ನನ್ ಎಕ್ಕಡ ಅಂತೇಳಲ್ಲ,ಬಿಗ್ ಬಾಸ್ ಆಟಕ್ಕೆ ನನ್ನ ಕರ್ಕೊಳ್ಳಿ ಎಂದು ಅಂಗಲಾಚಿ ಬೇಡಿಕೊಂಡ ಹುಚ್ಚ ವೆಂಕಟ್..!
ಮಾತೆತ್ತಿದರೆ 'ನನ್ ಎಕ್ಡ ನನ್ ಎಕ್ಡ' ಎನ್ನುತ್ತಾ, ಸಿಕ್ಕ ಸಿಕ್ಕವರ ಜೊತೆ ರಂಪ ರಾಮಾಯಣ ಮಾಡಿಕೊಳ್ತಿದ್ದ ಹುಚ್ಚ ವೆಂಕಟ್ ಬಗ್ಗೆ ಅನೇಕರಲ್ಲಿ ಅನೇಕ ರೀತಿಯ ಅಭಿಪ್ರಾಯಗಳಿವೆ. ಅದು ಏನೇ ಇರಲಿ.. ವೆಂಕಟ್ ನಿಜಕ್ಕೂ ಗಂಭೀರ ಸ್ವಭಾವದ ಮನುಷ್ಯ. ನಿಜಾ, ಇವರು ನಿರ್ಮಿಸಿ, ನಿರ್ದೇಶಿಸಿ, ನಟಿಸಿದ ಸಿನಿಮಾಗಳಲ್ಲಿ ಯಾವುದೂ ಲಾಭ ಮಾಡಿಲ್ಲ. ಆದರೆ ವೆಂಕಟ್ ಯಾರಿಗೂ ಮೋಸವನ್ನೂ ಮಾಡಿಲ್ಲ. ಸಿನಿಮಾಗೆ ಕಾರ್ಯನಿರ್ವಹಿಸಿದ ಪ್ರತಿಯೊಬ್ಬರಿಗೂ ಮುಂಗಡವಾಗಿ ಹಣವನ್ನ ಕೊಟ್ಟು ಕೆಲಸ ಮಾಡಿಸಿಕೊಳ್ಳುವ ಗುಣ ವೆಂಕಟ್ ಅವರದ್ದು.
ಇಂಥಾ ವೆಂಕಟ್ ಈಗ ಕಿಚ್ಚ ಸುದೀಪ್ ಅವರಲ್ಲಿ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ಪ್ಲೀಸ್ ಬಿಗ್ ಬಾಸ್ ಮನೆಗೆ ನನ್ನನ್ನೂ ಕರ್ಕೊಳ್ಳಿ ಎಂದಿದ್ದಾರೆ. ಹೌದು, ವಿಡಿಯೋ ಮೂಲಕ ಮನವಿಯನ್ನು ಮಾಡಿಕೊಂಡಿರುವ ಹುಚ್ಚ ವೆಂಕಟ್ ಬಿಗ್ ಬಾಸ್ ನಲ್ಲಿ ಭಾಗಿಯಾಗಲು ನನಗೊಂದು ಅವಕಾಶ ಕೊಡಿ, ಒಂದು ದಿನಕ್ಕೆ ಕರೆದರೂ ಓಕೆ, ಒಂದು ವಾರಕ್ಕೆ ಕರೆದರೂ ಓಕೆ. ನೀವು ಬಿಗ್ ಬಾಸ್ ಮನೆಯಲ್ಲಿ ಮೂರು ತಿಂಗಳಿರಬೇಕು ಅಂದರೂ ಕೂಡ ನಾನು ಬರುತ್ತೇನೆ ಎಂದು ಹೇಳಿದ್ದಾರೆ.

ಎಲ್ಲರೂ ನನ್ನನ್ನು ಬಿಗ್ ಬಾಸ್ ಹುಚ್ಚ ವೆಂಕಟ್ ಎಂದೇ ಕರಿತಾರೆ. ಬಿಗ್ ಬಾಸ್ ಶೋ ಬರ್ತಿದೆ ಎಂದು ಗೊತ್ತಾದಾಗ ಎಲ್ಲರೀ ನೀವು ಹೋಗಲ್ವಾ ನೀವು ಹೋಗಲ್ವಾ ಎಂತ ಕೇಳ್ತಿದ್ದಾರೆ ಎಂದಿರುವ ಹುಚ್ಚ ವೆಂಕಟ್ ಸುದೀಪ್ ಅವರಿಗೆ ರಿಕ್ವೆಸ್ಟ್ ಒಂದು ಅವಕಾಶ ಕೊಡಿ, ನೀವು ಮನಸು ಮಾಡಿದರೆ ಆಗುತ್ತೆ, ಕೊನೆ ಪಕ್ಷ ಫೈನಲ್ ಗಾದರೂ ಕರೆಯಿರಿ ಎಂದು ಮನವಿಯನ್ನೂ ಮಾಡಿಕೊಂಡಿದ್ದಾರೆ. ಮುಂದುವರೆದು ನಾನು ಯಾವುದೇ ರೀತಿಯ ಗಲಾಟೆ ಮಾಡಲ್ಲ, ಎಲ್ಲ ಟಾಸ್ಕ್‌ಗಳನ್ನೂ ಮಾಡುತ್ತೇನೆ ಎಂದು ಭರವಸೆಯನ್ನು ಕೂಡ ಹುಚ್ಚ ವೆಂಕಟ್ ನೀಡಿದ್ದಾರೆ.
ಹುಚ್ಚ ವೆಂಕಟ್ ಅವರ ಈ ಮನವಿಗೆ ತರತರಹದ ಅಭಿಪ್ರಾಯಗಳು ವ್ಯಕ್ತವಾಗಿವೆ. ಒಬ್ಬರು ಅವಕಾಶ ಸಿಕ್ಕಾಗ ಕೈ ಚೆಲ್ಲಿದ್ರೀ ಈಗ ಅವಕಾಶಕ್ಕೆ ಅಂಗಲಾಚುತ್ತಿದ್ದೀರಾ ಎಂದರೆ, ಮತ್ತೊಬ್ಬರು ಟಾಸ್ಕ್ ಮಾಡೋಕೆ ಶಕ್ತಿ ಬೇಕು ಎಂದಿದ್ದಾರೆ. ಇನ್ನೂ ಹಲವರು ಹುಚ್ಚ ವೆಂಕಟ್ ಪರವಾಗಿ ಮಾತನಾಡಿದ್ದು ಬಿಗ್ ಬಾಸ್ ಹುಚ್ಚ ವೆಂಕಟ್ ಅವರಿಗೆ ಮತ್ತೊಂದು ಅವಕಾಶ ನೀಡುವುದರಲ್ಲಿ ತಪ್ಪಿಲ್ಲ ಎಂದಿದ್ದಾರೆ. ನೀವು ಬಿಗ್ ಬಾಸ್ ಗೆ ಬಂದರೆ ಆ ಮಜಾನೇ ಬೇರೆ ಬಿಗ್ ಬಾಸ್‌ನಲ್ಲಿ ನೀವೆ ಬಾಸ್ ಎಂದು ಹೇಳಿದ್ದಾರೆ. ಮತ್ತೂ ಕೆಲವರು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಹೇಳಿದ್ದಾರೆ.
ಅಂದ್ಹಾಗೇ ಬಿಗ್ ಬಾಸ್ ಕಾರ್ಯಕ್ರಮದ ಮೂರನೇ ಸೀಸನ್‌ನಲ್ಲಿ ಹುಚ್ಚ ವೆಂಕಟ್ ಈ ಹಿಂದೆ ಕಾಣಿಸಿಕೊಂಡಿದ್ದರು. ಸುದೀಪ್ ಅವರ ಎದುರಲ್ಲೇ ರವಿ ಮೂರೂರ್ ಅವರ ಮೇಲೆ ಹಲ್ಲೆಯನ್ನು ಮಾಡಿದ್ದರು. ಮನೆಯಿಂದ ಹೊರ ಬಂದರು. ಆ ನಂತರ ಬಿಗ್ ಬಾಸ್‌ನ ನಾಲ್ಕನೇ ಸೀಸನ್‌ನಲ್ಲಿ ಕೂಡ ಹುಚ್ಚ ವೆಂಕಟ್ ಅವರನ್ನು ಕರೆಯಲಾಗಿತ್ತು. ಆಗ ಮನೆಯೊಳಗೆ ಅತಿಥಿಯಾಗಿ ಹೋಗಿದ್ದ ಹುಚ್ಚ ವೆಂಕಟ್ ದೇವ್ರಂಥಾ ಮನುಷ್ಯ ಪ್ರಥಮ್‌ಗೆ ಹೊಡೆದಿದ್ದರು. ಈ ಮೂಲಕ ಮತ್ತೊಮ್ಮೆ ಬಿಗ್ ಬಾಸ್ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಿ ಮನೆಯಾಚೆ ಬಂದಿದ್ದರು. ಈಗ ನನ್ನನ್ನೂ ಆಟಕ್ಕೆ ಮತ್ತೆ ಕರೆದುಕೊಳ್ಳಿ ಎಂಬ ಮನವಿಯನ್ನು ಬಿಗ್ ಬಾಸ್ ಬಳಿ ಹುಚ್ಚ ವೆಂಕಟ್ ಮಾಡಿಕೊಂಡಿದ್ದಾರೆ. ಆದರೆ ಇವರ ಈ ಮನವಿಗೆ ಈ ಬಾರಿ ಬಿಗ್ ಬಾಸ್ ಮಣೆ ಹಾಕುವುದು ಕಷ್ಟ. ಉಳಿದಂತೆ ಬಿಗ್ ಬಾಸ್ ನ ಹನ್ನೊಂದನೇ ಸೀಸನ್ ಈ ಸೆಪ್ಟೆಂಬರ್ 29ರಿಂದ ಶುರುವಾಗಲಿದೆ.


Click it and Unblock the Notifications











