"ಅಪ್ಪು ಸರ್ ಟೋಬಿ ಸಿನಿಮಾ ಮಾಡಲ್ಲ ಅಂದ್ರು.. ಇದ್ಕೆ ಅಶ್ವಿನಿ ಮೇಡಂ ಸಾಕ್ಷಿ": ಟಿ.ಕೆ ದಯಾನಂದ್
ರಾಜ್ ಬಿ. ಶೆಟ್ಟಿ ನಟನೆಯ 'ಟೋಬಿ' ಸಿನಿಮಾ ಟ್ರೈಲರ್ ರಿಲೀಸ್ ಆಗಿ ಸಖತ್ ಸದ್ದು ಮಾಡ್ತಿದೆ. ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಸಾಕಷ್ಟ ಇಂಟ್ರೆಸ್ಟಿಂಗ್ ಸಂಗತಿಗಳು ರಿವೀಲ್ ಆಗಿದೆ. ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಸೇರಿದಂತೆ ಹಲವು ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಕಥೆಗಾರ ಟಿ.ಕೆ ದಯಾನಂದ್ 'ಟೋಬಿ' ಕಥೆಯ ಹಿನ್ನೆಲೆ ಬಿಚ್ಚಿಟ್ಟರು.
'ಟೋಬಿ' ಟ್ರೈಲರ್ ನೋಡಿದ ಕೆಲವರಿಗೆ 'ಗರುಡ ಗಮನ ವೃಷಭ ವಾಹನ' ಚಿತ್ರದ ಶಿವ ನೆನಪಾಗುತ್ತಾನೆ. ಲೈಟರ್ ಬುದ್ಧ ಫಿಲಂಸ್, ಅಗಸ್ತ್ಯ ಫಿಲ್ಮ್ಸ್ ಹಾಗೂ ಕಾಫಿ ಗ್ಯಾಂಗ್ ಸ್ಟುಡಿಯೋ ಬ್ಯಾನರ್‌ನಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಇನ್ನು ಮಿಥುನ್ ಮುಕುಂದನ್ ಸಂಗೀತ ನಿರ್ದೇಶನ, ಪ್ರವೀಣ್ ಶ್ರೀಯನ್ ಛಾಯಾಗ್ರಹಣ - ಸಂಕಲನ ಹಾಗೂ ಅರ್ಜುನ್ ರಾಜ್ - ರಾಜಶೇಖರ್ ಅವರ ಸಾಹಸ ನಿರ್ದೇಶನ "ಟೋಬಿ" ಚಿತ್ರಕ್ಕಿದೆ.

ಆಗಸ್ಟ್ 25ಕ್ಕೆ 'ಟೋಬಿ' ಸಿನಿಮಾ ತೆರೆಗಪ್ಪಳಿಸಲಿದೆ. ಬಹಳ ಮುಗ್ಧನಾದ ವ್ಯಕ್ತಿ ಯಾವುದೋ ಒಂದು ಕಾರಣಕ್ಕೆ ಬಹಳ ಕ್ರೂರಿಯಾಗಿ ಬದಲಾದರೆ ಏನಾಗುತ್ತದೆ ಎನ್ನುವ ಅಂಶದ ಹಿನ್ನೆಲೆಯಲ್ಲಿ ಈ ಸಿನಿಮಾ ಮೂಡಿದೆ. ಟಿ.ಕೆ ದಯಾನಂದ್ ತಮ್ಮ ನಿಜ ಜೀವನದಲ್ಲಿ ನೋಡಿದ ವ್ಯಕ್ತಿಯೊಬ್ಬನ ಕಥೆಯನ್ನು ಈ ಸಿನಿಮಾ ಮೂಲಕ ತೆರೆಗೆ ತರಲಾಗುತ್ತಿದೆ. ದಯಾನಂದ್ ಬರೆದ ಕತೆಯನ್ನು ರಾಜ್. ಬಿ ಶೆಟ್ಟಿ ಚಿತ್ರಕಥೆ ಮಾಡಿ ತಾವೇ 'ಟೋಬಿ' ಆಗಿ ನಟಿಸಿದ್ದಾರೆ. ಟ್ರೈಲರ್‌ನಲ್ಲೇ ಸಿನಿಮಾ ನಿರೀಕ್ಷೆ ಹುಟ್ಟುಹಾಕಿದೆ. ಅಂದಹಾಗೆ ಈ ಕಥೆಯನ್ನು ಪುನೀತ್ ರಾಜ್‌ಕುಮಾರ್‌ಗೂ ದಯಾನಂದ್ ಹೇಳಿದ್ದರಂತೆ.
'ಟೋಬಿ' ಕಥೆ ಕೇಳಿ ಅಪ್ಪು ಖುಷ್
"ಸಿಗ್ನೇಚರ್ ಮಾಸ್ಟರ್ ಕ್ಲಾಸ್ ಎನ್ನುವ ಸ್ಪರ್ಧೆಗೆ 'ಟೋಬಿ' ಕಥೆಯನ್ನು ದಯಾನಂದ್ ಬರೆದು ಕಳುಹಿಸಿದ್ದರು. ಕಥೆಗೆ ಸ್ಪರ್ಧೆಯಲ್ಲಿ ಗೆದ್ದಿತ್ತು. ಅಂದಹಾಗೆ ಈ ಕಥೆಯನ್ನು ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಹೇಳಿದ್ದಾಗಿ ದಯಾನಂದ್ ವಿವರಿಸಿದ್ದಾರೆ. "ಟೋಬಿ ಕತೆಯನ್ನು ಅಪ್ಪು ಸರ್‌ಗೆ ಎರಡೂವರೆ ಗಂಟೆ ಹೇಳಿದ್ದೆ. ಆಗ ಅಲ್ಲಿ ಅಶ್ವಿನಿ ಮೇಡಂ ಸಹ ಇದ್ದರು. ಕಥೆ ಕೇಳಿದ ಬಳಿಕ, ಬಹಳ ಚೆನ್ನಾಗಿದೆ ಆದರೆ ಈಗ ನಾನು ಮಾಡೋಕೆ ಸಾಧ್ಯ ಇಲ್ಲ ಎಂದು ಹೇಳಿದ್ದರು" ಎಂದು ದಯಾನಂದ್ ಹೇಳಿದ್ದಾರೆ.

ಅಪ್ಪು ಸರ್ ಪ್ರಯೋಗ ಬೇಡ ಎಂದರು
"ಕಥೆ ಕೇಳಿ ಬಹಳ ಚೆನ್ನಾಗಿದೆ. ಇದು ಎಮೋಷನಲಿ ಕಿತ್ತು ತಿನ್ನುವ ಕಥೆ. ಮಲಯಾಳಂ ಸಿನಿಮಾಳಿಗೆ ಹೊಂದಿಕೊಳ್ಳುತ್ತದೆ. ಆದರೆ ನಾನೀಗ ಫ್ಯಾಮಿಲಿ ಹಾಗೂ ಯೂತ್ಸ್‌ಗೆ ಕನೆಕ್ಟ್ ಆಗಿರುವ ನಟ. ಇಂತಹ ಸಮಯದಲ್ಲಿ ನಾನು ಇಂತಹ ವಿಕ್ಷಿಪ್ತ ವ್ಯಕ್ತಿತ್ವದ ವ್ಯಕ್ತಿ ಪಾತ್ರವನ್ನು ಮಾಡಿದರೆ ಜನ ಒಪ್ತಾರಾ? ಅನ್ನುವ ಅನುಮಾನ ಇದೆ. ಇಂತಹ ಸಮಯದಲ್ಲಿ ನಾನು ಈ ರೀತಿಯ ಪ್ರಯೋಗ ಮಾಡೋದು ಕಷ್ಟ ಎಂದರು. ಅದಕ್ಕೆ ಅಶ್ವಿನಿ ಮೇಡಂ ಸಾಕ್ಷಿ" ಎಂದು ದಯಾನಂದ ವಿವರಿಸಿದ್ದಾರೆ.
ರಾಜ್. ಬಿ ಶೆಟ್ಟಿಗೆ ಕಥೆ ಸಿಕ್ಕಿದ್ದು
"ಬಳಿಕ ಕತೆಯನ್ನು ರಿಷಬ್ ಶೆಟ್ಟಿ ಅವರಿಗೆ ಹೇಳಿದೆ. ಅವರು ನಟಿಸೋಕೆ ಒಪ್ಪಿದರು. ಆದರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಆದ ಕಾರಣ, ಇದು ತಡವಾಗುತ್ತಿತ್ತು. ಆಗ ರಾಜ್ ಬಿ ಟ್ಟಿ ಕಥೆಯ ಹುಡುಕಾಟದಲ್ಲಿದ್ದರು. ಹೋಟೆಲ್ ಒಂದರಲ್ಲಿ ಕೂತು ಕತೆ ಹೇಳಿದೆ. ಅವರು ಕತೆಯನ್ನು ಒಪ್ಪಿಕೊಂಡು ಈಗ ಸಿನಿಮಾ ಆಗಿದೆ"
ಆ.25ಕ್ಕೆ ಸಂಪೂರ್ಣ ಮುಕ್ತಿ
ಈ 'ಟೋಬಿ' ಬಹಳ ವಿಕ್ಷಿಪ್ತ ಗುಣದವನು. ಅವನು ಬದುಕಿದ್ದೇ ಆ ರೀತಿ. ಅದು ತುಂಬಾ ಘನತೆಯಿಂದ ಬದುಕಿದ ಬದುಕಲ್ಲ. ಆತ ಬದುಕಿದ ರೀತಿ, ಬಾಲ್ಯ, ಆತನ ಅಶಿಸ್ತಿನ ಜೀವನ, ಅದಕ್ಕಾಗಿ ತನ್ನ ಸುತ್ತಲಿನ ಜನರಲ್ಲಿ ಕೆಲವರಿಗೆ ಬೇಕಾಗುತ್ತಾನೆ, ಕೆಲವರಿಗೆ ಬೇಡವಾಗುತ್ತಾನೆ. ಕೆಲವರಿಗೆ ಈತನನ್ನು ಸಾಯಿಸಬೇಕು ಎನ್ನುವಷ್ಟು ಕೋಪ ಹುಟ್ಟಿಸುತ್ತಾನೆ. ಆಗಸ್ಟ್ 25ಕ್ಕೆ ಸಿನಿಮಾ ರಿಲೀಸ್ ಆದಮೇಲೆ ನಾನು 'ಟೋಬಿ'ಯಿಂದ ಪರ್ಮನೆಂಟ್ ಆಗಿ ಮುಕ್ತನಾಗುತ್ತೇನೆ" ಎಂದಿದ್ದಾರೆ.


Click it and Unblock the Notifications











