ಬಸ್‌ನಲ್ಲಿ ಕೈ ಹಾಕಿದ, ಎಲ್ಲರೆದುರು ಅಲ್ಲೇ ಕಪಾಳಕ್ಕೆ ಬಾರಿಸಿದೆ - ಬಿಗ್ ಬಾಸ್ ರಿಷಾ ಗೌಡ
ಇಂದು ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಪುರುಷನಿಗೆ ಸರಿ ಸಮಾನವಾಗಿ ಮಹಿಳೆ ನಿಲ್ಲುವ ಪ್ರಯತ್ನ ಮಾಡುತ್ತಿದ್ದಾಳೆ. ಸಾಮಾಜಿಕವಾಗಿ.. ಆರ್ಥಿಕವಾಗಿ... ರಾಜಕೀಯವಾಗಿ.. ಮಹಿಳೆ ಸಬಲಳಾಗುತ್ತಿದ್ದಾಳೆ ಎನ್ನುವುದಕ್ಕೆ ಹಲವಾರು ಉದಾಹರಣೆಗಳಿವೆ. ಆ ಕ್ಷೇತ್ರ.. ಈ ಕ್ಷೇತ್ರ ಎಂದಲ್ಲ. ಹಲವು ಕ್ಷೇತ್ರಗಳಲ್ಲಿ ಪುರುಷನನ್ನೇ ಮಹಿಳೆ ಮೀರಿ ನಿಂತಿದ್ದಾಳೆ.
ಆದರೆ, ಕಾಲ ಎಷ್ಟೇ ಬದಲಾದರು ಕೂಡ ಮಹಿಳೆಯರ ಮೇಲಿನ ಶೋಷಣೆ... ದೌರ್ಜನ್ಯ ಮಾತ್ರ ಇವತ್ತು ಕೂಡ ಕಡಿಮೆಯಾಗಿಲ್ಲ. ಕೆಲಸ ಮಾಡುವ ಕಛೇರಿಗಳಿಂದ ಹಿಡಿದು ಸಾರ್ವಜನಿಕ ಸ್ಥಳದವರೆಗೆ .. ಪರಿಚಿತರಿಂದಲೇ ದೌರ್ಜನ್ಯ ಅಪರಿಚಿತರಿಂದ ಲೈಂ*ಗಿಕ ಕಿರುಕುಳ, ಶೋಷಣೆ ನಡೆಯುತ್ತಲೇ ಇವೆ.

ಕೇವಲ ಸಾಮಾನ್ಯ ಜನ ಮಾತ್ರವಲ್ಲ. ಈ ಕಾ*ಮುಕರ ಕೈಗೆ ಸಿಕ್ಕಿ ಚಿತ್ರರಂಗದಲ್ಲಿರುವ ಹಲವಾರು ನಾಯಕಿಯರು, ಮಹಿಳೆಯರು ಕೂಡ ನರಳಿದ್ದಾರೆ. ಕೆಲವರು ಮರ್ಯಾದೆಗೆ ಹೆದರಿ ಸುಮ್ಮನಾಗುತ್ತಾರೆ. ಇನ್ನು ಕೆಲವರು ಸಮಯ ಸಂದರ್ಭ ಬಂದಾಗ ತಮ್ಮ ಕಹಿ ಅನುಭವ ಹಂಚಿಕೊಳ್ಳುತ್ತಾರೆ. ಮತ್ತೂ ಕೆಲವರು ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂಬಂತೆ ಇಂತಹ ನೀಚ ಕೆಲಸಗಳನ್ನು ಅಲ್ಲಿಯೇ ಖಂಡಿಸುತ್ತಾರೆ. ಗ್ರಹಚಾರ ಬಿಡಿಸುತ್ತಾರೆ. ಉದಾಹರಣೆಗೆ ರಿಷಾ ಗೌಡ.
ಹೌದು ರಿಷಾ ಗೌಡ.. ಮೈಸೂರಿನ ರೂಪದರ್ಶಿ. ಮಿಸ್ ಮೈಸೂರು ಮತ್ತು ಮಿಸ್ ಕರ್ನಾಟಕ ಪಟ್ಟವನ್ನು ಮುಡಿಗೇರಿಸಿಕೊಂಡ ಚೆಲುವೆ. ''ಕ್ರೇಜಿ ಕೀರ್ತಿ'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ರಿಷಾ, ಕಳೆದ ವರ್ಷ ವೈಲ್ಡ್ ಕಾರ್ಡ್ ಮೂಲಕ ''ಬಿಗ್ ಬಾಸ್'' ಮನೆಯನ್ನು ಕೂಡ ಪ್ರವೇಶ ಮಾಡಿದರು. ಹೆಚ್ಚು ಕಡಿಮೆ 35-40 ದಿನ ಮನೆಯಲ್ಲಿ ಇದ್ದರು.
ಸದ್ಯ ರಿಷಾ ಗೌಡ ''ಬೆಂಗಳೂರು ಇನ್'' ಎಂಬ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಧರ್ಮ ಕೀರ್ತಿರಾಜ್ ಈ ಚಿತ್ರದ ನಾಯಕ. ಕಳೆದ ಶುಕ್ರವಾರ (ಏಪ್ರಿಲ್ 17) ಚಿತ್ರ ಬಿಡುಗಡೆಯಾಗಿದೆ. ಈ ಹಿನ್ನೆಲೆ ಚಿತ್ರದ ಪ್ರಚಾರವನ್ನು ರಿಷಾ ಗೌಡ ಮಾಡುತ್ತಿದ್ಧಾರೆ. ಹಲವು ಸಂದರ್ಶನಗಳನ್ನು ನೀಡುತ್ತಿದ್ದಾರೆ. ಆ ಪೈಕಿ ಒಂದು ಸಂದರ್ಶನದಲ್ಲಿ ಬಸ್‌ನಲ್ಲಿ ತಮಗಾದ ಕಹಿ ಅನುಭವವನ್ನು ರಿಷಾ ಗೌಡ ಹಂಚಿಕೊಂಡಿದ್ದಾರೆ.
''ವಿಜಯಾ ವಾಹಿನಿ'' ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಬದುಕಿನ ಕರಾಳ ದಿನ ನೆನದಿರುವ ರಿಷಾ ಗೌಡ, ನಾನು ಯಾವತ್ತೂ ಬಸ್‌ನಲ್ಲಿ ಓಡಾಡಿದವಳಲ್ಲ, ಆದರೆ ಅವತ್ತು ವಿಮಾನ ನಿಲ್ದಾಣಕ್ಕೆ ಹೋಗಲು ಬಸ್ ಹತ್ತಿದ್ದೆ ಎಂದು ಹೇಳಿದ್ದಾರೆ.

ಮೂರು-ನಾಲ್ಕು ವರ್ಷದ ಹಿಂದಿನ ಮಾತು ಇದು, ಆಗ ನಾನು ನಾರ್ಮಲ್ ಟಾಪ್ ಮತ್ತು ನಾರ್ಮಲ್ ಜೀನ್ಸ್ ಹಾಕಿಕೊಂಡು ವೋಲ್ವೋ ಬಸ್ ಹತ್ತಿದ್ದೆ ಎಂದು ಹೇಳಿರುವ ರಿಷಾ ಗೌಡ ಹಿಂದೆ ಕೂತಿದ್ದ ವ್ಯಕ್ತಿಯೊಬ್ಬ ನನ್ನ ಮೇಲೆ ಕೈ ಹಾಕಿದ ನನಗೆ ಎಷ್ಟು ಕೋಪ ಬಂತು ಅಂದ್ರೆ, ಅಲ್ಲೇ ಎದ್ದು ಅವನ ಕಪಾಳಕ್ಕೆ ಬಾರಿಸಿದೆ ಎಂದು ಹೇಳಿದ್ದಾರೆ.
ಇನ್ನೂ ನಮ್ಮ ದೇಶದಲ್ಲಿ ಯಾರಾದರೂ ಹಾಳಾಗಿ ಹೋಗಲಿ, ನಾವು ಮಾತ್ರ ಚೆನ್ನಾಗಿರಬೇಕು ಎನ್ನುವ ಮನಸ್ಥಿತಿ ಹಲವರಲ್ಲಿದೆ. ಸಮಸ್ಯೆ ಅವರ ಸುತ್ತ ಮುತ್ತ ಕಾಣಿಸಿಕೊಳ್ಳುವರೆಗೆ ಹಲವರು ಕಣ್ಮುಚ್ಚಿಕೊಂಡೇ ಇರುತ್ತಾರೆ. ಜನರ ಈ ಮನಸ್ಥಿತಿಯ ಕುರಿತು ಕೂಡ ಮಾತನಾಡಿರುವ ರಿಷಾ ಗೌಡ ನನ್ನ ನೆರವಿಗೆ ಆಗ ಅಲ್ಲಿದ್ದ ಒಬ್ಬೇ ಒಬ್ಬ ಗಂಡು ಮಕ್ಕಳು ಕೂಡ ಆ ಸಮಯದಲ್ಲಿ ಬರಲಿಲ್ಲ, ಬಸ್ ಕಂಡಕ್ಟರ್ ಮಾತ್ರ ನನ್ನ ಬೆಂಬಲಕ್ಕೆ ಬಂದರು ಅಷ್ಟೇ ಎಂದು ಹೇಳಿದ್ದಾರೆ. ಇದೇನಾ ಹೆಣ್ಣು ಮಕ್ಕಳಿಗೆ ನೀವು ಕೊಡುವ ರಕ್ಷಣೆ ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನೂ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಆದಾಗ ಹಲವರು ಮೊದಲು ಬೆರಳು ಮಾಡುವುದೇ ಬಟ್ಟೆಯತ್ತ. ಈ ಕುರಿತು ಕೂಡ ಮಾತನಾಡಿರುವ ರಿಷಾ ಗೌಡ ಚೂಡಿದಾರ್, ಲಂಗ ದಾವಣಿ, ಸೀರೆ ಹಾಕಿರುವ ಹೆಣ್ಣುಮಕ್ಕಳ ಮೇಲೂ ಅತ್ಯಾ*ಚಾರದಂತಹ ದೌರ್ಜನ್ಯಗಳು ನಡೆಯುತ್ತಿವೆ. ಬರೀ ಶಾರ್ಟ್ಸ್ ಅಥವಾ ಸ್ಲೀವ್‌ಲೆಸ್ ಟಾಪ್ ಹಾಕಿದರೆ ಮಾತ್ರ ಈ ಘಟನೆಗಳು ಆಗುತ್ತಾವಾ..? ಎಂದು ಪ್ರಶ್ನೆ ಮಾಡಿದ್ದಾರೆ. ನಾನು ಹೆಣ್ಣುಮಕ್ಕಳು ಎಲ್ಲಾ ವಿಷಯದಲ್ಲೂ ಸರಿ ಅಂತ ಹೇಳಲ್ಲ ಎಂದು ಹೇಳಿರುವ ರಿಷಾ ಗೌಡ ಗಂಡಾಗಲಿ, ಹೆಣ್ಣಾಗಲಿ ಮೊದಲು ವಿದ್ಯಾವಂತರಾಗಿರಬೇಕು, ಸಮಾಜದಲ್ಲಿ ಹೆಣ್ಣುಮಕ್ಕಳು ತಲೆ ಎತ್ತಿ ನಡೆಯಬೇಕು ಅಂದರೆ ಆಪತ್ತಿನಲ್ಲಿ ಎಲ್ಲ ಗಂಡು ಮಕ್ಕಳು ಸಹಾಯಕ್ಕೆ ನಿಲ್ಲಬೇಕು ಎಂದು ಹೇಳಿದ್ಧಾರೆ.
ಮುಂದುವರೆದು ದುಬೈನ ಉದಾಹರಣೆಯನ್ನು ಕೂಡ ನೀಡಿರುವ ರಿಷಾ ಗೌಡ, ದುಬೈನಲ್ಲಿ ರಾತ್ರಿ ಮೂರು ಗಂಟೆಯಾದರೂ ಒಬ್ಬ ಹೆಣ್ಣುಮಗಳು ಧೈರ್ಯವಾಗಿ ಓಡಾಡಬಹುದು. ಆ ಅನುಭವ ನನಗಾಗಿದೆ. ಆದರೆ ಇಲ್ಲಿ 9 ಗಂಟೆ ಆದ್ಮೇಲೆ ಹೋಗೋದೇ ಕಷ್ಟ ಎಂದು ಹೇಳಿದ್ದಾರೆ. ರಾತ್ರಿ ಒಂಬತ್ತು ಗಂಟೆಯಾದರೆ ಸಾಕು ಮೈಸೂರು ಸ್ತಬ್ಧವಾಗಿರುತ್ತೆ. ನಾನು ಇಷ್ಟೆಲ್ಲ ಸ್ಟ್ರಾಂಗ್ ಆಗಿದ್ದರೂ, ರಾತ್ರಿ 12 ಗಂಟೆಯ ಮೇಲೆ ಹೊರಗೆ ಹೋಗಬೇಕು ಅಂದಾಗ ಭಯ ಆಗುತ್ತೆ ಎಂದು ಹೇಳಿರುವ ರಿಷಾ ಗೌಡ ನಮ್ಮಲ್ಲಿ ಬೇರೆ ದೇಶಗಳಂತೆ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲ ಎಂದು ತಮ್ಮ ಬೇಸರ ಮತ್ತು ನೋವನ್ನು ಹೊರ ಹಾಕಿದ್ದಾರೆ.


Click it and Unblock the Notifications