"ಸಿನಿಮಾ ಮಾಡೋಣ ಎಂದು ಕೈ ಕೊಟ್ರು.. ನನ್ನ 35 ಲಕ್ಷ ವಾಪಸ್ ಕೊಡಿ": ಸುದೀಪ್ ಬಳಿ 'ಹುಚ್ಚ' ನಿರ್ಮಾಪಕ ಮನವಿ
ನಟ ಸುದೀಪ್ ಹಾಗೂ ನಿರ್ಮಾಪಕ ಎಂ. ಎನ್ ಕುಮಾರ್ ಕಿರಿಕ್ ತಾರಕ್ಕಕ್ಕೇರಿದೆ. ಇಂತ ಸಮಯದಲ್ಲೇ ಮತ್ತೊಬ್ಬ ನಿರ್ಮಾಪಕ ರೆಹಮಾನ್ ಸಹ ಸುದೀಪ್ ವಿರುದ್ಧ ಆರೋಪ ಮಾಡಿದ್ದಾರೆ. ನಿಮ್ಮನ್ನು ನಂಬಿ ನಾನು ಮೋಸ ಹೋದೆ. ದಯವಿಟ್ಟು ನನ್ನ ಹಣ ವಾಪಸ್ ಕೊಡಿ ಎಂದು ಮನವಿ ಮಾಡಿದ್ದಾರೆ. ಸುದೀಪ್ ನಟನೆಯ 'ಹುಚ್ಚ' ಚಿತ್ರವನ್ನು ರಹಮಾನ್ ನಿರ್ಮಿಸಿದ್ದರು.
'ಹುಚ್ಚ' ಸಿನಿಮಾ ಗೆದ್ದ ಬಳಿಕ ಏನೆಲ್ಲಾ ಆಯಿತು ಎನ್ನುವುದನ್ನು ರೆಹಮಾನ್ ವಿವರಿಸಿದ್ದಾರೆ. ಸದ್ಯ ಮನೆ ಮಾರಿ ತಾವು ಬಾಡಿಗೆ ಮನೆಯಲ್ಲಿ ಇದ್ದೀನಿ. ನನ್ನ 35 ಲಕ್ಷ ಹಣ ವಾಪಸ್ ಕೊಡಿ ಎಂದಿದ್ದಾರೆ. ಎಂಟು ವರ್ಷಗಳ ಹಿಂದೆ ಇದೇ ವಿಚಾರಕ್ಕೆ ಸಂಬಂಧಿಸಿ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದಾಗಿಯೂ ವಿವರಿಸಿದ್ದಾರೆ. ಈಗ ನಾನು ನಿಮ್ಮೊಟ್ಟಿಗೆ ಸಿನಿಮಾ ಮಾಡುವ ಶಕ್ತಿ ಇಲ್ಲ. ನಿಮ್ಮನ್ನು ನಂಬಿ ಕಳೆದುಕೊಂಡ 35 ಲಕ್ಷ ರೂ. ಮರಳಿ ಕೊಡಿ ಎಂದು ಸುದ್ದಿಗೋಷ್ಠಿ ನಡೆಸಿ ಮನವಿ ಮಾಡಿಕೊಂಡಿದ್ದಾರೆ.

ನಿರ್ಮಾಪಕರಾದ ರೆಹಮಾನ್ ಮಾತನಾಡಿ "ನಾನು ಸುದೀಪ್ ಅವರ ಮೇಲೆ ಯಾವುದೇ ರೀತಿಯ ಆರೋಪ ಮಾಡ್ತಿಲ್ಲ. ನ್ಯಾಯ ಕೇಳ್ತಿದ್ದೀನಿ ಅಷ್ಟೇ. ನಾನು ಕುರಾನ್, ಬೈಬಲ್, ಭಗವದ್ಗೀತೆ ಮೇಲೆ ಪ್ರಮಾಣ ಮಾಡಿ ಹೇಳ್ತಿನಿ. ನನಗೆ ಸುಳ್ಳು ಹೇಳುವುದಕ್ಕೆ ಬರಲ್ಲ, ನಾನು 'ಯಜಮಾನ' ಸಿನಿಮಾ ನಂತರ ಸುದೀಪ್ ಅವರೊಟ್ಟಿಗೆ ಹುಚ್ಚ ಸಿನಿಮಾ ಮಾಡಿದ್ದೆ. ಆ ಸಿನಿಮಾ ಮಾಡುವ ಸಮಯದಲ್ಲಿ ಕೆಲವರು ನನಗೆ ಬೈದಿದ್ರು. ನಾನು ಇಷ್ಟಪಟ್ಟು ಸಿನಿಮಾ ಮಾಡಿದ್ದೆ. ಸಿನಿಮಾ ಗೆಲ್ತು."
"ಹುಚ್ಚ ಚಿತ್ರದ ಶಿವಮೊಗ್ಗ ರೈಟ್ಸ್ ಕೂಡ ಸುದೀಪ್ ಅವರಿಗೆ ಕೊಟ್ಟಿದ್ದೆ. ಅಣ್ಣಾವ್ರು ಕೂಡ ಸಿನಿಮಾ ನೋಡಿ ಮೆಚ್ಚಿದ್ದರು. ಸುದೀಪ್ ಅವರು ಈಗ ತುಂಬಾ ಬೆಳೆದಿದ್ದಾರೆ. ಆದ್ರೆ ಬೆಳೆದ ಮೇಲೆ ಹಳೆಯದನ್ನು ಮರಿಬಾರ್ದು. 'ಹುಚ್ಚ' ಸಕ್ಸಸ್ ಬಳಿಕ ಸುದೀಪ್, ನನ್ನ ಹಾಗೂ ವಿಷ್ಣು ಸರ್ ಕಾಂಬಿನೇಷನ್‌ನಲ್ಲಿ ಸಿನಿಮಾ ಮಾಡೋಣ ಎಂದರು. ಬಾಲಿವುಡ್‌ನ 'ಸ್ವರ್ಗ್' ಸಿನಿಮಾ ರೀಮೆಕ್ ರೈಟ್ಸ್ ತನ್ನಿ ಎಂದರು. ಅವರ ಮಾತು ಕೇಳಿ 10 ಲಕ್ಷ ರೂ. ಕೊಟ್ಟು ರೈಟ್ಸ್ ತಂದೆ. ರವಿಶ್ರೀವತ್ಸ ಅವರನ್ನು ಡೈಲಾಗ್ ಬರೆಯಲು ಹೇಳಿದ್ದೆ. ಆದ್ರೆ ವಿಷ್ಣು ಸರ್ 'ಸ್ವರ್ಗ್' ರೀಮೆಕ್‌ಗೆ ಹಿಂದೇಟು ಹಾಕಿದ್ರು"
'ಸ್ವರ್ಗ್' ರೀಮೆಕ್ ಕಥೆ ಮುಗಿದ ಮೇಲೆ 'ಅಂದಾಜ್ ಆಪ್ನ' ರಿಮೇಕ್ ಮಾಡೋಣ ಅಂದ್ರು. ಅದು ಆಗಲಿಲ್ಲ. ಅಮಿತಾಭ್ ಬಚ್ಚನ್ ನಟನೆಯ ಮತ್ತೊಂದು ಸಿನಿಮಾ ಮಾಡೋಣ ರೈಟ್ಸ್ ತನ್ನಿ ಎಂದಿದ್ರು. ರೈಟ್ಸ್ ತಂದರೂ ಸಿನಿಮಾ ಮಾತ್ರ ಮಾಡಲಿಲ್ಲ. ನನ್ನ ಮನೆಯಲ್ಲಿ ನನಗೆ ಬೈಯೋಕೆ ಶುರು ಮಾಡಿದ್ರು. 'ಹುಚ್ಚ' ಟೈಟಲ್ ನಿಮಗೆ ಎಫೆಕ್ಟ್ ಆಯ್ತಾ ಅಂತ ಕೇಳಿದ್ರು. ನಾನು ಶೂಟಿಂಗ್ ಸೆಟ್‌ಗೆ ಹೋಗಿ ಸುದೀಪ್ ಭೇಟಿ ಮಾಡಿ ಸಿನಿಮಾ ಮಾಡೊಣ ಅಂತ ಕೇಳಿದ್ದೆ. ಅವರು ಈಗ ಮಾಡೋಣ ಆಗ ಮಾಡೋಣ ಎಂದು ದಿನ ದೂಡಿದ್ರು"
"ನಾನು ಈಗಲೂ ಅವರ ಬಗ್ಗೆ ಗೌರವಯುತವಾಗಿ ಮಾತಾಡ್ತೀನಿ. ಆದರೆ ಸುದೀಪ್ ಅವರೇ ನನ್ನ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ. ಅದ್ರೆ ನಾನು ಈ ಬಗ್ಗೆ ಎಲ್ಲೂ ಕೂಡ ಮಾತನಾಡಿಲ್ಲ. ಕಳೆದ ಎಂಟು ವರ್ಷಗಳ ಹಿಂದೆ ನಿರ್ಮಾಪಕರ ಸಂಘಕ್ಕೂ ದೂರು ನೀಡಿದ್ದೆ. ಅದನ್ನು ನಿರ್ಮಾಪಕ ಸೂರಪ್ಪ ಬಾಬು ಮುಚ್ಚಿ ಹಾಕಿಸಿಬಿಟ್ಟರು. ನಾನು ಸುದೀಪ್ ಅವರಿಗಾಗಿ ಸಿನಿಮಾ ಮಾಡಲು ಮೂರು ಸಿನಿಮಾಗಳ ರಿಮೇಕ್ ರೈಟ್ಸ್‌ಗಾಗಿ 35 ಲಕ್ಷ ರೂ. ಖರ್ಚು ಮಾಡಿದ್ದೀನಿ."
