ನಾನು ಬಡವನಲ್ಲ, ದೊಡ್ಡ ಶ್ರೀಮಂತ: ಹೀಗೇಕೆಂದರು ಧನಂಜಯ್?
ಧನಂಜಯ್ ನಟನೆಯ 'ಹೆಡ್ ಬುಷ್' ಸಿನಿಮಾವನ್ನು ಉದ್ದೇಶಪೂರ್ವಕವಾಗಿ ವಿವಾದ ಮಾಡಲಾಗುತ್ತಿದೆ. ಧನಂಜಯ್ ಅವರೊಟ್ಟಿಗೆ ಸೈಂದ್ಧಾಂತಿಕ ಭಿನ್ನಾಭಿಪ್ರಾಯದಿಂದ ಅವರ ಸಿನಿಮಾವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದೆ.
ಧನಂಜಯ್ ಅವರಿಗೆ ಬೆಂಬಲ ವ್ಯಕ್ತಪಡಿಸಿ 'ಐ ಸ್ಟ್ಯಾಂಡ್ ವಿತ್ ಧನಂಜಯ್' ಹಾಗೂ 'ಬಡವರ ಮಕ್ಳು ಬೆಳೀಬೇಕು ಕಣ್ರಯ್ಯ' ಎಂಬ ಅಭಿಯಾನ ಜೋರಾಗಿ ನಡೆಯುತ್ತಿದೆ.
'ಹೆಡ್ ಬುಷ್' ಸಿನಿಮಾದ ವಿವಾದಕ್ಕೆ ಸಂಬಂಧಿಸಿದಂತೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಿನ್ನೆ ಚಿತ್ರತಂಡ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಧನಂಜಯ್ ವಿವಾದಕ್ಕೆ ಸಂಬಂಧಿಸಿದಂತೆ ಹಾಗೂ ಈಗ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಅಭಿಯಾನಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದಾರೆ.

ಥುಳಿಕ್ಕೊಳಗಾದವರ ಪರ ನಿಲ್ಲಬೇಕು: ಧನಂಜಯ್
''ನಾವೆಲ್ಲರೂ ಥುಳಿಕ್ಕೊಳಗಾದವರ ಪರ ನಿಲ್ಲಬೇಕು, ಬಡವರ ಮಕ್ಕಳನ್ನು ಬೆಳೆಸಿ ಎಂದ ಕೂಡಲೇ ಕೇವಲ ಬಡವರ ಬಗ್ಗೆ ಮಾತ್ರ ಧನಿ ಎತ್ತಿ ಎಂದಲ್ಲ. ಅದು ಶ್ರೀಮಂತಿಕೆ ಅಥವಾ ಹಣದ ವಿಚಾರ ಅಷ್ಟೆ ಎಂದೇನೂ ಅಲ್ಲ. ನೊಂದವರ ಪರವಾಗಿ ಎಲ್ಲರೂ ನಿಲ್ಲಬೇಕು ಎಂಬುದು ಆಶಯ. ಈಗಲೂ ಅಂಥವರ ಪರ ಜನ ನಿಲ್ಲುತ್ತಿದ್ದಾರೆ'' ಎಂದಿದ್ದಾರೆ ಧನಂಜಯ್.

'ಕೋಟ್ಯಂತರ ಮಂದಿ ಕೈಹಿಡಿದಿರುವ ಶ್ರೀಮಂತ ನಾನು'
''ನನ್ನನ್ನು ನಾನು ಬಡವ ಎಂದು ಹೇಳಿಕೊಳ್ಳುವುದಿಲ್ಲ. ಜನ ನನಗೆ ತುಂಬಾ ಚೆನ್ನಾಗಿ ಶಕ್ತಿ ತುಂಬಿದ್ದಾರೆ. 'ಬಡವ ರಾಸ್ಕಲ್' ಅಲ್ಲಾಗಲಿ, 'ಹೆಡ್ ಬುಷ್' ನಲ್ಲಾಗಲಿ ಕೈ ಹಿಡಿದಿದ್ದಾರೆ. ಕನ್ನಡಿಗರು ಪ್ರೀತಿ ತೋರಿಸುವ, ಕನ್ನಡಿಗರು ಕೈ ಹಿಡಿದಿರುವ ತುಂಬಾ ದೊಡ್ಡ ಶ್ರೀಮಂತ ನಾನು. 'ಬಡವರ ಮಕ್ಳು' ಅಂಥ ಬಳಸ್ತೀನಿ ನಾನು ಅದಕ್ಕೆ ಕಾರಣ, ನನ್ನಂಥವರು ನೂರಾರು-ಸಾವಿರಾರು ಜನ ಬರುತ್ತಲೇ ಇರುತ್ತಾರೆ.

ಹಣ, ಬೆಂಬಲ ಇಕ್ಟೊಂಡು ಯಾರು ಬರಲ್ಲ: ಧನಂಜಯ್
ಯಾರೂ ಕೋಟ್ಯಂತರ ಹಣ ಇಟ್ಕೊಂಡು ಬರಲ್ಲ. ಯಾರೂ ಬೆಂಬಲ ಇಟ್ಕೊಂಡು ಬರಲ್ಲ. ಪ್ರತಿಭೆ ಇಟ್ಕೊಂಡು ಬರ್ತಾರೆ. ಅಂಥಹಾ ಹುಡುಗರು ಬೆಳಿಯಬೇಕಿದೆ. ಅಂಥ ಹುಡುಗರಿಗೆ ಶಕ್ತಿ ತುಂಬಬೇಕಿದೆ. ಇದೇ ಕಾರಣಕ್ಕೆ ನನ್ನ ನಿರ್ಮಾಣ ಸಂಸ್ಥೆಯಿಂದ ಹೊಸಬರಿಗಾಗಿ ಸಿನಿಮಾ ನಿರ್ಮಿಸುತ್ತಿದ್ದೇನೆ. ಆ ಮೂಲಕ ಅವರಿಗೆ ಬೆಂಬಲ ನೀಡುವ ಯತ್ನ ಮಾಡುತ್ತಿದ್ದೇನೆ. ನನ್ನ ನಿರ್ಮಾಣದಲ್ಲಿ ನಾನು ನಟಿಸುವುದಿಲ್ಲ ಬದಲಿಗೆ ಹೊಸಬರಿಗೆ ಅವಕಾಶ ನೀಡಲಿದ್ದೇನೆ'' ಎಂದಿದ್ದಾರೆ ಡಾಲಿ.

ನಾನು ಬಡವ ಎಂದು ಹೇಳಿಕೊಳ್ಳಲ್ಲ: ಧನಂಜಯ್
''ನನ್ನ 'ಬಡವ ರಾಸ್ಕಲ್' ಸಿನಿಮಾದ ನಿರ್ದೇಶಕ ವಿಜಯ್ ಆಗಿರಬಹುದು, 'ಹೆಡ್ ಬುಷ್' ಸಿನಿಮಾದ ನಿರ್ದೇಶಕ ಶೂನ್ಯ ಆಗಿರಬಹುದು, ಬಡ ಮಧ್ಯಮ ವರ್ಗದಿಂದ ಬಂದಿರುವ ಪ್ರತಿಭಾವಂತರು. ಹೊಸ ಸಿನಿಮಾ ಒಂದನ್ನು ನಿರ್ದೇಶನ ಮಾಡುತ್ತಿರುವವನು ಒಬ್ಬ ಸೆಟ್ ಬಾಯ್. ಅಂಥಹಾ ಪ್ರತಿಭೆಗಳಿಗೆ ಅವಕಾಶ ಸಿಗಬೇಕು, 'ಬಡವರ ಮನೆ ಮಕ್ಳು ಬೆಳೀಬೇಕು' ಅದನ್ನು ನಾನು ಹೇಳಿಯೇ ಹೇಳುತ್ತೀನಿ, ಆದರೆ ನಾನು ಬಡವ ಎಂದು ಹೇಳಿ ಸಿಂಪತಿ ಗಿಟ್ಟಿಸಿಕೊಳ್ಳಲ್ಲ'' ಎಂದಿದ್ದಾರೆ ಧನಂಜಯ್.


Click it and Unblock the Notifications











