ಹುಚ್ಚ ವೆಂಕಟ್ 'ಲೈಫ್ ಓಕೆ' ; 'ವಿಷ್ಣು ಮಾರ್ಗ'ದ ಮೂಲಕ ಮರಳಿದ ಫೈರಿಂಗ್ ಸ್ಟಾರ್...!
ಮಾತೆತ್ತಿದರೆ 'ನನ್ ಎಕ್ಡ ನನ್ ಎಕ್ಡ' ಎನ್ನುತ್ತಾ, ಸಿಕ್ಕ ಸಿಕ್ಕವರ ಜೊತೆ ರಂಪ ರಾಮಾಯಣ ಮಾಡಿಕೊಳ್ತಿದ್ದ ಹುಚ್ಚ ವೆಂಕಟ್ ಬಗ್ಗೆ ಅನೇಕರಲ್ಲಿ ಅನೇಕ ರೀತಿಯ ಅಭಿಪ್ರಾಯಗಳಿವೆ. ಅದು ಏನೇ ಇರಲಿ.. ವೆಂಕಟ್ ನಿಜಕ್ಕೂ ಗಂಭೀರ ಸ್ವಭಾವದ ಮನುಷ್ಯ. ನಿಜಾ, ಇವರು ನಿರ್ಮಿಸಿ, ನಿರ್ದೇಶಿಸಿ, ನಟಿಸಿದ ಸಿನಿಮಾಗಳಲ್ಲಿ ಯಾವುದೂ ಲಾಭ ಮಾಡಿಲ್ಲ. ಆದರೆ ವೆಂಕಟ್ ಯಾರಿಗೂ ಮೋಸವನ್ನೂ ಮಾಡಿಲ್ಲ. ಸಿನಿಮಾಗೆ ಕಾರ್ಯನಿರ್ವಹಿಸಿದ ಪ್ರತಿಯೊಬ್ಬರಿಗೂ ಮುಂಗಡವಾಗಿ ಹಣವನ್ನ ಕೊಟ್ಟು ಕೆಲಸ ಮಾಡಿಸಿಕೊಳ್ಳುವ ಗುಣ ವೆಂಕಟ್ ಅವರದ್ದು. ಇಂಥಹ ವೆಂಕಟ್ ಅವರನ್ನ, ಸೋಶಿಯಲ್ ಮೀಡಿಯಾದ ವೈಭವೀಕರಣ ಮಾನಸಿಕವಾಗಿ ದ್ವಂದ್ವಕ್ಕೆ ಸಿಲುಕುವಂತೆಯೂ ಮಾಡಿಬಿಟ್ಟಿತು. ಆದರೆ ಈಗ ಹುಚ್ಚ ವೆಂಕಟ್ ಲೈಫ್ ಓಕೆ ಎನ್ನುವ ಹಂತಕ್ಕೆ ಬಂದು ತಲುಪಿದಂತಿದೆ . ಇದಕ್ಕೆ ಸಾಕ್ಷಿ ಎಂಬಂತೆ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಬಣ್ಣದ ಬದುಕಿಗೆ ಮತ್ತೆ ಮರಳಿದ್ದಾರೆ.
ಹೌದು, ವೆಂಕಟರಾಮ್ ಲಕ್ಷ್ಮಣ್ ಅಲಿಯಾಸ್ ಹುಚ್ಚ ವೆಂಕಟ್, ಸದ್ದಿಲ್ಲದೇ ಕಿರುಚಿತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಆ ಕಿರು ಚಿತ್ರದ ಹೆಸರು ವಿಷ್ಣು ಮಾರ್ಗ. ಕಿರು ಚಿತ್ರದ ಹೆಸರೇ ಹೇಳುವಂತೆ ಇದರಲ್ಲಿ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಸುತ್ತ ಮುತ್ತ ಸುತ್ತುವ ಕಥೆ ಇದೆ. ಇನ್ನೂ ನಿಮಗೆ ಗೊತ್ತಿರಲಿ, ಹುಚ್ಚ ವೆಂಕಟ್ ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿಯೂ ಹೌದು. ಆ ಅಭಿಮಾನಕ್ಕೆ ಕೈಗನ್ನಡಿ ಹಿಡಿಯುವಂತಹ ಕಿರುಚಿತ್ರದಲ್ಲಿ ವೆಂಕಟ್ ವಿಷ್ಣುದಾದಾ ಅಭಿಮಾನಿಯಾಗಿಯೇ ಕಾಣಿಸಿಕೊಂಡಿದ್ದಾರೆ

ನಾಲ್ಕು ಘಟನೆಗಳನ್ನೊಂದಿರುವ ಈ ಕಿರುಚಿತ್ರದಲ್ಲಿ, ದುರ್ಬಲ ಮನಸನ್ನ ಹೊಂದಿರುವ ನಾಲ್ಕು ಯುವಕರ ಕಥೆ-ವ್ಯಥೆ ಇದೆ. ಈ ನಾಲ್ವರಿಗೆ ಲಂಗು ಲಗಾಮು ಹಾಕುವ ಪಾತ್ರ ಹುಚ್ಚ ವೆಂಕಟ್ ಅವರದ್ದು. ವಿಜಯ್ ಕಿತ್ತೂರ್ ಈ ಕಿರುಚಿತ್ರವನ್ನ ನಿರ್ದೇಶಿಸಿದ್ದಾರೆ. ಡಾ. ವಿಷ್ಣುವರ್ಧನ್ ಅವರ ಅಭಿಮಾನಿ ಸಂಘವಾದ ಡಾ.ವಿಷ್ಣು ಸೇನಾ ಸಮಿತಿ ಈ ಶಾರ್ಟ್ ಫಿಲ್ಮ್ ಗೆ ಹಣವನ್ನ ಹೂಡಿದೆ. ರಾಜು ವಿಷ್ಣು, ಮಂಜು ಕೊಪ್ಪಲ್, ಪ್ರಸನ್ನ ಛಾಯಾಗ್ರಹಣ ಹಾಗೂ ಆರವ್ ರಿಶಿಕ್ ಸಂಗೀತ ಕಿರುಚಿತ್ರಕ್ಕಿದೆ.

ಸದ್ಯಕ್ಕೆ ಹುಚ್ಚ ವೆಂಕಟ್ ಫ್ಲೇವರ್ ನ್ನೊಂದಿರುವ ವಿಷ್ಣು ಮಾರ್ಗ ಟ್ರೇಲರ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಎಲ್ಲರ ಚಿತ್ತವನ್ನ ಕದಿಯುತ್ತಿದೆ. ಆಸಕ್ತ ಸಿನಿಮಾ ಪ್ರೇಮಿಗಳು ಹುಚ್ಚ ವೆಂಕಟ್ ಅವರ ಈ ಹೊಸ ಅವತಾರವನ್ನ ಈ ಫೆಬ್ರವರಿ 29ರಿಂದ ಕಣ್ತುಂಬಿಕೊಳ್ಳಬಹುದು. ಯಾಕೆಂದರೆ ಅವತ್ತು ವಿಷ್ಣು ಮಾರ್ಗ ಕಿರುಚಿತ್ರ ಸೊಶಿಯಲ್ ಮೀಡಿಯಾದ ಸಹಯೋಗದೊಂದಿಗೆ ಈ ತಿಂಗ್ಳಾಂತ್ಯಕ್ಕೆ ಪ್ರಸಾರವಾಗಲಿದೆ.


Click it and Unblock the Notifications











