ನನ್ನ ಮಗನಿಗೆ ಆಕ್ಟಿಂಗ್ ಬರಲ್ಲ ಅಂದ್ರೆ ವಾಪಸ್ ಕಳುಹಿಸಿಬಿಡಿ ಎಂದಿದ್ದೆ: ಸುದೀಪ್ ತಂದೆ ಸಂಜೀವ್!
ಮೊನ್ನೆಯಷ್ಟೇ ( ಜೂನ್ 26 ) ಜಿಮ್ಮಿ ಎಂಬ ಚಿತ್ರದ ಕ್ಯಾರೆಕ್ಟರ್ ಟೀಸರ್ ಬಿಡುಗಡೆಗೊಳಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ನೂತನ ನಾಯಕನ ಆಗಮನವಾಗಿದೆ. ಹೌದು, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ಈ ಜಿಮ್ಮಿ ಚಿತ್ರದ ಮೂಲಕ ಸಿನಿಮಾ ರಂಗ ಪ್ರವೇಶಿಸಲು ಸಿದ್ಧರಾಗಿದ್ದಾರೆ.
ಕೇವಲ ನಟನೆ ಮಾತ್ರವಲ್ಲದೇ ನಿರ್ದೇಶನವನ್ನೂ ಸಹ ಸಂಚಿತ್ ಸಂಜೀವ್ ಅವರೇ ಮಾಡಲು ಮುಂದಾಗಿದ್ದು, ಎರಡೆರಡು ದೊಡ್ಡ ಜವಾಬ್ದಾರಿಗಳನ್ನು ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ. ಹೀಗೆ ಚಿತ್ರರಂಗ ಪ್ರವೇಶಿಸಿ ಮಾನವ ರೀತಿಯೇ ದೊಡ್ಡ ಸ್ಟಾರ್ ಆಗಬೇಕು ಎಂಬ ಕನಸನ್ನು ಕಂಡಿರುವ ಸಂಚಿತ್ ಸಂಜೀವ್‌ಗೆ ಕನ್ನಡ ಸಿನಿ ರಸಿಕರಿಂದ ದೊಡ್ಡ ಮಟ್ಟದಲ್ಲಿಯೇ ಸ್ವಾಗತ ದೊರೆತಿದೆ.

ಹೌದು, ಜಿಮ್ಮಿ ಚಿತ್ರದ ಕ್ಯಾರೆಕ್ಟರ್ ಗ್ಲಿಂಪ್ಸ್ ಬಿಡುಗಡೆಯಾದ ಬೆನ್ನಲ್ಲೇ ಚಿತ್ರ ಪ್ರೇಮಿಗಳು ಈತನಲ್ಲಿ ಟ್ಯಾಲೆಂಟ್ ಇದೆ, ಎಲ್ಲವನ್ನೂ ಕಲಿತುಕೊಂಡು ಬಂದ ನಂತರವೇ ಚಿತ್ರ ಮಾಡಲು ಮುಂದಾಗಿದ್ದಾರೆ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಹೀಗೆ ಮೊಮ್ಮಗ ಸಂಚಿತ್ ಸಂಜೀವ್‌ನ ಮೊದಲ ಸಿನಿಮಾ ದೊಡ್ಡ ಮಟ್ಟದಲ್ಲಿ ಬಿಡುಗಡೆಗೂ ಮುನ್ನವೇ ಸದ್ದು ಮಾಡುತ್ತಿರುವುದನ್ನು ಹಾಗೂ ಆತನಿಗೆ ಸಿಕ್ಕ ಸ್ವಾಗತವನ್ನು ಕಂಡು ಸಂಜೀವ್ ಸರೋವರ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಮಾಧ್ಯಮದವರ ಜತೆ ಮಾತನಾಡಿದ ಸರೋವರ ಸಂಜೀವ್ ಅವರು ಮೊದಲಿಗೆ ಶಿವ ರಾಜ್‌ಕುಮಾರ್ ಹಾಗೂ ರವಿಚಂದ್ರನ್ ರೀತಿಯ ಇಬ್ಬರು ದಿಗ್ಗಜ ನಟರು ತಮ್ಮ ಮೊಮ್ಮಗನ ಕೈ ಹಿಡಿದುಕೊಂಡು ಲಾಂಚ್ ಮಾಡಿದ್ದು ಸಾಮಾನ್ಯವಾದ ವಿಷಯವಲ್ಲ ಎಂದು ಹರ್ಷ ವ್ಯಕ್ತಪಡಿಸಿದರು.
ಬಳಿಕ ತಮ್ಮ ಮಗ ಸುದೀಪ್ ಅವರು ಇಂಡಸ್ಟ್ರಿಗೆ ಕಾಲಿಟ್ಟಾಗಿನ ಸಂದರ್ಭವನ್ನು ನೆನಪಿಸಿಕೊಂಡ ಸರೋವರ ಸಂಜೀವ್ "ಫಸ್ಟ್ ನನ್ನ ಮಗ ಸುದೀಪ್‌ನ ಇಂಟ್ರಡ್ಯೂಸ್ ಮಾಡಬೇಕಾದ್ರೂ ನನಗೊಂದು ಭಯ ಇತ್ತು. ಯಾಕೆಂದರೆ ಅವನು ನನ್ನ ಹೊಟೇಲ್‌ಗೆ ಬರ್ತಾನೆ ಅಂತ ಮಾಡಿದ್ದೆ. ಏನಪ್ಪ ಇವರು ಹೀರೊ ಆಗೋಕೆ ಹೊರಟುಬಿಟ್ಟ. ಯಾವತ್ತೂ ಸಿನಿಮಾ ಹುಚ್ಚು ತೋರಿಸಲಿಲ್ಲ, ಆಕ್ಟಿಂಗ್ ಮಾಡಿರೋದು ನೋಡಲಿಲ್ಲ. ಕೊನೆಗೆ ಭಗವಾನ್ ಅಣ್ಣನ ಜತೆ ಅವನನ್ನು ಬಾಂಬೆಗೆ ಕಳುಹಿಸಿದೆ. ಅಲ್ಲಿ ರೋಷನ್ ತನೇಜಾ ಅವ್ರತ್ರ ಅವನಿಗೆ ಟ್ರೈನಿಂಗ್ ಕೊಡಿಸಿದೆ. ಆಮೇಲೆ ನಾನು, ನನ್ನ ವೈಫ್ ಹೋಗಿ ರೋಷನ್ ತನೇಜಾ ಅವರತ್ರ ಅಭಿಪ್ರಾಯ ಕೇಳಿದ್ವಿ. ಏನಾದ್ರೂ ಫಿಟ್ ಇದ್ರೆ ಅವನು ಇಲ್ಲಿ ಮಾಡಲಿ, ಇಲ್ಲದಿದ್ರೆ ಬುದ್ಧಿ ಹೇಳಿ ವಾಪಸ್ ಕಳುಹಿಸಿ ಅಂತ ಹೇಳಿದ್ವಿ" ಎಂದು ಹೇಳಿಕೊಂಡರು.
ಇನ್ನೂ ಮುಂದುವರೆದು ಮಾತನಾಡಿದ ಸಂಜೀವ್ ಸರೋವರ "ಆಗ ರೋಷನ್ ತನೇಜಾ ಅವರು ಒಂದೇ ಮಾತನ್ನು ಹೇಳಿದ್ರು. ನನಗೆ ಈ ಬ್ಯಾಚ್‌ನಲ್ಲಿ ಅವನೇ ನಂಬರ್ ಒನ್. ಚೆನ್ನಾಗಿ ಹಾಡ್ತಾನೆ, ಎಲ್ಲಾ ಸಂಗೀತ ಸಲಕರಣೆಗಳನ್ನು ನುಡಿಸುತ್ತಾನೆ, ಕ್ಯಾಮೆರಾ ಸೆನ್ಸ್ ಇದೆ, ಆಕ್ಟಿಂಗ್‌ನಲ್ಲಿ ಸೂಪರ್ ಆಗಿದ್ದಾನೆ. ದಯವಿಟ್ಟು ಏನೂ ಬೇಜಾರಾಗಬೇಡಿ, ಅವನು ಒಂದು ದಿನ ದೇಶದ ಖ್ಯಾತ ನಟನಾಗ್ತಾನೆ ಅನ್ನೋ ಭರವಸೆಯನ್ನು ನಾನು ಕೊಡ್ತೇನೆ ಅಂದ್ರು" ಎಂದು ತಿಳಿಸಿದರು.
ಹೀಗೆ ಸುದೀಪ್ ಅವರನ್ನು ಯಾವ ರೀತಿ ಟ್ರೈನಿಂಗ್ ಕೊಡಿಸಿ ಇಂಡಸ್ಟ್ರಿಗೆ ಪರಿಚಯಿಸಿದ್ದರೋ ಅದೇ ರೀತಿ ತಮ್ಮ ಮೊಮ್ಮಗ ಸಂಚಿತ್‌ನನ್ನೂ ಸಹ ತಯಾರಿ ನಡೆಸಿದ ಬಳಿಕ ಚಿತ್ರರಂಗಕ್ಕೆ ಕರೆ ತರಬೇಕು ಎಂಬ ಯೋಜನೆಯನ್ನು ಇಟ್ಟುಕೊಂಡಿದ್ದ ಸಂಜೀವ್ ಅವರು ಅದರಂತೆ ಆತನನ್ನು ನ್ಯೂಯಾರ್ಕ್‌ಗೆ ಕಳುಹಿಸಿ ಎರಡು ವರ್ಷಗಳ ಕಾಲ ಫಿಲ್ಮ್ ಮೇಕಿಂಗ್, ನಟನೆಯ ತರಬೇತಿ ಕೊಡಿಸಿದ್ದಾಗಿ ಹೇಳಿಕೊಂಡಿದ್ದಾರೆ.


Click it and Unblock the Notifications











