ಫ್ಯಾಮಿಲಿ, ಹೆಣ್ಣುಮಕ್ಕಳ ತಂಟೆಗೆ ಬಂದ್ರೆ ನಾವು ಸುಮ್ಮನಿರಲ್ಲ; ಫ್ಯಾನ್ಸ್ ವಾರ್ ಬಗ್ಗೆ ಧ್ರುವ ಗುದ್ದು
ಚಿತ್ರರಂಗದಲ್ಲಿ ಸ್ಟಾರ್ ನಟರ ಅಭಿಮಾನಿಗಳ ನಡುವೆ ತಿಕ್ಕಾಟ ಹೊಸದೇನು ಅಲ್ಲ. ಆದರೆ ಸೋಶಿಯಲ್ ಮೀಡಿಯಾ ಟ್ರೆಂಡ್ ಶುರುವಾದ ಮೇಲೆ ಅದು ಮತ್ತೊಂದು ಹಂತಕ್ಕೆ ಹೋಗಿಬಿಟ್ಟಿದೆ. ತಮ್ಮ ನಟನನ್ನು ವಹಿಸಿಕೊಂಡು ಮಾತನಾಡುವ ಭರದಲ್ಲಿ ಮತ್ತೊಬ್ಬ ನಟನನ್ನು, ಆತನ ಅಭಿಮಾನಿಗಳನ್ನು ಟ್ರೋಲ್ ಮಾಡುವ ವಿಕೃತಿ ಹೆಚ್ಚಾಗಿದೆ.
ಇತ್ತೀಚೆಗೆ ಫೇಕ್ ಅಕೌಂಟ್‌ಗಳ ಆರ್ಭಟವೂ ಹೆಚ್ಚಾಗಿದೆ. ಕೆಲವರು ತಂದಿಟ್ಟು ತಮಾಷೆ ನೋಡುವ ಟ್ರೆಂಡ್ ಹೆಚ್ಚಾಗುತ್ತಿದೆ. ತಮ್ಮ ನೆಚ್ಚಿನ ನಟನ ಅಭಿಮಾನಿ ಎಂದು ಅಕೌಂಟ್ ಕ್ರಿಯೇಟ್ ಮಾಡಿ ಡಿಪಿ ಹಾಕಿ ಮತ್ತೊಬ್ಬ ನಟನನ್ನು ಟೀಕಿಸುವುದು, ಕೆಟ್ಟದಾಗಿ ಕಾಮೆಂಟ್ ಮಾಡುವುದು ಒಂದೆಡೆ. ಬೇರೊಬ್ಬ ನಟನ ಅಭಿಮಾನಿ ಎಂದು ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಮಗದೊಬ್ಬ ನಟನನ್ನು ಟೀಕಿಸಿ ಆ ಇಬ್ಬರು ನಟರ ಅಭಿಮಾನಿಗಳ ನಡುವೆ ಬೆಂಕಿ ಹಚ್ಚುವ ಹುಚ್ಚಾಟವೂ ಶುರುವಾಗಿದೆ.

ಸ್ಟಾರ್ ನಟರನ್ನು ಟ್ರೋಲ್ ಮಾಡಿವುದು ಮಾತ್ರವಲ್ಲ ಅವರ ತಂದೆ, ತಾಯಿ, ಮಡದಿ ಮಕ್ಕಳ ಬಗ್ಗೆಯೂ ಕೆಟ್ಟದಾಗಿ ಕಾಮೆಂಟ್ ಮಾಡುವ ವಿಕೃತಿ ಹೆಚ್ಚಾಗಿದೆ. ಈ ಫ್ಯಾನ್ಸ್ ವಾರ್ ಸ್ಟಾರ್ ನಟರಿಗೆ ಗೊತ್ತಿಲ್ಲ ಅಂತ ಅಲ್ಲ. ಗೊತ್ತಿದ್ದು ಗೊತ್ತಿಲ್ಲದಂತೆ ಸುಮ್ಮನಿದ್ದಾರೆ. ನೆಚ್ಚಿನ ನಟನ ಮಾತು ಕೇಳುತ್ತಾರೆ. ಹಾಗಾಗಿ ನಟರು ತಮ್ಮ ಅಭಿಮಾನಿಗಳಿಗೆ ಸುಮ್ಮನಿರುವಂತೆ ಕಿವಿಮಾತು ಹೇಳಬೇಕು ಎನ್ನುವ ಸಲಹೆಗಳು ಬರುತ್ತದೆ. ನಟ ಧ್ರುವ ಸರ್ಜಾ ಇದೇ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ಧ್ರುವ ನಟನೆಯ 'ಮಾರ್ಟಿನ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ದರ್ಶನ್ ಫ್ಯಾನ್ಸ್ ಹಾಗೂ ಧ್ರುವ ಫ್ಯಾನ್ಸ್ ನಡುವೆ ಇತ್ತೀಚೆಗೆ ತಿಕ್ಕಾಟ ಹೆಚ್ಚಾಗಿರುವುದು ರಹಸ್ಯವಾಗಿ ಏನು ಉಳಿದಿಲ್ಲ. ದರ್ಶನ್- ಧ್ರುವ ನಡುವೆ ಶೀತಲ ಸಮರ ನಡೆಯುತ್ತಿದೆ. ಹಾಗಾಗಿ ಇಬ್ಬರ ಅಭಿಮಾನಿಗಳ ನಡುವೆಯೂ ಇದು ಹೆಚ್ಚಾಗಿದೆ. ಆದರೆ ಕೆಲ ಫೇಕ್ ಅಕೌಂಟ್‌ಗಳ ಆರ್ಭಟ ಹೆಚ್ಚಾಗಿದೆ. ಕೆಟ್ಟ ಕೆಟ್ಟ ಕಾಮೆಂಟ್ ಮಾಡುವುದು ಗೊತ್ತಾಗುತ್ತಿದೆ. 'ಕನ್ನಡ ಪಿಕ್ಚರ್' ಯೂಟ್ಯೂಬ್ ಸಂದರ್ಶನದಲ್ಲಿ ಧ್ರುವ ಈ ಬಗ್ಗೆ ಮಾತನಾಡಿದ್ದಾರೆ.
ನೆಗೆಟಿವ್ ಕಾಮೆಂಟ್ಸ್ ಮಾಡುವುದು ಓಕೆ. ಎಲ್ಲರಿಗೂ ವಾಕ್ ಸ್ವಾತಂತ್ರ ಇದೆ. ಆದರೆ ಒಬ್ಬರ ಹೆಂಡತಿ, ಮಕ್ಕಳ ಬಗ್ಗೆ ಕಾಮೆಂಟ್ ಮಾಡುವುದು ಎಷ್ಟು ಸರಿ? ಎಂದು ಧ್ರುವ ಪ್ರಶ್ನಿಸಿದ್ದಾರೆ. ಒಬ್ಬರು ಯಾರದಾರೂ ಕೆಟ್ಟದಾಗಿ ಮಾತನಾಡಿದರೆ ಅದಕ್ಕೆ ಪ್ರತಿಕ್ರಿಯಿಸುವುದು ತಪ್ಪಲ್ಲ. ಅದು ನಡೆಯಲಿ. ಅವರು ನೆಗೆಟಿವ್ ಆಗಿ ಮಾತನಾಡುವುದು ನಿಲ್ಲಿಸುವವರೆಗೂ ನಮ್ಮವರನ್ನು ನಾನು ತಡೆಯಲ್ಲ ಎಂದು ಧ್ರುವ ಸರ್ಜಾ ನೇರವಾಗಿ ಹೇಳಿದ್ದಾರೆ.
