ಅಭಿಮಾನಿಗಳ ಸ್ವೀಟ್ ವಾರ್ನಿಂಗ್; 'ಎಚ್ಚರ'ಗೊಂಡ ಕಿಚ್ಚ ಸುದೀಪ್ ಹೇಳಿದ್ದೇನು?
ಕನ್ನಡದ ಕೆಲ ಕಲಾವಿದರು ಮೈಮರೆತಿದ್ದಾರೆ. ದೊಡ್ಡ ಸಿನಿಮಾಗಳಿಲ್ಲದೇ ಕನ್ನಡ ಚಿತ್ರರಂಗ ಸೊರಗುತ್ತಿದೆ. ಯಶ್, ರಕ್ಷಿತ್ ಶೆಟ್ಟಿ ಸೇರಿದಂತೆ ಕೆಲವರು ಸಿನಿಮಾ ಮಾಡುವ ಸ್ಪೀಡ್ ಕಮ್ಮಿ ಮಾಡಿದ್ದಾರೆ. ಅಭಿಮಾನಿಗಳು ಕಾದು ಕಾದು ಸುಸ್ತಾಗಿದ್ದಾರೆ. 'ಮಾರ್ಕ್' ಬಳಿಕ ಸುದೀಪ್ ಹೊಸ ಸಿನಿಮಾ ಆರಂಭಿಸಿಲ್ಲ. ಮತ್ತೆ ಬಿಗ್‌ಬಾಸ್, ಸಿಸಿಎಲ್ ಶುರುವಾದ್ರೆ ಕಷ್ಟ ಎಂದು ಅಭಿಮಾನಿಗಳು ಬೇಸರಗೊಂಡಿದ್ದಾರೆ.
ಕಿಚ್ಚ ಸುದೀಪ್ ವರ್ಷಕ್ಕೊಂದು ಸಿನಿಮಾ ಮಾಡುವ ಮಾತು ಕೊಟ್ಟಿದ್ದಾರೆ. ಆದರೆ 'ಮಾರ್ಕ್' ಸಿನಿಮಾ ಬಂದೋಗಿ 6 ತಿಂಗಳು ಕಳೀತು. ಮುಂದಿನ ಸಿನಿಮಾ ಅಪ್‌ಡೇಟ್ ಸಿಕ್ಕಿಲ್ಲ. 'ಬಿಲ್ಲ ರಂಗ ಬಾಷ' ಮೊದಲ ಶೆಡ್ಯೂಲ್ ಬಳಿಕ ಸುದ್ದಿಯೇ ಇಲ್ಲ. ದಿಢೀರನೆ ಬಿಗ್‌ಬಾಸ್ ಸೀಸನ್ 13ರ ಪ್ರೋಮೊ ಬಂದಿದೆ. ಅಲ್ಲಿಗೆ ಸುದೀಪ್ ಸಿನಿಮಾದಲ್ಲಿ ನಟಿಸುವುದು ಮತ್ತಷ್ಟು ತಡವಾಗಬಹುದು ಎಂದು ಅಭಿಮಾನಿಗಳು ಭಾವಿಸುತ್ತಿದ್ದಾರೆ. ಇದೇ ವಿಚಾರವಾಗಿ ಸುದೀಪ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ನನ್ನ ಜೀವನ ನಡೆಸೋಕೆ ಯಾರನ್ನಾದ್ರೂ ಕೇಳಬೇಕಾ ? ಎಂದು ಪ್ರಶ್ನಿಸಿದ್ದರು.

ನಿಮ್ಮ ಪ್ರಕಾರ ಸಿನಿಮಾ ಬಿಟ್ಟು ನಾನು ಜೀವನದಲ್ಲಿ ಏನು ಮಾಡಲೇಬಾರದಾ? ನನ್ನ ಜೀವನ ನನಗೆ ನಡೆಸಲು ಬಿಡಿ, ಇನ್ನೇನು ವಯಸ್ಸಾದ ಮೇಲೆ ಕೋಲು ಹಿಡ್ಕೊಂಡು ಕ್ರಿಕೆಟ್ ಆಡೋಕೆ ಹೋಗಲಾ..? ಎಂದು ತಮಾಷೆ ಮಾಡಿದ್ದರು. ಇದೇ ಕಾರಣಕ್ಕೆ ಕಿಚ್ಚನನ್ನು ಎಚ್ಚರಿಸಲು ಅಭಿಮಾನಿಗಳು ಮುಂದಾಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡುವುದಾಗಿ ಸ್ವೀಟ್ ವಾರ್ನಿಂಗ್ ಕೊಟ್ಟಿದ್ದರು. ಕೂಡಲೇ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದಾರೆ. ಮುಂದಿನ ಸಿನಿಮಾಗಳ ಅಪ್‌ಡೇಟ್ ಕೊಟ್ಟಿದ್ದಾರೆ.