"ಸುದೀಪ್ ಅವರಿಗೆ 4.5 ರೂ. ಲಕ್ಷ ಹಣಕೊಟ್ಟಿದ್ದೆ. ಆದರೆ ಅದರಲ್ಲಿ 1.8 ಲಕ್ಷ ರೂ. ವಾಪಸ್ ಕೊಟ್ಟಿದ್ದಾರೆ. ಹಲವು ಬಾರಿ ಅವರಿಗೆ ಕರೆ ಮಾಡಿದ್ದೀನಿ, ಮನೆ ಬಳಿ ಹೋಗಿದ್ದೀನಿ, ಅವರು ಮನೆಯಲ್ಲಿ ಇಲ್ಲ ಎನ್ನುವ ಉತ್ತರ ಸಿಗುತ್ತಿತ್ತು. ಕೊನೆಗೆ ಸುದೀಪ್ ಅವರ ಹುಟ್ಟು ಹಬ್ಬದ ದಿನ ಮನೆ ಬಳಿ ಹೋದ್ರೆ ದೂರದಲ್ಲಿ ಕೂರಿಸಿದ್ದರು. ನಾನು ಸುದೀಪ್ ಅವರಿಗೆ 'ಹುಚ್ಚ' ಸಿನಿಮಾ ಮಾಡಿದ್ದೆ ತಪ್ಪಾ.? ಜಾಕ್ ಮಂಜು ಒಮ್ಮೆ ಸುದೀಪ್ ಅವರ ಬಳಿ ಮಾತನಾಡಿ 30 ಲಕ್ಷ ರೂ. ಕೊಡೋಕೆ ಹೇಳಿದ್ದಾರೆ ಅಂತ ಹೇಳಿದ್ದರು. ನಂತರ ಅವರು ಸಂಪರ್ಕಕ್ಕೆ ಸಿಗಲಿಲ್ಲ."
"ಶೂಟಿಂಗ್ ಸೆಟ್‌ಗೆ ಹೋದ್ರೆ ಇಲ್ಲಿಗೆ ಬರಬೇಡಿ ಮನೆ ಹತ್ರ ಬನ್ನಿ ಅಂತ ಹೇಳಿದ್ರು. ನಾನು ಮಾತ್ರ ಸುದೀಪ್ ಬಗ್ಗೆ ಎಲ್ಲೂ ಆರೋಪ ಮಾಡಲಿಲ್ಲ. ಮೂರು ದಿನಗಳ ಟಿವಿಯಲ್ಲಿ ಎಮ್. ಎನ್ ಕುಮಾರ್ ಅವರನ್ನು ನೋಡಿ ನನಗೂ ನ್ಯಾಯ ಸಿಗಬಹುದು ಎಂದು ಬಂದೆ. ಸುದೀಪ್ ಮಾತು ಕೇಳಿ ರೀಮೆಕ್ ರೈಟ್ಸ್ ತಂದು ಸಾಲ ಆಗಿದೆ. ಮನೆ ಮಾರಿ ಸದ್ಯ ಬಾಡಿಗೆ ಮನೆಯಲ್ಲಿ ಇದ್ದೀನಿ. ನನ್ನ ಹಣ ವಾಪಸ್ ಕೊಡಿ" ಎಂದು ನಿರ್ಮಾಪಕರ ರಹಮಾನ್ ಮನವಿ ಬೇಡಿಕೆ ಇಟ್ಟಿದ್ದಾರೆ.


Click it and Unblock the Notifications











