»   » ಬಯಲಲ್ಲೊಂದು ಬಾಂಬೆ ಸ್ಟೈಲ್‌ನ ಹಂಗಾಮ

ಬಯಲಲ್ಲೊಂದು ಬಾಂಬೆ ಸ್ಟೈಲ್‌ನ ಹಂಗಾಮ

Posted By: Staff
Subscribe to Filmibeat Kannada

ಕಳೆದ ಶುಕ್ರವಾರ ಬೆಂಗಳೂರಿನ ಎಂಜಿ ರಸ್ತೆಗೆ ಅಂಟಿಕೊಂಡಿರುವ ವೆಬ್ಸ್‌ ಮೈದಾನದಲ್ಲೊಂದು ಹಂಗಾಮ. ನೂರಾರು ಜನ ಅತಿಥಿಗಳ ಸಮ್ಮುಖದಲ್ಲಿ ಬಾಲ ಬಾಲೆಯರ ನೃತ್ಯ ಲೀಲೆ, ಜೊತೆಗೆ ಸ್ಯಾಕ್ಸೋಫೋನ್‌ನಲ್ಲಿ ನಾದವೈಭವ, ಬೆಳಕಿನ ಅರಮನೆಯಾಳಗೊಂದು ಆಕರ್ಷಕ ವೇದಿಕೆ ....

ಹೂಂ ಅಂತೀಯಾ ಊಹೂಂ ಅಂತೀಯಾ ಚಿತ್ರದ ಕ್ಯಾಸೆಟ್‌ ಬಿಡುಗಡೆಯಾಗಿದ್ದು ಹೀಗೆ. ಮೊನ್ನೆಯಷ್ಟೇ ಮತದಾನ ತಂಡ ಅಶೋಕ ಪಂಚತಾರಾ ಹೋಟೆಲ್‌ನ ಚಾವಡಿಯಲ್ಲಿ ಕ್ಯಾಸೆಟ್‌ ಬಿಡುಗಡೆ ಮಾಡಿದ್ದರೆ, ಹೂಂ ಅಂತೀಯಾ...ದ ನಿರ್ಮಾಪಕರು ವಿಶಾಲ ಬಯಲನ್ನು ಆಯ್ಕೆ ಮಾಡಿಕೊಂಡಿದ್ದರು. ಇದು ಬಾಂಬೆ ಸ್ಟೈಲ್‌. ನಿರ್ಮಾಪಕರಲ್ಲೊಬ್ಬರಾದ ಕುಮಾರ್‌ ಕೂಡ ಬಾಂಬೆ ಮೂಲದವರೇ. ವಿವಾದಾತ್ಮಕ ಚಿತ್ರ ವಾಸ್ತವ್‌ ಸೇರಿದಂತೆ ಒಂದೆರಡು ಹಿಂದಿ ಚಿತ್ರಗಳಿಗೆ ಪಾರ್ಟ್ನರ್‌ ಆಗಿದ್ದವರು. ಹೂಂ ಅಂತೀಯಾ ಚಿತ್ರ ಸೆಟ್ಟೇರಿದ ಹೊತ್ತಲ್ಲಿ ಕುಮಾರ್‌ ಹಾಗೂ ಅವರ ಅಂಡರ್‌ ವರ್ಲ್ಡ್‌ ಕನೆಕ್ಷನ್‌ ದೊಡ್ಡ ಸುದ್ದಿಯಾಗಿತ್ತು.

ಹುಂ ಅಂತೀಯಾ ಚಿತ್ರದ ಕ್ಯಾಸೆಟ್ಟನ್ನು ಮಾರುಕಟ್ಟೆಗೆ ತರುತ್ತಿರುವ ಸಂಸ್ಥೆ ಮುಂಬೈನ ಟಿಪ್ಸ್‌ ಕಂಪೆನಿ. ಕನ್ನಡದಲ್ಲಿ ಇದು ಆ ಕಂಪೆನಿಗೆ ಮೂರನೇ ಚಿತ್ರ. ಹಾಗೇ ನೋಡಿದರೆ ಅವರು ಮೊಟ್ಟ ಮೊದಲು ಖರೀದಿಸಿದ ಕನ್ನಡ ಚಿತ್ರದ ಕ್ಯಾಸೆಟ್‌ ಅಂದರೆ ಹೂಂ ಅಂತೀಯಾ ಚಿತ್ರದ್ದೇ. ಆದರೆ ರಾಜ್‌ ಅಪಹರಣದಿಂದಾಗಿ ಈ ಸಮಾರಂಭ ಮುಂದೆ ಹೋಯಿತು. ಈ ಮಧ್ಯೆ ಮತದಾನ ಮತ್ತು ಮಹಾಲಕ್ಷ್ಮಿ ಚಿತ್ರಗಳ ಕ್ಯಾಸೆಟ್‌ ಬಿಡುಗಡೆಯಾಯಿತು.

ಟಿಪ್ಸ್‌ ಮತ್ತು ಕುಮಾರ್‌- ಇವೆರಡೂ ಪಾರ್ಟಿಗಳ ಶ್ರೀಮಂತಿಕೆಗೆ ಉದಾಹರಣೆಯೆಂಬಂತೆ ಇತ್ತು , ಮೊನ್ನೆಯ ಸಮಾರಂಭ. ಆಹ್ವಾನಿತರ ಪಟ್ಟಿ ಉದ್ದವಾಗಿತ್ತು , ಜೊತೆಗೆ ಕರೆಯದೇ ಬಂದ ಅತಿಥಿಗಳಿಗೂ ತೆರೆದ ಬಾಗಿಲ ಸ್ವಾಗತ, ಸಮಾರಂಭ ಮುಗಿದ ನಂತರ ಸರ್ವರಿಗೂ ಭರ್ಜರಿ ಭೋಜನ ಮತ್ತು ಪಾನಕ ಸೇವೆ.

