"ನಮ್ಮದು 10 ವರ್ಷಗಳ ಪ್ರೀತಿ, ವಿಜಯಲಕ್ಷ್ಮಿ ಯಾವ್ದೆ ಪ್ರಾಬ್ಲಂ ಇಲ್ಲ ಎಂದಿದ್ರು": ಸಾಕ್ಷಿ ಇದೆ ಎಂದ ಪವಿತ್ರಾ ಗೌಡ
ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ನಟಿ ಪವಿತ್ರಾ ಗೌಡ ನಡುವಿನ ಏಟು- ಎದಿರೇಟು ಮುಂದುವರೆದಿದೆ. ಇತ್ತೀಚೆಗೆ ಪವಿತ್ರಾ ಗೌಡ ಹಾಕಿದ್ದ ಪೋಸ್ಟ್ ಬಗ್ಗೆ ವಿಜಯಲಕ್ಷ್ಮಿ ದರ್ಶನ್ ಗರಂ ಆಗಿದ್ದರು. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ಕೊಟ್ಟಿದ್ದರು. ಇದೀಗ ಪವಿತ್ರಾ ಗೌಡ ಇದಕ್ಕೆ ತಿರುಗೇಟು ನೀಡಿದ್ದಾರೆ.
ಪವಿತ್ರಾ ಗೌಡ ತಮ್ಮ ಪೋಸ್ಟ್‌ನಲ್ಲಿ ದರ್ಶನ್ ಜೊತೆಗಿನ ಬಾಂಧವ್ಯದ ಬಗ್ಗೆ ಪುನಃ ಮಾತನಾಡಿದ್ದಾರೆ. ನಮ್ಮಿರದ್ದು ಪರಿಶುದ್ಧ ಪ್ರೀತಿ ಹಾಗೂ ಕಾಳಜಿ ಎಂದಿದ್ದಾರೆ. ಇನ್ನು ನಮ್ಮಿಬ್ಬರ ರಿಲೇಷನ್‌ಶಿಪ್ ಬಗ್ಗೆ ವಿಜಯಲಕ್ಷ್ಮಿ ದರ್ಶನ್ ಅವರಿಗೆ ಎಲ್ಲಾ ತಿಳಿದಿತ್ತು. ಈ ಬಗ್ಗೆ ಹಲವು ಬಾರಿ ಫೋನ್ ಮಾಡಿ ಮಾತನಾಡಿದ್ದೇನೆ, ನನಗೆ ಯಾವುದೇ ಪ್ರಾಬ್ಲಂ ಇಲ್ಲ ಎಂದು ವಿಜಯಲಕ್ಷ್ಮಿ ಹೇಳಿದ್ದಾಗಿ ಪವಿತ್ರಾ ಗೌಡ ಬರೆದುಕೊಂಡಿದ್ದಾರೆ.

ಕಾಮೆಂಟ್ ಸೆಕ್ಷನ್ ಆಫ್ ಮಾಡಿ ಪವಿತ್ರಾ ಗೌಡ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ನಟ ದರ್ಶನ್ ಜೊತೆಗಿನ 10 ವರ್ಷಗಳ ರಿಲೇಷನ್‌ಶಿಪ್ ಬಗ್ಗೆ ಪೋಸ್ಟ್ ಮಾಡಿದ್ದರು. ಜನವರಿ 24ರಂದು ರಾತ್ರಿ ವಿಜಯಲಕ್ಷ್ಮಿ ದರ್ಶನ್ ಒಂದು ಪೋಸ್ಟ್ ಮಾಡಿದ್ದರು. ಪತಿ ದರ್ಶನ್ ಹಾಗೂ ಪುತ್ರನ ಜೊತೆಗಿರುವ ಫೋಟೊ ಹಂಚಿಕೊಂಡಿದ್ದರು. ಇದು ನಮ್ಮ ಫ್ಯಾಮಿಲಿ ಎಂದು ಬರೆದುಕೊಂಡದ್ದರು.
ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬೆನ್ನಲ್ಲೇ ಪವಿತ್ರಾ ಗೌಡ ಮಾಡಿದ ಪೋಸ್ಟ್ ತಿರುಗೇಟು ನೀಡಿದಂತೆ ಇತ್ತು. "ನನ್ನ ಹಾಗೂ ದರ್ಶನ್ ರಿಲೇಷನ್‌ಶಿಪ್‌ಗೆ 10 ವರ್ಷಗಳು" ಎಂದು ಬರೆದುಕೊಂಡಿದ್ದರು. ದರ್ಶನ್ ಜೊತೆಗೆ ಆತ್ಮೀಯವಾಗಿರುವ ಒಂದಷ್ಟು ಫೋಟೊಗಳನ್ನು ಕೊಲಾಜ್ ಮಾಡಿ ವಿಡಿಯೋ ಹಂಚಿಕೊಂಡಿದ್ದರು. ಇದನ್ನು ನೋಡಿ ಕೆಂಡಾಮಂಡಲವಾಗಿದ್ದ ವಿಜಯಲಕ್ಷ್ಮೀ, ಪವಿತ್ರಾ ಗೌಡ ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸಿ ಪೋಸ್ಟ್ ಮಾಡಿದ್ದರು.

"ಈ ಮಹಿಳೆಗೆ ಪರಿಜ್ಞಾನ ಇದ್ದಿದ್ದರೆ ಮತ್ತೊಬ್ಬರ ಗಂಡನ ಫೋಟೊಗಳನ್ನು ಈ ರೀತಿ ಹಂಚಿಕೊಳ್ಳುತ್ತಿರಲಿಲ್ಲ. ಈ ಕಾರ್ಯ ಆಕೆಯ ನೈತಿಕತೆ ಹಾಗೂ ಆದರ್ಶ ಏನು ಅಂತ ತೋರಿಸುತ್ತದೆ. ವ್ಯಕ್ತಿಯೊಬ್ಬ ವಿವಾಹಿತನೆಂದು ಗೊತ್ತಿದ್ದರೂ ಈಕೆ ತನ್ನ ವೈಯಕ್ತಿಕ ಅಗತ್ಯಗಳಿಗಾಗಿ ಹಾಗೂ ಲಾಭಕ್ಕಾಗಿ ಆತನಿಗೆ ಹತ್ತಿರವಾಗಿತ್ತಾಳೆ. ಪವಿತ್ರಾ ಮತ್ತು ಸಂಜಯ್ ಸಿಂಗ್ ಅವರ ಮಗಳು ಖುಷಿ ಗೌಡ, ಅನ್ನೋದು ಈ ಫೋಟೊಗಳಲ್ಲಿ ಗೊತ್ತಾಗುತ್ತದೆ. ಸಾಮಾನ್ಯವಾಗಿ ನಾನು ವೈಯಕ್ತಿಕ ವಿಷಯಗಳ ಬಗ್ಗೆ ಮಾತನಾಡಲು ಸಾಮಾಜಿಕ ಮಾಧ್ಯಮವನ್ನು ಬಳಸುವುದಿಲ್ಲ. ಆದರೆ ನನ್ನ ಫ್ಯಾಮಿಲಿ ಹಿತದೃಷ್ಟಿಯಿಂದ ಈಗ ಧ್ವನಿ ಎತ್ತುವ ಸಮಯ ಬಂದಿದೆ ಎಂದು ನನಗೆ ಅನಿಸುತ್ತಿದೆ. ಸಮಾಜಕ್ಕೆ ತಪ್ಪು ಚಿತ್ರಣ ನೀಡಲು ಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ವಿಜಯಲಕ್ಷ್ಮಿ ಪೋಸ್ಟ್ ಮಾಡಿದ್ದರು.
ಸದ್ಯ ವಿಜಯಲಕ್ಷ್ಮಿ ಪೋಸ್ಟ್‌ಗೆ ಪ್ರತಿಯಾಗಿ ಪವಿತ್ರಾ ಗೌಡ ಹೊಸ ಪೋಸ್ಟ್ ಮಾಡಿದ್ದಾರೆ. "ಇಲ್ಲಿಯವರೆಗೂ ಖುಷಿ ಗೌಡ, ದರ್ಶನ್ ಶ್ರೀನಿವಾಸರವರ ಮಗಳೆಂದು ನಾನು ಎಲ್ಲೂ ಹೇಳಿಲ್ಲ!! ನಾನು ಹಾಗೂ ದರ್ಶನ್ ಶ್ರೀನಿವಾಸರವರು ಕಳೆದ 10 ವರ್ಷಗಳಿಂದ ಜೊತೆಯಲ್ಲಿ ಸಂತೋಷವಾಗಿದ್ದೀವಿ. ಒಂದು ವಿಚಾರ ಗಮನದಲ್ಲಿ ಇರಲಿ, ನಾನು ಇಲ್ಲಿ ಯಾವುದೇ ವೈಯಕ್ತಿಕ ಅಗತ್ಯಗಳು ಹಾಗೂ ಅಜೆಂಡಾಗಾಗಿ ಇಲ್ಲಿಲ್ಲ. ನಮ್ಮದು 10 ವರ್ಷಗಳ ಪರಿಶುದ್ಧ ಪ್ರೀತಿ ಹಾಗೂ ಕಾಳಜಿ. ವಿಷಯ ವಿಜಯಲಕ್ಷ್ಮಿ ಅವರಿಗೂ ಮೊದಲೇ ತಿಳಿದಿರುತ್ತದೆ. ಈ ವಿಚಾರವಾಗಿ ವಿಜಯಲಕ್ಷ್ಮಿರವರೆ ನನಗೆ ಹಲವಾರು ಸಾರಿ ಕರೆ ಮಾಡಿ ನನ್ನ ಬಳಿ ಮಾತನಾಡಿದ್ದು ವಿಜಯಲಕ್ಷ್ಮಿರವರಿಗೆ ಯಾವುದೇ ರೀತಿಯ ಪ್ರಾಬ್ಲಂ ಇಲ್ಲವೆಂದು ತಿಳಿಸಿರುತ್ತಾರೆ." ಎಂದು ಬರೆದುಕೊಂಡಿದ್ದಾರೆ.
ಇನ್ನು ವಿಜಯಲಕ್ಷ್ಮಿ ನನ್ನ ಬಳಿ ಮಾತನಾಡಿರುವಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಹಾಗೂ ನನ್ನ ಹಾಗೂ ಸಂಜಯ್ ಸಿಂಗ್ ಡಿವೋರ್ಸ್ ದಾಖಲೆಗಳನ್ನು ಸಮಯ ಬಂದಾಗ ಹಂಚಿಕೊಳ್ಳುತ್ತೇನೆ ಎಂದಿದ್ದಾರೆ.


Click it and Unblock the Notifications











