ಇತ್ತೀಚೆಗೆ ಬಂದ ಕನ್ನಡ ಚಿತ್ರಗಳಲ್ಲಿ ಈ ಚಿತ್ರವನ್ನು ನಾನು ಮಾಡಬೇಕಿತ್ತು ಎಂದೆನಿಸಿತು: ದಿಗಂತ್
ಚಂದನವನದ ಚಾಕೋಲೆಟ್ ಹೀರೊಗಳಲ್ಲಿ ಒಬ್ಬರಾದ ದಿಗಂತ್ ಕುಟುಂಬ ಸಮೇತರಾಗಿ ಕುಳಿತು ವೀಕ್ಷಿಸಬಲ್ಲ ಚಿತ್ರವೊಂದರಲ್ಲಿ ಅಚ್ಚುಕಟ್ಟಾಗಿ ನಟಿಸಬಲ್ಲ ಸಾಮರ್ಥ್ಯವಿರುವ ನಟ. ಈಗಾಗಲೇ ಇಂತಹ ಹಲವು ಚಿತ್ರಗಳಲ್ಲಿ ನಟಿಸಿರುವ ದಿಗಂತ್ ಮೆಚ್ಚುಗೆಗಳನ್ನು ಪಡೆದುಕೊಂಡಿದ್ದಾರೆ.
ಗಾಳಿಪಟ ಚಿತ್ರದ ಮೂಲಕ ಖ್ಯಾತಿ ಹಾಗೂ ಗುರುತಿಸುವಿಕೆಯನ್ನು ಪಡೆದುಕೊಂಡ ದಿಗಂತ್ ಅಂದಿನಿಂದ ಚಂದನವನದ ಸಿನಿ ರಸಿಕರ ಪಾಲಿನ ದೂದ್ ಪೇಡ ಆಗಿದ್ದಾರೆ. ಇನ್ನು ದಿಗಂತ್ ಇದಕ್ಕೂ ಮುನ್ನ ಕನ್ನಡದ ಅನೇಕ ಚಿತ್ರಗಳಲ್ಲಿ ನಾಯಕನಾಗಿ ಹಾಗೂ ಸಹನಾಯಕನ ಪಾತ್ರದಲ್ಲಿ ನಟಿಸಿದ್ದಾರೆ ಮತ್ತು ತುಳುವಿನ ಒಂದು ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ.

2006ರ ಜೂನ್ 2 ರಂದು ಬಿಡುಗಡೆಗೊಂಡಿದ್ದ 'ಮಿಸ್ ಕ್ಯಾಲಿಫೊರ್ನಿಯಾ' ಎಂಬ ಚಿತ್ರದಲ್ಲಿ ದಿಗಂತ್ ಎಂಬ ಪಾತ್ರವನ್ನು ನಿರ್ವಹಿಸಿದ್ದ ದಿಗಂತ್ ನಟನಾಗಿ ಕನ್ನಡ ಚಲನಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಗಾಳಿಪಟ ಚಿತ್ರದ ಮೂಲಕ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದ ದಿಗಂತ್ ಇದಕ್ಕೂ ಮುನ್ನ ಹಲವು ಚಿತ್ರಗಳಲ್ಲಿ ಪುಟ್ಟ ಪಾತ್ರಗಳನ್ನು ನಿರ್ವಹಿಸಿದ್ದರು. ಮೊದಲ ಚಿತ್ರ್ ಮಿಸ್ ಕ್ಯಾಲಿಫೋರ್ನಿಯಾ ಬಳಿಕ ಎಸ್ ಎಂ ಎಸ್ 6260 ಎಂಬ ಚಿತ್ರದಲ್ಲಿ ರೋಶನ್ ಎಂಬ ಪಾತ್ರ ನಿರ್ವಹಿಸಿದ್ದ ದಿಗಂತ್ ನಂತರ ದರ್ಶನ್ ನಟನೆಯ ಮಂಡ್ಯ ಹಾಗೂ ಮುಂಗಾರು ಮಳೆ ಚಿತ್ರಗಳಲ್ಲಿಯೂ ಸಹ ಸೈಡ್ ರೋಲ್ ಮಾಡಿದ್ದರು.
ಇನ್ನು ಗಾಳಿಪಟ ಬಳಿಕ ನಾಯಕನಾಗಿಯೇ ಅನೇಕ ಚಿತ್ರಗಳಲ್ಲಿ ನಟಿಸಿರುವ ದಿಗಂತ್ ಇಂದಿಗೂ ಸಹ ಆಫರ್‌ಗಳನ್ನು ಪಡೆದುಕೊಳ್ಳುತ್ತಿದ್ದು, ಸದ್ಯ ಯದಾ ಯದಾ ಹೀ ಎಂಬ ದಿಗಂತ್ ಚಿತ್ರ ಬಿಡುಗಡೆಗೊಂಡಿದೆ. ಹೀಗಾಗಿ ಈ ಚಿತ್ರದ ಪ್ರಚಾರದ ಸಂದರ್ಶನಗಳಲ್ಲಿ ದಿಗಂತ್ ಭಾಗವಹಿಸಿದ್ದು, ತಾವು ಚಿತ್ರರಂಗಕ್ಕೆ ಬಂದದ್ದು ಹೇಗೆ, ಚಿತ್ರರಂಗ ಪ್ರವೇಶಿಸಲು ಯಾರು ಕಾರಣ, ಯಾವ ನಟನ ಜತೆ ನಟಿಸಬೇಕೆಂಬ ಬಯಕೆ ಇದೆ ಎಂಬುದನ್ನು ತಿಳಿಸಿದ್ದಾರೆ.