ತೆರೆದ ಬಯಲಲ್ಲಿ ಇಂಥಾ ಕಾರ್ಯಕ್ರಮ ಮಾಡಿದ್ದಕ್ಕೆ ನಿರ್ಮಾಪಕರಿಗೆ ಒಂದು ಶಿಕ್ಷೆಯೂ ಕಾದಿತ್ತು. ಚಿತ್ರದ ನೂರಾರು ಆಡಿಯೋ ಕ್ಯಾಸೆಟ್‌, ಸಿಡಿಗಳನ್ನು ತುಂಬಿದ್ದ ಬಾಕ್ಸ್‌ ಮತ್ತು ಸ್ಕಾಚ್‌ ವಿಸ್ಕಿ ಬಾಟಲ್‌ಗಳ ಇನ್ನೊಂದು ಬಾಕ್ಸನ್ನು ಯಾರೋ ಅಪಹರಿಸಿದ್ದರು.

ವೇದಿಕೆಯ ಮೇಲಿದ್ದವರು ಪಾರ್ವತಮ್ಮ ರಾಜ್‌ ಕುಮಾರ್‌, ವಿಷ್ಣುವರ್ಧನ್‌, ರವಿಚಂದ್ರನ್‌ ತಮ್ಮ ಬಾಲಾಜಿ, ಪುನೀತ್‌ ರಾಜ್‌ ಕುಮಾರ್‌ ಹಾಗೂ ಟಿಪ್ಸ್‌ ಕಂಪೆನಿಯ ವಕ್ತಾರರು. ಎಲ್ಲರೂ ಒಂದೇ ಮಾತಲ್ಲಿ ಭಾಷಣ ಮುಗಿಸಿದರು. ಅನಂತರ ಸಂಗೀತ ನಿರ್ದೇಶಕ ಕಾರ್ತಿಕ್‌ ರಾಜಾ (ಇಳೆಯ ರಾಜ ಪುತ್ರ) ತಂಡದಿಂದ ಲೈವ್‌ ಕಚೇರಿ. ಸ್ಯಾಕ್ಸೋಫೋನ್‌ನಲ್ಲಿ ವಾತಾಪಿ. ಎಕ್ಸಲೆನ್ಸಿ ತಂಡದಿಂದ ಬ್ರೇಕ್‌ ಡಾನ್ಸ್‌. ಒಂದು ಹಾಡಿಗೆ ರಮೇಶ್‌ ಅವರು ಇಬ್ಬರು ನಾಯಕಿಯರ ಜೊತೆ ಕುಣಿದರು.

ಹೂಂ ಅಂತೀಯಾ... ನಿರ್ಮಾಪಕರಾದ ಕುಮಾರ್‌ ಮತ್ತು ಉಷಾ ಸಂದೀಪ್‌ ಇನ್ನೂ ಎರಡು ಕನ್ನಡ ಚಿತ್ರಗಳಿಗೆ ಸ್ಕೆಚ್‌ ಹಾಕಿದ್ದಾರೆ. ಒಂದಕ್ಕೆ ಜಗ್ಗೇಶ್‌, ಇನ್ನೊಂದಕ್ಕೆ ಶಿವರಾಜ್‌ ಕುಮಾರ್‌. ಇವೆರಡರ ನಿರ್ದೇಶನದ ಜವಾಬ್ದಾರಿಯನ್ನೂ ಪ್ರವೀಣ್‌ ನಾಯಕ್‌ಗೆ ಒಪ್ಪಿಸಿದ್ದಾರೆ. ಅವರೇ ನಿರ್ಮಿಸುತ್ತಿರುವ ತಮಿಳು ಚಿತ್ರವೊಂದು ಈಗಾಗಲೇ ಸೆಟ್ಟೇರಿದೆ. ಬೆಂಗಳೂರಲ್ಲೊಂದು ಜಾಗ ಖರೀದಿಸಿ ಅಲ್ಲೊಂದು ಸ್ಟುಡಿಯೋ ಕಟ್ಟುವ ಯೋಜನೆಯೂ ಕುಮಾರ್‌ ಅವರಿಗಿದೆ. ಅವರೇ ಹೇಳಿಕೊಳ್ಳುವ ಪ್ರಕಾರ ವಿಧಾನ ಸೌಧ ಕಟ್ಟಿದ ಶಿಲ್ಪಿಯಾಬ್ಬರು ಕುಮಾರ್‌ ಅವರ ಸಂಬಂಧಿಯಂತೆ. ಬಲ್ಲ ಮೂಲಗಳ ಪ್ರಕಾರ ಮುಖ್ಯಮಂತ್ರಿ ಕೃಷ್ಣ ಅವರ ಪುತ್ರನೇ ಕುಮಾರ್‌ ಅವರ ಪಾರ್ಟ್ನರ್‌ ಆಗಿ ಸೇರಿಕೊಂಡಿದ್ದಾರೆ. ಹಾಗಾಗಿ ಬೆಂಗಳೂರಲ್ಲಿ ಜಾಗ ಸಿಗುವುದು ಅಂಥಾ ಸಮಸ್ಯೆಯಾಗಲಾರದು.

English summary
audio cassette of Kannada movie released in bangalore
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada