ಪುನೀತ್, ದರ್ಶನ್, ಕಿಚ್ಚನ ಜತೆ ನಟಿಸಿರುವ ದಿಗಂತ್‌ಗೆ ಮತ್ತೊಮ್ಮೆ ಈ ಸ್ಟಾರ್ ಜತೆ ನಟಿಸಲೇಬೇಕೆಂಬ ಆಸೆಯಂತೆ!
ದಿಗಂತ್.. ಕನ್ನಡ ಚಿತ್ರರಂಗ ಕಂಡ ಚಾಕೋಲೆಟ್ ಹೀರೊಗಳಲ್ಲಿ ಓರ್ವರು. 2006ರ ಜೂನ್ 2 ರಂದು ಬಿಡುಗಡೆಗೊಂಡಿದ್ದ 'ಮಿಸ್ ಕ್ಯಾಲಿಫೊರ್ನಿಯಾ' ಎಂಬ ಚಿತ್ರದಲ್ಲಿ ದಿಗಂತ್ ಎಂಬ ಪಾತ್ರವನ್ನು ನಿರ್ವಹಿಸಿದ್ದ ದಿಗಂತ್ ನಟನಾಗಿ ಕನ್ನಡ ಚಲನಚಿತ್ರರಂಗಕ್ಕೆ ಕಾಲಿಟ್ಟಿದ್ದರು.
ಹೀಗೆ ಸಣ್ಣದೊಂದು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ದಿಗಂತ್ ನಟನಾಗಿ ಕನ್ನಡ ಸಿನಿ ರಸಿಕರ ಪ್ರೇಕ್ಷಕರ ಮನದಲ್ಲಿ ನೆಲೆಸಿದ್ದು ಗಾಳಿಪಟ ಚಿತ್ರದ ಮೂಲಕ. ಹೌದು, 2008ರಲ್ಲಿ ಬಿಡುಗಡೆಗೊಂಡಿದ್ದ ಈ ಚಿತ್ರದಲ್ಲಿ ದಿಗಂತ್ ಎಂಬ ನಾಯಕನ ಗೆಳೆಯನ ಪಾತ್ರ ಹಾಗೂ ಸಹ ನಾಯಕನ ಪಾತ್ರವೂ ಆಗಿದ್ದ ರೋಲ್‌ನಲ್ಲಿ ಕಾಣಿಸಿಕೊಂಡಿದ್ದ ದಿಗಂತ್ ತಮ್ಮ ಅಭಿನಯದಿಂದ ಸಿಕ್ಕಾಪಟ್ಟೆ ಫೇಮಸ್ ಆಗಿಬಿಟ್ಟರು. ಅಂದು ಖ್ಯಾತಿಯನ್ನು ಗಳಿಸಿದ ದಿಗಂತ್ ಪಾಲಿಗೆ ಹಲವು ಚಿತ್ರಗಳ ಆಫರ್ ಹರಿದುಬಂದವು.

ಹೀಗೆ ಗಾಳಿಪಟ ಚಿತ್ರದ ದೊಡ್ಡ ಯಶಸ್ಸಿನ ಬಳಿಕ ಬೇಡಿಕೆ ಪಡೆದುಕೊಂಡ ದಿಗಂತ್ ಗಾಳಿಪಟ ನಿರ್ದೇಶಕರಾದ ಯೋಗರಾಜ್ ಭಟ್ ನಿರ್ದೇಶನದ ಮನಸಾರೆ ಚಿತ್ರದ ಮೂಲಕ ನಾಯಕ ನಟನಾಗಿ ಬಡ್ತಿ ಪಡೆದರು. ಈ ಚಿತ್ರವೂ ಸಹ ದಿಗಂತ್‌ಗೆ ಮತ್ತಷ್ಟು ಫೇಮ್ ತಂದುಕೊಟ್ಟಿತು. ಬಳಿಕ ದಿಗಂತ್ ಹಲವು ಚಿತ್ರಗಳಲ್ಲಿ ನಾಯಕನಾಗಿ ಕಾಣಿಸಿಕೊಂಡರು.
