ಕನ್ನಡದಲ್ಲಿ ಚಿತ್ರ ಮಾಡಿದರೆ ಅದು ಪುನೀತ್ ಸರ್ ಜೊತೆಯೇ ಮಾಡಬೇಕು ಎಂದುಕೊಂಡಿದ್ದೇ ಎಂದ ಬಾಲಿವುಡ್‌ನ ಖ್ಯಾತ ಚೆಲುವೆ..!
ಕನ್ನಡ ಚಿತ್ರರಂಗದ ಮೇಲೀಗ ಎಲ್ಲರ ಕಣ್ಣಿದೆ. ಮೊದಲೆಲ್ಲ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡದವರೆಲ್ಲ ಈಗ ಕನ್ನಡ ಚಿತ್ರರಂಗ ಹಾಗೇ ಹೀಗೆ ಎಂದೆಲ್ಲ ಹೊಗಳಿ ಮಾತನಾಡುತ್ತಿದ್ದಾರೆ. ಇನ್ನು ಐಶ್ವರ್ಯ ರೈ, ದೀಪಿಕಾ ಪಡುಕೋಣೆ, ಶಿಲ್ಪಾ ಶೆಟ್ಟಿ ಸೇರಿ ರಶ್ಮಿಕಾ ಮಂದಣ್ಣ ಮತ್ತು ಶ್ರೀಲೀಲಾವರೆಗೆ ಅನೇಕರು ಕರ್ನಾಟಕದಿಂದ ಬಾಲಿವುಡ್‌ಗೆ ವಲಸೆ ಹೋಗಿದ್ದಾರೆ. ಬದುಕು ರೂಪಿಸಿಕೊಂಡಿದ್ದಾರೆ.
ಆದರೆ ಹೀಗೆ ಹೋದ ಅನೇಕರು ನಾನು ಕನ್ನಡದವಳು, ಕನ್ನಡ ಚಿತ್ರದಲ್ಲಿ ಅಭಿನಯಸಿದವಳು, ಕನ್ನಡ ಚಿತ್ರದಲ್ಲಿ ಅಭಿನಯಿಸುವ ಆಸೆಯನ್ನು ಹೊಂದಿರುವಳು ಎಂದು ಮೊದಲು ಹೇಳುತ್ತಿರಲಿಲ್ಲ. ಕನ್ನಡ ಬಂದರೂ ಮಾತನಾಡುತ್ತಿರಲಿಲ್ಲ. ಆದರೆ ಈಗೀಗ ರಿಬ್ಬನ್ ಕಟ್ ಮಾಡಲು ಬಂದರೂ ಕೂಡ ನಾನು ಕನ್ನಡದವಳು ಎನ್ನುತ್ತಿದ್ದಾರೆ. ತಮ್ಮ ಕನ್ನಡಾಭಿಮಾನದ ಪ್ರದರ್ಶನವನ್ನು ಮಾಡುತ್ತಿದ್ದಾರೆ. ಇದಕ್ಕೆ ಇನ್ನೊಂದು ಉದಾಹರಣೆ ಅಮೃತಾ ರಾವ್.

ಹೌದು, ಅಮೃತಾ ರಾವ್ ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದ್ದ ನಾಯಕಿ. ಅಬ್ ಕೇ ಬರಸ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಅಮೃತಾ ಆ ನಂತರ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡರು. ತಮ್ಮ ಅಭಿನಯದ ಮೂಲಕ ಅಭಿಮಾನಿಗಳ ಹೃದಯವನ್ನು ಗೆದ್ದರು. ಅದರಲ್ಲಿಯೂ ಅಮೃತಾ ಅಭಿನಯದ ಇಶ್ಕ್ ವಿಷ್ಕ್ ಮತ್ತು ವಿವಾಹ್ ಚಿತ್ರವನ್ನು ಯಾರು ಮರೆಯಲಾರರು. ಅಮೃತಾಗೆ ಅಪಾರವಾದ ಕೀರ್ತಿಯನ್ನು ತಂದು ಕೊಟ್ಟ ಎರಡು ಚಿತ್ರಗಳಿವು. ಇಂಥಾ ಅಮೃತಾ ರಾವ್ ಈಗ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿದ್ದಾರೆ. ಕರ್ನಾಟಕದ ಬಗ್ಗೆ ಮಾತನಾಡಿದ್ದಾರೆ. ಕರ್ನಾಟಕದ ಜೊತೆ ತಮಗೆ ಇರುವ ನಂಟನ್ನು ತಿಳಿಸಿದ್ದಾರೆ.
