ಚುನಾವಣಾ ಸಮಯದಲ್ಲಿ ಬರ್ತಿದ್ದಾನೆ ಹಂಬಲ್ ಪೊಲಿಟೀಶಿಯನ್
ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಅಭ್ಯರ್ಥಿಗಳ ಪ್ರಚಾರದ ಭರಾಟೆ ಜೋರಾಗುತ್ತಿದೆ. ಇದರ ನಡುವೆ ಈಗ 'ಹಂಬಲ್ ಪೊಲಿಟೀಶಿಯನ್ ನೋಗರಾಜ್' ಚುನಾವಣಾ ಕಣಕ್ಕೆ ಧುಮುಕ್ಕುತ್ತಿದ್ದಾರೆ. ಅಚ್ಚರಿ ಪಡಬೇಡಿ ನೋಗರಾಜ್ ರಾಜಕೀಯ ಅಖಾಡಕ್ಕೆ ಇಳಿಯುತ್ತಿರುವುದು ರಿಯಲ್ ಆಗಿ ಅಲ್ಲ ರೀಲ್ ಮೇಲೆ.
ಕಳೆದ ವರ್ಷ 2018ರಲ್ಲಿ ರಿಲೀಸ್ ಆಗಿದ್ದ ಡ್ಯಾನೀಶ್ ಸೇಠ್ ಅಭಿನಯದ 'ಹಂಬಲ್ ಪೊಲಿಟೀಶಿಯನ್ ನೋಗರಾಜ್' ಸಿನಿಮಾ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಹಾಸ್ಯ ಪ್ರಧಾನವಾದ ಚಿತ್ರವಾಗಿದ್ದರು ಚುನಾವಣೆಯ ಬಗ್ಗೆ ಒಂದೊಳ್ಳೆ ಸಂದೇಶವನ್ನು ನೀಡುವಂತಹ ಚಿತ್ರವಾಗಿತ್ತು. ಆದ್ರೀಗ ಯಾಕೆ ಈ ಸಿನಿಮಾದ ಬಗ್ಗೆ ಮಾತು ಅಂತೀರಾ. ಕಾರಣ 'ಹಂಬಲ್ ಪೊಲಿಟೀಶಿಯನ್ ನೋಗರಾಜ್' ಸೀಕ್ವೆಲ್ ಬರ್ತಾಯಿದೆ.
ಹೌದು, ಕ್ರಿಕೇಟ್ ಆಟಗಾರರ ಜೊತೆ ಸೇರಿ ನಗು ಚಟಾಕಿ ಹಾರಿಸುತ್ತಿದ್ದ ಡ್ಯಾನೀಶ್ ಸಿನಿರಂಗದಲ್ಲೂ ಪೊಲಿಟೀಶಿಯನ್ ನೋಗರಾಜ್ ಆಗಿ ಕಾಮಿಡಿ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. ಮತ್ತೆ ಡ್ಯಾನೀಶ್ ಪಾರ್ಟ್-2 ಮೂಲಕ ಪೊಲಿಟೀಶಿಯನ್ ನೋಗರಾಜ್ ಆಗಿ ಎಂಟ್ರಿ ಕೊಡಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರಂತೆ. ಈ ಬಗ್ಗೆ ಡ್ಯಾನೀಶ್ ಸೇಠ್ ಸಾಮಾಜಿಕ ಜಾಲತಾಣದಲ್ಲಿ ಸುಳಿವು ನೀಡಿದ್ದಾರೆ.

'ಸೀಕ್ವೆಲ್ ಗೆ ಸ್ಕ್ರಿಪ್ಟ್ ಸಿದ್ದವಾಗಿದೆ, ನಾಗಣ್ಣ ಮತ್ತೆ ಬರುತ್ತಿದ್ದಾನೆ' ಅಂತ ಹೇಳುವ ಮೂಲಕ ಅಭಿಮಾನಿಗಳಿಗೆ ಅಚ್ಚರಿಯ ಸುದ್ದಿ ನೀಡಿದ್ದಾರೆ. ಅಂದ್ಹಾಗೆ 'ಹಂಬಲ್ ಪೊಲಿಟೀಶಿಯನ್ ನೋಗರಾಜ್' ಸಾದ್ ಖಾನ್ ನಿರ್ದೇಶದಲ್ಲಿ ಮೂಡಿ ಬಂದಿತ್ತು. ಈಗ ಪಾರ್ಟ್-2 ಗೆ ಸ್ಕ್ರಿಪ್ಟ್ ತಯಾರಿಸಲು ಸಾದ್ ಖಾನ್ ಕೈ ಜೋಡಿಸಿದ್ದಾರಂತೆ.
ಇನ್ನು ಪಾರ್ಟ್-1ರಂತೆ ಚಿತ್ರದ ನಿರ್ಮಾಣವನ್ನು ರಕ್ಷಿತ್ ಶೆಟ್ಟಿ ಮತ್ತು ಪುಷ್ಕರ್ ಮಲ್ಲಿಖಾರ್ಜುನಯ್ಯ ವಹಿಸಿಕೊಳ್ಳುತ್ತಾರಾ ಅಥವಾ ಬೇರೆ ಯಾರಾದರು ಬಂಡವಾಳ ಹೂಡುತ್ತಾರಾ ಅನ್ನೋದು ಗೊತ್ತಾಗಬೇಕಿದೆ. ಎಲ್ಲವು ಅಂದುಕೊಂಡಂತೆ ಆದರೆ ಸದ್ಯದಲ್ಲೆ 'ಹಂಬಲ್ ಪೊಲಿಟೀಶಿಯನ್ ನೋಗರಾಜ್ ಪಾರ್ಟ್-2' ಸೆಟ್ಟೇರಲಿದೆ.


Click it and Unblock the Notifications