ಜೂನ್ನ 13ರಂದು ಸಂಜೆ 6 ಗಂಟೆಗೆ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಮಾಡಿ ಸುದೀಪ್ ಅವರನ್ನು ಎಚ್ಚರಿಸುವುದಾಗಿ Sandalwood Cinema ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು. ಇದನ್ನು ರೀ- ಟ್ವೀಟ್ ಮಾಡಿ ಸುದೀಪ್ ಪ್ರತಿಕ್ರಿಯಿಸಿದ್ದಾರೆ. "ನಿಮ್ಮ ಪ್ರೀತಿಯನ್ನು ನಾನು ಲಘವಾಗಿ ತೆಗೆದುಕೊಂಡಿಲ್ಲ. ನಿಮ್ಮ ಮಾತು ನನಗೆ ಕೇಳಿಸುತ್ತಿದೆ. ನಾನು ಬೇರೆ ಕೆಲಸಗಳಲ್ಲಿ ಬ್ಯುಸಿಯಾಗಿದ್ದೆ ಅಂದ್ರೆ, ನಿಮ್ಮ ಪ್ರೀತಿ, ಸಿನಿಮಾ ಕರಿಯರ್ ಅನ್ನು ಲಘುವಾಗಿ ತೆಗೆದುಕೊಂಡಿದ್ದೇನೆ ಅಂತ ಅಲ್ಲ. ಸಿನಿಮಾ ಮಾಡೋದು, ಕಥೆಗಳನ್ನು ಹೇಳುವುದು, ನಿಮ್ಮನ್ನು ರಂಜಿಸುವುದಕ್ಕಿಂತ ನನಗೆ ಇಷ್ಟವಾದದ್ದು ಯಾವುದೂ ಇಲ್ಲ. ಈ ಈ "ವೇಕ್ ಅಪ್" ಪ್ರಯತ್ನವು ನನ್ನ ಕೆಲಸದ ಬಗ್ಗೆ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಒಂದು ಸಿಹಿ ಮಾರ್ಗವಾಗಿದೆ" ಎಂದು ಪೋಸ್ಟ್ ಮಾಡಿದ್ದಾರೆ.
"ನನ್ನ ಉಪಸ್ಥಿತಿ ಮತ್ತು ಬೆಂಬಲದ ಅಗತ್ಯವಿರುವ ಜನರು, ಸನ್ನಿವೇಶಗಳಿವೆ. ಅದರೂ ಈ ಸಣ್ಣ ವಿರಾಮದಲ್ಲೂ ಸಹ, ನಾನು ಸಿನಿಮಾ ಕೆಲಸದಲ್ಲಿದ್ದೆ. ಜೂನ್ 26ರಿಂದ 'ಬಿಲ್ಲ ರಂಗ ಬಾಷ' ಸಿನಿಮಾ ಚಿತ್ರೀಕರಣ ಆರಂಭವಾಗುತ್ತದೆ. ಬಳಿಕ ಒಂದಿರ ಹಿಂದೆ ಒಂದು ಸಿನಿಮಾ ಮಾಡ್ತೀನಿ. 4 ಸ್ಕ್ರಿಪ್ಟ್ ಫೈನಲ್ ಮಾಡಿದ್ದೀನಿ. ಎಲ್ಲವನ್ನು ಆದಷ್ಟು ಬೇಗ ಆರಂಭಿಸಲು ಉತ್ಸುಕನಾಗಿದ್ದೇನೆ" ಎಂದು ಸುದೀಪ್ ಬರೆದುಕೊಂಡಿದ್ದಾರೆ.
ಸುದೀಪ್ ತಮ್ಮ ಸುಪ್ರಿಯಾನ್ವಿ ಸಂಸ್ಥೆ ಅಡಿಯಲ್ಲಿ 'ಮ್ಯಾಂಗೋ ಪಚ್ಚ' ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕೆಆರ್‌ಜಿ ಸ್ಟುಡಿಯೋಸ್ ಜೊತೆ ಸೇರಿ ಸಿನಿಮಾ ತೆರೆಗೆ ತಂದಿದ್ದಾರೆ. ತಮ್ಮ ಅಕ್ಕನ ಮಗ ಸಂಚಿತ್ ಸಂಜೀವ್ ಅವರನ್ನು ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಆದರೆ ದೊಡ್ಡಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಮುಂದೆ ತಮ್ಮ ಸಂಸ್ಥೆ ಮೂಲಕ ಮತ್ತಷ್ಟು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ಕಿಚ್ಚ ಮನಸ್ಸು ಮಾಡಿದ್ದಾರೆ.


Click it and Unblock the Notifications