆ ಈಗ ಖುದ್ದು ಖಾನ್‌ ನಟಿಸುತ್ತಾರಂತೆ. ಇದು ಬಾಲಿವುಡ್‌ನ ತಾಜಾ ಖಬರ್‌. ಈ ಚಿತ್ರದ ನಿರ್ದೇಶಕ ಯಾರು ಗೊತ್ತೆ ? ಕುಚ್‌..ಕುಚ್‌ ಖ್ಯಾತಿಯ ಕರಣ್‌ ಜೋಹರ್‌.
(ಐಎಎನ್‌ಎಸ್‌)

English summary
Hrithik roshan to act in sooraj barjatyas triangle love story

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada