»   » ಬರಿಗಾಲಿ ಹುಸೇನ್‌ ಸಾಹೇಬರ ಹೊಸ ಚಿತ್ರ : ತಬುಗೆ ದ್ವಿಪಾತ್ರ

ಬರಿಗಾಲಿ ಹುಸೇನ್‌ ಸಾಹೇಬರ ಹೊಸ ಚಿತ್ರ : ತಬುಗೆ ದ್ವಿಪಾತ್ರ

Posted By: Staff
Subscribe to Filmibeat Kannada

ಇನ್ನು ಈತ ಸಿನಿಮಾ ಮಾಡುವ ಗೊಡವೆಗೆ ಹೋಗುವುದಿಲ್ಲ ಎಂದವರು ಬಾಯ ಮೇಲೆ ಬೆರಳಿಡುವಂತೆ ಮಾಡಿದ್ದಾರೆ ಕುಂಚ ಕಲಾವಿದ ಎಂ.ಎಫ್‌.ಹುಸೇನ್‌. ಬರುವ ಮಾರ್ಚ್‌ನಲ್ಲಿ ಅವರ ಹೊಸ ಸಿನಿಮಾ ಸೆಟ್ಟೇರಲಿದೆ. ಇನ್ನೂ ಹೆಸರಿಡದ ಈ ಚಿತ್ರದ ನಾಯಕಿ ತಬು.

ಆರು ತಿಂಗಳ ಹಿಂದೆ ತೆರೆಕಂಡು, ಸದ್ದೇ ಇಲ್ಲದೆ ಎತ್ತಂಗಡಿಯಾದ 'ಗಜಗಾಮಿನಿ" ಮೂಲಕ ಹುಸೇನ್‌ ಹೆಚ್ಚೇನನ್ನೂ ಗಳಿಸಲಿಲ್ಲ. ಆದರೆ ಮೆಚ್ಚಿದ ಮಾಧುರಿ ಜೊತೆ ಕೆಲಸ ಮಾಡಿದ ಅನನ್ಯ ಅನುಭವ ಗಿಟ್ಟಿಸಿಕೊಂಡರು. ಮಾಧ್ಯಮಗಳಲ್ಲಿ ಸುದ್ದಿಯಾದರು. ಕಿಸೆಯಿಂದ ಸಾಕಷ್ಟು ಹಣ ಕಳಕೊಂಡರು. ಹೀಗಿದ್ದೂ ಹುಸೇನ್‌ ಮತ್ತೊಂದು ವೆಂಚರ್‌ಗೆ ಕೈಹಾಕುತ್ತಿರುವುದಕ್ಕೆ ಅವರ ಛಲವೇ ಕಾರಣವಂತೆ. ಈ ಚಿತ್ರ ಅದು ಹೇಗೆ ಸೋಲುತ್ತದೋ ನೋಡುತ್ತೇನೆ ಅಂತ ಕೇಳಿದವರಿಗೆಲ್ಲಾ ಆತ್ಮವಿಶ್ವಾಸದ ಜವಾಬು ಕೊಡುತ್ತಿದ್ದಾರೆ ಹುಸೇನ್‌ ಸಾಹೇಬರು.

ರಾಜಾಸ್ತಾನ್‌ ಮತ್ತು ಝಕೊಸ್ಲೊವೇಕಿಯಾದಲ್ಲಿ ಹುಸೇನ್‌ ಹೊಸ ಸಿನಿಮಾದ ಚಿತ್ರೀಕರಣ ನಡೆಯಲಿದೆ. 'ಹೈದರಾಬಾದ್‌ ಹುಡುಗ. ಜೈಸಲ್ಮೇರ್‌ ರಾಣಿ. ಮತ್ತೊಬ್ಬ ಕಮ್ಮಾರರ ಹುಡುಗಿ. ರಾಣಿ ಹಾಗೂ ಕಮ್ಮಾರರ ಹುಡುಗಿ ಎರಡೂ ಪಾತ್ರಗಳನ್ನು ತಬು ಅಭಿನಯಿಸಲಿದ್ದಾರೆ. ಇಬ್ಬರಿಗೂ ಯಾವುದೇ ಸಂಬಂಧ ಇರುವುದಿಲ್ಲ. ಜಾತ್ರೆಯಲ್ಲಿ ಮಕ್ಕಳಾಗಿದ್ದಾಗ ಕಳೆದು ಹೋದ ನಾವು ಈಗ ಒಂದಾದೆವು ಅನ್ನುವ ಹಳೆ ಫಾರ್ಮುಲಾದ ಹಿಂದಿ ಚಿತ್ರ ಇದಲ್ಲ. ನಮ್ಮ ಥರವೇ ಇರುವ ಇನ್ನೊಬ್ಬರನ್ನು ಅಕಸ್ಮಾತ್ತಾಗಿ ಕಾಣುವ ಅಪರೂಪದ ಅನುಭವದ ತಿರುಳಿದು" ಎನ್ನುತ್ತಾರೆ ಹುಸೇನ್‌.

