ಮ್ಯಾಕ್ಸ್ ಹೆಂಗೆ ಓಡಿದೆ ಗೊತ್ತಾ ? 25 ದಿನ ಪೂರೈಸಿದ್ದಕ್ಕೆ ಸುದೀಪ್ ಫುಲ್ ಖುಷ್..!
ಸುದೀಪ್.. ಕನ್ನಡ ಚಿತ್ರರಂಗದ ಕೆಚ್ಚೆದೆಯ ಕಿಚ್ಚ. ಅಭಿಮಾನಿಗಳ ಪಾಲಿನ ಪ್ರೀತಿಯ ಅಭಿನಯ ಚಕ್ರವರ್ತಿ. ನಾನು ನ್ಯಾಷನಲ್ ಸ್ಟಾರ್ ಎಂದು ಈಗ ಕಾಲರ್ ಎತ್ತಿಕೊಂಡು ಓಡಾಡುವರ ನಡುವೆ ಆ ಕಾಲದಲ್ಲಿಯೇ ಕನ್ನಡ, ತೆಲುಗು, ತಮಿಳು ಮಲಯಾಳಂ, ಹಿಂದಿ ಈ ಐದೂ ಭಾಷೆಗಳಲ್ಲಿ ಮಿಂಚಿದವರು ಸುದೀಪ್.
ಹೆಚ್ಚು ಕಡಿಮೆ ಒಂದೂವರೆ ದಶಕಗಳಿಂದ ಬಾಲಿವುಡ್ಡು.. ಕಾಲಿವುಡ್ಡು .. ಟಾಲಿವುಡ್ಡು .. ಅಂಗಳದಲ್ಲಿ ಓಡಾಡಿರೋ ಅಭಿನಯ ಚಕ್ರವರ್ತಿ ಸುದೀಪ್ ಅವರಿಗೆ ಕೇವಲ ಕರುನಾಡಿನಲ್ಲಿ ಮಾತ್ರವಲ್ಲ ಅಕ್ಕ-ಪಕ್ಕದ ರಾಜ್ಯದಲ್ಲಿ ಕೂಡ ಅಭಿಮಾನಿಗಳಿದ್ದಾರೆ. ಇಂಥಾ ಸುದೀಪ್ ಸದ್ಯ ಮ್ಯಾಕ್ಸ್ ಚಿತ್ರಕ್ಕೆ ಸಿಕ್ಕ ಅಭೂತಪೂರ್ವ ಗೆಲುವಿನ ಬಗ್ಗೆ ಮಾತನಾಡಿದ್ದಾರೆ. ಹುರಿದುಂಬಿಸಿದ, ಬೆನ್ನು ತಟ್ಟಿದ, ಚಿತ್ರವನ್ನು ಮೆಚ್ಚಿ ನಾಲ್ಕು ಒಳ್ಳೆಯ ಮಾತುಗಳನ್ನಾಡಿದ ಎಲ್ಲರಿಗೆ ಧನ್ಯವಾದ ಹೇಳಿದ್ದಾರೆ. ತಮ್ಮ ಚಿತ್ರ 25 ದಿನ ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆ ಮನ ಬಿಚ್ಚಿ ಮಾತನಾಡಿದ್ದಾರೆ.

ಈ ಕುರಿತು ವಿಡಿಯೋ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿರುವ ಸುದೀಪ್, ಕೇವಲ ಕರ್ನಾಟಕ ಮಾತ್ರವಲ್ಲ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಇರುವವರಿಗೂ ಪ್ರತಿಯೊಬ್ಬರಿಗೂ ಧನ್ಯವಾದ ಎಂದು ಹೇಳಿದ್ದಾರೆ. ಮ್ಯಾಕ್ಸ್ ಸಿನಿಮಾವನ್ನು ಬೆಂಬಲಿಸಿದವರಿಗೆ ವಿಶೇಷ ಧನ್ಯವಾದವನ್ನು ಹೇಳಿರುವ ಹರಸಿ ಹಾರೈಸಿದ ಪ್ರತಿಯೊಬ್ಬರಿಗೆ ಬಿಗ್ ಥ್ಯಾಂಕ್ಯೂ ಎಂದು ಹೇಳಿದ್ದಾರೆ.
ಮುಂದುವರೆದು ಮ್ಯಾಕ್ಸ್ ಸಿನಿಮಾವನ್ನು ತುಂಬಾ ಚೆನ್ನಾಗಿ ಮುಂದಕ್ಕೆ ತೆಗೆದುಕೊಂಡು ಹೋಗಿದ್ದೀರಿ ಎಂದು ಸಂಭ್ರಮದಿಂದ ಹೇಳಿರುವ ಕಿಚ್ಚ ಸುದೀಪ್, ಮ್ಯಾಕ್ಸ್ ಸಿನಿಮಾವನ್ನು ಕುದುರೆಯಂತೆ ಚೆನ್ನಾಗಿ ಓಡ್ಸಿದ್ದೀರಿ ಎಂದು ಅಭಿಮಾನದಿಂದ ಹೇಳಿದ್ದಾರೆ. ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ನಿಮ್ಮ ಪ್ರೀತಿ ಹಾಗೂ ಸಪೋರ್ಟ್‌ಗೆ ಧನ್ಯವಾದ ಎಂದು ಹೇಳಿರುವ ಸುದೀಪ್ ಎಲ್ಲದಕ್ಕಿಂತ ಹೆಚ್ಚಾಗಿ ನನ್ನ ಮೇಲೆ ವಿಶ್ವಾಸ ಇರಿಸಿದಕ್ಕೆ ಧನ್ಯವಾದ ಎಂದು ಹೇಳಿದ್ದಾರೆ. ಎರಡೂವರೆ ವರ್ಷದ ನಂತರ ಬಂದ ನನ್ನ ಸಿನಿಮಾದ ಮೇಲೆ ವಿಶ್ವಾಸವಿರಿಸಿದ್ದಕ್ಕೆ ನನ್ನ ಎಲ್ಲಾ ಮ್ಯಾಕ್ಸ್ ಸಿನಿಮಾ ತಂಡದಿಂದ ಥ್ಯಾಂಕ್ಸ್ ಅಂತ ಹೇಳಿದ್ದಾರೆ.
ಇನ್ನುಳಿದಂತೆ ಚಿತ್ರದ ಗಳಿಕೆಯ ವಿಚಾರಕ್ಕೆ ಬಂದರೆ ಮ್ಯಾಕ್ಸ್ ಚಿತ್ರ ಸುದೀಪ್ ಅವರ ವೃತ್ತಿ ಬದುಕಿನಲ್ಲಿಯೇ ಹೊಸದೊಂದು ಮೈಲಿಗಲ್ಲು ಎನ್ನುವ ಮಾತು ಸದ್ಯ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. ಆ ಪ್ರಕಾರ ಚಿತ್ರಮಂದಿರಗಳಲ್ಲಿ 25 ದಿನವನ್ನು ಪೂರೈಸಿರುವ ಮ್ಯಾಕ್ಸ್ ಹತ್ ಹತ್ರ 80 ಕೋಟಿಯನ್ನು ಗಳಿಸಿದೆ. ಇನ್ನೂ 25 ದಿನಗಳನ್ನು ಚಿತ್ರರಂಗದಲ್ಲಿ ಪೂರೈಸಿದರೂ ಕೂಡ ಅನೇಕ ಚಿತ್ರಮಂದಿರಗಳಲ್ಲಿ ಮ್ಯಾಕ್ಸ್ ಇದೆ. ಪರಭಾಷೆ ಚಿತ್ರಗಳ ಹಾವಳಿ ಕನ್ನಡದ ಹೊಸ ಹೊಸ ಚಿತ್ರಗಳ ಬಿಡುಗಡೆಯ ನಡುವೆಯೂ ಪ್ರದರ್ಶನವನ್ನು ಕಾಣುತ್ತಿದೆ.ಬಾಕ್ಸಾಫೀಸ್‌ನಲ್ಲಿ ಹಣ ಕೊಳ್ಳೆ ಹೊಡೆಯುತ್ತಿದೆ.
ಇದರ ನಡುವೆ ಜನವರಿ 31ರಂದು ಜೀ 5 ನಲ್ಲಿ ಮ್ಯಾಕ್ಸ್ ಚಿತ್ರದ ಪ್ರಸಾರ ಶುರುವಾಗಲಿದೆ ಎನ್ನುವ ಪುಕಾರು ಹಬ್ಬಿದೆ. ಆದರೆ ಈ ಸಾಧ್ಯತೆ ತುಂಬಾನೇ ಕಡಿಮೆ. ನಿಜಕ್ಕೂ ಮ್ಯಾಕ್ಸ್ ಚಿತ್ರ ಓಟಿಟಿಗೆ ಬರುವುದು ಯಾವಾಗ ಎನ್ನುವ ಪ್ರಶ್ನೆಗುತ್ತರ ಚಿತ್ರತಂಡವೇ ನೀಡಬೇಕಿದೆ. ಸದ್ಯ ಮ್ಯಾಕ್ಸ್ ಚಿತ್ರದ ಗೆಲುವನ್ನು ಸಂಭ್ರಮಿಸುತ್ತಿರುವ ಸುದೀಪ್ ಬಿಲ್ಲ ರಂಗ ಬಾಷಾ ಚಿತ್ರಕ್ಕೆ ಅಣಿಯಾಗುತ್ತಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ಚಿತ್ರದ ಕುರಿತು ಅಧಿಕೃತವಾದ ಘೋಷಣೆ ಯಾವ ಕ್ಷಣದಲ್ಲಾದರೂ ಆಗಬಹುದು. ಈ ಚಿತ್ರ ಹೊರತು ಪಡಿಸಿದರೆ ಸುದೀಪ್ ಕೈಯಲ್ಲಿ ಆರ್.ಚಂದ್ರು ಮತ್ತು ಚೇರನ್ ನಿರ್ದೇಶನದ ಚಿತ್ರಗಳು ಸೇರಿ ಅನೇಕ ಚಿತ್ರಗಳಿವೆ.


Click it and Unblock the Notifications











