twitter
    For Quick Alerts
    ALLOW NOTIFICATIONS  
    For Daily Alerts

    ದೀಪಾಲಿಯನ್ನು ಲಾಡೆನ್‌ ಅಪಹರಿಸಿದ್ದಾನಂತೆ ಹೌದೆ?

    By Super
    |

    ಪ್ರೀತಿಯಲ್ಲಿ ಇರುವ ಸುಖ.. ವರ್ಣನಾತೀತವಾದ್ದು. ಕಳೆದ ಭಾನುವಾರ ಸಂಜೆ ಕುವೆಂಪು ಕಲಾಕ್ಷೇತ್ರದ ತುಂಬೆಲ್ಲಾ ಬರಿ ಪ್ರೀತಿಯ ಮಾತೆ. ಕುವೆಂಪು ಕಲಾಕ್ಷೇತ್ರ ಪ್ರೇಮ ಮಯವಾಗಿತ್ತು. ಅದಕ್ಕೆ ಕಾರಣವೂ ಇತ್ತು. ಅಮೆರಿಕೆಯ ಹುಡುಗಿ ನಾಯಕಿಯಾದ, ಅಮೆರಿಕೆಯಲ್ಲೇ ಚಿತ್ರಿತವಾದ 'ನನ್ನ ಪ್ರೀತಿಯ ಹುಡುಗಿ"ಗೆ 25 ತುಂಬಿತ್ತು.

    ಏನು ನನ್ನ ಪ್ರೀತಿಯ ಹುಡುಗಿ ಚಿತ್ರದ ನಾಯಕಿ ದೀಪಾಲಿಗೆ 25 ವರ್ಷವೇ ಎಂದು ಹುಬ್ಬೇರಿಸಬೇಡಿ. ವಾಸ್ತವಾಗಿ ನನ್ನ ಪ್ರೀತಿಯ ಹುಡುಗಿ ಚಿತ್ರ 25 ವಾರ ಪೂರೈಸಿ ರಜತ ಮಹೋತ್ಸವ ಆಚರಿಸಿಕೊಂಡಿತು. ಇತ್ತೀಚಿನ ದಿನಗಳಲ್ಲಿ ರಜತಮಹೋತ್ಸವ ಒಂದು ಅಪರೂಪದ ಕಾರ್ಯಕ್ರಮ.

    ನಿರ್ದೇಶಕ - ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್‌ ಅವರ ಪ್ರೀತಿ ತುಂಬಿದ ಆಹ್ವಾನವನ್ನು ಮನ್ನಿಸಿ ನೂರಾರು ಪ್ರೀತಿಪಾತ್ರರು ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವೇದಿಕೆ ತಾರೆಗಳಿಂದ ಕಿಕ್ಕಿರಿದು ತುಂಬಿತ್ತು. ವೇದಿಕೆಯ ನಾಲ್ಕು ಮೂಲೆಗಳಲ್ಲೂ ಕಾರುಗಳು ನಿಂತಿತ್ತು.

    ಪ್ರೀತಿಯ ಹುಡುಗಿಯ ಯಶಸ್ಸಿನಲ್ಲಿ ಕಾರಿನ ಪಾತ್ರ ಪ್ರಮುಖ. ಹೀಗಾಗೇ ಕಾರಿಗಳಿಗೂ ವೇದಿಕೆಯಲ್ಲಿ ಮನ್ನಣೆ. ಯಶಸ್ಸಿನ ಕಾರೇರಿ ಪ್ರೀತಿಯ ಹುಡುಗಿಯ ಗೆಲ್ಲಿಸಿದ ನಾಗತಿಹಳ್ಳಿ ಅವರಿಗೆ ಹಲವರ ಅಭಿನಂದನೆ. ಈ ದಿನಗಳಲ್ಲಿ ಸಿಲ್ವರ್‌ ಜೂಬಿಲಿ ಆಚರಿಸುವುದು ಹುಡುಗಾಟವೆ ನೀವು ಅಸಾಮಾನ್ಯರಪ್ಪ ಎಂದವರು ಹಲವರು.

    ವರ್ಣರಂಜಿತ ವೇದಿಕೆಯಲ್ಲಿ ಗಾನ,ನಾಟ್ಯ, ಲಯಗಳು ಮೇಳೈಸಿದವು. ಮಾತುಗಳು ಮಳೆಗರೆದವು. ಉಪ್ಪಿ, ವಿಷ್ಣು ಆದಿಯಾಗಿ ಕಾರ್ಯಕ್ರಮದಲ್ಲಿ ಮಾತಾಡಿದ ಎಲ್ಲ ಗಣ್ಯರಿಂದ ಹಿಡಿದು ನಿರೂಪಕರವರೆಗೆ ಎಲ್ಲರ ಬಾಯಲ್ಲೂ ಪ್ರೀತಿಯ ಧಾರೆಯೇ ಹರಿಯಿತು.

    ಕಾರ್‌ಕಾರ್‌ಕಾರ್‌... ಎಲ್ನೋಡಿ ಕಾರ್‌ನಿಂದ, ಮೂಡಲ ಕುಣಿಗಲ್‌ ಕೆರೆಯವರೆಗೆ ನಡೆದ ಮಕ್ಕಳ ನೃತ್ಯವೂ ಮನಮೋಹಕವಾಗಿತ್ತು. ನಾಯಕ ಧ್ಯಾನ್‌ಮುಂಬಯಿಯಿಂದ ಬಂದಿದ್ದರು. ಆದರೆ ಪ್ರೀತಿಯ ಹುಡುಗಿ ಅರ್ಥಾತ್‌ ದೀಪಾಲಿಯ ಗೈರು ಹಾಜರಿ ಎದ್ದು ಕಾಣುತ್ತಿತ್ತು. ದೀಪಾಲಿ ಕಾರ್ಯಕ್ರಮಕ್ಕೆ ಬಾರದಿರುವ ಬಗ್ಗೆ 'ದೀಪಾಲಿಯನ್ನು ಲಾಡೆನ್‌ ಅಪಹರಿಸಿದ್ದಾನೆ" ಎಂಬ ಜೋಕು ನಾಲ್ಕಾರು ಬಾರಿ ರಿಪೀಟ್‌ ಆಯ್ತು.

    ಎಲ್ಲ ಚಿತ್ರಗಳೂ ಪ್ರೀತಿಯ ಹುಡುಗಿಯಂತೆ ಸಿಲ್ವರ್‌ ಜೂಬಿಲಿ ಓಡಲಿ ಎಂದು ಒಂದೇ ಮಾತಿನಲ್ಲಿ ಉಪ್ಪಿ ಮಾತು ಮುಗಿಸಿದರೆ, ಕೊಟ್ರೇಶಿಯ ಕನಸಿನ ಚಿತ್ರೀಕರಣದ ದಿನಗಳನ್ನು ವಿಷ್ಣು ಮೆಲಕು ಹಾಕಿದರು. ಪ್ರೀತಿಯ ಹುಡುಗಿಯ ನಟ, ನಟಿಯರು, ತಂತ್ರಜ್ಞರೆಲ್ಲರಿಗೂ ನೆನಪಿನ ಕಾಣಿಕೆಗಳ ಪ್ರದಾನವೂ ನಡೆಯಿತು. ಎಲ್ಲರೂ ಸಾಲಾಗಿ ಬಂದು ತಮ್ಮ ಪಾಲಿನ ಪಾರಿತೋಷಕ ಪಡೆದರು. ಉಪೇಂದ್ರ ತಾಳ್ಮೆಯಿಂದ ಎಲ್ಲರಿಗೂ ನೆನಪಿನ ಕಾಣಿಕೆ ವಿತರಿಸಿದರು. ವಿಷ್ಣುವರ್ಧನ್‌ ಹಾಗೂ ಉಪೇಂದ್ರರಿಗೂ ನೆನಪಿನ ಕಾಣಿಕೆ ನೀಡಲಾಯಿತು.

    ಸಾಹಸ ಸಿಂಹ ವಿಷ್ಣು ಅವರಿಗೆ ಸಿಂಹವನ್ನೇ ಕಾಣಿಕೆ ಕೊಡಬೇಕು ಅಂದುಕೊಂಡೆವು. ಆದರೆ, ಬೆಂಗಳೂರಲ್ಲಿ ಸಿಂಹಗಳೇ ಸಿಗಲಿಲ್ಲ. ಅದಕ್ಕೆ ಆನೆ ಕೊಡ್ತಾ ಇದ್ದೇವೆ ಎಂದು ನಾಗತಿಹಳ್ಳಿ ಜೋಕ್‌ ಕಟ್‌ ಮಾಡಿದರು. 'ನನನು ಮೆಚಿ, ಮೆಚಿ, ನೆಚಿ ಹರೆಸಿದ ಕನಾಡಿಗರಿಗೆ ಕರುತಜ್ಞತೆಗಳು" ಎಂದು ಧ್ಯಾನ್‌ ಕನ್ನಡದಲ್ಲೇ ಕೃತಜ್ಞತೆ ಸಲ್ಲಿಸಿದರು. ಈ ಮಧ್ಯೆ ಪ್ರೇಕ್ಷಕರ ಅಭಿಪ್ರಾಯಗಳ ತುಣುಕು 'ಒಪೀನಿಯನ್‌ ಪೋಲ್‌" ಪ್ರದರ್ಶನವೂ ನಡೆಯಿತು. ರಾಜೇಶ್‌ ರಾಮನಾಥ್‌ ಅಮೆರಿಕಾ ಅಮೆರಿಕಾ ಚಿತ್ರದ 'ನೂರೂ ಜನ್ಮಕು, ನೂರಾರು ಜನ್ಮಕೂ" ಗೀತೆಯನ್ನು ಹಾಡಿದರು. ತಮ್ಮ ಜೀವಿತಾವಧಿಯ ಬೆಸ್ಟ್‌ಸಾಂಗ್‌ ಇದೆಂದು ತಮಗೆ ತಾವೇ ಸರ್ಟಿಫಿಕೇಟ್‌ ಕೊಟ್ಟುಕೊಂಡರು.

    ನಿರ್ಮಾಪಕರಾದ ತುಮಕೂರು ದಯಾನಂದ್‌, ಮಿಚಿಗನ್‌ ವಿದ್ಯಾಶಂಕರ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮನೋಮೂರ್ತಿ, ಜಯಶ್ರೀ, ಸುರೇಶ್‌ ಹೆಬ್ಳೀಕರ್‌, ಛಾಯಾಗ್ರಾಹಕ ರಾಜನ್‌ ಕೂಡ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ದೀಪಾಲಿ ಏಕೆ ಬಂದಿರಲಿಲ್ಲ ಎಂಬುದಕ್ಕೆ ಕಾರಣ ಕೊನೆಗೂ ತಿಳಿಯಲಿಲ್ಲ.

    English summary
    Nanna Pritiya Hudugi celebrates silver jubilee at kuvempu kalakshetra in Bangalore
    Sunday, July 7, 2013, 13:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X