ಮಾಧುರಿಯ ನಂತರ ಹುಸೇನ್‌ ಮೆಚ್ಚಿದ್ದು ಯಾರನ್ನ?

ಉತ್ತರ : ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್‌. ನನ್ನ ಮುಂದಿನ ಚಿತ್ರದ ನಾಯಕಿ ನೀನೇ ಅಂತ ಹುಸೇನ್‌ ಸಾಹೇಬರು ಸುಶ್ಮಿತಾಗೆ ಹೇಳಿದರು. ಆದರೆ, ಅದಕ್ಕೆ ಸುಶ್ಮಿತ ಸಣ್ಣಗೆ ನಕ್ಕರಷ್ಟೆ. ಆಮೇಲೆ ಹುಸೇನ್‌ ಸಾಹೇಬರನ್ನು ಅವರು ಅವಾಯ್ಡ್‌ ಮಾಡಲು ಶುರು ಮಾಡಿದರು. ಹುಸೇನ್‌ ಸಾಬ್‌ ಕರೆಗೆ ಓಗೊಡಲೇ ಇಲ್ಲ. ಅದೇ ವೇಳೆಗೆ ಮಧುರ್‌ ಭಂಡಾರ್ಕರ್‌ ಎಂಬಾತ ಚಾಂದಿನಿ ಬಾರ್‌ ಚಿತ್ರ ಮಾಡಿದರು.

ಮೊದಲ ಪ್ರದರ್ಶನವನ್ನು ನೋಡಿದ ಹುಸೇನ್‌ಗೆ ಅದರಲ್ಲಿನ ತಬು ನಟನೆ ಮೆಚ್ಚಾಯಿತು. ಸುಶ್ಮಿತಾ ಜಾಗೆಯನ್ನು ತಬು ಆಕ್ರಮಿಸಿಕೊಂಡರು. ಹುಸೇನ್‌ ಚಿತ್ರಕ್ಕೆ ಹಿಂದೂ ಮುಂದೂ ನೋಡದೆ ತಬು ಯೆಸ್‌ ಅಂದೇ ಬಿಟ್ಟರು.

ಕಾಲೇಜು ಹುಡುಗಿ, ಅತ್ತೆ, ತಂಗಿ, ವೇಶ್ಯೆ, ಬಾರಿನಲ್ಲಿ ಕೆಲಸ ಮಾಡುವ ಹುಡುಗಿ, ಮಿಲಿಟರಿಯಲ್ಲಿ ಕೆಲಸ ಮಾಡುವ ಹುಡುಗಿ, ಮಾಚಿಸ್‌ನ ಭಯೋತ್ಪಾದಕ ಜಗತ್ತಿನ ಪಾತ್ರ... ಹೀಗೆ ಏನೆಲ್ಲಾ ಆಫರ್‌ಗಳು ನನಗೆ ಬಂದವು. ಸದಾ ವೆರೈಟಿ ಬಗೆಗೆ ತಲೆ ಕೆಡಿಸಿಕೊಳ್ಳುವ ನನಗೆ ಹುಸೇನ್‌ ಸಾಬ್‌ ಬಗೆಗೆ ಪೂರ್ಣ ವಿಶ್ವಾಸವಿದೆ. ಅವರಂಥ ಹಿರಿಯ ಕಲಾವಿದ ಜೊಳ್ಳನ್ನು ಕೊಡುವುದಿಲ್ಲ. ನನಗೆ ಸಾಕಷ್ಟು ಕಲಿಯುವ ಅವಕಾಶ ಈ ಸಿನಿಮಾದ ಮೂಲಕ ದೊರೆತಿದೆ. ಸುಶ್ಮಿತಾ ಮಿಸ್‌ ಮಾಡಿಕೊಂಡದ್ದು ನನಗೆ ಸಿಗಲಿದೆ ಎಂದು ಸಣ್ಣಗೆ ನಗುನಗುತ್ತಾ ಹೇಳುತ್ತಾರೆ ತಬು.

ಗಜಗಾಮಿನಿ ಸೋಲಿಗೆ ಬಾರಿನ ಚಾಂದಿನಿ ತಬು ಜಯದ ಮುಲಾಮು ಹಚ್ಚುವರೇ? ನೋಡಬೇಕು. ಆಲ್‌ ದಿ ಬೆಸ್ಟ್‌ ಹುಸೇನ್‌ ಸಾಬ್‌!

English summary
M F Hussain casts Tabu in his new film
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada