ಕನ್ನಡ ಚಿತ್ರರಂಗದ ಬಗ್ಗೆ ಕಿಂಡಲ್ ಮಾಡಿದ್ದ ಸೌಮ್ಯ ರಾವ್ ಅಭಿನಯಿಸಿದ ಕನ್ನಡ ಚಿತ್ರ ಯಾವುದು ? ಸಿಕ್ಕ ಸಂಭಾವನೆ ಎಷ್ಟು ?
ಮಾತೆತ್ತಿದರೆ 'ನನ್ ಎಕ್ಡ ನನ್ ಎಕ್ಡ' ಎನ್ನುತ್ತಾ, ಸಿಕ್ಕ ಸಿಕ್ಕವರ ಜೊತೆ ರಂಪ ರಾಮಾಯಣ ಮಾಡಿಕೊಳ್ತಿದ್ದ ಹುಚ್ಚ ವೆಂಕಟ್ ಬಗ್ಗೆ ಅನೇಕರಲ್ಲಿ ಅನೇಕ ರೀತಿಯ ಅಭಿಪ್ರಾಯಗಳಿವೆ. ಅದು ಏನೇ ಇರಲಿ.. ವೆಂಕಟ್ ನಿಜಕ್ಕೂ ಗಂಭೀರ ಸ್ವಭಾವದ ಮನುಷ್ಯ. ನಿಜಾ, ಇವರು ನಿರ್ಮಿಸಿ, ನಿರ್ದೇಶಿಸಿ, ನಟಿಸಿದ ಸಿನಿಮಾಗಳಲ್ಲಿ ಯಾವುದೂ ಲಾಭ ಮಾಡಿಲ್ಲ. ಆದರೆ ವೆಂಕಟ್ ಯಾರಿಗೂ ಮೋಸವನ್ನೂ ಮಾಡಿಲ್ಲ. ಸಿನಿಮಾಗೆ ಕಾರ್ಯನಿರ್ವಹಿಸಿದ ಪ್ರತಿಯೊಬ್ಬರಿಗೂ ಮುಂಗಡವಾಗಿ ಹಣವನ್ನ ಕೊಟ್ಟು ಕೆಲಸ ಮಾಡಿಸಿಕೊಳ್ಳುವ ಗುಣ ವೆಂಕಟ್ ಅವರದ್ದು. ಇದಕ್ಕೆ ಸೌಮ್ಯ ರಾವ್ ಅವರ ಅನುಭವ ಸದ್ಯದ ಉದಾಹರಣೆ.
ಹೌದು, ಪ್ರತಿಭಾ ಪಲಾಯನ ಅನ್ನುವುದು ಇಂದು ನಿನ್ನೆಯದಲ್ಲ. ಬಹಳ ಹಿಂದಿನಿಂದ್ಲೂ ಪ್ರತಿಭೆ ಇದ್ದೋರು ಒಂದ್ಕಡೆಯಿಂದ ಮತ್ತೊಂದ್ಕಡೆ ಹೋಗೋದು ನಡೀತಾನೆ ಇದೆ. ಅದರಲ್ಲಿಯೂ ಕನ್ನಡದ ಕಿರುತೆರೆಯಿಂದ ಲಾಟ್ ಗಟ್ಟಲೆ ತಾರೆಯರು ಅಕ್ಕ-ಪಕ್ಕದ ರಾಜ್ಯಕ್ಕೆ ತೆರಳಿದ್ದಾರೆ. ಕೆಲವರು ಖಾಯಂ ಆಗಿ ಅಲ್ಲಿಯೇ ಠಿಕಾಣಿಯನ್ನೂ ಹೂಡಿದ್ದಾರೆ. ಆ ಪೈಕಿ ಸೌಮ್ಯ ರಾವ್ ಕೂಡ ಒಬ್ಬರು. ಆರಂಭದಲ್ಲಿ ಕನ್ನಡದ ಸುದ್ದಿ ವಾಹಿನಿಗಳಲ್ಲಿ ಕೆಲಸ ಮಾಡುತ್ತಲೇ ಆ ನಂತರ ಕನ್ನಡದ ಧಾರಾವಾಹಿ ಮತ್ತು ಚಿತ್ರರಂಗದಲ್ಲಿ ಅದೃಷ್ಟವನ್ನು ಪರೀಕ್ಷೆ ಮಾಡಿಕೊಂಡವರು ಸೌಮ್ಯ ರಾವ್.

ಆದರೆ, ಕನ್ನಡಿಗರು ಇವರ ಕೈ ಹಿಡಿಯಲಿಲ್ಲ. ಹಾಗಂಥ ಸೌಮ್ಯ ರಾವ್ ಪ್ರಯತ್ನ ಕೈ ಬಿಡಲಿಲ್ಲ. ಪಕ್ಕದ ಆಂಧ್ರಕ್ಕೆ ತೆರಳಿ ಪ್ರಯತ್ನವನ್ನು ಮಾಡಿದರು. ಅಲ್ಲಿ ಕಿರುತೆರೆಯಲ್ಲಿ ಹೆಸರನ್ನು ಮಾಡಿದರು. ಇಂಥಾ ಸೌಮ್ಯಾ ರಾವ್ ಕಳೆದ ಕೆಲ ದಿನಗಳಿಂದ ಕರುನಾಡಿನೆಲ್ಲೆಡೆ ಚರ್ಚೆಯಲ್ಲಿದ್ದಾರೆ. ಅದಕ್ಕೆ ಕನ್ನಡ ಚಿತ್ರರಂಗದ ಕುರಿತು ಇವರು ನೀಡಿದ್ದ ಹೇಳಿಕೆ ಪ್ರಮುಖ ಕಾರಣ. ಕನ್ನಡ ಚಿತ್ರರಂಗ ತುಂಬಾ ಚಿಕ್ಕದು, ಇಲ್ಲಿ ಬೆಳೆಯಲ್ಲ, ಬೆಳೆಯಲು ಬಿಡಲ್ಲ ಎಂದು ಈ ಹಿಂದೆ ತೆಲುಗು ಸಂದರ್ಶನದಲ್ಲಿ ಹೇಳಿದ್ದ ಸೌಮ್ಯಾ ರಾವ್ ಕನ್ನಡದಲ್ಲಿ ಸಂಭಾವನೆ ವಿಚಾರದಲ್ಲಾಗುವ ತಾರತಮ್ಯದ ಕುರಿತು ಮಾತನಾಡಿದ್ದರು. ಹೊಸಬರಿಗೆ ಸಂಭಾವನೆ ಕೊಡಲ್ಲ ಎಂಬರ್ಥದಲ್ಲಿ ಮಾತುಗಳನ್ನಾಡಿದ್ದರು. ಹದಿನೈದು ಇಪ್ಪತ್ತು ದಿನಗಳಾದರೂ ಕೂಡ ಸೌಮ್ಯ ಅವರ ಈ ಮಾತು ಇನ್ನು ಚರ್ಚೆಯಲ್ಲಿದೆ. ಹೀಗಿರುವಾಗ ರಾಜೇಶ್ ಗೌಡ ಅವರಿಗೆ ನೀಡಿದ ಸಂದರ್ಶನದಲ್ಲಿ ಸೌಮ್ಯ ರಾವ್ ಕನ್ನಡದ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅವರ ಬಗ್ಗೆ ಅಭಿಮಾನದ ಮಾತುಗಳನ್ನಾಡಿದ್ದಾರೆ.
ಹೌದು, ಅಸಲಿಗೆ ತೆಲುಗು ಚಿತ್ರರಂಗಕ್ಕೆ ವಲಸೆ ಹೋಗುವ ಮುನ್ನ ಹುಚ್ಚ ವೆಂಕಟ್ ನಿರ್ದೇಶನದ ಪೊರ್ಕಿ ಹುಚ್ಚ ವೆಂಕಟ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದರು. ಈ ಚಿತ್ರದ ಕುರಿತು ರಾಜೇಶ್ ಗೌಡ ಅವರಿಗೆ ನೀಡಲಾದ ಸಂದರ್ಶನದಲ್ಲಿ ಮಾತನಾಡಿರುವ ಸೌಮ್ಯ ರಾವ್ ನಾನು ಸಿನಿಮಾ ಕ್ಯಾಮರಾ ಅನ್ನೋದು ನೋಡಿದ್ದೇ ಪೊರ್ಕಿ ಹುಚ್ಚ ವೆಂಕಟ್ ಚಿತ್ರದಲ್ಲಿ ಎಂದು ಹೇಳಿದ್ದಾರೆ. ಹಿಂದಿನ ಸಂದರ್ಶನದಲ್ಲಿ ನಿಮಗೆ ನಾನೇ ಅವರ ಬಗ್ಗೆ ಕೇಳಿ ಎಂದು ಹೇಳಿ ಪ್ರಶ್ನೆ ಕೇಳಿಸಿದ್ದೇನೆ ಇಲ್ಲ ಅಂದರೆ ನಮ್ಮಪ್ಪನಾಣೆ ಆ ಚಿತ್ರದಲ್ಲಿ ನಾನು ಮಾಡಿದ್ದೆ ಎನ್ನುವ ವಿಚಾರ ಯಾರಿಗೂ ಗೊತ್ತಾಗುತ್ತಿರಲಿಲ್ಲ ಎಂದಿರುವ ಸೌಮ್ಯ ಆಗ ನನ್ನ ರೂಪ ಬೇರೆ ಇತ್ತು ಆದರೆ ಈಗ ಬೇರೆ ಇದೆ ಎಂದು ಹೇಳಿದ್ದಾರೆ. ಆಗ ವಯಸ್ಸಾಗಿರಲಿಲ್ಲ ಈಗ ವಯಸ್ಸಾಗಿದೆ ಎಂದು ಹೇಳಿದ್ದಾರೆ.
ಮುಂದುವರೆದು ಎಷ್ಟು ಕಮಿಟ್ಮೆಂಟ್, ನನ್ ಜೊತೆ ಬರ್ತಿಯಾ, ಅದು ಕೊಡ್ತೀಯಾ, ಇದು ಕೊಡ್ತೀಯಾ, ಬಕೆಟ್ ಹಿಡಿ ಭಜನೆ ಮಾಡು ಎನ್ನುವ ದರಿದ್ರ ನನ್ನ ಮಕ್ಕಳಿಗಿಂತ ಹುಚ್ಚ ವೆಂಕಟ್ ನನಗೆ ಎಷ್ಟೋ ಉತ್ತಮ ವ್ಯಕ್ತಿಯೆಂದು ಅನಿಸಿದರೂ ಎಂದು ಹೇಳಿರುವ ಸೌಮ್ಯ ಪೇಮೆಂಟ್ ಕೊಡಲು ಹಿಂದೆ ಮುಂದೆ ನೋಡುವವರ ನಡುವೆ ಪಾಪ ಮರುಮಾತನಾಡದೇ ಪೂರ್ತಿ ಸಂಭಾವನೆ ನನಗೆ ನೀಡಿದರು ಎಂದು ಹುಚ್ಚ ವೆಂಕಟ್ ಅವರನ್ನು ಸೌಮ್ಯ ನೆನಪು ಮಾಡಿಕೊಂಡಿದ್ದಾರೆ. ಇದೇ ವೇಳೆ ಕನ್ನಡ ಚಿತ್ರರಂಗದಲ್ಲಿ ಅನೇಕರಿಗೆ ಸಿಗಬೇಕಾದ ಸಂಭಾವನೆ ಸಿಗಲ್ಲ ಎನ್ನುವ ಮಾತನ್ನು ಪುನರುಚ್ಚಿಸಿದ್ದಾರೆ.


Click it and Unblock the Notifications