ಇದನ್ನು ಫ್ಯಾನ್ ವಾರ್ ಎಂದು ಕರೆಯುವುದು ಸರಿಯಲ್ಲ. ವಾರ್ ಅಂದರೆ ನನ್ನ ಪ್ರಕಾರ ಗುದ್ದಾಡುವುದು. ಕಂಪ್ಯೂಟರ್ ಮುಂದೆ ಕೂತು ಟೈಪ್ ಮಾಡುವುದು ಫ್ಯಾನ್ ವಾರ್ ಅಲ್ಲ, ಅದು ಬರೀ ಡಿಜಿಟಲ್ ವಾರ್ ಅಷ್ಟೇ. ಹೆಂಡತಿ ಮಕ್ಕಳ ಬಗ್ಗೆ ಏನಾದರೂ ಕಾಮೆಂಟ್ ಮಾಡಿದಾಗ ಎಲ್ಲರಿಗೂ ನೋವಾಗುತ್ತದೆ. ಪ್ರತಿಕ್ರಿಯಿಸುತ್ತಾರೆ. ನಮ್ಮ ಪರ ನಮ್ಮವರು ಮಾತನಾಡುತ್ತಾರೆ. ಅಷ್ಟೇ ಆಗುತ್ತಿರುವುದು. ಮತ್ತೇನು ಇಲ್ಲ ಎಂದು ಧ್ರುವ ಸರ್ಜಾ ಸ್ಪಷ್ಟನೆ ನೀಡಿದ್ದಾರೆ.
ನಿಮಗೆ ವಾಕ್ ಸ್ವಾತಂತ್ರ ಇದೆ. ಚೆನ್ನಾಗಿ ನಟಿಸಲಿಲ್ಲ, ಡ್ಯಾನ್ಸ್ ಮಾಡಲಿಲ್ಲ ಎಂದರೆ ಟೀಕೆ ಮಾಡು ತಪ್ಪಿಲ್ಲ. ಅದು ಬಿಟ್ಟು ವೈಯಕ್ತಿಕ ವಿಚಾರಕ್ಕೆ ಬರುವುದು ಹೆಂಡತಿ ಮಕ್ಕಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದರೆ ಯಾಕೆ ಸುಮ್ಮನಿರಬೇಕು? ನಟ ಅಂತ ಅಲ್ಲ ಒಬ್ಬ ಸಾಮಾನ್ಯ ವ್ಯಕ್ತಿ ಆಗಿಯೂ ಫ್ಯಾಮಿಲಿ ಬಗ್ಗೆ ಮಾತನಾಡಿದರೆ ಯಾಕೆ ಸುಮ್ಮನಿರಬೇಕು? ಎಂದು ಧ್ರುವ ಪ್ರಶ್ನಿಸಿದ್ದಾರೆ.
ತಂದೆ-ತಾಯಿ, ಹೆಂಡತಿ- ಮಕ್ಕಳ ಬಗ್ಗೆ ಮಾತನಾಡಿದರೆ ಯಾಕೆ ಸುಮ್ಮನಿರಬೇಕು? ಅವರು ಏನು ಮಾಡಿದರೂ ಯಾಕೆ ಬಿಡಬೇಕು, ನಾವು ಬಿಡಲ್ಲ. ಅವರು ಏನು ಮಾಡುತ್ತಾರೋ ನಾವು ಮಾಡುತ್ತೀವಿ ಅಷ್ಟೆ. ನೀನು ಹೊಡೆದರೆ ನಾನು ಹೊಡೆಯುತ್ತೇನೆ, ನನಗೆ ನಟನೆ ಬರಲ್ಲ, ಡ್ಯಾನ್ಸ್ ಬರಲ್ಲ, ಸಿನಿಮಾ ಚೆನ್ನಾಗಿಲ್ಲ ಅಂದ್ರೆ ಒಪ್ಪಿಕೊಳ್ಳುತ್ತೇನೆ. ಫ್ಯಾಮಿಲಿ, ಹೆಣ್ಣುಮಕ್ಕಳ ಬಗ್ಗೆ ವಿಚಾರಕ್ಕೆ ಬಂದ್ರೆ ಯಾರು ಸುಮ್ಮನಿರುತ್ತಾರೆ, ನಾನಂತು ಸುಮ್ಮನಿರಲ್ಲ ಎಂದು ಖಡಕ್ ಆಗಿಯೇ ಧ್ರುವ ಹೇಳಿದ್ದಾರೆ.


Click it and Unblock the Notifications