ಹೌದು, 'ಹಲೋ ಹಿದ್ದು' ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನವನ್ನು ನೀಡಿರುವ ಅಮೃತಾ ರಾವ್ ಕನ್ನಡದಲ್ಲಿಯೇ ಮಾತು ಶುರುಮಾಡಿದ್ದಾರೆ. ಕನ್ನಡಿಗರಿಗೆ ನಾನು ಅಮೃತಾ ರಾವ್ ಮಾಡುವ ನಮಸ್ಕಾರಗಳು ಎಂದು ಹೇಳಿದ್ದಾರೆ. ನನ್ನ ಅಪ್ಪ -ಅಮ್ಮ ಕಾರವಾರ ಕುಮಟಾ ಮೂಲದವರು ಹೀಗಾಗಿ ಕಾರವಾರ, ಕುಮಟಾ ಮತ್ತು ಮೈಸೂರಿನ ಅನೇಕ ಜಾಗಗಳ ಬಗ್ಗೆ ನನಗೆ ಗೊತ್ತಿದೆ ಎಂದು ಹೇಳಿದ್ದಾರೆ.
ಕಾರವಾರ ನನಗೆ ತುಂಬಾ ಇಷ್ಟ ಅಲ್ಲಿನ ಪ್ರಕೃತಿ ಸೌಂದರ್ಯ ಸವಿಯಲು ನಾನು ಆಗಾಗ ಅಲ್ಲಿ ಹೋಗುತ್ತಿರುತ್ತೇನೆ ಎಂದಿರುವ ಅಮೃತಾ ನನ್ನ ಮಾತೃ ಭಾಷೆ ಕೊಂಕಣಿ ಎಂದು ಹೇಳಿದ್ದಾರೆ. ಕರ್ನಾಟಕ ನಮ್ಮ ಮನೆಯ ಇದ್ದಂತೆಯೇ ಎಂದು ಹೇಳಿದ್ದಾರೆ.
ಇನ್ನು ಬೆಂಗಳೂರಿನಲ್ಲಿ ತಾವು ಕಳೆದ ದಿನಗಳನ್ನು ಮೆಲುಕು ಹಾಕಿರುವ ಅಮೃತಾ ರಾವ್ ನಾನು ಕಬ್ಬನ್ ಪಾರ್ಕ್‌ನಲ್ಲಿ ಎಲ್ಲ ಸುತ್ತಾಡಿದ್ದೇನೆ ಎಂದು ಹೇಳಿದ್ದಾರೆ. ಮೈಸೂರು ಪಾಕ್ ಅಂದರೆ ನನಗೆ ಪಂಚ ಪ್ರಾಣ ಎಂದು ಹೇಳಿದ್ದಾರೆ.
ಮುಂದುವರೆದು ಕನ್ನಡ ಚಿತ್ರರಂಗ ಅಂದರೆ ನನ್ನ ಪಾಲಿಗೆ ಅದು ಪುನೀತ್ ರಾಜ್ ಕುಮಾರ್ ಸರ್ ಎಂದಿರುವ ಅಮೃತಾ ರಾವ್ ನಾನು ಕನ್ನಡದಲ್ಲಿ ಚಿತ್ರ ಮಾಡಿದರೆ ಅದು ಪುನೀತ್ ಸರ್ ಜೊತೆಯೇ ಮಾಡಬೇಕು ಎಂದುಕೊಂಡಿದ್ದೆ ಎಂದು ಹೇಳಿದ್ದಾರೆ. ಆ ಅವಕಾಶ ಕೂಡ ಬಂದಿತ್ತು ಆದರೆ ಆಗ ನಾನು ಬೇರೆ ಚಿತ್ರವನ್ನು ಒಪ್ಪಿಕೊಂಡು ಬ್ಯುಸಿಯಾಗಿದ್ದೆ ಹೀಗಾಗಿ ಸಾಧ್ಯವಾಗಲಿಲ್ಲ, ಆದರೇನಂತೆ ಅವರ ಜೊತೆ ಆಕ್ಟ್ ಮಾಡಬೇಕು ಅಂದುಕೊಂಡಿದ್ದೆ ಅಲ್ವಾ ಅದೇ ಬೆಸ್ಟ್ ಕನಸು ಎಂದಿದ್ದಾರೆ.
ಅಂದ್ಹಾಗೇ 2019ರಿಂದ ಚಿತ್ರರಂಗದಿಂದ ದೂರ ಇರುವ ಅಮೃತಾ ರಾವ್ ಸದ್ಯ ಅಕ್ಷಯ್ ಕುಮಾರ್ ಅಭಿನಯದ ಜಾಲಿ ಎಲ್ ಎಲ್ ಬಿ 3 ಚಿತ್ರದ ಮೂಲಕ ಕಂ ಬ್ಯಾಕ್ ಮಾಡುತ್ತಿದ್ದಾರೆ. ಅಕ್ಷಯ್ ಕುಮಾರ್ ಮತ್ತು ಅರ್ಷದ್ ವಾರ್ಸಿ ಈ ಚಿತ್ರದಲ್ಲಿ ನಾಯಕನ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.


Click it and Unblock the Notifications











