ಆಲಿಯಾ - ರಣ್‌ಬೀರ್ ಚಿತ್ರದಲ್ಲಿ ರಾವಣನಾಗಲು ಒಪ್ಪಿಕೊಂಡಿದ್ದೀರಾ? ಯಶ್ ಸ್ವತಃ ಕೊಟ್ಟ ಉತ್ತರವಿದು!
ಸಾಮಾಜಿಕ ಜಾಲತಾಣದಲ್ಲಿ ಹಲವಾರು ತಿಂಗಳುಗಳಿಂದ ಸತತವಾಗಿ ಸುದ್ದಿಯಲ್ಲಿರುವ ಹಾಗೂ ಚರ್ಚೆಗೀಡಾಗಿರುವ ಸಿನಿಮಾ ವಿಷಯವೆಂದರೆ ಅದು ರಾಕಿಂಗ್ ಸ್ಟಾರ್ ಯಶ್ ಮುಂದಿನ ಚಿತ್ರ ಯಾವುದು ಎಂಬುದು.
ಹೌದು, ರಾಕಿ ಭಾಯ್ ಆಗಿ ಭಾರತದ ಬಾಕ್ಸ್ ಆಫೀಸ್‌ನಲ್ಲಿ ತೂಫಾನ್ ಎಬ್ಬಿಸಿದ ಯಶ್ ಮುಂದೆ ಯಾವ ನಿರ್ದೇಶಕರ ಜತೆ ಸಿನಿಮಾ ಮಾಡಲಿದ್ದಾರೆ ಎಂಬ ಕುತೂಹಲ ಹಾಗೂ ಪ್ರಶ್ನೆ ಅಭಿಮಾನಿಗಳಲ್ಲಿ ಹಾಗೂ ಸಿನಿ ರಸಿಕರಲ್ಲಿ ಮೂಡಿತ್ತು.

ಕಳೆದ ಐದು ವರ್ಷಗಳಲ್ಲಿ ಕೆಜಿಎಫ್ ಫ್ರಾಂಚೈಸಿಯ ಲುಕ್‌ನಲ್ಲಿಯೇ ತಮ್ಮ ನಟನನ್ನು ನೋಡಿ ಸಾಕೆನಿಸಿರುವ ಯಶ್ ಅಭಿಮಾನಿಗಳು ಮುಂದಿನ ಚಿತ್ರದಲ್ಲಿ ತಮ್ಮ ನಟ ವಿಭಿನ್ನ ಗೆಟಪ್ ಹಾಗೂ ವಿಭಿನ್ನ ಮ್ಯಾನರಿಸಂ ಇರುವ ಪಾತ್ರವನ್ನು ಆರಿಸಿಕೊಳ್ಳಲಿ ಎಂಬ ಅಭಿಪ್ರಾಯವನ್ನು ಹಲವಾರು ಬಾರಿ ವ್ಯಕ್ತಪಡಿಸಿದ್ದರು. ಇನ್ನು ಯಶ್ ಆಪ್ತ ವಲಯದಿಂದ ಬಂದಿದ್ದ ಮಾಹಿತಿ ಪ್ರಕಾರ ಯಶ್ ಈ ಬಾರಿ ಕೆಜಿಎಫ್ ಪ್ರಪಂಚದಿಂದ ಆಚೆ ಬಂದು ಚಿತ್ರ ಮಾಡಲಿದ್ದಾರೆ ಎನ್ನಲಾಗಿತ್ತು.
ಅಲ್ಲದೇ ಕೆಲ ದಿನಗಳ ಹಿಂದೆ ಯಶ್ ಮುಂದಿನ ಚಿತ್ರವನ್ನು ಸ್ವತಃ ಯಶ್ ಅವರೇ ನಿರ್ದೇಶನ ಮಾಡಿಕೊಳ್ಳಲಿದ್ದಾರೆ ಹಾಗೂ ಆಯ್ರ ಪ್ರೊಡಕ್ಷನ್ಸ್ ಅಡಿಯಲ್ಲಿ ರಾಧಿಕಾ ಪಂಡಿತ್ ಅವರೇ ನಿರ್ಮಿಸಲಿದ್ದಾರೆ ಎಂಬ ಸುದ್ದಿಗಳೂ ಸಹ ಹರಿದಾಡಿದ್ದವು. ಇನ್ನು ಯಶ್ ಹುಟ್ಟುಹಬ್ಬದಂದು ಯಶ್ 19 ಚಿತ್ರದ ಮಾಹಿತಿ ಹೊರ ಬೀಳುವುದು ಖಚಿತ ಎಂದೂ ಸಹ ಹೇಳಲಾಗಿತ್ತು. ಆದರೆ ಈ ಪೈಕಿ ಯಾವ ಸುದ್ದಿಗಳೂ ಸಹ ನಿಜವಾಗಲಿಲ್ಲ. ಇಲ್ಲಿಯ ತನಕ ಯಶ್ ಮುಂದಿನ ಚಿತ್ರದ ಬಗ್ಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿರಲಿಲ್ಲ.