ಸದ್ಯ ಯದಾ ಯದಾ ಹೀ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿರುವ ದಿಗಂತ್ ತಮ್ಮ ಚಿತ್ರದ ಪ್ರಚಾರಕ್ಕಾಗಿ ಹಲವು ಸಂದರ್ಶನಗಳಲ್ಲಿ ಭಾಗವಹಿಸಿದ್ದು, ಈ ಸಂದರ್ಶನಗಳಲ್ಲಿ ತಾವು ಚಿತ್ರರಂಗ ಪ್ರವೇಶಿಸಿದ್ದರ ಆರಂಭದ ದಿನಗಳು ಹಾಗೂ ತಾವು ನಾಯಕ ನಟನಾದದ್ದು ಹೇಗೆ ಎಂಬುದನ್ನು ತಿಳಿಸಿರುವ ದಿಗಂತ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜತೆ ನಟನೆ ಮಾಡಿದ್ದರ ಬಗ್ಗೆ ಸಹ ಮಾತನಾಡಿದ್ದಾರೆ.
ಇನ್ನು ಗಣೇಶ್, ದರ್ಶನ್, ಕಿಚ್ಚ ಸುದೀಪ್ ಹಾಗೂ ಪುನೀತ್ ರಾಜ್‌ಕುಮಾರ್ ರೀತಿಯ ಸ್ಟಾರ್ ನಟರ ಜತೆ ನಟಿಸಿರುವ ದಿಗಂತ್ ಈ ನಟರ ಪೈಕಿ ಓರ್ವ ನಟನ ಜತೆ ಮತ್ತೊಮ್ಮೆ ನಟಿಸಲೇಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
ಹೌದು, ನಮ್ಮ ಕೆಎಫ್ಐ ಚಾನೆಲ್ ನಡೆಸಿದ ಸಂದರ್ಶನದಲ್ಲಿ ಭಾಗವಹಿಸಿದ ದಿಗಂತ್ ನಟ ಕಿಚ್ಚ ಸುದೀಪ್ ಜತೆ ಮತ್ತೊಮ್ಮೆ ನಟಿಸಲೇಬೇಕೆಂದು ಹೇಳಿಕೊಂಡಿದ್ದಾರೆ. "ಸುದೀಪ್ ಸರ್ ಜತೆ ಈಗಾಗಲೇ ನಾನು ನಟಿಸಿದ್ದೇನೆ. ಆದರೆ ಅವರು ತುಂಬಾ ಒಳ್ಳೆಯ ನಟ. ಅವರ ಜತೆ ಒಂದೊಳ್ಳೆ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ಆಸೆ. ಅವರ ಜಗೆ ಮಸ್ತ್ ಮಜಾ ಮಾಡಿ ಎಂಬ ಚಿತ್ರದಲ್ಲಿ ನಟಿಸಿದ್ದೇನೆ. ಆದರೆ ಅದು ಅತಿಥಿ ಪಾತ್ರ. ಅಷ್ಟು ಸ್ಕ್ರೀನ್ ಸ್ಪೇಸ್ ಸಿಕ್ಕಿರಲಿಲ್ಲ. ಹಾಗಾಗಿ ಅವರ ಜತೆ ನಟಿಸೋಕೆ ಇಷ್ಟ" ಎಂದು ಹೇಳಿದ್ದರು.
ಇನ್ನು ದರ್ಶನ್ ಜತೆ ಮಂಡ್ಯ ಚಿತ್ರದಲ್ಲಿ ನಟಿಸಿದ್ದ ದಿಗಂತ್ ಪುನೀತ್ ರಾಜ್‌ಕುಮಾರ್ ಜತೆ ಯುವರತ್ನ ಚಿತ್ರದಲ್ಲಿ ನಟಿಸಿದ್ದರು. ಇದೇ ಸಂದರ್ಶನದಲ್ಲಿ ಮಂಡ್ಯ ಚಿತ್ರದ ಬಗ್ಗೆಯೂ ಸಹ ಹೇಳಿದ ದಿಗಂತ್ "ಮಂಡ್ಯ ಅಂತ ದರ್ಶನ್ ಅವರೊಟ್ಟಿಗೆ ಒಂದು ಸಿನಿಮಾ ಮಾಡಿದ್ದೆ. ನನಗೆ ಅವರನ್ನು ಕಂಡರೆ ತುಂಬಾ ಇಷ್ಟ. ಆಕ್ಷನ್ ಸಿನಿಮಾ ಎಲ್ಲಾ ಮುಂಚೆ ಇಂದಾನೂ ತುಂಬಾ ಇಷ್ಟ. ಓಂ ಪ್ರಕಾಶ್ ಸರ್ ಅವರು ಹೇಳಿದ್ರು. ತುಂಬಾ ದೊಡ್ಡ ಪಾತ್ರ ಇದೆ. ದರ್ಶನ್ ಅವರ ತಮ್ಮನ ಪಾತ್ರ. ನಿಮ್ಮಿಂದಾನೇ ಈ ಚಿತ್ರದಲ್ಲಿ ಟ್ವಿಸ್ಟ್ ಅದು, ಇದು ಬರೋದು ಅಂತೆಲ್ಲಾ ಹೇಳಿದ್ರು. ನಾನು ತುಂಬಾ ಖುಷಿಯಾದೆ. 20 ದಿವಸ ರೋಲ್ ಇದೆಯಪ್ಪ. ಒಂದಿನ ಎರಡು ದಿನ ಅಲ್ಲ. 20 ದಿನನೂ ಬರಬೇಕು. ಸರಿ ಸರ್ ಓಕೆ ಅಂತೆಲ್ಲಾ ಹೋದೆ. ದಿನಾ ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ, ಕಾಫಿ, ಟೀ ಎಲ್ಲಾ ಟೈಮ್ ಟು ಟೈಮ್ ಆಗ್ತಾ ಇತ್ತು. ಆಮೇಲೆ ಸುಮಾರು ಸೀನ್‌ಗಳೂ ಆಯ್ತು" ಎಂದು ಹೇಳಿಕೊಂಡ ದಿಗಂತ್ ದರ್ಶನ್ ಅವರ ಸಿನಿಮಾದಲ್ಲಿ ತಮ್ಮ ಪಾತ್ರ ದೊಡ್ಡದು ಎಂದು ನಿರ್ದೇಶಕ ಓಂ ಪ್ರಕಾಶ್ ರಾವ್ ಹೇಳಿದ್ದನ್ನು ನೆನಪಿಸಿಕೊಂಡರು.
ಮುಂದುವರಿದು ಮಾತನಾಡಿದ ದಿಗಂತ್ "ನಾನು ನನ್ನ ಫ್ರೆಂಡ್ಸ್‌ನೆಲ್ಲಾ ಕರೆದುಕೊಂಡು ಹೋಗಿ, ಬನ್ರೋ ನಾನು ಡಿ ಬಾಸ್ ಅಂತ ಹೇಳಿ ಥಿಯೇಟರ್‌ನಲ್ಲಿ ಹೋಗಿ ನೋಡಿದ್ರೆ ಒಂದೇ ಒಂದು ಡೈಲಾಗು. ಅಣ್ಣಾ ಟೀ ಬೇಕಾ ಅಂತ.. ಬೇರೆ ಎಲ್ಲಾ ಕಟ್ ಮಾಡಿಬಿಟ್ಟಿದ್ದಾರೆ. ಆಕ್ಷನ್ ಸೀನ್ ಇತ್ತು, ನನ್ನ ಕಾಪಾಡೋಕೆ ಅವರು ಬಂದು ಫೈಟ್ ಎಲ್ಲಾ ಮಾಡ್ತಾರೆ, ಆ ಥರದ್ದೆಲ್ಲಾ ಇತ್ತು. ಆದರೆ ನೋಡಿದ್ರೆ ಸಿನಿಮಾದಲ್ಲಿ ಇಲ್ಲವೇ ಇಲ್ಲ" ಎಂದು ನಗುತ್ತಾ ನಡೆದಿದ್ದನ್ನು ಹಂಚಿಕೊಂಡರು. ಈ ಚಿತ್ರ ಮಾತ್ರವಲ್ಲದೇ ಅನೇಕ ಬಾರಿ ಈ ರೀತಿಯ ಅನುಭವ ಆಗಿತ್ತು ಎಂಬುದನ್ನೂ ದಿಗಂತ್ ಹೇಳಿಕೊಂಡರು.


Click it and Unblock the Notifications