ಕಡಕ್ ಸಿನಿಮಾ ಯುಟ್ಯೂಬ್ ಚಾನೆಲ್ ನಡೆಸಿದ ಸಂದರ್ಶನದಲ್ಲಿ ಭಾಗವಹಿಸಿದ್ದ ದಿಗಂತ್ ಇತ್ತೀಚೆಗೆ ಬಿಡುಗಡೆಗೊಂಡ ಕನ್ನಡದ ಯಾವ ಚಿತ್ರದಲ್ಲಿ ನಟಿಸುವ ಬಯಕೆ ಇತ್ತು ಎಂಬುದನ್ನು ತಿಳಿಸಿದ್ದಾರೆ. ರಕ್ಷಿತ್ ಶೆಟ್ಟಿ ನಟನೆಯ ಚಾರ್ಲಿ 777 ಚಿತ್ರದಲ್ಲಿ ನಟಿಸಬೇಕಿತ್ತು, ಏಕೆಂದರೆ ತಮಗೆ ನಾಯಿ ಎಂದರೆ ತುಂಬಾ ಪ್ರೀತಿ ಎಂದರು.
ಇನ್ನು ಐಂದ್ರಿತಾ ರೇ ಅವರ ಯಾವ ಚಿತ್ರವನ್ನು ನೋಡಿಲ್ಲ ಹಾಗೂ ಯಾವ ಚಿತ್ರ ಹೆಚ್ಚು ಇಷ್ಟ ಎಂಬುದರ ಬಗ್ಗೆ ಸಹ ಮಾತನಾಡಿದ ದಿಗಂತ್ ತಾವು ಐಂದ್ರಿತಾ ನಟನೆಯ ಎಲ್ಲಾ ಚಿತ್ರಗಳನ್ನು ನೋಡುವುದಾಗಿ ತಿಳಿಸಿದರು ಹಾಗೂ ಶಿವ ರಾಜ್‌ಕುಮಾರ್ ಜತೆ ನಟಿಸಿದ್ದ ಭಜರಂಗಿ ಸಿನಿಮಾ ತನಗೆ ಇಷ್ಟ ಎಂದು ತಿಳಿಸಿದರು. ಏಕೆಂದರೆ ಈ ಚಿತ್ರದಲ್ಲಿ ಐಂದ್ರಿತಾ ನಟನೆ ಚೆನ್ನಾಗಿದ್ದು, ಕೆಲವು ಕಾಮಿಡಿ ದೃಶ್ಯಗಳು ಸಿಕ್ಕಾಪಟ್ಟೆ ಮಜಾ ಕೊಟ್ಟಿತ್ತು, ಇದನ್ನು ನಾನು ಚಿತ್ರಮಂದಿರದಲ್ಲಿ ನೋಡಿದ್ದೆ ಎಂದು ಹೇಳಿದರು.
ಇನ್ನು ಮತ್ತೊಂದು ಸಂದರ್ಶನದಲ್ಲಿ ಮಾತನಾಡಿದ್ದ ದಿಗಂತ್ ಕಿಚ್ಚ ಸುದೀಪ್ ಜತೆ ಮತ್ತೆ ನಟಿಸುವಾಸೆಯನ್ನು ವ್ಯಕ್ತಪಡಿಸಿದ್ದರು. ಕನ್ನಡದ ಸ್ಟಾರ್‌ಗಳಾದ ದರ್ಶನ್, ಪುನೀತ್ ರಾಜ್‌ಕುಮಾರ್ ಹಾಗೂ ಸುದೀಪ್ ಜತೆ ಈಗಾಗಲೇ ತೆರೆ ಹಂಚಿಕೊಂಡಿರುವ ದಿಗಂತ್ ಮಸ್ತ್ ಮಜಾ ಮಾಡಿ ಚಿತ್ರದಲ್ಲಿ ಸುದೀಪ್ ಜತೆ ನಟಿಸಿದ್ದರೂ ಸಹ ಅದರಲ್ಲಿ ಹೆಚ್ಚು ಸ್ಕ್ರೀನ್ ಸ್ಪೇಸ್ ಸಿಕ್ಕಿರಲಿಲ್ಲ, ಅವರು ಓರ್ವ ಅದ್ಭುತ ನಟ, ಅವರ ಜತೆ ಒಂದೊಳ್ಳೆ ಪಾತ್ರದಲ್ಲಿ ನಟಿಸಬೇಕು ಎಂದರು.


Click it and Unblock the Notifications