ಆದರೆ ಇಂದು ( ಜೂನ್ 21 ) ನಂಜನಗೂಡಿಗೆ ಪತ್ನಿ ರಾಧಿಕಾ ಪಂಡಿತ್ ಹಾಗೂ ಮಕ್ಕಳೊಂದಿಗೆ ಭೇಟಿ ನೀಡಿದ್ದ ಯಶ್ ಮಾಧ್ಯಮದವರು ಯಶ್ 19 ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಹಾಗೆಯೇ ಬಾಲಿವುಡ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಹರಿದಾಡುತ್ತಿರುವ ಸುದ್ದಿಗಳ ಬಗ್ಗೆಯೂ ಸಹ ಯಶ್ ಮುಕ್ತವಾಗಿ ಉತ್ತರ ನೀಡಿದ್ದಾರೆ. ಸದ್ಯ ಯಶ್ ಬಾಲಿವುಡ್ ಚಿತ್ರದಲ್ಲಿ ನಟಿಸುವುದರ ಬಗ್ಗೆ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಹೌದು, ಯಶ್ ದಂಗಲ್ ಹಾಗೂ ಚಿಚ್ಚೋರೆ ಸೇರಿದಂತೆ ಹಲವಾರು ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶಿಸಲಿರುವ 'ರಾಮಾಯಣ್' ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.
ಈ ಕುರಿತು ಇದೀಗ ಉತ್ತರಿಸಿರುವ ಯಶ್ "ನಾನೆಲ್ಲೂ ಹೋಗಿಲ್ಲ, ಇರೋ ಕಡೆನೇ ಎಲ್ರೂನೂ ಕರೆಸಿಕೊಂಡಿದ್ದೇನೆ. ತಲೆ ಕೆಡಿಸಿಕೊಳ್ಳಬೇಡಿ ಹೋಗಿ" ಎಂದು ಉತ್ತರ ನೀಡಿದ್ದಾರೆ. ಈ ಮೂಲಕ ತಾನು ಬಾಲಿವುಡ್ ಚಿತ್ರದ ಆಫರ್ ಒಪ್ಪಿಲ್ಲ ಎಂಬುದನ್ನು ಯಶ್ ಬಹಿರಂಗಪಡಿಸಿದ್ದಾರೆ.
ಇನ್ನು ಯಶ್ 19 ಬಗ್ಗೆ ಮಾತನಾಡಿದ ಯಶ್ ""ಹೇಳ್ತೀನಿ.. ಹಿಂಗ್ ಹೇಳೋಕಾಗುತ್ತಾ? ಒಂದಂತೂ ನಿಜ, ಜನ ನಮಗೆ ಏನು ಶಕ್ತಿ ಕೊಟ್ಟು ಬೆಳೆಸಿದಾರೆ, ಏನು ಆಶೀರ್ವಾದ ಮಾಡಿ ಕಳುಹಿಸಿದ್ದಾರೆ, ನಾನು ನಂಬೋದು ಒಂದೇ. ಎಲ್ಲರೂ ದುಡ್ಡು ಕೊಟ್ಟು ಸಿನಿಮಾ ನೋಡ್ತಾರೆ. ಆ ದುಡ್ಡಿಗೊಂದು ವ್ಯಾಲ್ಯೂ ಇರಬೇಕು. ನಾವು ಮಾಡೋ ಕೆಲಸದಲ್ಲಿ ಶ್ರದ್ಧೆ ಇರಬೇಕು. ಇಡೀ ದೇಶ ಅಥವಾ ಇಡೀ ಜಗತ್ತು ನೋಡ್ತಾ ಇದೆ. ಆ ಜವಾಬ್ದಾರಿ ನನ್ನ ಮೇಲಿದೆ. ದೇವರ ಸನ್ನಿಧಾನ ಸುಮ್ಮನೆ ಹೇಳೋದು ಬೇಡ. ಬಹಳ ದಿನಗಳಿಂದ ತುಂಬಾ ಕಷ್ಟಪಟ್ಟು ಕೆಲಸ ಮಾಡ್ತಿದ್ದೀವಿ. ಅವರೆಲ್ಲರೂ ಖುಷಿ ಪಡೋ ರೀತಿ ಕೆಲಸ ಆಗುತ್ತೆ. ನಾನ್ ಹೇಳಿದ್ನಲ್ಲ, ನನಗೆ ಜವಾಬ್ದಾರಿ ಇದೆ. ಜನ ಫ್ರೀ ನೋಡೋ ಹಾಗೆ ಇದ್ದಿದ್ರೆ ನಮಗಿಷ್ಟ ಬಂದ ಹಾಗೆ ಮಾಡಬಹುದಿತ್ತು. ಅವರೇ ಬೆಳೆಸಿರುವುದು, ಅವರು ಖುಷಿಯಿಂದ ಇರುವ ರೀತಿಯ ಕೆಲಸವನ್ನು ನಾವು ಮಾಡಬೇಕು. ಆ ಜವಾಬ್ದಾರಿ ನನ್ನ ಮೇಲಿದೆ, ನಾನು ಮಾಡ್ತಾ ಇದ್ದೀನಿ" ಎಂದು ಹೇಳಿಕೆ ನೀಡಿದರು.


Click it and Unblock the Notifications











