ಕಾವ್ಯಾ ಶೆಟ್ಟಿ ಜೊತೆ ಮಹೇಶ್ ಐ ಯಾಮ್ ಇನ್ ಲವ್
'ಐ ಯಾಮ್ ಇನ್ ಲವ್' ಸಾಮಾಜಿಕ ಜೀವನದಲ್ಲಿ ಸದಾ ಕಾಲ ಜೀವಂತವಾಗಿರುವ ಉದ್ಗಾರ. ಯುವ ಪ್ರೇಮಿಗಳಿಗೆ ಇದೊಂದು ಸದಾ ಆಡುವ ಮಾತು. ಆದರೆ ಚಿತ್ರದಲ್ಲಿ ಇದನ್ನು ನಾಯಕ ಅಥವಾ ನಾಯಕಿ ಹೇಗೆ ಬಳಸುತ್ತಾರೆ, ಅಂತಹ ಕ್ಷಣ ಹೇಗೆ ಬರುತ್ತದೆ, ಅದರಿಂದ ಆಗುವ ಸಾಧಕಬಾಧಕಗಳನ್ನು ಪತ್ರಕರ್ತ ನಂದಕುಮಾರ್ ನಿರ್ದೇಶನದ 'ಐ ಯಾಮ್ ಇನ್ ಲವ್' ಚಿತ್ರದಲ್ಲಿ ಹೊರಬೀಳಲಿದೆ. ಆಗಸ್ಟ್ 9ರಂದು ಚಿತ್ರ ತೆರೆಕಾಣುತ್ತಿದೆ.
ಚಿತ್ರದಲ್ಲಿ ವಿಶೇಷ ತಿರುವು ಸಹ ಇರುವುದನ್ನು ನಿರ್ದೇಶಕರು ಖಚಿತ ಪಡಿಸುತ್ತಾರೆ. ನಂದಕುಮಾರ್ ಅವರ 'ಬ್ಯಾಡ್ ಲಕ್' ನಂತರ ಬಿಡುಗಡೆ ಆಗುತ್ತಿರುವ ಸಿನೆಮಾ ಇದು. ಚಿತ್ರದ ಚಿತ್ರೀಕರಣವನ್ನು ಬೆಂಗಳೂರು, ಬೇಕಲ್ ಕೋಟೆ, ಬ್ಯಾಂಕಾಕ್, ನಂದಿ ಬೆಟ್ಟ ಹಾಗೂ ಇನ್ನಿತರ ಸ್ಥಳಗಳಲ್ಲಿ ಲಲಿತ ಚೆನ್ನರೆಡ್ಡಿ ಅವರು ನಕ್ಷತ್ರ ಎಂಟರ್ ಟೈನ್ ಮೆಂಟ್ ಅಡಿಯಲ್ಲಿ ನಿರ್ಮಿಸಿದ್ದಾರೆ.
ಈ ಚಿತ್ರದಲ್ಲಿ ಇಬ್ಬರು ಇಂಜಿನಿಯರಿಂಗ್ ಶಿಕ್ಷಣ ಪಡೆದವರು ಮುಖ್ಯ ತಾರಾಗಣದಲ್ಲಿ ಪ್ರಥಮ ಬಾರಿಗೆ ಅಭಿನಯಿಸಿದ್ದಾರೆ. ನಾಯಕ ಮಹೇಶ್ ಇಂಜಿನಿಯರಿಂಗ್ ಮುಗಿಸಿ ಚಿತ್ರರಂಗದಲ್ಲಿ ತರಬೇತಿ ಪಡೆದವರು. ನಾಯಕಿ ಕಾವ್ಯ ಶೆಟ್ಟಿ ಕಂಪ್ಯೂಟರ್ ಇಂಜಿನಿಯರಿಂಗ್ ಮುಗಿಸಿದವರು.ನೇಹಾ, ತಿಲಕ್, ಧರ್ಮ, ಕುರಿ ರಂಗ, ಕೊಟ್ರೇಶ್, ವೀರೇಶ್, ಮಮತಾ ಹಾಗೂ ಇನ್ನಿತರರು ಪೋಷಕ ಪಾತ್ರದಲ್ಲಿ ಇದ್ದಾರೆ. ಮೋಹನ್ ಬಿ ಕೆರೆ ಕಲಾ ನಿರ್ದೇಶನ, ಚಂದ್ರಮೋಹನ್ ಅವರ ನೃತ್ಯ, ಮಾಧವನ್ ಮೇಕ್ ಅಪ್, ರಾಜಶೇಖರ ರೆಡ್ಡಿ ಸಂಕಲನ, ಕೌರವ ವೆಂಕಟೇಶ್, ಹ್ಯಾರ್ರಿಸ್ ಜಾನಿ ಸಾಹಸ, ರಾಮ್ ಕುಮಾರ್ ಅವರ ವಸ್ತ್ರ ವಿನ್ಯಾಸ, ಬದ್ರಿ ಅವರ ಸ್ಥಿರ ಚಿತ್ರಣ ಮಾಡಿದ್ದಾರೆ. ಪ್ರಸಿದ್ಧ ಛಾಯಾಗ್ರಹ ಪಿ ಕೆ ಎಚ್ ದಾಸ್ ಅವರ ಛಾಯಾಗ್ರಹಣ, ಸಾಯಿ ಕಾರ್ತಿಕ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.
ಈ ಚಿತ್ರಕ್ಕೆ ಈಗಾಗಲೆ ಮಾಲ್ ಗಳಲ್ಲಿ, ಸೂಪರ್ ಮಾರ್ಕೆಟ್ ಗಳಲ್ಲಿ ಅಬ್ಬರದ ಪ್ರಚಾರ ನೀಡಲಾಗಿದೆ. ಚಿತ್ರದ ಹೀರೋ ಮಹೇಶ್ ಮನೆಯವರ ಒತ್ತಾಯಕ್ಕೆ ಮಣಿದು ಇಂಜಿನಿಯರಿಂಗ್ ಮುಗಿಸಿದರು. ಆದರೆ ಆರಂಭದಿಂದಲೂ ಅವರಿಗೆ ಸಿನಿಮಾದ ಕಡೆಗೆ ಸೆಳೆತ ಇದ್ದೇ ಇತ್ತು. ಈಗ ಅವರ ಕನಸು ಐ ಯಾಮ್ ಇನ್ ಲವ್ ಚಿತ್ರದ ಮೂಲಕ ನೆರವೇರುತ್ತಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications












