ಜೀವನದಲ್ಲಿ ಈ ವಿಷಯ ನಂಗೆ ಬೇಡ ಅದನ್ನು ಮತ್ತೆ ನೆನಪಿಸಿಕೊಳ್ಳಲಾರೆ ಎಂದು ಕೈಮುಗಿದ ಜೆಕೆ!
2011ರಲ್ಲಿ ತೆರೆಗೆ ಬಂದಿದ್ದ ಕಿಚ್ಚ ಸುದೀಪ್ ನಟನೆಯ ಹಾಗೂ ನಿರ್ದೇಶನದ ಹಿಟ್ ಚಿತ್ರ ಕೆಂಪೇಗೌಡ ಮೂಲಕ ನಟ ಜಯರಾಮ್ ಕಾರ್ತಿಕ್ ಚಿತ್ರರಂಗ ಪ್ರವೇಶಿಸಿ ಬಳಿಕ ಹಲವು ಚಿತ್ರಗಳಲ್ಲಿ ನಟಿಸಿ ಬಳಿಕ 2013ರಲ್ಲಿ ಅಗ್ನಿಸಾಕ್ಷಿ ಎಂಬ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಿರುತೆರೆಗೂ ಸಹ ಕಾಲಿಟ್ಟರು.
ಅಗ್ನಿಸಾಕ್ಷಿ ಧಾರಾವಾಹಿಯ ಜೆಕೆ ಪಾತ್ರದ ಮೂಲಕ ದೊಡ್ಡಮಟ್ಟದಲ್ಲಿ ಖ್ಯಾತಿಯನ್ನು ಪಡೆದುಕೊಂಡ ಜಯರಾಮ್ ಕಾರ್ತಿಕ್ ಮನೆ ಮಾತಾದರು. ಅಶ್ವಿನಿ ನಕ್ಷತ್ರದ ಬಳಿಕ ಬೇಡಿಕೆ ಹೆಚ್ಚಿಸಿಕೊಂಡ ಜೆಕೆ ಮತ್ತಷ್ಟು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದರು ಹಾಗೂ ಚಲನಚಿತ್ರಗಳಲ್ಲಿ ಸಹ ನಟನಾಗಿ ಮತ್ತು ಲೀಡ್ ರೋಲ್‌ಗಳಲ್ಲಿ ನಟಿಸಿದರು.

ಇದರ ನಡುವೆ ಹಿಂದಿಯ ಸಿಯಾ ಕೆ ರಾಮ್ ಎಂಬ ಧಾರಾವಾಹಿಯಲ್ಲಿಯೂ ಸಹ ನಟಿಸಿದ್ದ ಜೆಕೆ ಕನ್ನಡದಲ್ಲಿ ಅವಕಾಶ ಕಡಿಮೆ ಎಂಬ ಹೇಳಿಕೆ ನೀಡಿ ವಿವಾದಕ್ಕೂ ಸಹ ಗುರಿಯಾಗಿದ್ದರು. ಇನ್ನು ಇತ್ತೀಚೆಗಷ್ಟೆ ಕನ್ನಡ ಚಿತ್ರರಂಗದಲ್ಲಿ ಓರ್ವ ವ್ಯಕ್ತಿ ತನ್ನ ಏಳಿಗೆಯನ್ನು ಸಹಿಸಲಾರದೇ ತನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂಬ ಹೇಳಿಕೆಯನ್ನೂ ಸಹ ನೀಡಿದ್ದ ಜೆಕೆ ಮತ್ತೊಮ್ಮೆ ವಿವಾದಕ್ಕೀಡಾಗಿದ್ದರು. ಎಲ್ಲಿಯೂ ತನ್ನ ವಿರುದ್ಧ ಸೇಡನ್ನು ಹೊಂದಿರುವ ಆ ವ್ಯಕ್ತಿ ಯಾರು ಎಂಬುದನ್ನು ಹೇಳದೇ ಕಿಡಿಕಾರಿದ್ದ ಜೆಕೆ ಚಿತ್ರರಂಗ ತ್ಯಜಿಸುತ್ತೇನೆ ಎಂದೆಲ್ಲಾ ಬೇಸರದ ಮಾತುಗಳನ್ನಾಡಿದ್ದರು.
ಇಷ್ಟರ ಮಟ್ಟಕ್ಕೆ ಬೇಸರಕ್ಕೊಳಗಾಗಿ ಸುದ್ದಿಗೀಡಾಗಿದ್ದ ಜೆಕೆ ನಟನೆಯ ಚಿತ್ರ ಐರಾವನ್ ಮುಂದಿನ ಶುಕ್ರವಾರ ಅಂದರೆ ಜೂನ್ 16ರಂದು ಬಿಡುಗಡೆಯಾಗಲಿದ್ದು, ಈ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡು ವಿವಿಧ ಸಂದರ್ಶನಗಳಲ್ಲಿ ಭಾಗವಹಿಸಿ ಮಾತನಾಡುತ್ತಿದ್ದಾರೆ.
ಜೀ ನ್ಯೂಸ್ ನಡೆಸಿದ ಸಂದರ್ಶನದಲ್ಲಿಯೂ ಭಾಗವಹಿಸಿದ್ದ ಜೆಕೆ ತಮ್ಮ ಈ ಚಿತ್ರದ ಜತೆಗೆ ಇತರೆ ವಿಷಯಗಳ ಬಗ್ಗೆ ಸಹ ಮಾತನಾಡಿದರು. ಪುನೀತ್ ರಾಜ್‌ಕುಮಾರ್ ಅವರ ಸರಳತೆಯನ್ನು ಹೊಗಳಿದ ಜೆಕೆ ಒಂದು ವಿಷಯದ ಬಗ್ಗೆ ತಾನು ಮಾತನಾಡಲು ಇಚ್ಛಿಸುವುದಿಲ್ಲ ಎಂದು ಹೇಳಿಕೆಯನ್ನು ನೀಡಿದ್ದಾರೆ.
ಮೊದಲಿಗೆ ಪುನೀತ್ ರಾಜ್‌ಕುಮಾರ್ ಸರಳತೆಯನ್ನು ಹೊಗಳಿದ ಜೆಕೆ "ಅವರು ಹೋದಮೇಲೆ ಅವರು ಮಾಡಿದ್ದ ಸಹಾಯ ಜನರಿಗೆ ಗೊತ್ತಾಯಿತು. ಆದರೆ ನಾವು ನೋಡಿರೋ ಪ್ರಕಾರ ಅವರು ತುಂಬಾ ಸಹಾಯ ಮಾಡಿದ್ದಾರೆ. 2012ರಲ್ಲಿ ಅಶ್ವಿನಿ ನಕ್ಷತ್ರ ಶುರು ಆಯಿತು. ನಾನು ಮತ್ತು ಮಯೂರಿ ಪ್ರಚಾರ ಮಾಡುವುದಕ್ಕೋಸ್ಕರ ಲೊನಾವಾಲಾದಲ್ಲಿ ನಡೆಯುತ್ತಿದ್ದ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗುತ್ತಿದ್ದೆವು. ಆಗ ಓರ್ವ ವ್ಯಕ್ತಿ ನಮ್ಮ ಕಡೆ ಕೈಬೀಡಿ ಹಾಯ್ ಎಂದರು. ಮಯೂರಿ ಅಪ್ಪು ಸರ್ ಎಂದು ಹೇಳಿದ್ರು. ಅವರೇಕೆ ನಮಗೆ ಕೈಬೀಸುತ್ತಾರೆ ಎಂದುಕೊಂಡೆ. ಅಷ್ಟರಲ್ಲಿ ಅವರೇ ಹತ್ತಿರ ಬಂದು, ನಿಮ್ಮ ಪೋಸ್ಟರ್ ಎಲ್ಲಾ ನೋಡಿದೆ. ಒಂದು ಸೀರಿಯಲ್‌ಗೆ ಇಷ್ಟೆಲ್ಲಾ ಪ್ರಚಾರ ಸೂಪರ್, ಒಳ್ಳೆದಾಗಲಿ ಎಂದರು. ಅದನ್ನು ಹೇಳುವ ಅಗತ್ಯವೇ ಅವರಿಗೆ ಇರಲಿಲ್ಲ. ಅವರು ಸುಮ್ಮನೆ ಹೋಗಬಹುದಿತ್ತು. ಇದು ಅವರು ಎಂತಹ ವ್ಯಕ್ತಿ ಎಂಬುದನ್ನು ತೋರಿಸುತ್ತದೆ" ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಜೆಕೆ ಬಿಗ್ ಬಾಸ್ ಬಗ್ಗೆ ಹೇಳೋದಾದ್ರೆ, ಬಿಗ್ ಬಾಸ್ ನೆನಪಾಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದರು. "ಇಲ್ಲ, ಇಲ್ಲ, ಇಲ್ಲ... ಬಿಗ್ ಬಾಸ್‌ನ ಮಾತ್ರ ನೆನಪು ಮಾಡಿಕೊಳ್ಳುವುದಿಲ್ಲ. ಬೇಡ ನಂಗೆ" ಎಂದರು. ಇದಕ್ಕೆ ನಿರೂಪಕಿ ಕಾರಣ ಕೇಳಿದಾಗ ಉತ್ತರಿಸಿದ ಜೆಕೆ "ಅಲ್ಲಿಗೆ ಹೋದವರಿಗೆ ಗೊತ್ತು. ಅದರ ಬಗೆಗಿನ ಯಾವ ವಿಷಯವನ್ನೂ ಸಹ ನಾನು ಪುನಃ ನೆನಪಿಸಿಕೊಳ್ಳುವುದಿಲ್ಲ" ಎಂದರು.


Click it and Unblock the Notifications











