ಕನ್ನಡ ನಿರ್ದೇಶಕರೆ ಸ್ವಲ್ಪ 'ಮಹಾನಟಿ' ಕೀರ್ತಿ ಸುರೇಶ್ ಕಡೆ ನೋಡಿ
''ಒಳ್ಳೆಯ ಅವಕಾಶ ಸಿಕ್ಕರೆ ಖಂಡಿತ ಕನ್ನಡ ಸಿನಿಮಾ ಮಾಡುತ್ತೇನೆ'' ಇದು ಬೇರೆ ಭಾಷೆಯ ದೊಡ್ಡ ನಟ, ನಟಿಯರು ಹೇಳುವ ಕಾಮನ್ ಡೈಲಾಗ್. ಬೆಂಗಳೂರಿಗೆ ಬರುವ ಇತರ ಭಾಷೆಯ ಕಲಾವಿದರು ಈ ಮಾತನ್ನು ಪದೇ ಪದೇ ಹೇಳುವುದನ್ನು ನಾವು ಕೇಳಿದ್ದೇವೆ.
ಆದರೆ, ಇದೀಗ ಟಾಲಿವುಡ್ ನಟಿ ಕೀರ್ತಿ ಸುರೇಶ್ ತಾವೇ ಕನ್ನಡ ಸಿನಿಮಾ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. 'ಮಹಾನಟಿ' ಚಿತ್ರದ ಮೂಲಕ ದೊಡ್ಡ ಜನಪ್ರಿಯತೆ ಗಳಿಸಿರುವ ಈ ನಟಿ ಕನ್ನಡ ಚಿತ್ರದ ಬಗ್ಗೆ ಮಾತನಾಡಿದ್ದಾರೆ.
''ಬೆಂಗಳೂರು ಅಂದರೆ ನನಗೆ ತುಂಬ ಇಷ್ಟ. ಇಲ್ಲಿ 'ಮಹಾನಟಿ' ಸಿನಿಮಾಗೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ. ಹೀಗಿದ್ದರೂ ಕನ್ನಡ ಸಿನಿಮಾಗೆ ನನಗೆ ಅವಕಾಶ ಸಿಗುತ್ತಿಲ್ಲ. ಇದುವರೆಗೂ ಕನ್ನಡದಲ್ಲಿ ನಾನು ನಟಿಸಿಲ್ಲ. ಸ್ಯಾಂಡಲ್ ವುಡ್ ಬರಲು ನಾನು ಕಾಯುತ್ತಿದ್ದೇನೆ'' ಎಂದು ಕೀರ್ತಿ ಸುರೇಶ್ ಹೇಳಿದ್ದಾರೆ.

'ಮಹಾನಟಿ' ನಟಿ ಕೀರ್ತಿ ಸುರೇಶ್ ಅವರ ಅಭಿಮಾನಿಗಳ ಸಂಖ್ಯೆ ಮತ್ತಷ್ಟು ಜಾಸ್ತಿಯಾಗಿದೆ. ಆ ಪಾತ್ರಕ್ಕಾಗಿ ಅವರು ವಹಿಸಿದ ಶ್ರದ್ಧೆ, ಆ ಪಾತ್ರವನ್ನು ನಿರ್ವಹಿಸಿದ ರೀತಿ ಎಲ್ಲರಿಗೂ ಬಹಳ ಇಷ್ಟ ಆಗಿತ್ತು. ಇಂತಹ ನಟಿ ಈಗ ಕನ್ನಡಕ್ಕೆ ಬರ್ತಿನಿ ಎಂದಿದ್ದು, ಯಾವ ನಿರ್ದೇಶಕ , ನಿರ್ಮಾಪಕರು ಕೀರ್ತಿ ಸುರೇಶ್ ಕಡೆ ನೋಡುತ್ತಾರೆ ಗೊತ್ತಿಲ್ಲ.


Click it and Unblock the Notifications











